ಯೆಹೋವನು ಹೀಗೆ ಹೇಳುತ್ತಾನೆ: “ಬೇರೆ ಜನಾಂಗಗಳಂತೆ ಜೀವಿಸಬೇಡಿ. ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಬೇಡಿರಿ. ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಬೇರೆ ಜನಾಂಗಗಳು ಹೆದರುತ್ತವೆ. ಆದರೆ ನೀವು ಅವುಗಳಿಗೆ ಹೆದರಬಾರದು.
ಬೇರೆ ಜನಾಂಗದವರ ವಿಗ್ರಹಗಳು ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಬೆದರುಕಂಬಗಳಂತಿವೆ. ಅವರ ವಿಗ್ರಹಗಳು ಮಾತಾಡಲಾರವು; ಅವು ನಡೆಯಲಾರವು. ಜನರು ಆ ವಿಗ್ರಹಗಳನ್ನು ಹೊತ್ತುಕೊಂಡು ಹೋಗಬೇಕು. ಆದ್ದರಿಂದ ಆ ವಿಗ್ರಹಗಳಿಗೆ ಹೆದರಬೇಡಿರಿ. ಅವು ನಿಮಗೆ ಕೇಡನ್ನೂ ಮಾಡಲಾರವು; ಸಹಾಯವನ್ನೂ ಮಾಡಲಾರವು.”
ದೇವರೇ, ಪ್ರತಿಯೊಬ್ಬರೂ ನಿನ್ನನ್ನು ಗೌರವಿಸಬೇಕು. ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ. ಅವರೆಲ್ಲರೂ ನಿನಗೆ ಗೌರವ ತೋರಿಸಬೇಕು. ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ ಆದರೆ ಅವರಲ್ಲಿ ಒಬ್ಬರೂ ನಿನ್ನಷ್ಟು ಜ್ಞಾನಿಗಳಲ್ಲ.
ಅವರು ತಾರ್ಷೀಷ್ ನಗರದ ಬೆಳ್ಳಿಯಿಂದಲೂ ಧಿಫಜ್ ನಗರದ ಬಂಗಾರದಿಂದಲೂ ತಮ್ಮ ವಿಗ್ರಹಗಳನ್ನು ಮಾಡುತ್ತಾರೆ. ಆ ವಿಗ್ರಹಗಳನ್ನು ಬಡಗಿಗಳು, ಕಮ್ಮಾರರು ಮತ್ತು ಅಕ್ಕಸಾಲಿಗರು ಮಾಡುತ್ತಾರೆ; ಅವರು ನೀಲಿ ಮತ್ತು ಕಂದು ಬಣ್ಣದ ಬಟ್ಟೆಗಳನ್ನು ಆ ವಿಗ್ರಹಗಳಿಗೆ ತೊಡಿಸುತ್ತಾರೆ. ಅವು ಕುಶಲರ ಕೌಶಲ್ಯವಾಗಿವೆ.
ಯೆಹೋವನೊಬ್ಬನೇ ನಿಜವಾದ ದೇವರು. ಆತನು ನಿಜವಾಗಿಯೂ ಜೀವಸ್ವರೂಪನಾಗಿದ್ದಾನೆ. ಆತನು ಶಾಶ್ವತವಾಗಿ ಆಳುವ ರಾಜನಾಗಿದ್ದಾನೆ. ಆತನು ಕೋಪಿಸಿಕೊಂಡಾಗ ಭೂಮಿಯು ನಡುಗುತ್ತದೆ. ಜನಾಂಗಗಳು ಆತನ ಕೋಪವನ್ನು ತಡೆಯಲಾರವು.
