ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು.
ಆಗ ಯೇಸು ನಿಟ್ಟುಸಿರುಬಿಟ್ಟು ಅವರಿಗೆ, “ನೀವು ಸೂಚಕಕಾರ್ಯವನ್ನು ನೋಡಬಯಸುವುದೇಕೆ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮಗೆ ಯಾವ ಸೂಚಕಕಾರ್ಯವನ್ನೂ ತೋರಿಸಲಾಗುವುದಿಲ್ಲ” ಎಂದು ಹೇಳಿದನು.
ಶಿಷ್ಯರು ಇದರ ಬಗ್ಗೆ ಮಾತಾಡುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ರೊಟ್ಟಿ ಇಲ್ಲವೆಂದು ನೀವು ಚರ್ಚಿಸುವುದೇಕೆ? ನಿಮಗಿನ್ನೂ ಕಾಣುವುದಿಲ್ಲವೇ? ನಿಮಗಿನ್ನೂ ಅರ್ಥವಾಗುವುದಿಲ್ಲವೇ? ನಿಮ್ಮ ಹೃದಯಗಳು ಇನ್ನೂ ಕಠಿಣವಾಗಿವೆಯೋ?
ನಾನು ಐದು ಸಾವಿರ ಜನರಿಗಾಗಿ ಐದು ರೊಟ್ಟಿಗಳನ್ನು ಮುರಿದು ನಿಮಗೆ ಕೊಟ್ಟೆ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಹೇಳಿದನು. ಆ ಶಿಷ್ಯರು, “ನಾವು ಹನ್ನೆರಡು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
“ನಾನು ನಾಲ್ಕು ಸಾವಿರ ಜನರಿಗಾಗಿ ಏಳು ರೊಟ್ಟಿಗಳನ್ನು ಮುರಿದು ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳಿ. ಅವರು ಊಟ ಮಾಡಿದ ಮೇಲೆ ತಿನ್ನಲಾರದೆ ಬಿಟ್ಟ ಚೂರುಗಳನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿದಿರಿ ಎಂಬುದು ನಿಮಗೆ ನೆನಪಿಲ್ಲವೇ?” ಎಂದು ಕೇಳಿದನು. ಅದಕ್ಕೆ ಶಿಷ್ಯರು, “ನಾವು ಏಳು ಬುಟ್ಟಿಗಳಲ್ಲಿ ತುಂಬಿದೆವು” ಎಂದು ಉತ್ತರಿಸಿದರು.
ಆಗ ಯೇಸು ಆ ಕುರುಡನ ಕೈ ಹಿಡಿದುಕೊಂಡು, ಅವನನ್ನು ಊರಿನಿಂದ ಹೊರಕ್ಕೆ ಕರೆದುಕೊಂಡು ಹೋದನು. ನಂತರ ಯೇಸು ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಈಗ ನಿನಗೆ ಕಾಣುತ್ತದೆಯೋ?” ಎಂದು ಕೇಳಿದನು.
ಯೇಸು ತನ್ನ ಕೈಗಳನ್ನು ಮತ್ತೆ ಕುರುಡನ ಕಣ್ಣುಗಳ ಮೇಲೆ ಇಟ್ಟನು. ಆಗ ಅವನು ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದನು. ಅವನ ಕಣ್ಣುಗಳು ಗುಣಹೊಂದಿದ್ದವು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು.
(ಮತ್ತಾಯ 16:13-20; ಲೂಕ 9:18-21) ಯೇಸು ಮತ್ತು ಆತನ ಶಿಷ್ಯರು ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಸಮೀಪದಲ್ಲಿರುವ ಊರುಗಳಿಗೆ ಹೋದರು. ಅವರು ಪ್ರಯಾಣ ಮಾಡುತ್ತಿರುವಾಗ, ಯೇಸು ತನ್ನ ಶಿಷ್ಯರನ್ನು, “ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
ಅದಕ್ಕೆ ಶಿಷ್ಯರು, “ಕೆಲವರು ನಿನ್ನನ್ನು, ‘ಸ್ನಾನಿಕ ಯೋಹಾನ’ ಎಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ ಎಂದು ಹೇಳುತ್ತಾರೆ. ಇನ್ನು ಕೆಲವು ಜನರು ನಿನ್ನನ್ನು, ‘ಪ್ರವಾದಿಗಳಲ್ಲಿ ಒಬ್ಬನು’ ಎನ್ನುತ್ತಾರೆ” ಎಂದು ಉತ್ತರಿಸಿದರು.
(ಮತ್ತಾಯ 16:21-28; ಲೂಕ 9:22-27) ನಂತರ ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಾ “ಮನುಷ್ಯಕುಮಾರನು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿರಿಯ ಯೆಹೂದ್ಯನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಆತನನ್ನು ತಿರಸ್ಕರಿಸಿ ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಆತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬರುತ್ತಾನೆ” ಎಂದು ಹೇಳಿದನು.
ಮುಂದೆ ಸಂಭವಿಸುವದೆಲ್ಲವನ್ನು ಯೇಸು ಅವರಿಗೆ ಹೇಳಿದನು. ಆತನು ಯಾವುದನ್ನೂ ರಹಸ್ಯವಾಗಿ ಇಡಲಿಲ್ಲ. ಪೇತ್ರನು ಯೇಸುವನ್ನು ಸ್ವಲ್ಪದೂರ ಕರೆದೊಯ್ದು, “ನೀನು ಹಾಗೆಲ್ಲಾ ಹೇಳಕೂಡದು” ಎಂದು ಪ್ರತಿಭಟಿಸಿದನು.
ನಂತರ ಯೇಸು ಜನರನ್ನು ತನ್ನ ಬಳಿಗೆ ಕರೆದನು. ಆತನ ಶಿಷ್ಯರೂ ಅಲ್ಲಿದ್ದರು. ಯೇಸು ಅವರಿಗೆ, “ಯಾವನಿಗಾದರೂ ನನ್ನನ್ನು ಅನುಸರಿಸಲು ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು.
ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಇಚ್ಛಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ಹಾಗೂ ಸುವಾರ್ತೆಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತಾನೆ.
ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯವರಲ್ಲಿ ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಂಡರೆ, ಮನುಷ್ಯಕುಮಾರನಾದ ನಾನು ನನ್ನ ತಂದೆಯ ಮಹಿಮೆಯೊಂದಿಗೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವ ಸಮಯದಲ್ಲಿ ಅವನ ಬಗ್ಗೆ ನಾಚಿಕೆಪಡುವೆನು” ಎಂದು ಹೇಳಿದನು.