ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಖಡ್ಗದಿಂದ ನನ್ನನ್ನು ಇರಿದು ಕೊಂದುಹಾಕು. ಆಗ ಪರದೇಶಿಯರು ಬಂದು ನನ್ನನ್ನು ಗಾಯಪಡಿಸಿ ಹಾಸ್ಯಮಾಡಲು ಸಾಧ್ಯವಾಗುವುದಿಲ್ಲ” ಎಂದನು. ಆದರೆ ಅವನ ಆಯುಧಹೊರುವವನು ಅದಕ್ಕೆ ಒಪ್ಪಲಿಲ್ಲ; ಸೌಲನನ್ನು ಕೊಲ್ಲಲು ಅವನು ಹೆದರಿದನು. ಆಗ ಸೌಲನು ತನ್ನ ಖಡ್ಗದ ಮೇಲೆ ತಾನೇ ಬಿದ್ದು ಸತ್ತನು.
ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರು ತಮ್ಮ ಸೈನ್ಯವು ವೈರಿಗಳಿಂದ ಓಡಿಸಲ್ಪಡುವದನ್ನು ನೋಡಿದರು. ಅರಸನಾದ ಸೌಲನು ಮತ್ತು ಅವನ ಗಂಡುಮಕ್ಕಳು ಸತ್ತುಹೋಗಿರುವುದು ಅವರಿಗೆ ತಿಳಿಯಿತು. ಆಗ ಅವರೂ ತಮ್ಮತಮ್ಮ ಮನೆಗಳನ್ನು ಬಿಟ್ಟು ಓಡಿದರು. ಫಿಲಿಷ್ಟಿಯರು ಅವರ ಮನೆಗಳಿಗೆ ಬಂದಾಗ ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಯೇ ವಾಸಿಸಿದರು.
ಸೌಲನ ಶರೀರದ ಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಅವರು ದೋಚಿಕೊಂಡರು; ಅವನ ತಲೆಯನ್ನೂ ಆಯುಧಗಳನ್ನೂ ತೆಗೆದುಕೊಂಡು ತಮ್ಮ ಊರಿನಲ್ಲಿದ್ದ ಜನರಿಗೂ ಅವರ ಸುಳ್ಳುದೇವರುಗಳಿಗೂ ತಿಳಿಸಲು ಸಂದೇಶಕರನ್ನು ಕಳುಹಿಸಿದರು.
ಆಗ ಯಾಬೇಷ್ ಗಿಲ್ಯಾದಿನ ರಣವೀರರು ಹೊರಟು ಸೌಲನ ಮತ್ತು ಅವನ ಗಂಡುಮಕ್ಕಳ ಶವಗಳನ್ನು ಯಾಬೇಷ್ ಗಿಲ್ಯಾದಿಗೆ ತಂದರು. ಆ ರಣವೀರರು ಸೌಲನ ಮತ್ತು ಅವನ ಗಂಡುಮಕ್ಕಳ ಎಲುಬುಗಳನ್ನು ಯಾಬೇಷಿನಲ್ಲಿದ್ದ ಒಂದು ದೊಡ್ಡ ಮರದ ಬುಡದಲ್ಲಿ ಹೂಳಿಟ್ಟರು. ಅನಂತರ ಏಳು ದಿವಸಗಳ ತನಕ ಅವರು ಶೋಕಿಸಿದರು.
ಅಲ್ಲದೆ ಅವನು ಯೆಹೋವನ ಸಲಹೆಯನ್ನು ಪಡೆದುಕೊಳ್ಳುವ ಬದಲಾಗಿ ಮಾಟಮಂತ್ರ ಮಾಡುವ ಹೆಂಗಸಿನ ಬಳಿಗೆ ಹೋದನು. ಆದ್ದರಿಂದಲೇ ಯೆಹೋವನು ರಾಜ್ಯವನ್ನು ಸೌಲನಿಂದ ತೆಗೆದು ಇಷಯನ ಮಗನಾದ ದಾವೀದನಿಗೆ ಕೊಟ್ಟನು.