Bible Languages

Indian Language Bible Word Collections

Bible Versions

Books

Matthew Chapters

Matthew 4 Verses

Bible Versions

Books

Matthew Chapters

Matthew 4 Verses

1 ಆಗ ದೇವರಾತ್ಮನು ಸೈತಾನನಿಂದ ಶೋಧಿಸಲ್ಪಡಲು ಯೇಸುವನ್ನು ಅಡವಿಗೆ ನಡೆಸಿದನು.
2 ಯೇಸು ನಲವತ್ತು ದಿನ ಹಗಲಿರುಳು ಏನನ್ನೂ ತಿನ್ನಲಿಲ್ಲ. ಬಳಿಕ ಆತನಿಗೆ ಬಹಳ ಹಸಿವಾಯಿತು.
3 ಆಗ ಆತನನ್ನು ಶೋಧಿಸಲು ಸೈತಾನನು ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞಾಪಿಸು” ಅಂದನು.
4 ಯೇಸು ಅವನಿಗೆ, “‘ಮನುಷ್ಯನು ಬದುಕುವುದು ಕೇವಲ ರೊಟ್ಟಿಯಿಂದಲ್ಲ, ದೇವರು ಹೇಳುವ ಪ್ರತಿಯೊಂದು ಮಾತನ್ನು ಅವಲಂಬಿಸಿಕೊಂಡಿದೆ’ ಧರ್ಮೋಪದೇಶ 8:3 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂಬುದಾಗಿ ಉತ್ತರಕೊಟ್ಟನು.
5 ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣವಾದ ಜೆರುಸಲೇಮಿಗೆ ಕರೆದುಕೊಂಡು ಹೋಗಿ, ದೇವಾಲಯದ ಅತಿ ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ,
6 “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ದುಮುಕು. ‘ದೇವರು ನಿನಗೋಸ್ಕರ ತನ್ನ ದೂತರಿಗೆ ಆಜ್ಞಾಪಿಸುವನು. ನಿನ್ನ ಪಾದಗಳು ಬಂಡೆಗೆ ಅಪ್ಪಳಿಸದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಕೀರ್ತನೆ 91:11-12 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆಯಲ್ಲ” ಎಂದನು.
7 ಅದಕ್ಕೆ ಯೇಸು, “ನಿನ್ನ ದೇವರಾದ ಪ್ರಭುವನ್ನು ನೀನು ಪರೀಕ್ಷಿಸಕೂಡದು.” ಧರ್ಮೋಪದೇಶ 6:16 ಎಂಬುದಾಗಿಯೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.
8 ಬಳಿಕ ಸೈತಾನನು ಯೇಸುವನ್ನು ಎತ್ತರವಾದ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ವೈಭವವನ್ನು ತೋರಿಸಿದನು.
9 ಸೈತಾನನು ಆತನಿಗೆ, “ನೀನು ನನಗೆ ಅಡ್ಡಬಿದ್ದು ಆರಾಧಿಸಿದರೆ ನಾನು ಅವೆಲ್ಲವನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
10 ಯೇಸು ಸೈತಾನನಿಗೆ, “ಇಲ್ಲಿಂದ ತೊಲಗು! ‘ನಿನ್ನ ದೇವರಾದ ಪ್ರಭುವನ್ನೇ ಆರಾಧಿಸಬೇಕು, ಆತನೊಬ್ಬನನ್ನೇ ಸೇವಿಸಬೇಕು’ ಧರ್ಮೋಪದೇಶ 6:13 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದನು.
11 ಆದ್ದರಿಂದ ಸೈತಾನನು ಯೇಸುವನ್ನು ಬಿಟ್ಟು ಹೋದನು. ಆಗ ಕೆಲವು ದೇವದೂತರು ಬಂದು ಆತನನ್ನು ಉಪಚರಿಸಿದರು.
12 ಯೋಹಾನನನ್ನು ಸೆರೆಯಲ್ಲಿಟ್ಟಿದ್ದಾರೆಂಬುದು ಯೇಸುವಿಗೆ ತಿಳಿಯಿತು. ಆದ್ದರಿಂದ ಯೇಸು ಗಲಿಲಾಯಕ್ಕೆ ಹಿಂತಿರುಗಿ ಹೋದನು.
13 ಆತನು ನಜರೇತಿನಲ್ಲಿ ಇಳಿದುಕೊಳ್ಳದೆ ಹೊರಟುಹೋಗಿ ಗಲಿಲಾಯ ಸರೋವರಕ್ಕೆ ಹತ್ತಿರವಿದ್ದ ಕಪೆರ್ನೌಮ್ ಎಂಬ ಊರಲ್ಲಿ ವಾಸಿಸಿದನು. ಈ ಊರು ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳ ಬಳಿಯಲ್ಲಿದೆ.
14 ಪ್ರವಾದಿಯಾದ ಯೆಶಾಯನು ನುಡಿದಿದ್ದ ಮಾತು ಹೀಗೆ ನೆರವೇರಿತು. ಅದೇನೆಂದರೆ:
