ಹಾಗಾದರೆ, “ದೇವರು ತನ್ನ ಜನರನ್ನು ತಿರಸ್ಕರಿಸಿದನೇ?” ಎಂದು ನಾನು ಕೇಳುತ್ತೇನೆ. ಇಲ್ಲ! ನಾನೂ ಒಬ್ಬ ಇಸ್ರೇಲನಾಗಿದ್ದೇನೆ. ನಾನು ಅಬ್ರಹಾಮನ ಕುಟುಂಬಕ್ಕೆ ಸೇರಿದವನಾಗಿದ್ದೇನೆ: ಬೆನ್ಯಾಮೀನನ ಕುಲದವನಾಗಿದ್ದೇನೆ.
ಇಸ್ರೇಲರು ಹುಟ್ಟುವುದಕ್ಕಿಂತ ಮೊದಲೇ ದೇವರು ಅವರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಆತನು ಅವರನ್ನು ಹೊರಕ್ಕೆ ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ಇಸ್ರೇಲಿನ ಜನರ ವಿರೋಧವಾಗಿ ಎಲೀಯನು ದೇವರಿಗೆ ಮಾಡಿದ ಪ್ರಾರ್ಥನೆಯ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿದೆ.
ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ” [✡1 ಉಲ್ಲೇಖನ: ರಾಜರುಗಳು 19:10,14.] ಎಂದು ಪ್ರಾರ್ಥಿಸಿದನು.
ಆದರೆ ದೇವರು ಎಲೀಯನಿಗೆ ಕೊಟ್ಟ ಉತ್ತರವೇನು? ದೇವರು ಎಲೀಯನಿಗೆ, “ಇನ್ನೂ ನನ್ನನ್ನು ಆರಾಧಿಸುತ್ತಿರುವ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ. ಅವರನ್ನು ಬಾಳನ ಪೂಜೆಗೆ ಕೊಟ್ಟಿಲ್ಲ” [✡1 ಉಲ್ಲೇಖನ: ರಾಜರುಗಳು 19:18.] ಎಂದು ಉತ್ತರಕೊಟ್ಟನು.
ಆದ್ದರಿಂದ ನಡೆದ ಸಂಗತಿಯಿಷ್ಟೆ: ಇಸ್ರೇಲಿನ ಜನರು ನೀತಿವಂತರಾಗಲು ಪ್ರಯತ್ನಿಸಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಹೀಗಿರಲು, ದೇವರಿಂದ ಆರಿಸಲ್ಪಟ್ಟಿದ್ದ ಜನರು ನೀತಿವಂತರಾದರು. ಆದರೆ ಉಳಿದ ಜನರು ಕಠಿಣರಾಗಿ ದೇವರಿಗೆ ಕಿವಿಗೊಡಲಿಲ್ಲ.
ಪವಿತ್ರ ಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು: “ಜನರಿಗೆ ಅರ್ಥವಾಗದಂತೆ ದೇವರು ಅವರನ್ನು ಮಂಕುಗೊಳಿಸಿದನು.” ಯೆಶಾಯ 29:10] “ಅವರು ಇಂದಿನವರೆಗೂ ಕಣ್ಣಿದ್ದರೂ ಕಾಣದಂತೆ ಕಿವಿಯಿದ್ದರೂ ಕೇಳದಂತೆ ದೇವರು ಅವುಗಳನ್ನು ಮುಚ್ಚಿಬಿಟ್ಟನು.” ಧರ್ಮೋಪದೇಶ. 29:4
ಹಾಗಾದರೆ, ಯೆಹೂದ್ಯರು ಮೇಲೇಳದಂತೆ ಮುಗ್ಗರಿಸಿ ಬಿದ್ದರೇ? ಎಂದಿಗೂ ಇಲ್ಲ. ಆದರೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆಪಡುವಂತಾಯಿತು.
