Bible Languages

Indian Language Bible Word Collections

Bible Versions

Books

Luke Chapters

Luke 2 Verses

Bible Versions

Books

Luke Chapters

Luke 2 Verses

1 ಆ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಸರನು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ದೇಶಗಳಲ್ಲಿ ಜನಗಣತಿ ಆಗಬೇಕೆಂದು ಆಜ್ಞಾಪಿಸಿದನು.
2 ಇದು ಮೊಟ್ಟಮೊದಲನೆಯ ಜನಗಣತಿಯಾಗಿತ್ತು. ಕುರೇನ್ಯನು ಸಿರಿಯ ದೇಶದ ರಾಜ್ಯಪಾಲನಾಗಿದ್ದಾಗ ಇದು ಸಂಭವಿಸಿತು.
3 ಜನರೆಲ್ಲರೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಮ್ಮತಮ್ಮ ಊರುಗಳಿಗೆ ಪ್ರಯಾಣ ಮಾಡಿದರು.
4 ಆದ್ದರಿಂದ ಯೋಸೇಫನು ಗಲಿಲಾಯದಲ್ಲಿನ ನಜರೇತ್ ಎಂಬ ಊರಿನಿಂದ ಹೊರಟು ಜುದೇಯದಲ್ಲಿನ ಬೆತ್ಲೆಹೇಮ್ ಎಂಬ ಊರಿಗೆ ಹೋದನು. ಯೋಸೇಫನು ದಾವೀದನ ಮನೆತನದವನಾಗಿದ್ದುದರಿಂದ ದಾವೀದನ ಊರಾದ ಬೆತ್ಲೆಹೇಮಿಗೆ ಹೋದನು.
5 ಅವನು ತನ್ನೊಂದಿಗೆ ಮರಿಯಳನ್ನೂ ಕರೆದುಕೊಂಡು ಹೋದನು. ಆಕೆಗೆ ಅವನೊಂದಿಗೆ ನಿಶ್ಚಿತಾರ್ಥವಾಗಿತ್ತು. (ಮರಿಯಳು ಆಗ ಗರ್ಭಿಣಿಯಾಗಿದ್ದಳು.)
6 ಅವರು ಬೆತ್ಲೆಹೇಮಿನಲ್ಲಿದ್ದಾಗ ಮರಿಯಳಿಗೆ ಹೆರಿಗೆಕಾಲ ಬಂತು.
7 ಆಕೆ ತನ್ನ ಚೊಚ್ಚಲಮಗುವನ್ನು (ಯೇಸು) ಹೆತ್ತಳು. ಅವರಿಗೆ ಇಳಿದುಕೊಳ್ಳಲು ಛತ್ರದಲ್ಲಿ ಸ್ಥಳ ದೊರೆಯಲಿಲ್ಲ. ಆದುದರಿಂದ ಮರಿಯಳು ಮಗುವನ್ನು ಬಟ್ಟೆಯಿಂದ ಸುತ್ತಿ ದನದ ಕೊಟ್ಟಿಗೆಯಲ್ಲಿ ಮೇವು ಹಾಕುತ್ತಿದ್ದ ತೊಟ್ಟಿಯಲ್ಲಿ ಮಲಗಿಸಿದಳು.
8 ಆ ರಾತ್ರಿ, ಕೆಲವು ಕುರುಬರು ಹೊಲಗಳ ಸಮೀಪದಲ್ಲಿ ತಮ್ಮ ಕುರಿಗಳನ್ನು ಕಾಯುತ್ತಿದ್ದರು.
9 ಪ್ರಭುವಿನ ದೂತನೊಬ್ಬನು ಕುರುಬರ ಮುಂದೆ ನಿಂತನು. ಅವರ ಸುತ್ತಲೂ ಪ್ರಭುವಿನ ಪ್ರಭೆಯು ಪ್ರಕಾಶಿಸಿತು. ಕುರುಬರು ಬಹಳವಾಗಿ ಹೆದರಿದರು.
10 ದೇವದೂತನು ಅವರಿಗೆ, “ಹೆದರಬೇಡಿರಿ, ಜನರೆಲ್ಲರಿಗೆ ಮಹಾಸಂತೋಷವನ್ನು ಉಂಟುಮಾಡುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ:
