1
|
ಮುಂಜಾನೆ ನಸುಕಿನಲ್ಲೇ, ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಧರ್ಮೋಪದೇಶಕರು ಮತ್ತು ಯೆಹೂದ್ಯ ಸಮಿತಿಯವರು ಸಭೆಸೇರಿ ಯೇಸುವಿಗೆ ಮಾಡಬೇಕಾದದ್ದನ್ನು ನಿರ್ಧರಿಸಿದರು. ಅವರು ಯೇಸುವನ್ನು ಬಂಧಿಸಿ, ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸಿದರು. |
2
|
ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು. ಯೇಸು, “ಹೌದು, ನೀನು ಹೇಳಿದ್ದು ಸರಿ” ಎಂದು ಉತ್ತರಿಸಿದನು. |
3
|
ಮಹಾಯಾಜಕರು ಯೇಸುವಿನ ಮೇಲೆ ಅನೇಕ ತಪ್ಪುಗಳನ್ನು ಹೊರಿಸಿದರು. |
4
|
ಆದ್ದರಿಂದ ಪಿಲಾತನು ಯೇಸುವಿಗೆ ಮತ್ತೊಮ್ಮೆ, “ಈ ಜನರು ನಿನ್ನ ಮೇಲೆ ಅನೇಕ ಅಪರಾಧಗಳನ್ನು ಹೊರಿಸುತ್ತಿದ್ದರೂ ನೀನು ಏಕೆ ಉತ್ತರಿಸುವುದಿಲ್ಲ?” ಎಂದು ಕೇಳಿದನು. |
5
|
ಆದರೆ ಯೇಸು ಮೌನವಾಗಿದ್ದನು. ಪಿಲಾತನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು. |
6
|
ಪ್ರತಿ ವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸಿದ ಕೈದಿಯನ್ನು ರಾಜ್ಯಪಾಲನು ಸೆರೆಮನೆಯಿಂದ ಬಿಡುಗಡೆ ಮಾಡುತ್ತಿದ್ದನು. |
7
|
ಆ ಸಮಯದಲ್ಲಿ ಬರಬ್ಬ ಎಂಬವನು ದಂಗೆಕೋರರೊಂದಿಗೆ ಸೆರೆಮನೆಯಲ್ಲಿದ್ದನು. ಈ ದಂಗೆಕೋರರು ಒಂದು ಗಲಭೆಯ ಸಮಯದಲ್ಲಿ ಕೊಲೆ ಮಾಡಿದ ಆಪಾದನೆಗೆ ಗುರಿಯಾಗಿದ್ದರು. |
8
|
ಜನರು ಪಿಲಾತನ ಬಳಿಗೆ, ಎಂದಿನಂತೆ ತಮಗಾಗಿ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕೆಂದು ಕೇಳಿದರು. |
9
|
ಪಿಲಾತನು ಜನರಿಗೆ, “ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತೀರಾ?” ಎಂದು ಕೇಳಿದನು. |
10
|
ಮಹಾಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಬಂಧಿಸಿ ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ತಿಳಿದಿತ್ತು. |
11
|
ಆದರೆ ಯೇಸುವನ್ನು ಬಿಡುಗಡೆ ಮಾಡದೆ ಬರಬ್ಬನನ್ನು ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮಹಾಯಾಜಕರು ಜನರನ್ನು ಪ್ರೇರೇಪಿಸಿದರು. |
12
|
ಪಿಲಾತನು ಜನರಿಗೆ ಮತ್ತೆ “ಯೆಹೂದ್ಯರ ರಾಜನೆಂದು ನೀವು ಕರೆಯುವ ಈ ಮನುಷ್ಯನನ್ನು ನಾನೇನು ಮಾಡಲಿ?” ಎಂದು ಕೇಳಿದನು. |
13
|
ಜನರು, “ಅವನನ್ನು ಶಿಲುಬೆಗೇರಿಸು! ಎಂದು ಆರ್ಭಟಿಸಿದರು. |
14
|
ಪಿಲಾತನು, “ಏಕೆ? ಅವನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಿದನು. ಅದಕ್ಕೆ ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಆರ್ಭಟಿಸಿದರು. |
15
|
ಪಿಲಾತನು ಜನರನ್ನು ಸಂತೋಷಪಡಿಸಲು ಬಯಸಿ ಅವರಿಗಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು ಮತ್ತು ಕೊರಡೆಗಳಿಂದ ಹೊಡೆದು ಶಿಲುಬೆಗೇರಿಸುವುದಕ್ಕಾಗಿ ಯೇಸುವನ್ನು ಸೈನಿಕರಿಗೆ ಒಪ್ಪಿಸಿದನು. |
16
|
ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ಕೊಂಡೊಯ್ದು ಇತರ ಸೈನಿಕರನ್ನೆಲ್ಲಾ ಒಟ್ಟಿಗೆ ಕರೆದರು. |
17
|
ಸೈನಿಕರು ಯೇಸುವಿನ ಮೇಲೆ ಕಡುಕೆಂಪಾದ ನಿಲುವಂಗಿಯನ್ನು ಹಾಕಿ ಮುಳ್ಳಿನ ಬಳ್ಳಿಗಳಿಂದ ಒಂದು ಕಿರೀಟ ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. |
18
|
ನಂತರ ಅವರು ಯೇಸುವಿಗೆ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದರು. |
19
|
ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು. |
20
|
ಆ ಬಳಿಕ ಸೈನಿಕರು ಕಡುಕೆಂಪಾದ ನಿಲುವಂಗಿಯನ್ನು ತೆಗೆದುಬಿಟ್ಟು, ಆತನ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಲು ಕರೆದುಕೊಂಡು ಹೋದರು. |
21
|
ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು. |
22
|
ಅವರು ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’). |
23
|
ಗೊಲ್ಗೊಥದಲ್ಲಿ ಸೈನಿಕರು ಯೇಸುವಿಗೆ ರಕ್ತಬೋಳ ಮಿಶ್ರಿತವಾದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ಕುಡಿಯಲಿಲ್ಲ. |
24
|
ಸೈನಿಕರು ಯೇಸುವನ್ನು ಶಿಲುಬೆಗೆ ನೇತುಹಾಕಿ, ಮೊಳೆಗಳನ್ನು ಜಡಿದರು. ನಂತರ ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು. |
25
|
ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು. |
26
|
ಯೇಸುವಿನ ವಿರುದ್ಧ ಮಾಡಲಾದ ಆಪಾದನೆಯನ್ನು ಅಂದರೆ “ಯೆಹೂದ್ಯರ ರಾಜ” ಎಂದು ಶಿಲುಬೆಯ ಮೇಲೆ ಬರೆಯಲಾಗಿತ್ತು. |
27
|
ಅಲ್ಲದೆ ಅವರು ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದರು. ಅವರು ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. |
28
|
[This verse may not be a part of this translation] |
29
|
ಅಲ್ಲಿ ನಡೆದು ಹೋಗುತ್ತಿದ್ದವರು ತಮ್ಮ ತಲೆಯಾಡಿಸುತ್ತಾ, “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ಕಟ್ಟುತ್ತೇನೆಂದು ಹೇಳಿದೆ. |
30
|
ಈಗ ಶಿಲುಬೆಯಿಂದ ಕೆಳಗಿಳಿದು ಬಂದು ನಿನ್ನನ್ನು ರಕ್ಷಿಸಿಕೊ!” ಎಂದು ಅಪಹಾಸ್ಯ ಮಾಡಿದರು. |
31
|
ಅಲ್ಲಿದ್ದ ಮಹಾಯಾಜಕರು ಹಾಗೂ ಧರ್ಮೋಪದೇಶಕರು ಸಹ, “ಅವನು ಇತರ ಜನರನ್ನು ರಕ್ಷಿಸಿದನು. ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. |
32
|
ಅವನು ನಿಜವಾಗಲೂ ಇಸ್ರೇಲರ ರಾಜನಾದ ಕ್ರಿಸ್ತನಾಗಿದ್ದರೆ, ಈಗ ಶಿಲುಬೆಯಿಂದ ಕೆಳಗಿಳಿದು ಬಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ. ಆಗ ನಾವು ಅವನನ್ನು ನಂಬುತ್ತೇವೆ” ಎಂದು ಅಪಹಾಸ್ಯ ಮಾಡಿದರು. ಯೇಸುವಿನ ಪಕ್ಕದ ಶಿಲುಬೆಗಳಿಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ಗೇಲಿಮಾಡಿದರು. |
33
|
ಮಧ್ಯಾಹ್ನವಾದಾಗ, ಇಡೀ ದೇಶವೇ ಕತ್ತಲಾಯಿತು. ಈ ಕತ್ತಲೆಯು ಸಾಯಂಕಾಲ ಮೂರು ಗಂಟೆಯವರೆಗೆ ಇತ್ತು. |
34
|