ಯೆಹೂದ್ಯರ ಅಪರಾಧವು ಜಗತ್ತಿಗೆ ಅಧಿಕವಾದ ಆಶೀರ್ವಾದಗಳನ್ನೂ ಅವರ ಅಪಜಯವು ಯೆಹೂದ್ಯರಲ್ಲದ ಜನರಿಗೆ ಅಧಿಕವಾದ ಆಶೀರ್ವಾದಗಳನ್ನೂ ತರಲು ಕಾರಣವಾದರೆ, ದೇವರ ಇಚ್ಛೆಗನುಸಾರವಾಗಿ ಯೆಹೂದ್ಯರೆಲ್ಲರು ಪರಿವರ್ತನೆ ಹೊಂದಿದಾಗ ಜಗತ್ತು ಮತ್ತಷ್ಟು ಅಗಾಧವಾದ ಆಶೀರ್ವಾದಗಳನ್ನು ಹೊಂದುವುದು ನಿಶ್ಚಯವಲ್ಲವೇ?
ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ.
ಆದ್ದರಿಂದ ಮುರಿಯಲ್ಪಟ್ಟ ಆ ಕೊಂಬೆಗಳನ್ನು ಕಡೆಗಣಿಸಬೇಡಿ. ಅವುಗಳನ್ನು ಕಡೆಗಣಿಸಲು ನಿಮಗೆ ಯಾವ ಕಾರಣವೂ ಇಲ್ಲ. ಏಕೆಂದರೆ, ನೀವು ಬೇರಿಗೆ ಜೀವವನ್ನು ಕೊಡುವುದಿಲ್ಲ. ಬೇರು ನಿಮಗೆ ಜೀವವನ್ನು ಕೊಡುತ್ತದೆ.
ಆದ್ದರಿಂದ ದೇವರು ದಯೆ ಉಳ್ಳವನಾಗಿದ್ದರೂ ಬಹುಕಠಿಣನೂ ಆಗಿದ್ದಾನೆ ಎಂಬುದನ್ನು ಗಮನಿಸು. ದೇವರು ತನ್ನನ್ನು ಹಿಂಬಾಲಿಸದಿರುವ ಜನರನ್ನು ದಂಡಿಸುತ್ತಾನೆ. ಆದರೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡಿದ್ದರೆ, ದೇವರು ನಿನಗೆ ದಯಾಳುವಾಗಿರುತ್ತಾನೆ. ಇಲ್ಲವಾದರೆ, ನಿನ್ನನ್ನು ಮರದಿಂದ ಕಡಿದುಹಾಕಲಾಗುವುದು.
ಕಾಡುಕೊಂಬೆಯೊಂದು ಒಳ್ಳೆಯ ಮರದ ಕೊಂಬೆಯಾಗುವುದು ಸಹಜವಾದದ್ದಲ್ಲ. ಆದರೆ ಯೆಹೂದ್ಯರಲ್ಲದ ನೀವು ಕಾಡು ಆಲಿವ್ ಮರದಿಂದ ಕತ್ತರಿಸಲ್ಪಟ್ಟ ಕೊಂಬೆಯಾಗಿದ್ದು ಒಳ್ಳೆಯ ಆಲಿವ್ ಮರಕ್ಕೆ ಕಸಿಕಟ್ಟಲ್ಪಟ್ಟಿದ್ದೀರಿ. ಯೆಹೂದ್ಯರಾದರೋ ಒಳ್ಳೆಯ ಆಲಿವ್ ಮರದಲ್ಲಿ ಬೆಳೆದ ರೆಂಬೆಗಳು. ಆದ್ದರಿಂದ ಅವರು ತಮ್ಮ ಸ್ವಂತ ಮರಕ್ಕೆ ಮತ್ತೆ ಸೇರಿಸಲ್ಪಡಲು ಖಂಡಿತವಾಗಿಯೂ ಸಾಧ್ಯ.
ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು.
ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ: “ಸಿಯೋನಿನಿಂದ ರಕ್ಷಕನು ಬರುವನು: ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ.
ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ.
ಹೌದು, ದೇವರ ಐಶ್ವರ್ಯವು ಎಷ್ಟೋ ಅಪಾರವಾಗಿದೆ! ದೇವರ ವಿವೇಕಕ್ಕೂ ಜ್ಞಾನಕ್ಕೂ ಕೊನೆಯೇ ಇಲ್ಲ! ದೇವರು ನಿರ್ಧರಿಸುವ ಸಂಗತಿಗಳನ್ನು ಯಾವನೂ ವಿವರಿಸಲಾರನು. ದೇವರ ಮಾರ್ಗಗಳನ್ನು ಯಾವನೂ ಅರ್ಥಮಾಡಿಕೊಳ್ಳಲಾರನು.