11 ಈ ದಿನ ನಿಮಗೋಸ್ಕರ ದಾವೀದನ ಊರಿನಲ್ಲಿ ರಕ್ಷಕನು ಜನಿಸಿದ್ದಾನೆ. ಆತನೇ ಪ್ರಭುವಾದ ಕ್ರಿಸ್ತನು.
12 ಬಟ್ಟೆಯಲ್ಲಿ ಸುತ್ತಿರುವ ಒಂದು ಮಗು ದನದ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ನೀವು ಆತನನ್ನು ಗೊತ್ತುಪಡಿಸಿಕೊಳ್ಳಲು ಅದೇ ಗುರುತಾಗಿದೆ” ಎಂದು ಹೇಳಿದನು.
13 ತಕ್ಷಣವೇ ಪರಲೋಕದಿಂದ ದೇವದೂತರು ಬಹು ದೊಡ್ಡ ಗುಂಪಾಗಿ ಬಂದು ಮೊದಲನೆಯ ದೇವದೂತನೊಡನೆ ಸೇರಿಕೊಂಡರು. ಅವರೆಲ್ಲರೂ,
14 “ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದವರಿಗೆ ಸಮಾಧಾನ” ಎಂದು ಹೇಳುತ್ತಾ ದೇವರನ್ನು ಸ್ತುತಿಸಿದರು.
15 ದೇವದೂತರು ಕುರುಬರ ಬಳಿಯಿಂದ ಪರಲೋಕಕ್ಕೆ ಹಿಂತಿರುಗಿದ ಮೇಲೆ ಕುರುಬರು, “ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ, ಪ್ರಭುವು ನಮಗೆ ತಿಳಿಸಿದ ಈ ಘಟನೆಯನ್ನು ನೋಡೋಣ” ಎಂದು ಮಾತಾಡಿಕೊಂಡರು.
16 ಆದುದರಿಂದ ಕುರುಬರು ಬೇಗನೆ ಹೋಗಿ ಮರಿಯಳನ್ನೂ ಯೋಸೇಫನನ್ನೂ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಮಗುವನ್ನೂ ಕಂಡುಕೊಂಡರು.
17 ಕುರುಬರು ಮಗುವನ್ನು ನೋಡಿದಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯಪಡಿಸಿದರು.
18 ಕುರುಬರು ತಿಳಿಸಿದ್ದನ್ನು ಕೇಳಿದ ಅವರೆಲ್ಲರೂ ಆಶ್ಚರ್ಯಪಟ್ಟರು.
19 ಮರಿಯಳು ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅವುಗಳ ಬಗ್ಗೆ ಯೋಚಿಸತೊಡಗಿದಳು.
20 ಕುರುಬರು ತಾವು ಕಂಡು ಕೇಳಿದ ಪ್ರತಿಯೊಂದು ಸಂಗತಿಗಾಗಿ ದೇವರನ್ನು ಕೊಂಡಾಡುತ್ತಾ ಆತನನ್ನು ಸ್ತುತಿಸುತ್ತಾ ತಮ್ಮ ಕುರಿಗಳಿದ್ದಲ್ಲಿಗೆ ಮರಳಿ ಹೋದರು. ದೇವದೂತರು ಅವರಿಗೆ ತಿಳಿಸಿದಂತೆಯೇ ಪ್ರತಿಯೊಂದು ಸಂಗತಿಯೂ ನಡೆದಿತ್ತು.
21 ಮಗುವಿಗೆ ಎಂಟು ದಿನವಾದಾಗ ಸುನ್ನತಿ ಆಯಿತು ಮತ್ತು ಆತನಿಗೆ ‘ಯೇಸು’ ಎಂದು ಹೆಸರಿಡಲಾಯಿತು. ಮರಿಯಳ ಗರ್ಭದಲ್ಲಿ ಮಗುವು ಬೆಳೆಯುವುದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೆಸರನ್ನೇ ಕೊಡಬೇಕೆಂದು ಸೂಚಿಸಿದ್ದನು.
