ದಾವೀದನು ಅವರಿಗೆ, “ನೀವು ಲೇವಿಕುಲದ ನಾಯಕರು. ನೀವೂ ಉಳಿದ ಲೇವಿಯರೂ ನಿಮ್ಮನ್ನು ಶುದ್ಧಪಡಿಸಿಕೊಳ್ಳಬೇಕು. ಅನಂತರ ಇಸ್ರೇಲಿನ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನಾನು ಅದಕ್ಕಾಗಿ ಸಿದ್ಧಮಾಡಿರುವ ಸ್ಥಳಕ್ಕೆ ತರಬೇಕು.
ಕಳೆದ ಸಲ, ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಹೇಗೆ ತೆಗೆದುಕೊಂಡು ಹೋಗಬೇಕೆಂದು ಯೆಹೋವನಲ್ಲಿ ವಿಚಾರಿಸಲಿಲ್ಲ. ಲೇವಿಯರಾದ ನೀವು ಅದನ್ನು ಹೊರಲಿಲ್ಲ. ಆದ್ದರಿಂದಲೇ ನಮ್ಮ ದೇವರಾದ ಯೆಹೋವನು ನಮ್ಮನ್ನು ಶಿಕ್ಷಿಸಿದನು” ಎಂದು ಹೇಳಿದನು.
ಮೋಶೆಯು ಆಜ್ಞಾಪಿಸಿದ್ದ ಪ್ರಕಾರವೇ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಬೇಕಾದ ಕೋಲುಗಳನ್ನು ಲೇವಿಯರು ಸಿದ್ಧಪಡಿಸಿದರು. ಯೆಹೋವನು ಹೇಳಿದಂತೆಯೇ ಅವರು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋದರು.
ದಾವೀದನು ಲೇವಿಯರಿಗೆ ತಮ್ಮ ಸಹೋದರರಾದ ಗಾಯಕರನ್ನು ಕರೆದುಕೊಂಡು ಬರಲು ಹೇಳಿದನು. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ತಂದು ಆನಂದಗೀತೆಗಳನ್ನು ಹಾಡುವಂತೆ ಅವರಿಗೆ ತಿಳಿಸಿದನು.
ಲೇವಿಯರ ಇನ್ನೊಂದು ಗುಂಪು ಇತ್ತು. ಅವರು ಯಾರೆಂದರೆ: ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರೆಲ್ಲಾ ಲೇವಿಯರ ಕಾವಲುಗಾರರಾಗಿದ್ದರು.
ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತ ಯಾಜಕರು ಉತ್ತಮವಾದ ನಾರಿನ ನಿಲುವಂಗಿಗಳನ್ನು ಧರಿಸಿದ್ದರು. ಕೆನನ್ಯನೂ ಅವನ ಜೊತೆಯಲ್ಲಿದ್ದ ಗಾಯಕರೆಲ್ಲರೂ ಉತ್ತಮವಾದ ನಾರಿನ ಬಟ್ಟೆಗಳನ್ನು ಧರಿಸಿದ್ದರು. ದಾವೀದನೂ ಉತ್ತಮವಾದ ನಾರಿನ ಬಟ್ಟೆ ಧರಿಸಿ, ಉತ್ತಮವಾದ ನಾರಿನಿಂದ ಮಾಡಿದ ಏಫೋದನ್ನು ಅದರ ಮೇಲೆ ಧರಿಸಿಕೊಂಡಿದ್ದನು.
ಹೀಗೆ ಎಲ್ಲಾ ಇಸ್ರೇಲರು ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬಂದರು. ಅವರು ಕೊಂಬುಗಳನ್ನೂ ತುತ್ತೂರಿಗಳನ್ನೂ ಊದಿದರು; ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸಿದರು; ಆನಂದದಿಂದ ಆರ್ಭಟಿಸಿದರು.
ದಾವೀದನ ನಗರದಲ್ಲಿ ಮೆರವಣಿಗೆಯು ಬಂದಾಗ ದಾವೀದನ ಹೆಂಡತಿಯಾದ ಮೀಕಲಳು ಕಿಟಿಕಿಯಿಂದ ನೋಡಿದಳು. (ಇವಳು ಸೌಲನ ಮಗಳು.) ದಾವೀದನು ಕುಣಿಯುತ್ತಾ ಹಾಡುವದನ್ನು ಆಕೆ ಕಂಡಳು. ತನ್ನ ಗಂಡನ ಮೇಲೆ ಆಕೆಗಿದ್ದ ಗೌರವವು ಕಡಿಮೆಯಾಯಿತು. ಯಾಕೆಂದರೆ ದಾವೀದನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವನೆಂದು ಆಕೆಯು ಅಂದುಕೊಂಡಳು.