ನಂತರ ನೂತನ ಪರಲೋಕವನ್ನು ಮತ್ತು ನೂತನ ಭೂಮಿಯನ್ನು [*ನೂತನ … ಭೂಮಿಯನ್ನು ನೋಡಿರಿ: ಯೆಶಾಯ 65:17; 66:22; 2 ಪೇತ್ರ 3:13.] ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭೂಮಿ ಅದೃಶ್ಯವಾಗಿದ್ದವು. ಅಲ್ಲಿ ಸಮುದ್ರವಿರಲಿಲ್ಲ.
ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜೆರುಸಲೇಮ್. ವಧುವು ತನ್ನ ಪತಿಗಾಗಿ ಶೃಂಗರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.
ಸಿಂಹಾಸನದಿಂದ ಒಂದು ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು, “ಈಗ ದೇವರ ಮನೆಯು ಜನರ ಸಂಗಡವಿದೆ. ಆತನು ಅವರೊಂದಿಗೆ ನೆಲೆಸುತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರಾಗಿರುತ್ತಾನೆ.
ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.
ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.
ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ.
ಆದರೆ ಹೇಡಿಗಳಿಗೆ, ನಂಬಿಕೆಯಿಲ್ಲದವರಿಗೆ, ಅಸಹ್ಯಕೃತ್ಯ ಮಾಡುವವರಿಗೆ, ಕೊಲೆಗಾರರಿಗೆ, ಲೈಂಗಿಕ ಪಾಪಮಾಡುವವರಿಗೆ, ಮಾಟಮಂತ್ರಗಾರರಿಗೆ, ವಿಗ್ರಹಾರಾಧಕರಿಗೆ, ಸುಳ್ಳುಗಾರರಿಗೆ ಸಿಕ್ಕುವ ಸ್ಥಳ ಬೆಂಕಿಗಂಧಕಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”
ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು.
ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.
ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು.
ನಗರವನ್ನು ಚೌಕೋನವಾಗಿ ನಿರ್ಮಿಸಲಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳೆದನು. ನಗರವು 1,500 ಮೈಲಿ ಉದ್ದ, 1,500 ಮೈಲಿ ಅಗಲ ಮತ್ತು 1,500 ಮೈಲಿ [†1,500 ಮೈಲಿ ಅಂದರೆ ಸುಮಾರು 2,200 ಕಿಲೋಮೀಟರ್‌ಗಳು.] ಎತ್ತರವಾಗಿತ್ತು.
ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.
ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.