22 ಶುದ್ಧೀಕರಣದ ಬಗ್ಗೆ ಮೋಶೆಯ ಧರ್ಮಶಾಸ್ತ್ರವು ಬೋಧಿಸಿದ್ದ ಕಾರ್ಯಗಳನ್ನು ಮರಿಯಳು ಮತ್ತು ಯೋಸೇಫನು ಮಾಡುವ ಸಮಯ ಬಂತು. ಯೇಸುವನ್ನು ಪ್ರಭುವಿಗೆ (ದೇವರಿಗೆ) ಪ್ರತಿಷ್ಠಿಸಲು ಯೋಸೇಫನು ಮತ್ತು ಮರಿಯಳು ಅತನನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು.
23 ಏಕೆಂದರೆ “ಪ್ರತಿ ಕುಟುಂಬದಲ್ಲಿ, ‘ಚೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಷ್ಠಿಸಬೇಕು”‘ ಎಂದು ಪ್ರಭುವಿನ ಧರ್ಮಶಾಸ್ತ್ರದಲ್ಲಿ ಬರೆದಿದೆ.
24 “ಎರಡು ಪಾರಿವಾಳಗಳನ್ನು ಅಥವಾ ಎರಡು ಬೆಳವಕ್ಕಿಗಳನ್ನು ಯಜ್ಞವಾಗಿ ಸಮರ್ಪಿಸಬೇಕು” ಎಂದು ಸಹ ಪ್ರಭುವಿನ ಧರ್ಮಶಾಸ್ತ್ರವು ಹೇಳುತ್ತದೆ. ಆದುದರಿಂದ ಯೋಸೇಫನು ಮತ್ತು ಮರಿಯಳು ಜೆರುಸಲೇಮಿಗೆ ಹೋದರು.
25 ಸಿಮೆಯೋನನೆಂಬ ಒಬ್ಬ ಮನುಷ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಒಳ್ಳೆಯವನಾಗಿದ್ದನು ಮತ್ತು ಬಹಳ ಧಾರ್ಮಿಕನಾಗಿದ್ದನು. ದೇವರು ಇಸ್ರೇಲರಿಗೆ (ಯೆಹೂದ್ಯರಿಗೆ) ಸಹಾಯ ಮಾಡುವ ಕಾಲವನ್ನೇ ಸಿಮೆಯೋನನು ಎದುರು ನೋಡುತ್ತಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು.
26 ಪ್ರಭುವು ಕಳುಹಿಸುವ ಕ್ರಿಸ್ತನನ್ನು ನೋಡುವ ತನಕ ನೀನು ಸಾಯುವುದಿಲ್ಲ ಎಂದು ಪವಿತ್ರಾತ್ಮನು ಸಿಮೆಯೋನನಿಗೆ ತಿಳಿಸಿದ್ದನು.
27 ಸಿಮೆಯೋನನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಯೆಹೂದ್ಯರ ಧರ್ಮಶಾಸ್ತ್ರದ ವಿಧಿಗಳನ್ನು ಪೂರೈಸಲು ಮರಿಯಳು ಮತ್ತು ಯೋಸೇಫನು ದೇವಾಲಯಕ್ಕೆ ಹೋದರು. ಅವರು ಮಗು ಯೇಸುವನ್ನು ದೇವಾಲಯಕ್ಕೆ ತಂದರು.
28 ಸಿಮೆಯೋನನು ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸ್ತೋತ್ರ ಸಲ್ಲಿಸಿದನು:
29 “ಪ್ರಭುವೇ, ನಿನ್ನ ವಾಗ್ದಾನದಂತೆ ಸಮಾಧಾನದಿಂದ ಸಾಯಲು ನಿನ್ನ ದಾಸನಿಗೆ ಅಪ್ಪಣೆಯಾಗಲಿ.
30 ನೀನು ದಯಪಾಲಿಸಿದ ರಕ್ಷಕನನ್ನು ಕಣ್ಣಾರೆಕಂಡೆನು.
31 ನೀನು ಆತನನ್ನು ಜನರೆಲ್ಲರಿಗೆ ಪ್ರತ್ಯಕ್ಷ ಮಾಡಿರುವೆ.
32 ಆತನು ಯೆಹೂದ್ಯರಲ್ಲದ ಜನರಿಗೆ ನಿನ್ನ ಮಾರ್ಗವನ್ನು ತೋರಿಸುವ ಬೆಳಕಾಗಿದ್ದಾನೆ. ಆತನಿಂದ ನಿನ್ನ ಜನರಾದ ಇಸ್ರೇಲರಿಗೆ (ಯೆಹೂದ್ಯರಿಗೆ) ಕೀರ್ತಿಯಾಗುವುದು.”