15 “ಜೆಬುಲೋನ್ ಸೀಮೆಯ, ನಫ್ತಾಲಿ ಸೀಮೆಯ, ಜೋರ್ಡನ್ನಿನ ಆಚೆ ಸೀಮೆಯ, ಸಮುದ್ರದ ಕಡೆಗಿರುವ ಸೀಮೆಯ, ಯೆಹೂದ್ಯರಲ್ಲದ ಗಲಿಲಾಯ ಸೀಮೆಯ
16 ಜನರು ಕತ್ತಲಲ್ಲಿ ಜೀವಿಸುತ್ತಿದ್ದರು. ಆಗ ಅವರಿಗೆ ದೊಡ್ಡ ಬೆಳಕೊಂದು ಕಾಣಿಸಿತು. ಸಮಾಧಿಯಂತಿರುವ ಕಾರ್ಗತ್ತಲೆಯ ದೇಶದಲ್ಲಿ ವಾಸಿಸುವ ಆ ಜನರಿಗೆ ಬೆಳಕು ದೊರೆಯಿತು.” ಯೆಶಾಯ 9:1-2
17 ಅಂದಿನಿಂದ ಬೋಧಿಸುವುದಕ್ಕೆ ಯೇಸು ಪ್ರಾರಂಭಿಸಿದನು. “ಪರಲೋಕ ರಾಜ್ಯವು ಬೇಗನೆ ಬರಲಿದೆ. ಆದ್ದರಿಂದ ನೀವು ನಿಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಮಾರ್ಪಡಿಸಿಕೊಳ್ಳಿರಿ” ಎಂದು ಯೇಸು ಬೋಧಿಸಿದನು.
18 ಗಲಿಲಾಯ ಸರೋವರದ ತೀರದಲ್ಲಿ ಯೇಸು ತಿರುಗಾಡುತ್ತಾ ಇದ್ದನು. ಆತನು ಸೀಮೋನ (ಈತನನ್ನೇ ಪೇತ್ರ ಎಂದು ಕರೆಯಲಾಯಿತು.) ಮತ್ತು ಸೀಮೋನನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರನ್ನು ಕಂಡನು. ಬೆಸ್ತರಾಗಿದ್ದ ಇವರಿಬ್ಬರು ಅಂದು ಸರೋವರದ ತೀರದಲ್ಲಿ ಬಲೆಹಾಕಿ ಮೀನು ಹಿಡಿಯುತ್ತಿದ್ದರು.
19 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿ. ನಿಮ್ಮನ್ನು ಬೇರೆ ತರದ ಬೆಸ್ತರನ್ನಾಗಿ ಮಾಡುವೆನು. ನೀವು ಒಟ್ಟುಗೂಡಿಸುವುದು ಮೀನನ್ನಲ್ಲ, ಮನುಷ್ಯರನ್ನು” ಎಂದನು.
20 ಕೂಡಲೇ ಸೀಮೋನ ಮತ್ತು ಅಂದ್ರೆಯ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
21 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ನೋಡಿದನು. ಅವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿದ್ದರು. ಅವರು ಮೀನು ಹಿಡಿಯಲು ತಮ್ಮ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಯೇಸು ಇವರನ್ನು ಕರೆದನು.
22 ಆಗ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
23 ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಯೇಸು ಸಭಾಮಂದಿರಗಳಲ್ಲಿ ಭೋಧಿಸಿದನು ಮತ್ತು ಪರಲೋಕರಾಜ್ಯದ ವಿಷಯವಾದ ಶುಭವಾರ್ತೆಯನ್ನು ಉಪದೇಶಿಸಿದನು. ಯೇಸು ಎಲ್ಲಾ ಜನರ ಕಾಯಿಲೆಗಳನ್ನು ಮತ್ತು ರೋಗಗಳನ್ನು ವಾಸಿಮಾಡಿದನು.
24 ಯೇಸುವಿನ ವಿಷಯವಾದ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧೆಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಳುತ್ತಿದ್ದರು. ಕೆಲವರು ದೆವ್ವಗಳಿಂದ ಪೀಡಿತರಾಗಿದ್ದರು. ಕೆಲವರು ಮೂರ್ಛಾರೋಗಿಗಳಾಗಿದ್ದರು. ಕೆಲವರು ಪಾರ್ಶ್ವವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲಾ ಗುಣಪಡಿಸಿದನು.
25 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಈ ಜನರು ಗಲಿಲಾಯದಿಂದಲೂ ದೆಕಪೊಲಿ ಎಂಬ ಹತ್ತು ಊರುಗಳಿಂದಲೂ ಜೆರುಸಲೇಮಿನಿಂದಲೂ ಜುದೇಯದಿಂದಲೂ ಮತ್ತು ಜೋರ್ಡನ್ ನದಿಯ ಆಚೆಕಡೆಯ ಪ್ರದೇಶದಿಂದಲೂ ಬಂದಿದ್ದರು.

Matthew 4:1 Kannada Language Bible Words basic statistical display

COMING SOON ...

×

Alert

×