1
|
ಬೇತ್ಲೆಹೇಮಿನಲ್ಲಿ ಬೋವಜನೆಂಬ ಒಬ್ಬ ಐಶ್ವರ್ಯವಂತನಿದ್ದನು. ಬೋವಜನು ಎಲೀಮೆಲೆಕನ ಕುಟುಂಬದವನಾಗಿದ್ದು ನೊವೊಮಿಯ ಸಮೀಪದ ಸಂಬಂಧಿಯಾಗಿದ್ದನು. |
2
|
ಒಂದು ದಿನ ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಗಳಿಗೆ ಹೋಗುತ್ತೇನೆ. ಯಾರಾದರೂ ದಯೆತೋರಿ ತಮ್ಮ ಹೊಲದಲ್ಲಿ ಹಕ್ಕಲನ್ನು ಆರಿಸಲು ಅನುಮತಿ ಕೊಡಬಹುದು” ಎಂದಳು. |
3
|
ನೊವೊಮಿಯು, “ಆಗಲಿ ಮಗಳೇ, ಹಾಗೆಯೇ ಮಾಡು” ಅಂದಳು. ರೂತಳು ಹೊಲಗಳಿಗೆ ಹೋದಳು. ಅವಳು ಅಲ್ಲಿ ಫಸಲು ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾಯುತ್ತಾ ಎಲೀಮೆಲೆಕನ ಗೋತ್ರದವನಾದ ಬೋವಜನ ಹೊಲಕ್ಕೆ ಬಂದಳು. |
4
|
ತರುವಾಯ ಬೋವಜನು ಬೇತ್ಲೆಹೇಮಿನಿಂದ ಹೊಲಕ್ಕೆ ಬಂದನು. ಅವನು ಕೆಲಸಗಾರರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಎಂದು ಹರಸಿದನು. ಆ ಕೆಲಸಗಾರರು, “ಯೆಹೋವನು ನಿನಗೆ ಕೃಪೆ ತೋರಲಿ” ಎಂದು ಉತ್ತರಿಸಿದರು. |
5
|
ಆಗ ಬೋವಜನು ಕೊಯ್ಯುವವರ ಮೇಲ್ವಿಚಾರಕನಾಗಿದ್ದ ತನ್ನ ಸೇವಕನನ್ನು, “ಆ ಸ್ತ್ರೀ ಯಾರು?” ಎಂದು ಕೇಳಿದನು. |
6
|
ಆ ಸೇವಕನು, “ಅವಳು ಮೋವಾಬ್ ಬೆಟ್ಟಪ್ರದೇಶದಿಂದ ನೊವೊಮಿಯ ಸಂಗಡ ಬಂದ ಮೋವಾಬ್ಯರ ಸ್ತ್ರೀ. |
7
|
ಅವಳು ಇಂದು ಬೆಳಗಿನ ಜಾವದಲ್ಲಿ ಬಂದು, ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾರಿಸಿಕೊಳ್ಳಬಹುದೇ? ಎಂದು ನನ್ನನ್ನು ಕೇಳಿದಳು. ಆಗಿನಿಂದ ಅವಳು ಆ ಕೆಲಸವನ್ನು ಮಾಡುತ್ತಿದ್ದಾಳೆ. ಆಕೆ ಸ್ವಲ್ಪ ಹೊತ್ತು ಮಾತ್ರ ಆ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡಳು” ಎಂದು ಉತ್ತರಕೊಟ್ಟನು. |
8
|
ಆಗ ಬೋವಜನು ರೂತಳಿಗೆ, “ಮಗಳೇ, ನೀನು ನನ್ನ ಹೊಲದಲ್ಲಿಯೇ ಧಾನ್ಯವನ್ನು ಶೇಖರಿಸು. ನೀನು ಬೇರೆಯವರ ಹೊಲಕ್ಕೆ ಹೋಗುವ ಅವಶ್ಯಕತೆಯಿಲ್ಲ. ನನ್ನ ಹೆಣ್ಣಾಳುಗಳ ಹಿಂದೆಯೇ ನೀನು ಹೋಗುತ್ತಿರು. |
9
|
ಅವರು ಯಾವ ಹೊಲಕ್ಕೆ ಹೋಗುತ್ತಾರೆಂಬುದನ್ನು ತಿಳಿದುಕೊಂಡು ಅವರನ್ನು ಹಿಂಬಾಲಿಸು; ನಿನಗೆ ತೊಂದರೆ ಕೊಡಕೂಡದೆಂದು ನನ್ನ ಸೇವಕರಿಗೆ ಆಜ್ಞಾಪಿಸಿದ್ದೇನೆ. ನಿನಗೆ ಬಾಯಾರಿಕೆಯಾದರೆ ನೀರಿನ ಕೊಡಗಳ ಬಳಿಗೆ ಹೋಗಿ ನನ್ನ ಆಳುಗಳು ಸೇದುವ ನೀರನ್ನೇ ಕುಡಿ” ಎಂದು ಹೇಳಿದನು. |