33 ಸಿಮೆಯೋನನು ಮಗುವಿನ ಕುರಿತಾಗಿ ಹೇಳಿದ ಮಾತುಗಳನ್ನು ಕೇಳಿ ತಂದೆತಾಯಿಗಳಿಗೆ ಆಶ್ಚರ್ಯವಾಯಿತು.
34 ಬಳಿಕ ಸಿಮೆಯೋನನು ಅವರನ್ನು ಆಶೀರ್ವದಿಸಿ ಮರಿಯಳಿಗೆ, “ಈ ಮಗುವಿನ ನಿಮಿತ್ತ ಯೆಹೂದ್ಯರಲ್ಲಿ ಅನೇಕರು ಬೀಳುವರು. ಅನೇಕರು ಏಳುವರು. ಕೆಲವರು ಅಂಗೀಕರಿಸರು ಎಂಬುದಕ್ಕೆ ಈತನು ದೇವರಿಂದ ಬಂದ ಗುರುತಾಗಿರುವನು.
35 ಜನರು ಗುಟ್ಟಾಗಿ ಯೋಚಿಸುವ ಸಂಗತಿಗಳು ಬಯಲಾಗುವವು. ಮುಂದೆ ಸಂಭವಿಸುವ ಸಂಗತಿಗಳಿಂದ ನಿನ್ನ ಹೃದಯಕ್ಕೆ ಅಲಗು ನಾಟಿದಂತಾಗುವುದು” ಎಂದು ಹೇಳಿದನು.
36 ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು.
37 ತನ್ನ ಉಳಿದ ಜೀವಮಾನವೆಲ್ಲಾ ವಿಧವೆಯಾಗಿದ್ದ ಆಕೆಗೆ ಈಗ ಎಂಭತ್ತನಾಲ್ಕು ವರ್ಷ ವಯಸ್ಸಾಗಿತ್ತು. ಅನ್ನಳು ಯಾವಾಗಲೂ ದೇವಾಲಯದಲ್ಲಿಯೇ ಇದ್ದಳು. ಆಕೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ಆಕೆ ಉಪವಾಸ ಮಾಡುತ್ತಾ ಮತ್ತು ಹಗಲಿರುಳು ಪ್ರಾರ್ಥಿಸುತ್ತಾ ದೇವರನ್ನು ಆರಾಧಿಸುತ್ತಿದ್ದಳು.
38 ಅವಳು ಅದೇ ಸಮಯದಲ್ಲಿ ಅಲ್ಲಿಗೆ ಬಂದು, ದೇವರಿಗೆ ಸ್ತೋತ್ರ ಸಲ್ಲಿಸಿ ದೇವರು ಜೆರುಸಲೇಮಿಗೆ ದಯಪಾಲಿಸುವ ಬಿಡುಗಡೆಯನ್ನು ಎದುರು ನೋಡುತ್ತಿದ್ದ ಜನರಿಗೆ ಯೇಸುವಿನ ವಿಷಯವಾಗಿ ತಿಳಿಸಿದಳು.
39 ಪ್ರಭುವಿನ ಧರ್ಮಶಾಸ್ತ್ರದ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಯೋಸೇಫ ಮತ್ತು ಮರಿಯಳು ಗಲಿಲಾಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಂತ ಊರಾದ ನಜರೇತಿಗೆ ಹಿಂತಿರುಗಿದರು.
40 ಬಾಲಕ ಯೇಸು ಬೆಳೆದು ಬಲಗೊಂಡು ಸಂಪೂರ್ಣ ಜ್ಞಾನಿಯಾದನು. ದೇವರ ಆಶೀರ್ವಾದವು ಆತನೊಡನೆ ಇತ್ತು.
41 ಪ್ರತಿವರ್ಷ ಯೇಸುವಿನ ತಂದೆತಾಯಿಗಳು ಪಸ್ಕಹಬ್ಬಕ್ಕಾಗಿ ಜೆರುಸಲೇಮಿಗೆ ಹೋಗುತ್ತಿದ್ದರು.
42 ಯೇಸುವಿಗೆ ಹನ್ನೆರಡು ವರ್ಷವಾಗಿದ್ದಾಗ ಎಂದಿನಂತೆ ಅವರು ಪಸ್ಕ ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದರು.
