ಇಸ್ರೇಲರಿಗೆ ಹೀಗೆ ಹೇಳು: ‘ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ತೆಗೆದುಕೊಳ್ಳಿರಿ; ಸರ್ವಾಂಗಹೋಮಕ್ಕಾಗಿ ಕರುವನ್ನೂ ಕುರಿಮರಿಯನ್ನೂ ತೆಗೆದುಕೊಳ್ಳಿರಿ. ಕರುವೂ ಕುರಿಮರಿಯೂ ಒಂದು ವರ್ಷದ್ದಾಗಿರಬೇಕು. ಆ ಪ್ರಾಣಿಗಳಲ್ಲಿ ಯಾವ ದೋಷವಿರಬಾರದು.
ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊಂಡು ಎಣ್ಣೆ ಬೆರೆಸಿದ ಧಾನ್ಯಸಮರ್ಪಣೆಗಳೊಡನೆ ಅವುಗಳನ್ನು ಯೆಹೋವನ ಮುಂದೆ ಅರ್ಪಿಸಿರಿ. ಯಾಕೆಂದರೆ ಈ ದಿನ ಯೆಹೋವನು ನಿಮಗೆ ಪ್ರತ್ಯಕ್ಷವಾಗುವನು.’ ”
ಮೋಶೆಯು ಆರೋನನಿಗೆ, “ಯೆಹೋವನು ಆಜ್ಞಾಪಿಸಿದವುಗಳನ್ನು ಮಾಡು. ಯಜ್ಞವೇದಿಕೆಯ ಬಳಿಗೆ ಹೋಗಿ ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಅರ್ಪಿಸು. ನಿನ್ನನ್ನೂ ಜನರನ್ನೂ ಶುದ್ಧಿಮಾಡುವ ಆ ಕಾರ್ಯಗಳನ್ನು ಮಾಡು. ಜನರು ತಂದದ್ದನ್ನು ತೆಗೆದುಕೊಂಡು ಅವರಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿ ಅವರನ್ನು ಶುದ್ಧಿಮಾಡು” ಎಂದು ಹೇಳಿದನು.
ಆರೋನನ ಪುತ್ರರು ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನ ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯಜ್ಞವೇದಿಕೆಯ ಮೂಲೆಗಳಿಗೆ ಹಚ್ಚಿದನು. ಬಳಿಕ ಆರೋನನು ರಕ್ತವನ್ನು ಯಜ್ಞವೇದಿಕೆಯ ಬುಡದಲ್ಲಿ ಸುರಿದನು.
ಆರೋನನು ಪಾಪಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಮತ್ತು ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನು ತೆಗೆದುಕೊಂಡನು. ಅವನು ಆ ವಸ್ತುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು.
ತರುವಾಯ ಆರೋನನು ಜನರು ಅರ್ಪಿಸುವ ಪಶುಗಳನ್ನು ತರಿಸಿದನು. ಅವನು ಜನರಿಗಾಗಿ ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ವಧಿಸಿದನು. ಅವನು ಮೊದಲಿನ ಪಶುವನ್ನು ಸಮರ್ಪಿಸಿದ ರೀತಿಯಲ್ಲಿ ಪಾಪಪರಿಹಾರಕ್ಕಾಗಿ ಹೋತವನ್ನು ಸಮರ್ಪಿಸಿದನು.
ಆರೋನನು ಧಾನ್ಯನೈವೇದ್ಯವನ್ನು ಯಜ್ಞವೇದಿಕೆಯ ಬಳಿಗೆ ತಂದನು. ಅವನು ಒಂದು ಹಿಡಿ ಧಾನ್ಯವನ್ನು ತೆಗೆದುಕೊಂಡು ದಿನಂಪ್ರತಿ ಹೊತ್ತಾರೆಯ ವೇಳೆಯಲ್ಲಿ ಅರ್ಪಿಸುವ ಯಜ್ಞವಲ್ಲದೆ ಇದನ್ನೂ ಕೂಡ ಅರ್ಪಿಸಿದನು.
ಆರೋನನು ಜನರಿಗಾಗಿ ಸಮಾಧಾನಯಜ್ಞವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಪುತ್ರರು ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನು ಈ ರಕ್ತವನ್ನು ಯಜ್ಞವೇದಿಕೆಯ ಸುತ್ತಲೂ ಚಿಮಿಕಿಸಿದನು.
ಆರೋನನ ಪುತ್ರರು ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಆರೋನನ ಬಳಿಗೆ ತಂದರು. ಇವರು ಬಾಲದ ಕೊಬ್ಬನ್ನೂ ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೂ ಮೂತ್ರಪಿಂಡಗಳನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತಂದರು.
ತರುವಾಯ ಆರೋನನು ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆರೋನನು ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಮತ್ತು ಸಮಾಧಾನಯಜ್ಞವನ್ನೂ ಅರ್ಪಿಸಿ ಮುಗಿಸಿದ ನಂತರ ಯಜ್ಞವೇದಿಕೆಯಿಂದ ಕೆಳಗಿಳಿದು ಬಂದನು.
ಯೆಹೋವನ ಬಳಿಯಿಂದ ಬೆಂಕಿಯು ಬಂದು ವೇದಿಕೆಯ ಮೇಲಿದ್ದ ಸರ್ವಾಂಗಹೋಮವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿದಾಗ, ಅವರು ಆನಂದದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.