ಯೆಹೋವನು ಹೇಳುತ್ತಾನೆ, “ಈ ಸಂದೇಶವನ್ನು ಆ ಜನರಿಗೆ ಹೇಳು: ‘ಆ ಸುಳ್ಳುದೇವರುಗಳು ಭೂಲೋಕವನ್ನೂ ಪರಲೋಕವನ್ನೂ ಸೃಷ್ಟಿ ಮಾಡಿಲ್ಲ. ಆ ಸುಳ್ಳುದೇವರುಗಳನ್ನು ನಾಶಮಾಡಲಾಗುವುದು; ಅವುಗಳು ಭೂಲೋಕದಿಂದಲೂ ಆಕಾಶದಿಂದಲೂ ಕಣ್ಮರೆಯಾಗುವವು.’ ”
ಯೆಹೋವನು ಗರ್ಜಿಸುವ ಗುಡುಗನ್ನು ಬರಮಾಡುತ್ತಾನೆ. ಆತನು ಆಕಾಶದಿಂದ ನೀರನ್ನು ಮಹಾಪ್ರವಾಹದಂತೆ ಸುರಿಸುತ್ತಾನೆ. ಆತನು ಭೂಮಿಯ ಎಲ್ಲೆಡೆಯಿಂದ ಮೇಘಗಳು ಆಕಾಶಕ್ಕೆ ಏರಿಹೋಗುವಂತೆ ಮಾಡುತ್ತಾನೆ. ಆತನು ಮಳೆಯೊಂದಿಗೆ ಸಿಡಿಲನ್ನು ಬೀಳಿಸುತ್ತಾನೆ. ತನ್ನ ಭಂಡಾರದಿಂದ ಹೊರಗೆ ಗಾಳಿ ಬೀಸುವಂತೆ ಮಾಡುತ್ತಾನೆ.
ಜನರು ಬುದ್ಧಿಗೇಡಿಗಳಾಗಿದ್ದಾರೆ. ತಾವು ಕೆತ್ತಿದ ವಿಗ್ರಹಗಳಿಂದ ಅಕ್ಕಸಾಲಿಗರು ಮೋಸಹೋಗುತ್ತಾರೆ. ಆ ವಿಗ್ರಹಗಳು ಕೇವಲ ಸುಳ್ಳಿನ ಕಂತೆಗಳು. ಅವುಗಳಲ್ಲಿ ಜೀವವಿಲ್ಲ. [*ಅವುಗಳಲ್ಲಿ ಜೀವವಿಲ್ಲ ಅಕ್ಷರಶಃ ಅವುಗಳಲ್ಲಿ ಆತ್ಮವಿಲ್ಲ. ಅವುಗಳು ಜೀವಂತವಾಗಿಲ್ಲ ಎಂದಾಗಲಿ ದೇವರಾತ್ಮವು ಅವುಗಳಲ್ಲಿಲ್ಲ ಎಂದಾಗಲಿ ಇದು ಅರ್ಥಕೊಡಬಲ್ಲದು.]
ಯೆಹೋವನು ಹೇಳುತ್ತಾನೆ: “ಈ ಸಾರಿ ಯೆಹೂದದ ಜನರನ್ನು ನಾನು ದೇಶದಿಂದ ಹೊರಗೆ ತಳ್ಳುತ್ತೇನೆ. ಅವರಿಗೆ ನಾನು ನೋವು ಮತ್ತು ಕಷ್ಟಗಳನ್ನು ತರುತ್ತೇನೆ. ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”
ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಬಾ ಪೆಟ್ಟಾಗಿದೆ. ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ. ಆದರೂ “ಇದು ನನ್ನ ವ್ಯಾಧಿ, ಇದನ್ನು ನಾನು ಅನುಭವಿಸಬೇಕು” ಎಂದು ಸಮಾಧಾನ ತಂದುಕೊಂಡೆ.
ನನ್ನ ಗುಡಾರವು ಹಾಳಾಗಿದೆ. ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ. ನನ್ನ ಮಕ್ಕಳು ನನ್ನನ್ನು ಬಿಟ್ಟು ಹೊರಟುಹೋಗಿದ್ದಾರೆ. ನನ್ನ ಗುಡಾರವನ್ನು ಹಾಕುವದಕ್ಕೆ ಯಾರೂ ಉಳಿದಿಲ್ಲ. ನನಗಾಗಿ ಒಂದು ಆಸರೆಯನ್ನು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
ನಿನಗೆ ಕೋಪ ಬಂದಿದ್ದರೆ ಬೇರೆ ಜನಾಂಗಗಳನ್ನು ಶಿಕ್ಷಿಸು. ಅವರು ನಿನ್ನನ್ನು ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ. ಅವರು ನಿನ್ನನ್ನು ಆರಾಧಿಸುವುದಿಲ್ಲ. ಆ ಜನಾಂಗಗಳು ಯಾಕೋಬ್ಯರ ವಂಶವನ್ನು ನಾಶಮಾಡಿದರು. ಅವರು ಇಸ್ರೇಲನ್ನು ಸಂಪೂರ್ಣವಾಗಿ ನಾಶಮಾಡಿದರು. ಅವರು ಇಸ್ರೇಲರ ವಾಸಸ್ಥಳವನ್ನು ನಾಶಮಾಡಿದರು.