43 ಹಬ್ಬದ ದಿನಗಳು ಮುಗಿದ ನಂತರ ಅವರು ಮನೆಗೆ ಹೋದರು. ಆದರೆ ಬಾಲಕನಾದ ಯೇಸು ಜೆರುಸಲೇಮಿನಲ್ಲಿ ಉಳಿದುಕೊಂಡನು. ಆತನ ತಂದೆತಾಯಿಗಳಿಗೆ ಇದು ತಿಳಿದಿರಲಿಲ್ಲ. ಯೇಸುವು ಯಾತ್ರಿಕರ ಗುಂಪಿನಲ್ಲಿರಬಹುದೆಂದು ಭಾವಿಸಿಕೊಂಡ
44 ಯೋಸೇಫನು ಮತ್ತು ಮರಿಯಳು ಒಂದು ದಿನವೆಲ್ಲ ಪ್ರಯಾಣ ಮಾಡಿದರು. ನಂತರ ಮಗನನ್ನು ಕಾಣದೆ ತಮ್ಮ ಕುಟುಂಬದವರ ಮತ್ತು ಆಪ್ತಸ್ನೇಹಿತರ ಮಧ್ಯದಲ್ಲಿ ಆತನಿಗಾಗಿ ಹುಡುಕತೊಡಗಿದರು.
45 ಆದರೆ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಲು ಜೆರುಸಲೇಮಿಗೆ ಮರಳಿಹೋದರು.
46 ಮೂರು ದಿನಗಳಾದ ಮೇಲೆ ಆತನನ್ನು ಕಂಡುಕೊಂಡರು. ಯೇಸುವು ದೇವಾಲಯದಲ್ಲಿ ಧಾರ್ಮಿಕ ಉಪದೇಶಕರೊಡನೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಮತ್ತು ಅವರಿಗೆ ಪ್ರಶೆಗಳನ್ನು ಕೇಳುತ್ತಾ ಇದ್ದನು.
47 ಆತನ ಮಾತುಗಳನ್ನು ಕೇಳಿ ಆತನ ತಿಳುವಳಿಕೆಗೂ ಆತನ ಬುದ್ಧಿವಂತಿಕೆಯ ಉತ್ತರಗಳಿಗೂ ಅವರೆಲ್ಲರೂ ಆಶ್ಚರ್ಯಪಟ್ಟರು.
48 ಯೇಸುವಿನ ತಂದೆತಾಯಿಗಳು ಆತನನ್ನು ಅಲ್ಲಿ ಕಂಡು ಆಶ್ಚರ್ಯಪಟ್ಟರು. ಮರಿಯಳು ಆತನಿಗೆ, “ಮಗನೇ, ನೀನು ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆ ಮತ್ತು ನಾನು ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ನಿನಗೋಸ್ಕರ ನಾವು ಹುಡುಕುತ್ತಿದ್ದೆವು” ಎಂದು ಹೇಳಿದಳು.
49 ಯೇಸು ಅವರಿಗೆ, “ನೀವು ನನಗೋಸ್ಕರ ಏಕೆ ಹುಡುಕಬೇಕಿತ್ತು? ನನ್ನ ತಂದೆಯ (ದೇವರ) ಕೆಲಸ ಎಲ್ಲಿರುತ್ತದೋ ಅಲ್ಲಿ ನಾನು ಇರಬೇಕು ಎಂಬುದನ್ನು ನೀವು ತಿಳಿದಿರಬೇಕಾಗಿತ್ತು!” ಎಂದು ಹೇಳಿದನು.
50 ಆದರೆ ಆತನ ಮಾತು ಅವರಿಗೆ ಅರ್ಥವಾಗಲಿಲ್ಲ.
51 ಯೇಸು ಅವರೊಡನೆ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿ ಈ ವಿಷಯಗಳನ್ನೆಲ್ಲಾ ಇನ್ನೂ ಆಲೋಚಿಸುತ್ತಿದ್ದಳು.
52 ಯೇಸುವು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ದೇವರಿಗೂ ಜನರಿಗೂ ಅಚ್ಚುಮೆಚ್ಚಾದನು.

Luke 2:47 Kannada Language Bible Words basic statistical display

COMING SOON ...

×

Alert

×