ದಾವೀದನು ಯೋವಾಬನನ್ನೂ ಇಸ್ರೇಲರ ಇತರ ಅಧಿಪತಿಗಳನ್ನೂ ಕರೆದು ಅವರಿಗೆ, “ದೇಶದೊಳಕ್ಕೆ ಹೋಗಿ ಇಸ್ರೇಲರೆಲ್ಲರನ್ನು ಲೆಕ್ಕಿಸಿರಿ. ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣ ತನಕ ಎಲ್ಲಾ ಊರುಗಳನ್ನು ಸಂಚರಿಸಿ ಜನರನ್ನು ಲೆಕ್ಕಿಸಿರಿ. ಆಗ ನನಗೆ ನನ್ನ ರಾಜ್ಯದ ಜನಸಂಖ್ಯೆಯು ತಿಳಿಯುವದು” ಅಂದನು.
ಅದಕ್ಕೆ ಉತ್ತರವಾಗಿ ಯೋವಾಬನು, “ಯೆಹೋವನು ತನ್ನ ಜನಾಂಗವನ್ನು ನೂರುಪಟ್ಟು ಅಭಿವೃದ್ಧಿಪಡಿಸಲಿ. ಅರಸನೇ, ನೀನು ಈ ಕಾರ್ಯವನ್ನು ಯಾಕೆ ಮಾಡಿಸಬೇಕು? ಹೀಗೆ ಮಾಡಿದರೆ ನೀನು ಎಲ್ಲಾ ಇಸ್ರೇಲರನ್ನು ಪಾಪದಲ್ಲಿ ಬೀಳುವಂತೆ ಮಾಡುತ್ತಿರುವೆ” ಎಂದು ಹೇಳಿದನು.
ಆದರೆ ಅರಸನಾದ ದಾವೀದನು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ದಾವೀದನು ಹೇಳಿದಂತೆಯೇ ಯೋವಾಬನು ಮಾಡಬೇಕಾಯಿತು. ಯೋವಾಬನು ದೇಶದ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಲೆಕ್ಕಿಸಿ ಜೆರುಸಲೇಮಿಗೆ ಬಂದನು.
ಅರಸನಿಗೆ ಜನಗಣತಿಯ ಲೆಕ್ಕ ಒಪ್ಪಿಸಿದನು. ಇಸ್ರೇಲಿನಲ್ಲಿ ಒಟ್ಟು ಹನ್ನೊಂದು ಲಕ್ಷ ಮಂದಿ ಖಡ್ಗ ಉಪಯೋಗಿಸುವವರು ಇದ್ದರು. ಯೆಹೂದದಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಖಡ್ಗ ಉಪಯೋಗಿಸುವವರಿದ್ದರು.
(9-10) ಗಾದನು ದಾವೀದನ ಪ್ರವಾದಿಯಾಗಿದ್ದನು. ಯೆಹೋವನು ಗಾದನಿಗೆ, “ನೀನು ದಾವೀದನಿಗೆ ಹೀಗೆ ಹೇಳು: ‘ಇದು ಯೆಹೋವನ ನುಡಿ. ನಾನು ನಿನಗೆ ಕೊಡಲಿರುವ ಮೂರು ಶಿಕ್ಷೆಯಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ನೀನು ಆರಿಸಿಕೊಂಡ ಪ್ರಕಾರವೇ ನಾನು ನಿನ್ನನ್ನು ಶಿಕ್ಷಿಸುವೆನು’ ” ಅಂದನು.
(11-12) ಗಾದನು ದಾವೀದನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ: ‘ನೀನು ಸಹಿಸಿಕೊಳ್ಳಬಲ್ಲ ಶಿಕ್ಷೆಯನ್ನು ಆರಿಸಿಕೊ. ಮೂರು ವರ್ಷಗಳ ಬರಗಾಲ; ಅಥವಾ ನಿನ್ನ ವೈರಿಗಳಿಗೆ ಮೂರು ತಿಂಗಳು ಶರಣಾಗುವಿಕೆ; ಅಥವಾ ಮೂರು ದಿವಸ ಕಾಲ ಭಯಂಕರ ಕಾಯಿಲೆಯು ನಿನ್ನ ರಾಜ್ಯವೆಲ್ಲಾ ಹಬ್ಬುವದು; ಯೆಹೋವನ ದೂತನು ಇಡೀ ಇಸ್ರೇಲನ್ನು ದಾಟಿ ಸಿಕ್ಕಿದವರನ್ನೆಲ್ಲಾ ಹತಿಸಿಬಿಡುವನು.’ ದಾವೀದನೇ, ನನ್ನನ್ನು ನಿನ್ನ ಬಳಿಗೆ ದೇವರೇ ಕಳುಹಿಸಿರುತ್ತಾನೆ. ನೀನು ಯಾವ ಶಿಕ್ಷೆಯನ್ನು ಆರಿಸಿಕೊಳ್ಳುವಿ ಎಂಬುದನ್ನು ನನಗೆ ತಿಳಿಸು.”
