Bible Languages

Indian Language Bible Word Collections

Bible Versions

Books

Mark Chapters

Mark 3 Verses

Bible Versions

Books

Mark Chapters

Mark 3 Verses

1 ಮತ್ತೊಂದು ದಿನದಲ್ಲಿ, ಯೇಸು ಸಭಾಮಂದಿರದೊಳಕ್ಕೆ ಹೋದನು. ಅಲ್ಲಿ ಕೈಬತ್ತಿದ್ದ ಒಬ್ಬ ಮನುಷ್ಯನಿದ್ದನು.
2 ಅಲ್ಲಿದ್ದ ಕೆಲವು ಯೆಹೂದ್ಯರು, ಯೇಸುವನ್ನು ದೂಷಿಸುವುದಕ್ಕಾಗಿ ಆತನಲ್ಲಿ ಏನಾದರೂ ತಪ್ಪನ್ನು ಕಂಡುಹಿಡಿಯಲು ಎದುರು ನೋಡುತ್ತಿದ್ದರು. ಸಬ್ಬತ್‌ದಿನದಂದು ಆ ಮನುಷ್ಯನನ್ನು ಯೇಸು ಗುಣಪಡಿಸಬಹುದೆಂದು ಅವರು ಆತನ ಸಮೀಪದಲ್ಲಿಯೇ ಇದ್ದರು.
3 ಯೇಸು ಕೈಬತ್ತಿದ್ದ ಆ ಮನುಷ್ಯನಿಗೆ, “ಎದ್ದುನಿಲ್ಲು, ಜನರೆಲ್ಲರೂ ನಿನ್ನನ್ನು ನೋಡಲಿ” ಎಂದು ಹೇಳಿದನು.
4 ನಂತರ ಯೇಸು ಜನರಿಗೆ, “ಸಬ್ಬತ್‌ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು? ಒಳ್ಳೆಯ ಕಾರ್ಯವನ್ನೇ? ಕೆಟ್ಟ ಕಾರ್ಯವನ್ನೇ? ಒಂದು ಜೀವವನ್ನು ರಕ್ಷಿಸಬೇಕೇ? ಅಥವಾ ನಾಶಪಡಿಸಬೇಕೇ?” ಎಂದು ಕೇಳಿದನು. ಆಗ ಅವರು ಏನೂ ಉತ್ತರ ಕೊಡಲಾರದೆ ಮೌನವಾಗಿದ್ದರು.
5 ಯೇಸು ಕೋಪಗೊಂಡು ಜನರ ಕಡೆಗೆ ನೋಡಿದನು. ಅವರ ಮೊಂಡುತನವನ್ನು ಕಂಡು ಆತನಿಗೆ ದುಃಖವಾಯಿತು. ಯೇಸು ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ತನ್ನ ಕೈಯನ್ನು ಯೇಸುವಿನತ್ತ ಚಾಚಿದನು. ಕೂಡಲೇ ಅವನ ಕೈ ವಾಸಿಯಾಯಿತು.
6 ಆಗ ಫರಿಸಾಯರು ಹೊರಗೆ ಹೋಗಿ, ಹೆರೋದ್ಯರನ್ನು ಕೂಡಿಕೊಂಡು ಯೇಸುವನ್ನು ಯಾವ ರೀತಿ ಕೊಲ್ಲಬೇಕೆಂದು ಆಲೋಚಿಸಿದರು.
7 ಯೇಸು ತನ್ನ ಶಿಷ್ಯರೊಂದಿಗೆ ಸರೋವರಕ್ಕೆ ಹೊರಟು ಹೋದನು. ಗಲಿಲಾಯದ ಅನೇಕ ಜನರು ಆತನನ್ನು ಹಿಂಬಾಲಿಸಿದರು.
8 ಅನೇಕಾನೇಕ ಜನರು ಜುದೇಯದಿಂದ, ಜೆರುಸಲೇಮಿನಿಂದ, ಇದೂಮಾಯದಿಂದ, ಜೋರ್ಡನ್ ನದಿಯ ಆಚೆಗಿರುವ ಪ್ರದೇಶದಿಂದ ಮತ್ತು ಟೈರ್, ಸೀದೋನ್‌ಗಳ ಸುತ್ತಲಿನ ಪ್ರದೇಶಗಳಿಂದ ಬಂದರು. ಯೇಸುವು ಮಾಡುತ್ತಿದ್ದ ಕಾರ್ಯಗಳ ಬಗ್ಗೆ ಅವರು ಕೇಳಿ ಬಂದಿದ್ದರು.
9 ಯೇಸು ಈ ಜನಸಮೂಹವನ್ನು ನೋಡಿ ಅವರು ತನ್ನ ಮೈಮೇಲೆ ಬಿದ್ದು ನೂಕಬಹುದೆಂದು ತನಗಾಗಿ ಒಂದು ಚಿಕ್ಕ ದೋಣಿಯನ್ನು ತಂದು ಅದನ್ನು ಸಿದ್ದಪಡಿಸುವಂತೆ ತನ್ನ ಶಿಷ್ಯರಿಗೆ ಹೇಳಿದನು.
10 ಯೇಸು ಅನೇಕ ಜನರನ್ನು ಗುಣಪಡಿಸಿದನು. ಆದ್ದರಿಂದ ಕಾಯಿಲೆಯಾಗಿದ್ದ ಜನರೆಲ್ಲರೂ ಆತನನ್ನು ಮುಟ್ಟುವುದಕ್ಕಾಗಿ ಆತನ ಮೇಲೆ ಬೀಳುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಕೆಲವು ಜನರು ಅಲ್ಲಿದ್ದರು.
11 ದೆವ್ವಗಳು ಯೇಸುವನ್ನು ನೋಡಿ, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, “ನೀನು ದೇವಕುಮಾರ” ಎಂದು ಜೋರಾಗಿ ಕೂಗುತ್ತಿದ್ದವು.
12 ಆದರೆ ಯೇಸು ತಾನು ಯಾರೆಂಬುದನ್ನು ಜನರಿಗೆ ತಿಳಿಸಬಾರದೆಂದು ಅವುಗಳಿಗೆ ಖಂಡಿತವಾಗಿ ಆಜ್ಞಾಪಿಸಿದನು.
13 ನಂತರ ಯೇಸು ಒಂದು ಬೆಟ್ಟದ ಮೇಲಕ್ಕೆ ಹೋದನು. ಯೇಸು ಕೆಲವು ಜನರಿಗೆ ತನ್ನೊಂದಿಗೆ ಬರಲು ಹೇಳಿದನು. ಯೇಸು ಅಪೇಕ್ಷಿಸಿದ ಜನರು ಇವರೇ. ಈ ಜನರು ಯೇಸುವಿನೊಂದಿಗೆ ಮೇಲಕ್ಕೆ ಹೋದರು.
14 ಆತನು ಅವರಲ್ಲಿ ಹನ್ನೆರಡು ಮಂದಿಯನ್ನು ತನ್ನ ಅಪೊಸ್ತಲರನ್ನಾಗಿ ಆರಿಸಿಕೊಂಡನು. ಈ ಹನ್ನೆರಡು ಮಂದಿ ತನ್ನೊಂದಿಗಿರಬೇಕೆಂಬುದು ಮತ್ತು ಉಪದೇಶ ಮಾಡುವುದಕ್ಕಾಗಿ ಅವರನ್ನು ಬೇರೆ ಸ್ಥಳಗಳಿಗೆ ಕಳುಹಿಸಬೇಕೆಂಬುದು
15 ಅಲ್ಲದೆ ದೆವ್ವಗಳಿಂದ ಪೀಡಿತರಾಗಿರುವ ಜನರನ್ನು ಅವುಗಳಿಂದ ಬಿಡಿಸುವುದಕ್ಕೆ ಅವರಿಗೆ ಅಧಿಕಾರ ಕೊಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು.
16 ಯೇಸುವು ಈ ಹನ್ನೆರಡು ಮಂದಿಯನ್ನು ಆರಿಸಿಕೊಂಡನು: ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರನ್ನಿತ್ತನು),
17 ಜಿಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನ (ಯೇಸು ಅವರಿಗೆ ಬೊವನೆರ್ಗೆಸ್ ಎಂಬ ಹೆಸರನ್ನಿತ್ತನು. ಈ ಹೆಸರಿಗೆ ‘ಸಿಡಿಲಿನ ಜನರು’ ಎಂದರ್ಥ.)
18 ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ದೇಶಾಭಿಮಾನಿಯಾದ ಸೀಮೋನ
19 ಮತ್ತು ಇಸ್ಕರಿಯೋತ ಯೂದ. ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿದವನೇ ಯೂದ.
20 ನಂತರ ಯೇಸು ಮನೆಗೆ ಹೋದನು. ಮತ್ತೆ ಅನೇಕ ಜನರು ಅಲ್ಲಿಗೆ ಸೇರಿಬಂದರು. ಆದ್ದರಿಂದ ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ.
21 ಯೇಸುವಿನ ಕುಟುಂಬದವರಿಗೆ ಈ ವಿಷಯಗಳೆಲ್ಲ ತಿಳಿದವು. ಯೇಸುವಿಗೆ ಹುಚ್ಚು ಹಿಡಿದಿದೆಯೆಂದು ಕೆಲವರು ಹೇಳಿದ್ದರಿಂದ ಆತನ ಕುಟುಂಬದವರು ಆತನನ್ನು ಕರೆದೊಯ್ಯಲು ಅಲ್ಲಿಗೆ ಬಂದರು.
22 ಜೆರುಸಲೇಮಿನ ಧರ್ಮೋಪದೇಶಕರು, “ಇವನೊಳಗೆ ದೆವ್ವಗಳ ಒಡೆಯನಾದ ಬೆಲ್ಜೆಬೂಲನು ವಾಸಿಸುತ್ತಿದ್ದಾನೆ. ದೆವ್ವಗಳಿಂದ ಪೀಡಿತರಾಗಿರುವವರನ್ನು ಇವನು ಬಿಡಿಸುವುದು ದೆವ್ವಗಳ ಒಡೆಯನ ಸಹಾಯದಿಂದಲೇ” ಎಂದು ಹೇಳಿದರು.
23 ಆದ್ದರಿಂದ ಯೇಸು ಜನರನ್ನು ಒಟ್ಟಿಗೆ ಕರೆದು, ಅವರಿಗೆ ಸಾಮ್ಯಗಳ ಮೂಲಕ ಬೋಧಿಸಿ, “ಸೈತಾನನು ತನ್ನ ದೆವ್ವಗಳನ್ನು ಜನರಿಂದ ಬಲವಂತವಾಗಿ ಹೊರಡಿಸುವುದಿಲ್ಲ.
24 ತನ್ನ ವಿರುದ್ಧವಾಗಿ ತಾನೇ ಹೋರಾಡುವ ರಾಜ್ಯ ಉಳಿಯುವುದಿಲ್ಲ.
25 ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ.
26 ಸೈತಾನನು ತನ್ನ ವಿರುದ್ಧವಾಗಿಯೂ ತನ್ನ ಜನರ ವಿರುದ್ಧವಾಗಿಯೂ ತಾನೇ ಹೋರಾಟ ಮಾಡಿದರೆ ಅವನು ಅಂತ್ಯಗೊಳ್ಳುತ್ತಾನೆ.
27 ಒಬ್ಬ ವ್ಯಕ್ತಿಯು ಬಲಾಢ್ಯನ ಮನೆಗೆ ಪ್ರವೇಶಿಸಿ ಅವನ ವಸ್ತುಗಳನ್ನು ಕದಿಯಲು ಇಚ್ಛಿಸಿದರೆ, ಮೊದಲು ಅವನು ಬಲಾಢ್ಯನನ್ನು ಕಟ್ಟಿಹಾಕಬೇಕು. ಆಗ ಅವನು ಬಲಾಢ್ಯನ ಮನೆಯಿಂದ ವಸ್ತುಗಳನ್ನು ಕದಿಯಲು ಸಾಧ್ಯವಾಗುವುದು.
28 ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಜನರು ಮಾಡುವ ಎಲ್ಲಾ ಪಾಪಗಳಿಗೂ ದೇವದೂಷಣೆಗಳಿಗೂ ಕ್ಷಮೆ ದೊರೆಯಲು ಸಾಧ್ಯ.
29 ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.
30 ‘ಇವನಿಗೆ ದೆವ್ವಹಿಡಿದಿದೆ’ ಎಂದು ಧರ್ಮೋಪದೇಶಕರು ಆರೋಪಿಸಿದ್ದರಿಂದ ಯೇಸು ಹೀಗೆ ಹೇಳಬೇಕಾಯಿತು.
31 ನಂತರ ಯೇಸುವಿನ ತಾಯಿ ಮತ್ತು ಆತನ ಸಹೋದರರು ಅಲ್ಲಿಗೆ ಬಂದರು. ಅವರು ಹೊರಗೆ ನಿಂತುಕೊಂಡು ಯೇಸುವಿಗೆ ಬರಬೇಕೆಂದು ಒಬ್ಬನ ಮೂಲಕ ಹೇಳಿ ಕಳುಹಿಸಿದರು.
32 ಅನೇಕ ಜನರು ಯೇಸುವಿನ ಸುತ್ತಲೂ ಕುಳಿತಿದ್ದರು. ಅವನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾಯುತ್ತಿದ್ದಾರೆ” ಎಂದು ಹೇಳಿದನು.
33 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಕೇಳಿ
34 ತನ್ನ ಸುತ್ತಲೂ ಕುಳಿತಿದ್ದ ಜನರ ಕಡೆಗೆ ನೋಡಿ, “ಈ ಜನರೇ ನನ್ನ ತಾಯಿ ಮತ್ತು ನನ್ನ ಸಹೋದರರು!
35 ದೇವರ ಚಿತ್ತಕ್ಕನುಸಾರವಾಗಿ ನಡೆಯುವ ಜನರೇ ನನ್ನ ಸಹೋದರರು, ಸಹೋದರಿಯರು ಮತ್ತು ತಾಯಿ” ಎಂದು ಹೇಳಿದನು.

Mark 3:17 Kannada Language Bible Words basic statistical display

COMING SOON ...

×

Alert

×