ಆಮೇಲೆ ಇಸ್ರೇಲ್ ಜನರನ್ನು ಕರೆದು ಅವರಿಗೆ ಹೀಗೆಂದನು, “ಇದು ನಿಮಗೆ ಒಳ್ಳೆಯ ಆಲೋಚನೆ ಎನಿಸಿದರೆ ಮತ್ತು ಇದು ಯೆಹೋವನ ಚಿತ್ತಕ್ಕನುಸಾರವಾಗಿದ್ದರೆ, ಇಸ್ರೇಲಿನ ಎಲ್ಲಾ ಸ್ಥಳಗಳಲ್ಲಿರುವ ನಮ್ಮ ಸಹೋದರರಿಗೆ ಒಂದು ಸಂದೇಶವನ್ನು ಕಳುಹಿಸೋಣ. ನಮ್ಮ ಸಹೋದರರೊಂದಿಗೆ ಊರುಗಳಲ್ಲಿಯೂ ಊರುಗಳ ಸಮೀಪದಲ್ಲಿರುವ ಹೊಲಗಳಲ್ಲಿಯೂ ವಾಸವಾಗಿರುವ ಯಾಜಕರಿಗೂ ಲೇವಿಯರಿಗೂ ಈ ಸಂದೇಶವನ್ನು ಕಳುಹಿಸಿಕೊಡೋಣ: ನೀವು ಬಂದು ನಮ್ಮೊಂದಿಗೆ ಸೇರಿಕೊಳ್ಳಿ.
ಆಗ ದಾವೀದನು ಈಜಿಪ್ಟಿನ ಶೀಹೋರ್ ನದಿಯಿಂದ ಹಿಡಿದು ಲೆಬೊಹಮಾತ್ ಪಟ್ಟಣದ ತನಕ ಇದ್ದ ಇಸ್ರೇಲರನ್ನೆಲ್ಲಾ ಒಟ್ಟು ಸೇರಿಸಿದನು; ಅವರೆಲ್ಲರೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಕಿರ್ಯತ್ಯಾರೀಮಿನಿಂದ ತರಲು ಹೊರಟರು.
ಇಸ್ರೇಲಿನ ಎಲ್ಲಾ ಜನರು ದಾವೀದನೊಂದಿಗೆ ಯೆಹೂದದ ಬಾಳಾ ಎಂಬ ಸ್ಥಳಕ್ಕೆ (ಕೀರ್ಯಾತ್ಯಾರೀಮಿನ ಇನ್ನೊಂದು ಹೆಸರು ಬಾಳಾ.) ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ನಡೆದರು. ಆತನು ಕೆರೂಬಿಗಳ ನಡುವೆ ಆಸೀನನಾಗಿರುತ್ತಾನೆ. ಆ ಪೆಟ್ಟಿಗೆಯು ಯೆಹೋವನ ಹೆಸರಿನಲ್ಲಿ ಕರೆಯಲ್ಪಡುತ್ತದೆ.
ದಾವೀದನೂ ಎಲ್ಲಾ ಇಸ್ರೇಲರೂ ದೇವರ ಮುಂದೆ ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ ಹೋದರು. ಹಾರ್ಪ್‌ವಾದ್ಯವನ್ನು, ಲೈರ್‌ವಾದ್ಯವನ್ನು, ತಬಲವನ್ನು, ತಾಳವನ್ನು ಮತ್ತು ತುತ್ತೂರಿಯನ್ನು ಬಾರಿಸುತ್ತಾ ಹಾಡುತ್ತಾ ದೇವರಿಗೆ ಸ್ತೋತ್ರ ಮಾಡಿದರು.
ಅವರು ಕೀದೋನನ ಕಣಕ್ಕೆ ಬಂದಾಗ ಗಾಡಿ ಎಳೆಯುತ್ತಿದ್ದ ಎತ್ತುಗಳು ಮುಗ್ಗರಿಸಿದವು. ಆಗ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಬೀಳುವುದರಲ್ಲಿತ್ತು. ಉಜ್ಜನು ತನ್ನ ಕೈಯನ್ನು ಚಾಚಿ ಪೆಟ್ಟಿಗೆಯನ್ನು ಹಿಡಿಯಲು ಹೋದನು.