ಮೂರು ಗಂಟೆಗೆ, ಯೇಸು ದೊಡ್ಡ ಧ್ವನಿಯಿಂದ, “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದು ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟೆ?’ ಎಂಬುದೇ ಇದರರ್ಥ. |
35
|
ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ನೋಡಿ! ಆತನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದರು. |
36
|
ಅಲ್ಲಿದ್ದ ಒಬ್ಬನು ಓಡಿಹೋಗಿ, ಸ್ಪಂಜನ್ನು ತೆಗೆದುಕೊಂಡು ಅದನ್ನು ಹುಳಿರಸದಿಂದ ತುಂಬಿಸಿ, ಒಂದು ಕೋಲಿಗೆ ಕಟ್ಟಿ ಯೇಸುವಿಗೆ ಕುಡಿಯಲು ಕೊಡುತ್ತಾ, ಎಲೀಯನು ಇವನನ್ನು ಶಿಲುಬೆಯಿಂದ ಕೆಳಗಿಳಿಸಲು ಬರಬಹುದೇನೋ ನಾವು ಕಾಯ್ದು ನೋಡಬೇಕು” ಎಂದನು. |
37
|
ನಂತರ ಯೇಸು ಮಹಾಧ್ವನಿಯಿಂದ ಕೂಗಿ, ಪ್ರಾಣಬಿಟ್ಟನು. |
38
|
ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗಗಳಾಗಿ ಹರಿದು ಹೋಯಿತು. |
39
|
ಶಿಲುಬೆಯ ಮುಂದೆ ನಿಂತಿದ್ದ ಸೈನ್ಯದ ಅಧಿಕಾರಿಯು ಯೇಸು ಪ್ರಾಣಬಿಟ್ಟಾಗ ನಡೆದದ್ದನ್ನು ನೋಡಿ, “ಈ ಮನುಷ್ಯನು ನಿಜವಾಗಿಯೂ ದೇವರ ಮಗನು” ಎಂದನು. |
40
|
ಕೆಲವು ಸ್ತ್ರೀಯರು ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ನೋಡುತ್ತಾ ಇದ್ದರು. ಈ ಸ್ತ್ರೀಯರಲ್ಲಿ ಕೆಲವರೆಂದರೆ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬ ಯೋಸೆಯರ ತಾಯಿಯಾದ ಮರಿಯಳು (ಯಾಕೋಬನು ಅವಳ ಕಿರಿಯ ಮಗ.) |
41
|
ಈ ಸ್ತ್ರೀಯರು ಗಲಿಲಾಯದಲ್ಲಿ ಯೇಸುವನ್ನು ಹಿಂಬಾಲಿಸಿ ಆತನ ಸೇವೆ ಮಾಡಿದವರು. ಯೇಸುವಿನೊಡನೆ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಅಲ್ಲಿದ್ದರು. |
42
|
ಆಗ ಕತ್ತಲಾಗತೊಡಗಿತ್ತು. ಅಂದು ಸಿದ್ಧತೆಯ ದಿನವಾಗಿದ್ದರಿಂದ (ಅಂದರೆ ಸಬ್ಬತ್ತಿನ ಹಿಂದಿನ ದಿನ), |
43
|
ಅರಿಮಥಾಯ ಊರಿನ ಯೋಸೇಫ ಎಂಬವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಧೈರ್ಯದಿಂದ ಕೇಳಿದನು. ಯೋಸೇಫನು ಯೆಹೂದ್ಯರ ಸಮಿತಿಯಲ್ಲಿ ಒಬ್ಬ ಮುಖ್ಯ ಸದಸ್ಯನಾಗಿದ್ದನು. ದೇವರ ರಾಜ್ಯ ಬರಲೆಂದು ಬಯಸಿದ ಜನರಲ್ಲಿ ಇವನೂ ಒಬ್ಬನಾಗಿದ್ದನು. |
44
|
ಯೇಸು ಇಷ್ಟು ಬೇಗನೆ ಸತ್ತದ್ದನ್ನು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಯೇಸುವನ್ನು ಕಾವಲು ಕಾಯುತ್ತಿದ್ದ ಸೈನ್ಯಾಧಿಕಾರಿಯನ್ನು ಪಿಲಾತನು ಕರೆದು, “ಯೇಸು ಸತ್ತುಹೋದನೇ?” ಎಂದು ಕೇಳಿದನು. |
45
|
ಆ ಅಧಿಕಾರಿಯು, “ಹೌದು” ಎಂದು ಹೇಳಿದ್ದರಿಂದ ಆತನ ದೇಹವನ್ನು ತೆಗೆದುಕೊಳ್ಳಲು ಪಿಲಾತನು ಯೋಸೇಫನಿಗೆ ಅಪ್ಪಣೆಕೊಟ್ಟನು. |
46
|
ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು. |
47
|
ಮಗ್ದಲದ ಮರಿಯಳು ಹಾಗೂ ಯೋಸೆಯನ ತಾಯಿಯಾದ ಮರಿಯಳು ಸಮಾಧಿ ಮಾಡಿದ ಸ್ಥಳವನ್ನು ಗುರುತಿಸಿಕೊಂಡರು. |
Mark 15:11 Kannada Language Bible Words basic statistical display
COMING SOON ...