ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ.
ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ.
ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು. “ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ. ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.” ಜ್ಞಾನೋಕ್ತಿಗಳು 3:34
ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿದ್ದು ಅವನನ್ನು ಎದುರಿಸಿರಿ. ಯಾಕೆಂದರೆ ಲೋಕದಲ್ಲಿರುವ ನಿಮ್ಮ ಸಹೋದರ ಸಹೋದರಿಯರೆಲ್ಲರೂ ನಿಮಗಿರುವಂಥ ಬಾಧೆಗಳನ್ನು ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.
ಹೌದು, ನೀವು ಸ್ವಲ್ಪಕಾಲ ಮಾತ್ರ ಸಂಕಟವನ್ನು ಅನುಭವಿಸುವಿರಿ. ಆದರೆ ಅನಂತರ ದೇವರು ಎಲ್ಲವನ್ನು ಸರಿಪಡಿಸುತ್ತಾನೆ. ಆತನು ನಿಮ್ಮನ್ನು ಬಲಪಡಿಸುತ್ತಾನೆ. ನೀವು ಕೆಳಕ್ಕೆ ಬೀಳದಂತೆ ಆತನು ನಿಮಗೆ ಆಧಾರವಾಗುವನು. ಎಲ್ಲರಿಗೂ ಕೃಪೆಯನ್ನು ತೋರುವ ದೇವರು ಆತನೇ. ತನ್ನ ಪ್ರಭಾವದಲ್ಲಿ ಪಾಲುಗಾರರಾಗಲು ಕ್ರಿಸ್ತನೇ ನಿಮ್ಮನ್ನು ಕರೆದನು. ಆ ಪ್ರಭಾವವು ಶಾಶ್ವತವಾದದ್ದು.
ನಾನು ಈ ಕಿರುಪತ್ರವನ್ನು ಸಿಲ್ವಾನನ ನೆರವಿನಿಂದ ಬರೆದೆನು. ಅವನು ಕ್ರಿಸ್ತನಲ್ಲಿ ನಂಬಿಗಸ್ತನಾದ ಸಹೋದರನೆಂಬುದು ನನಗೆ ತಿಳಿದಿದೆ. ನಾನು ನಿಮ್ಮನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಈ ಪತ್ರವನ್ನು ಬರೆದೆನು. ಇದುವೇ ದೇವರ ನಿಜವಾದ ಕೃಪೆ ಎಂಬುದನ್ನು ನಿಮಗೆ ತಿಳಿಸಬೇಕೆಂಬುದೇ ನನ್ನ ಅಪೇಕ್ಷೆಯಾಗಿತ್ತು. ಆ ಕೃಪೆಯಲ್ಲಿ ಸ್ಥಿರತೆಯಿಂದಿರಿ.
ಬಾಬಿಲೋನಿನಲ್ಲಿರುವ ಸಭೆಯವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ನಿಮ್ಮನ್ನು ಆರಿಸಿಕೊಂಡಂತೆಯೇ ಆ ಜನರನ್ನೂ ಆರಿಸಿಕೊಳ್ಳಲಾಗಿದೆ. ಕ್ರಿಸ್ತನಲ್ಲಿ ನನ್ನ ಮಗನಾದ ಮಾರ್ಕನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ.