Bible Languages

Indian Language Bible Word Collections

Bible Versions

Books

Mark Chapters

Mark 15 Verses

Bible Versions

Books

Mark Chapters

Mark 15 Verses

1 ಮುಂಜಾನೆ ನಸುಕಿನಲ್ಲೇ, ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಧರ್ಮೋಪದೇಶಕರು ಮತ್ತು ಯೆಹೂದ್ಯ ಸಮಿತಿಯವರು ಸಭೆಸೇರಿ ಯೇಸುವಿಗೆ ಮಾಡಬೇಕಾದದ್ದನ್ನು ನಿರ್ಧರಿಸಿದರು. ಅವರು ಯೇಸುವನ್ನು ಬಂಧಿಸಿ, ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸಿದರು.
2 ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು. ಯೇಸು, “ಹೌದು, ನೀನು ಹೇಳಿದ್ದು ಸರಿ” ಎಂದು ಉತ್ತರಿಸಿದನು.
3 ಮಹಾಯಾಜಕರು ಯೇಸುವಿನ ಮೇಲೆ ಅನೇಕ ತಪ್ಪುಗಳನ್ನು ಹೊರಿಸಿದರು.
4 ಆದ್ದರಿಂದ ಪಿಲಾತನು ಯೇಸುವಿಗೆ ಮತ್ತೊಮ್ಮೆ, “ಈ ಜನರು ನಿನ್ನ ಮೇಲೆ ಅನೇಕ ಅಪರಾಧಗಳನ್ನು ಹೊರಿಸುತ್ತಿದ್ದರೂ ನೀನು ಏಕೆ ಉತ್ತರಿಸುವುದಿಲ್ಲ?” ಎಂದು ಕೇಳಿದನು.
5 ಆದರೆ ಯೇಸು ಮೌನವಾಗಿದ್ದನು. ಪಿಲಾತನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು.
6 ಪ್ರತಿ ವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸಿದ ಕೈದಿಯನ್ನು ರಾಜ್ಯಪಾಲನು ಸೆರೆಮನೆಯಿಂದ ಬಿಡುಗಡೆ ಮಾಡುತ್ತಿದ್ದನು.
7 ಆ ಸಮಯದಲ್ಲಿ ಬರಬ್ಬ ಎಂಬವನು ದಂಗೆಕೋರರೊಂದಿಗೆ ಸೆರೆಮನೆಯಲ್ಲಿದ್ದನು. ಈ ದಂಗೆಕೋರರು ಒಂದು ಗಲಭೆಯ ಸಮಯದಲ್ಲಿ ಕೊಲೆ ಮಾಡಿದ ಆಪಾದನೆಗೆ ಗುರಿಯಾಗಿದ್ದರು.
8 ಜನರು ಪಿಲಾತನ ಬಳಿಗೆ, ಎಂದಿನಂತೆ ತಮಗಾಗಿ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕೆಂದು ಕೇಳಿದರು.
9 ಪಿಲಾತನು ಜನರಿಗೆ, “ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತೀರಾ?” ಎಂದು ಕೇಳಿದನು.
10 ಮಹಾಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಬಂಧಿಸಿ ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ತಿಳಿದಿತ್ತು.
11 ಆದರೆ ಯೇಸುವನ್ನು ಬಿಡುಗಡೆ ಮಾಡದೆ ಬರಬ್ಬನನ್ನು ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮಹಾಯಾಜಕರು ಜನರನ್ನು ಪ್ರೇರೇಪಿಸಿದರು.
12 ಪಿಲಾತನು ಜನರಿಗೆ ಮತ್ತೆ “ಯೆಹೂದ್ಯರ ರಾಜನೆಂದು ನೀವು ಕರೆಯುವ ಈ ಮನುಷ್ಯನನ್ನು ನಾನೇನು ಮಾಡಲಿ?” ಎಂದು ಕೇಳಿದನು.
13 ಜನರು, “ಅವನನ್ನು ಶಿಲುಬೆಗೇರಿಸು! ಎಂದು ಆರ್ಭಟಿಸಿದರು.
14 ಪಿಲಾತನು, “ಏಕೆ? ಅವನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಿದನು. ಅದಕ್ಕೆ ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಆರ್ಭಟಿಸಿದರು.
15 ಪಿಲಾತನು ಜನರನ್ನು ಸಂತೋಷಪಡಿಸಲು ಬಯಸಿ ಅವರಿಗಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು ಮತ್ತು ಕೊರಡೆಗಳಿಂದ ಹೊಡೆದು ಶಿಲುಬೆಗೇರಿಸುವುದಕ್ಕಾಗಿ ಯೇಸುವನ್ನು ಸೈನಿಕರಿಗೆ ಒಪ್ಪಿಸಿದನು.
16 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ಕೊಂಡೊಯ್ದು ಇತರ ಸೈನಿಕರನ್ನೆಲ್ಲಾ ಒಟ್ಟಿಗೆ ಕರೆದರು.
17 ಸೈನಿಕರು ಯೇಸುವಿನ ಮೇಲೆ ಕಡುಕೆಂಪಾದ ನಿಲುವಂಗಿಯನ್ನು ಹಾಕಿ ಮುಳ್ಳಿನ ಬಳ್ಳಿಗಳಿಂದ ಒಂದು ಕಿರೀಟ ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು.
18 ನಂತರ ಅವರು ಯೇಸುವಿಗೆ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದರು.
19 ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು.
20 ಆ ಬಳಿಕ ಸೈನಿಕರು ಕಡುಕೆಂಪಾದ ನಿಲುವಂಗಿಯನ್ನು ತೆಗೆದುಬಿಟ್ಟು, ಆತನ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಲು ಕರೆದುಕೊಂಡು ಹೋದರು.
21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು.
22 ಅವರು ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’).
23 ಗೊಲ್ಗೊಥದಲ್ಲಿ ಸೈನಿಕರು ಯೇಸುವಿಗೆ ರಕ್ತಬೋಳ ಮಿಶ್ರಿತವಾದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ಕುಡಿಯಲಿಲ್ಲ.
24 ಸೈನಿಕರು ಯೇಸುವನ್ನು ಶಿಲುಬೆಗೆ ನೇತುಹಾಕಿ, ಮೊಳೆಗಳನ್ನು ಜಡಿದರು. ನಂತರ ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು.
25 ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.
26 ಯೇಸುವಿನ ವಿರುದ್ಧ ಮಾಡಲಾದ ಆಪಾದನೆಯನ್ನು ಅಂದರೆ “ಯೆಹೂದ್ಯರ ರಾಜ” ಎಂದು ಶಿಲುಬೆಯ ಮೇಲೆ ಬರೆಯಲಾಗಿತ್ತು.
27 ಅಲ್ಲದೆ ಅವರು ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದರು. ಅವರು ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು.
28 [This verse may not be a part of this translation]
29 ಅಲ್ಲಿ ನಡೆದು ಹೋಗುತ್ತಿದ್ದವರು ತಮ್ಮ ತಲೆಯಾಡಿಸುತ್ತಾ, “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ಕಟ್ಟುತ್ತೇನೆಂದು ಹೇಳಿದೆ.
30 ಈಗ ಶಿಲುಬೆಯಿಂದ ಕೆಳಗಿಳಿದು ಬಂದು ನಿನ್ನನ್ನು ರಕ್ಷಿಸಿಕೊ!” ಎಂದು ಅಪಹಾಸ್ಯ ಮಾಡಿದರು.
31 ಅಲ್ಲಿದ್ದ ಮಹಾಯಾಜಕರು ಹಾಗೂ ಧರ್ಮೋಪದೇಶಕರು ಸಹ, “ಅವನು ಇತರ ಜನರನ್ನು ರಕ್ಷಿಸಿದನು. ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.
32 ಅವನು ನಿಜವಾಗಲೂ ಇಸ್ರೇಲರ ರಾಜನಾದ ಕ್ರಿಸ್ತನಾಗಿದ್ದರೆ, ಈಗ ಶಿಲುಬೆಯಿಂದ ಕೆಳಗಿಳಿದು ಬಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ. ಆಗ ನಾವು ಅವನನ್ನು ನಂಬುತ್ತೇವೆ” ಎಂದು ಅಪಹಾಸ್ಯ ಮಾಡಿದರು. ಯೇಸುವಿನ ಪಕ್ಕದ ಶಿಲುಬೆಗಳಿಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ಗೇಲಿಮಾಡಿದರು.
33 ಮಧ್ಯಾಹ್ನವಾದಾಗ, ಇಡೀ ದೇಶವೇ ಕತ್ತಲಾಯಿತು. ಈ ಕತ್ತಲೆಯು ಸಾಯಂಕಾಲ ಮೂರು ಗಂಟೆಯವರೆಗೆ ಇತ್ತು.
34 ಮೂರು ಗಂಟೆಗೆ, ಯೇಸು ದೊಡ್ಡ ಧ್ವನಿಯಿಂದ, “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದು ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟೆ?’ ಎಂಬುದೇ ಇದರರ್ಥ.
35 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ನೋಡಿ! ಆತನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದರು.
36 ಅಲ್ಲಿದ್ದ ಒಬ್ಬನು ಓಡಿಹೋಗಿ, ಸ್ಪಂಜನ್ನು ತೆಗೆದುಕೊಂಡು ಅದನ್ನು ಹುಳಿರಸದಿಂದ ತುಂಬಿಸಿ, ಒಂದು ಕೋಲಿಗೆ ಕಟ್ಟಿ ಯೇಸುವಿಗೆ ಕುಡಿಯಲು ಕೊಡುತ್ತಾ, ಎಲೀಯನು ಇವನನ್ನು ಶಿಲುಬೆಯಿಂದ ಕೆಳಗಿಳಿಸಲು ಬರಬಹುದೇನೋ ನಾವು ಕಾಯ್ದು ನೋಡಬೇಕು” ಎಂದನು.
37 ನಂತರ ಯೇಸು ಮಹಾಧ್ವನಿಯಿಂದ ಕೂಗಿ, ಪ್ರಾಣಬಿಟ್ಟನು.
38 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗಗಳಾಗಿ ಹರಿದು ಹೋಯಿತು.
39 ಶಿಲುಬೆಯ ಮುಂದೆ ನಿಂತಿದ್ದ ಸೈನ್ಯದ ಅಧಿಕಾರಿಯು ಯೇಸು ಪ್ರಾಣಬಿಟ್ಟಾಗ ನಡೆದದ್ದನ್ನು ನೋಡಿ, “ಈ ಮನುಷ್ಯನು ನಿಜವಾಗಿಯೂ ದೇವರ ಮಗನು” ಎಂದನು.
40 ಕೆಲವು ಸ್ತ್ರೀಯರು ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ನೋಡುತ್ತಾ ಇದ್ದರು. ಈ ಸ್ತ್ರೀಯರಲ್ಲಿ ಕೆಲವರೆಂದರೆ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬ ಯೋಸೆಯರ ತಾಯಿಯಾದ ಮರಿಯಳು (ಯಾಕೋಬನು ಅವಳ ಕಿರಿಯ ಮಗ.)
41 ಈ ಸ್ತ್ರೀಯರು ಗಲಿಲಾಯದಲ್ಲಿ ಯೇಸುವನ್ನು ಹಿಂಬಾಲಿಸಿ ಆತನ ಸೇವೆ ಮಾಡಿದವರು. ಯೇಸುವಿನೊಡನೆ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಅಲ್ಲಿದ್ದರು.
42 ಆಗ ಕತ್ತಲಾಗತೊಡಗಿತ್ತು. ಅಂದು ಸಿದ್ಧತೆಯ ದಿನವಾಗಿದ್ದರಿಂದ (ಅಂದರೆ ಸಬ್ಬತ್ತಿನ ಹಿಂದಿನ ದಿನ),
43 ಅರಿಮಥಾಯ ಊರಿನ ಯೋಸೇಫ ಎಂಬವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಧೈರ್ಯದಿಂದ ಕೇಳಿದನು. ಯೋಸೇಫನು ಯೆಹೂದ್ಯರ ಸಮಿತಿಯಲ್ಲಿ ಒಬ್ಬ ಮುಖ್ಯ ಸದಸ್ಯನಾಗಿದ್ದನು. ದೇವರ ರಾಜ್ಯ ಬರಲೆಂದು ಬಯಸಿದ ಜನರಲ್ಲಿ ಇವನೂ ಒಬ್ಬನಾಗಿದ್ದನು.
44 ಯೇಸು ಇಷ್ಟು ಬೇಗನೆ ಸತ್ತದ್ದನ್ನು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಯೇಸುವನ್ನು ಕಾವಲು ಕಾಯುತ್ತಿದ್ದ ಸೈನ್ಯಾಧಿಕಾರಿಯನ್ನು ಪಿಲಾತನು ಕರೆದು, “ಯೇಸು ಸತ್ತುಹೋದನೇ?” ಎಂದು ಕೇಳಿದನು.
45 ಆ ಅಧಿಕಾರಿಯು, “ಹೌದು” ಎಂದು ಹೇಳಿದ್ದರಿಂದ ಆತನ ದೇಹವನ್ನು ತೆಗೆದುಕೊಳ್ಳಲು ಪಿಲಾತನು ಯೋಸೇಫನಿಗೆ ಅಪ್ಪಣೆಕೊಟ್ಟನು.
46 ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು.
47 ಮಗ್ದಲದ ಮರಿಯಳು ಹಾಗೂ ಯೋಸೆಯನ ತಾಯಿಯಾದ ಮರಿಯಳು ಸಮಾಧಿ ಮಾಡಿದ ಸ್ಥಳವನ್ನು ಗುರುತಿಸಿಕೊಂಡರು.

Mark 15:26 Kannada Language Bible Words basic statistical display

COMING SOON ...

×

Alert

×