10
|
ಆಗ ರೂತಳು ತಲೆಬಾಗಿ ವಂದಿಸಿದಳು. ಅವಳು ಬೋವಜನಿಗೆ, “ನನಗೆ ಆಶ್ಚರ್ಯವಾಗುತ್ತದೆ. ನಾನೊಬ್ಬ ಪರದೇಶಿಯಾಗಿದ್ದರೂ ನೀನು ನನ್ನನ್ನು ಗಮನಿಸಿ ಕೃಪೆ ತೋರಿದೆ” ಎಂದಳು. |
11
|
ಬೋವಜನು ಅವಳಿಗೆ, “ನೀನು ನಿನ್ನ ಅತ್ತೆಯಾದ ನೊವೊಮಿಗೆ ಮಾಡಿದ ಎಲ್ಲ ಸಹಾಯದ ಬಗ್ಗೆ ನನಗೆ ಗೊತ್ತಿದೆ. ನಿನ್ನ ಗಂಡನು ಸತ್ತ ಮೇಲೆಯೂ ನೀನು ಅವಳಿಗೆ ಸಹಾಯ ಮಾಡಿದೆ ಎಂಬುದು ನನಗೆ ಗೊತ್ತಿದೆ. ನೀನು ನಿನ್ನ ತಂದೆತಾಯಿಗಳನ್ನೂ ನಿನ್ನ ದೇಶವನ್ನೂ ಬಿಟ್ಟು ಈ ದೇಶಕ್ಕೆ ಬಂದಿರುವಿ ಎಂಬುದು ನನಗೆ ಗೊತ್ತು. ನಿನಗೆ ಈ ದೇಶದಲ್ಲಿ ಯಾರ ಪರಿಚಯವೂ ಇರಲಿಲ್ಲ; ಆದರೂ ನೀನು ನೊವೊಮಿಯ ಜೊತೆ ಇಲ್ಲಿಗೆ ಬಂದಿರುವಿ. |
12
|
ನೀನು ಮಾಡಿದ ಎಲ್ಲ ಸತ್ಕಾರ್ಯಕ್ಕೆ ಯೆಹೋವನು ನಿನಗೆ ಸಂಪೂರ್ಣ ಪ್ರತಿಫಲ ಕೊಡುವನು; ಯಾಕಂದರೆ ನೀನು ಯಾವಾತನ ಆಶ್ರಯವನ್ನು ಕೋರಿ ಬಂದಿರುವಿಯೋ ಆತನು ನಿನ್ನನ್ನು ರಕ್ಷಿಸುತ್ತಾನೆ” ಎಂದು ಸಮಾಧಾನ ಪಡಿಸಿದನು. |
13
|
ಆಗ ರೂತಳು, “ನನ್ನ ಸ್ವಾಮೀ, ನೀವು ನನಗೆ ತುಂಬ ದಯೆ ತೋರಿದಿರಿ. ನಾನು ಕೇವಲ ಒಬ್ಬ ದಾಸಿ. ನಾನು ನಿಮ್ಮ ಒಬ್ಬ ದಾಸಿಯ ಸಮಾನಳಲ್ಲದಿದ್ದರೂ ನೀವು ಒಳ್ಳೆಯ ಮಾತುಗಳಿಂದ ನನಗೆ ಕನಿಕರ ತೋರಿದಿರಿ” ಎಂದು ತನ್ನ ಕೃತಜ್ಞತೆಯನ್ನು ಸೂಚಿಸಿದಳು. |
14
|
ಊಟದ ಸಮಯದಲ್ಲಿ ಬೋವಜನು ರೂತಳಿಗೆ, “ಇಲ್ಲಿ ಬಾ, ರೊಟ್ಟಿಯನ್ನು ತೆಗೆದುಕೊಂಡು ಹುಳಿರಸದಲ್ಲಿ ಅದ್ದಿಕೊಂಡು ತಿನ್ನು” ಎಂದು ಹೇಳಿದನು. ರೂತಳು ಕೆಲಸಗಾರರ ಜೊತೆ ಕುಳಿತುಕೊಂಡಳು. ಬೋವಜನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ರೂತಳು ಹೊಟ್ಟೆತುಂಬ ಊಟ ಮಾಡಿದ ಮೇಲೂ ಸ್ವಲ್ಪ ಆಹಾರ ಉಳಿಯಿತು. |
15
|
ಆಗ ರೂತಳು ಎದ್ದು ಪುನಃ ಕೆಲಸಕ್ಕೆ ಹೋದಳು. ಆಗ ಬೋವಜನು ತನ್ನ ಸೇವಕರಿಗೆ, “ರೂತಳು ಕಣದಲ್ಲಿರುವ ಸಿವುಡುಗಳ ಸುತ್ತಲೂ ಹಕ್ಕಲು ಆರಿಸಿಕೊಳ್ಳಲಿ; ಅವಳನ್ನು ತಡೆಯಬೇಡಿ. |
16
|
ಅವಳಿಗಾಗಿ ಕಟ್ಟುಗಳಿಂದ ಕೆಲವು ತುಂಬು ತೆನೆಗಳನ್ನೇ ಬಿಟ್ಟು ಅವಳ ಕೆಲಸ ಸುಲಭಗೊಳಿಸಿರಿ. ಆ ಧಾನ್ಯವನ್ನು ತೆಗೆದುಕೊಂಡರೆ ಅವಳನ್ನು ಗದರಿಸಬೇಡಿ” ಎಂದು ಆಜ್ಞಾಪಿಸಿದನು. |