ದೇವರು ಜೆರುಸಲೇಮಿನ ಜನರನ್ನು ನಾಶನ ಮಾಡುವುದಕ್ಕೆ ದೂತನನ್ನು ಕಳುಹಿಸಿದನು. ಯೆಹೋವನು ಅದನ್ನು ನೋಡಿ ದುಃಖಗೊಂಡು ಜನರನ್ನು ನಾಶಮಾಡಲು ಬಂದಿದ್ದ ದೂತನಿಗೆ, “ಸಾಕು, ಇನ್ನು ನಿಲ್ಲಿಸು” ಅಂದನು. ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತುಕೊಂಡಿದ್ದನು.
ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ಖಡ್ಗವನ್ನು ಜೆರುಸಲೇಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವನೊಂದಿಗಿದ್ದ ಹಿರಿಯರೂ ಬಗ್ಗಿ ನೆಲದ ಮೇಲೆ ಮುಖಗಳನ್ನಿಟ್ಟು ನಮಸ್ಕರಿಸಿದರು. ಅವರು ಶೋಕವಸ್ತ್ರಗಳನ್ನು ಧರಿಸಿದ್ದರು.
ದಾವೀದನು ದೇವರಿಗೆ, “ಪಾಪಮಾಡಿದವನು ನಾನು. ಜನಗಣತಿಯನ್ನು ಮಾಡಲು ಆಜ್ಞಾಪಿಸಿದವನು ನಾನೇ. ನಾನು ತಪ್ಪು ಮಾಡಿದೆ! ಆದರೆ ಇಸ್ರೇಲರು ಏನೂ ತಪ್ಪು ಮಾಡಲಿಲ್ಲ. ದೇವರಾದ ಯೆಹೋವನೇ, ನನ್ನನ್ನೂ ನನ್ನ ಪರಿವಾರದವರನ್ನೂ ಶಿಕ್ಷಿಸು. ನಿನ್ನ ಜನರನ್ನು ಸಾಯಿಸುವ ವ್ಯಾಧಿಯನ್ನು ನಿಲ್ಲಿಸು” ಎಂದು ಬೇಡಿಕೊಂಡನು.
ದಾವೀದನು ಒರ್ನಾನನಿಗೆ, “ನಿನ್ನ ಕಣವನ್ನು ನನಗೆ ಕ್ರಯಕ್ಕೆ ಮಾರಿಬಿಡು. ನಾನು ಇಲ್ಲಿ ಯಜ್ಞವೇದಿಕೆಯನ್ನು ಕಟ್ಟಿ ದೇವರನ್ನು ಆರಾಧಿಸಬೇಕು. ಆಗ ಈ ಭಯಂಕರ ವ್ಯಾಧಿಯು ನಿಂತುಹೋಗುವುದು” ಅಂದನು.
ಆಗ ಒರ್ನಾನನು, “ನೀನು ನನ್ನ ಒಡೆಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗಹೋಮಕ್ಕೆ ಬೇಕಾದ ಕಟ್ಟಿಗೆಗಾಗಿ ನೇಗಿಲುಗಳನ್ನೂ ಧಾನ್ಯಾರ್ಪಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೆ” ಅಂದನು.
ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲಾ ಪೂರ್ಣಕ್ರಯ ಕೊಡುತ್ತೇನೆ. ನಿನ್ನಿಂದ ನಾನು ಪುಕ್ಕಟೆಯಾಗಿ ತೆಗೆದುಕೊಂಡದ್ದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾರ್ಥವಾಗಿ ದೊರೆತದ್ದನ್ನು ದೇವರಿಗೆ ಕಾಣಿಕೆಯಾಗಿ ಕೊಡುವದಿಲ್ಲ” ಎಂದನು.
ಅಲ್ಲಿ ದೇವರನ್ನು ಆರಾಧಿಸಲು ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ದಾವೀದನು ಅದರ ಮೇಲೆ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿದನು. ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಪರಲೋಕದಿಂದ ಬೆಂಕಿಯನ್ನು ಕಳುಹಿಸುವುದರ ಮೂಲಕ ದಾವೀದನಿಗೆ ಉತ್ತರಿಸಿದನು. ಸರ್ವಾಂಗಹೋಮಗಳ ಯಜ್ಞವೇದಿಕೆಯ ಮೇಲೆ ಬೆಂಕಿಯು ಇಳಿದುಬಂದಿತು.