Bible Languages

Indian Language Bible Word Collections

Bible Versions

Books

Revelation Chapters

Revelation 22 Verses

Bible Versions

Books

Revelation Chapters

Revelation 22 Verses

1 ಆಗ ದೇವದೂತನು ನನಗೆ ಜೀವಜಲದ ನದಿಯನ್ನು ತೋರಿಸಿದನು. ಆ ನದಿಯು ಸ್ಫಟಿಕದಂತೆ ಪ್ರಕಾಶಮಾನವಾಗಿತ್ತು. ಆ ನದಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ,
2 ನಗರದ ಬೀದಿಯ ಮಧ್ಯಭಾಗದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿಯೂ ಜೀವವೃಕ್ಷಗಳಿದ್ದ್ದವು. ಆ ಜೀವವೃಕ್ಷವು ಪ್ರತಿತಿಂಗಳು ಫಲವನ್ನು ಫಲಿಸುತ್ತಾ ವರ್ಷದಲ್ಲಿ ಹನ್ನೆರಡು ತರದ ಫಲಗಳನ್ನು ನೀಡುತ್ತದೆ. ಆ ವೃಕ್ಷದ ಎಲೆಗಳು ಜನಾಂಗದವರನ್ನು ಗುಣಪಡಿಸುತ್ತವೆ.
3 ದೇವರಿಂದ ಶಾಪ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೇಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ.
4 ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣೆಗಳ ಮೇಲೆ ಬರೆಯಲಾಗುತ್ತದೆ.
5 ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗ ಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.
6 ಆ ದೇವದೂತನು ನನಗೆ, “ಈ ವಾಕ್ಯಗಳು ಸತ್ಯವಾದವು ಗಳೂ ನಂಬತಕ್ಕವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳಿಗೆ ಪ್ರಭುವೇ ದೇವರಾಗಿದ್ದಾನೆ. ಬೇಗನೆ ಸಂಭವಿಸಲಿರುವ ಸಂಗತಿಗಳನ್ನು ತನ್ನ ಸೇವಕರಿಗೆ ತೋರಿಸಲು ದೇವರು ತನ್ನ ದೂತನನ್ನು ಕಳುಹಿಸಿದ್ದಾನೆ.” ಎಂದು ಹೇಳಿದನು.
7 ”ಕೇಳಿರಿ! ನಾನು ಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳಿಗೆ ವಿಧೇಯತೆಯಿಂದಿರುವವನು ಧನ್ಯನಾಗುತ್ತಾನೆ.”
8 ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು.
9 ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.
10 ಬಳಿಕ ದೇವದೂತನು ನನಗೆ, “ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ರಹಸ್ಯವಾಗಿಡಬೇಡ. ಇವುಗಳೆಲ್ಲವೂ ಸಂಭವಿಸುವ ಕಾಲ ಸಮೀಪಿಸಿದೆ.
11 ತಪ್ಪು ಮಾಡುತ್ತಿರುವವನು ತಪ್ಪುಮಾಡುತ್ತಲೇ ಮುಂದುವರಿಯಲು ಬಿಡು. ಅಶುದ್ಧನಾದವನು ಅಶುದ್ಧತೆಯಲ್ಲೇ ಮುಂದುವರಿಯಲು ಬಿಡು. ಯೋಗ್ಯವಾದುದನ್ನು ಮಾಡುವವನು ಯೋಗ್ಯವಾದುದನ್ನೇ ಮಾಡಲಿ. ಪರಿಶುದ್ಧನಾಗಿರುವವನು ಪರಿಶುದ್ಧನಾಗಿಯೇ ಇರಲಿ” ಎಂದು ಹೇಳಿದನು.
12 ”ಕೇಳು! ನಾನು ಬೇಗನೆ ಬರುತ್ತೇನೆ! ನನ್ನೊಂದಿಗೆ ಪ್ರತಿಫಲವನ್ನು ತರುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದುದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ.
13 ನಾನೇ ಆದಿಯೂ ಅಂತ್ಯವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.
14 ”ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡ ಜನರೇ ಧನ್ಯರು. ಅವರು ಜೀವವೃಕ್ಷದ ಹಣ್ಣನ್ನು ತಿನ್ನಲು ಹಕ್ಕುಳ್ಳವರಾಗಿದ್ದಾರೆ. ಅವರು ಬಾಗಿಲುಗಳ ಮೂಲಕ ನಗರದೊಳಕ್ಕೆ ಹೋಗಬಲ್ಲರು.
15 ನಗರದ ಹೊರಭಾಗದಲ್ಲಿ ನಾಯಿಗಳಿವೆ (ಕೆಟ್ಟಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲೈಂಗಿಕ ಪಾಪಗಳನ್ನು ಮಾಡುವ ಜನರಿದ್ದಾರೆ, ಕೊಲೆಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.
16 ”ಯೇಸುವೆಂಬ ನಾನೇ, ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ಸಾಕ್ಷಿ ನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ದಾವೀದನ ವಂಶದಲ್ಲಿ ಹುಟ್ಟಿದವನೂ ಪ್ರಕಾಶಮಾನವಾದ ಉದಯನಕ್ಷತ್ರವೂ ಆಗಿದ್ದಾನೆ.”
17 ಆತ್ಮನೂ ಮದುಮಗಳೂ, “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಯೂ, “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಕೊಳ್ಳಲಿ.
18 ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಾನು ಎಚ್ಚರಿಕೆ ನೀಡುತ್ತೇನೆ: ಈ ವಾಕ್ಯಗಳಿಗೆ ಯಾರಾದರೂ ಏನನ್ನಾದರೂ ಸೇರಿಸಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಅವನಿಗೆ ಕೊಡುತ್ತಾನೆ.
19 ಈ ಪ್ರವಾದನೆಯ ಪುಸ್ತಕದಿಂದ ಯಾರಾದರೂ ಏನನ್ನಾದರೂ ತೆಗೆದುಹಾಕಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಪವಿತ್ರಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ತೆಗೆದುಹಾಕುತ್ತಾನೆ.
20 ಇವುಗಳೆಲ್ಲಾ ನಿಜವೆಂದು ಹೇಳುವಾತನು ಯೇಸುವೇ. ಈಗ ಆತನು, “ಹೌದು, ನಾನು ಬೇಗನೆ ಬರುತ್ತೇನೆ” ಎಂದು ಹೇಳುತ್ತಾನೆ. ಆಮೆನ್! ಪ್ರಭು ಯೇಸುವೇ, ಬಾ!
21 ಪ್ರಭು ಯೇಸುವಿನ ಕೃಪೆಯು ಎಲ್ಲಾ ಜನರೊಂದಿಗಿರಲಿ.

Revelation 22:1 Kannada Language Bible Words basic statistical display

COMING SOON ...

×

Alert

×