ನಾಲ್ಕು ಸಾವಿರ ಮಂದಿ ಲೇವಿಯರು ದ್ವಾರಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ಗಾಯಕರಾಗಿಯೂ ಸೇವೆ ಮಾಡಬೇಕು. ನಾನು ಅವರಿಗಾಗಿ ವಿಶೇಷ ವಾದ್ಯಗಳನ್ನು ತಯಾರಿಸಿಟ್ಟಿರುತ್ತೇನೆ. ಅವರು ಅವುಗಳನ್ನು ನುಡಿಸುತ್ತಾ ದೇವರಿಗೆ ಸ್ತೋತ್ರ ಮಾಡಬೇಕು” ಅಂದನು.
ಅಮ್ರಾಮನ ಗಂಡುಮಕ್ಕಳು ಯಾರೆಂದರೆ: ಆರೋನ್ ಮತ್ತು ಮೋಶೆ. ಆರೋನನು ಮತ್ತು ಅವನ ಸಂತತಿಯವರು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು; ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪ ಸುಡುವುದಕ್ಕಾಗಿಯೂ ಆತನ ಸೇವೆಮಾಡುವುದಕ್ಕಾಗಿಯೂ ಯೆಹೋವನ ಹೆಸರಿನಲ್ಲಿ ಜನರನ್ನು ಸದಾಕಾಲ ಆಶೀರ್ವದಿಸುವುದಕ್ಕಾಗಿಯೂ ಆರಿಸಲ್ಪಟ್ಟರು.
ಇವರೇ ಲೇವಿಯರ ಸಂತತಿಯವರು. ಇವರೇ ಆಯಾ ಕುಟುಂಬಗಳ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಲೆಕ್ಕಿಸಲಾಯಿತು. ಅವರು ದೇವಾಲಯದಲ್ಲಿ ಸೇವೆಮಾಡಿದರು.
ಲೇವಿಯರು ಆರೋನನ ಸಂತತಿಯವರಾದ ಯಾಜಕರಿಗೆ ದೇವಾಲಯದಲ್ಲಿ ಸೇವೆಮಾಡಲು ಸಹಾಯ ಮಾಡುತ್ತಿದ್ದರು. ಇದಲ್ಲದೆ ಅವರು ದೇವಾಲಯದ ಹೊರಗಿನ ಅಂಗಳವನ್ನೂ ದೇವಾಲಯದ ಎಡಬಲಗಡೆಗಳಲ್ಲಿದ್ದ ಕೋಣೆಗಳನ್ನೂ ನೋಡಿಕೊಳ್ಳುತ್ತಿದ್ದರು; ಪರಿಶುದ್ಧ ಸಾಮಾಗ್ರಿಗಳನ್ನು ಯಾವಾಗಲೂ ಶುದ್ಧವಾಗಿಡುತ್ತಿದ್ದರು. ಹೀಗೆ ದೇವಾಲಯದ ಸೇವೆಯನ್ನು ಮಾಡುತ್ತಿದ್ದರು.
ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಬೇರೆ ವಿಶೇಷ ದಿನಗಳಲ್ಲಿಯೂ ದೇವರಿಗೆ ಸಮರ್ಪಿಸುವ ಸರ್ವಾಂಗಹೋಮವನ್ನು ತಯಾರು ಮಾಡುತ್ತಿದ್ದರು. ಪ್ರತಿದಿನ ಎಷ್ಟು ಮಂದಿ ಲೇವಿಯರು ಸೇವೆಮಾಡಬೇಕೆಂಬುದನ್ನು ಮೊದಲೇ ಗೊತ್ತುಪಡಿಸಲಾಗಿತ್ತು.
ಹೀಗೆ ಲೇವಿಯರು ತಾವು ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿದರು. ಅವರು ಪವಿತ್ರ ಗುಡಾರವನ್ನು ಮತ್ತು ಪವಿತ್ರಸ್ಥಳವನ್ನು ನೋಡಿಕೊಂಡರು; ತಮ್ಮ ಸಂಬಂಧಿಕರೂ ಆರೋನನ ಕುಲದವರೂ ಆಗಿದ್ದ ಯಾಜಕರಿಗೆ ಸಹಾಯ ಮಾಡಿದರು.