17
|
ರೂತಳು ಸಾಯಂಕಾಲದವರೆಗೆ ಹೊಲದಲ್ಲಿ ಕೆಲಸ ಮಾಡಿದಳು. ಸಾಯಂಕಾಲ ತೆನೆಗಳನ್ನು ಬಡಿದು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿದಳು. ಸುಮಾರು ಮೂವತ್ತು ಸೇರು ಜವೆಗೋಧಿ ಸಿಕ್ಕಿತ್ತು. |
18
|
ರೂತಳು ತನ್ನ ಅತ್ತೆಗೆ ತೋರಿಸುವುದಕ್ಕಾಗಿ ಆ ಧಾನ್ಯವನ್ನು ಪಟ್ಟಣಕ್ಕೆ ತೆಗೆದುಕೊಂಡು ಹೋದಳು. ಇದಲ್ಲದೆ ತಾನು ಮಧ್ಯಾಹ್ನ ಊಟ ಮಾಡುವಾಗ ತೆಗೆದಿಟ್ಟ ಆಹಾರವನ್ನು ಸಹ ಅವಳಿಗೆ ಕೊಟ್ಟಳು. |
19
|
ಅವಳ ಅತ್ತೆಯು ಅವಳಿಗೆ, “ಈ ಧಾನ್ಯವನ್ನೆಲ್ಲಾ ನೀನು ಎಲ್ಲಿಂದ ಶೇಖರಿಸಿದೆ? ನೀನು ಎಲ್ಲಿ ಕೆಲಸ ಮಾಡಿದೆ? ನಿನಗೆ ಸಹಾಯ ಮಾಡಿದ ಮನುಷ್ಯನಿಗೆ ಶುಭವಾಗಲಿ” ಎಂದಳು. ಅದಕ್ಕೆ ರೂತಳು, “ನಾನು ಇಂದು ಯಾರ ಹತ್ತಿರ ಕೆಲಸ ಮಾಡಿದೆನೋ ಆ ಮನುಷ್ಯನ ಹೆಸರು ಬೋವಜ” ಎಂದು ಹೇಳಿದಳು. ನೊವೊಮಿಯು ತನ್ನ ಸೊಸೆಗೆ, “ಯೆಹೋವನು ಅವನಿಗೆ ಕೃಪೆತೋರಲಿ. ಯೆಹೋವನು ಸತ್ತುಹೋದವರಿಗೂ ಬದುಕಿರುವವರಿಗೂ ದಯೆತೋರಿಸುತ್ತಾನೆ” ಎಂದು ಹೇಳಿದಳು. |
20
|
ಆಮೇಲೆ ನೊವೊಮಿಯು ತನ್ನ ಸೊಸೆಗೆ, “ಬೋವಜನು ನಮ್ಮ ಸಂಬಂಧಿಗಳಲ್ಲೊಬ್ಬನಲ್ಲದೆ ನಮ್ಮ ಸಮೀಪದ ಬಂಧುವೂ ನಮ್ಮ ಸಂರಕ್ಷಕನೂ ಆಗಿದ್ದಾನೆ” ಎಂದು ತಿಳಿಸಿದಳು. |
21
|
ಅದಕ್ಕೆ ರೂತಳು, “ಸುಗ್ಗಿಕಾಲ ಮುಗಿಯುವವರೆಗೂ ತನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಹೋಗಬೇಕೆಂದು ಬೋವಜನು ನನಗೆ ಹೇಳಿದ್ದಾನೆ” ಎಂದು ಹೇಳಿದಳು. |
22
|
ಆಗ ನೊವೊಮಿಯು ತನ್ನ ಸೊಸೆಯಾದ ರೂತಳಿಗೆ, “ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿ ಹೋಗುವುದೇ ಒಳ್ಳೆಯದು. ನೀನು ಬೇರೆ ಹೊಲಕ್ಕೆ ಹೋದರೆ ನಿನಗೆ ತೊಂದರೆಯಾಗಬಹುದು” ಎಂದಳು. |
23
|
ರೂತಳು ಬೋವಜನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಗೋಧಿಯ ಮತ್ತು ಜವೆಗೋಧಿಯ ಸುಗ್ಗಿಕಾಲ ಮುಗಿಯುವವರೆಗೂ ಹಕ್ಕಲಾಯುತ್ತಿದ್ದಳು. ರೂತಳು ತನ್ನ ಅತ್ತೆಯಾದ ನೊವೊಮಿಯ ಸಂಗಡ ಮನೆಯಲ್ಲಿದ್ದಳು. |
Ruth 2:22 Kannada Language Bible Words basic statistical display
COMING SOON ...