ಎಫ್ರಾಯೀಮ್ಯರು ಗಿದ್ಯೋನನ ಮೇಲೆ ಕೋಪಗೊಂಡಿದ್ದರು. ಎಫ್ರಾಯೀಮ್ಯರು ಗಿದ್ಯೋನನನ್ನು ಕಂಡಾಗ, “ನೀನು ನಮ್ಮ ಸಂಗಡ ಹೀಗೇಕೆ ವರ್ತಿಸಿದೆ? ನೀನು ಮಿದ್ಯಾನ್ಯರೊಂದಿಗೆ ಯುದ್ಧಮಾಡಲು ಹೋದಾಗ ನಮ್ಮನ್ನು ಏಕೆ ಕರೆಯಲಿಲ್ಲ?” ಎಂದು ಗಿದ್ಯೋನನನ್ನು ಕೇಳಿದರು.
ಗಿದ್ಯೋನನು ಎಫ್ರಾಯೀಮ್ಯರಿಗೆ, “ನೀವು ಮಾಡಿದಷ್ಟು ದೊಡ್ಡ ಕೆಲಸವನ್ನು ನಾನು ಮಾಡಿಲ್ಲ. ನನ್ನ ಅಬೀಯೆಜೆರನ ಕುಟುಂಬದವರಿಗಿಂತ ಎಫ್ರಾಯೀಮ್ಯರಾದ ನಿಮ್ಮ ಸುಗ್ಗಿಯೇ ಬಹಳ ಚೆನ್ನಾಗಿ ಆಗಿದೆಯಲ್ಲವೇ? ಸುಗ್ಗಿಯ ಕಾಲದಲ್ಲಿ ನಮ್ಮ ಕುಟುಂಬದವರು ಕೂಡಿಸುವ ದ್ರಾಕ್ಷಿಗಿಂತ ಹೆಚ್ಚು ದ್ರಾಕ್ಷಿಯನ್ನು ನೀವು ಹೊಲದಲ್ಲಿಯೇ ಬಿಟ್ಟುಬಿಡುತ್ತೀರಿ! ಇದು ನಿಜವಲ್ಲವೇ?
ಅದೇ ರೀತಿ ಈಗಲೂ ಕೂಡ ನಿಮ್ಮದೇ ದೊಡ್ಡ ರಾಶಿ. ಮಿದ್ಯಾನ್ಯರ ನಾಯಕರಾದ ಓರೇಬನನ್ನು ಮತ್ತು ಜೇಬನನ್ನು ಸೆರೆಹಿಡಿಯುವಂತೆ ದೇವರು ನಿಮಗೆ ಸಹಾಯ ಮಾಡಿದನು. ನೀವು ಮಾಡಿದ ಕೆಲಸಕ್ಕೆ ನನ್ನ ಜಯವನ್ನು ಹೋಲಿಸಲು ಹೇಗೆ ಸಾಧ್ಯ?” ಎಂದು ಹೇಳಿದನು. ಗಿದ್ಯೋನನ ಉತ್ತರವನ್ನು ಕೇಳಿದ ಮೇಲೆ ಎಫ್ರಾಯೀಮ್ಯರ ಕೋಪ ಕಡಿಮೆಯಾಯಿತು.
ಗಿದ್ಯೋನ ಮತ್ತು ಅವನ ಮುನ್ನೂರು ಜನರು ಜೋರ್ಡನ್ ನದಿಯನ್ನು ದಾಟಿ ಆಚೆದಡಕ್ಕೆ ಹೋದರು. ಅವರು ಬಹಳ ದಣಿದಿದ್ದರು ಮತ್ತು ಹಸಿದಿದ್ದರು. [*ಹಸಿದಿದ್ದರು ಹೀಬ್ರೂ ಗ್ರಂಥಗಳಲ್ಲಿ “ಬೆನ್ನಚ್ಚುತ್ತಿದ್ದರು” ಎಂದು ಇದೆ.]
ಗಿದ್ಯೋನನು ಸುಖೋತ್ ನಗರದ ಜನರಿಗೆ, “ನನ್ನ ಸೈನಿಕರಿಗೆ ತಿನ್ನಲು ಏನಾದರೂ ಕೊಡಿ; ಅವರು ಬಹಳ ದಣಿದು ಹೋಗಿದ್ದಾರೆ. ನಾವು ಮಿದ್ಯಾನ್ಯರ ಅರಸನಾದ ಜೆಬಹನನ್ನೂ ಚಲ್ಮುನ್ನನನ್ನೂ ಬೆನ್ನಟ್ಟಿಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದನು.
ಅದಕ್ಕೆ ಗಿದ್ಯೋನನು, “ನೀವು ನಮಗೆ ಆಹಾರವನ್ನು ಕೊಡುವುದಿಲ್ಲವಾದರೆ ಜೆಬಹನನ್ನು ಮತ್ತು ಚಲ್ಮುನ್ನನನ್ನು ಬಂಧಿಸಲು ಯೆಹೋವನೇ ನಮಗೆ ಸಹಾಯ ಮಾಡುತ್ತಾನೆ. ಆಮೇಲೆ ನಾನು ಇಲ್ಲಿಗೆ ಬಂದು ನಿಮ್ಮನ್ನು ಮರುಳುಗಾಡಿನ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡಿಸುತ್ತೇನೆ” ಎಂದು ಉತ್ತರಿಸಿದನು.
ಗಿದ್ಯೋನನು ಸುಖೋತ್ ಎಂಬ ನಗರವನ್ನು ಬಿಟ್ಟು ಪೆನೂವೇಲ್ ಎಂಬ ನಗರಕ್ಕೆ ಬಂದನು; ಆಹಾರಕ್ಕಾಗಿ ಸುಖೋತ್ ಜನರನ್ನು ಕೇಳಿದಂತೆ ಪೆನೂವೇಲಿನ ಜನರನ್ನೂ ಕೇಳಿದನು. ಆದರೆ ಪೆನೂವೇಲಿನ ಜನರು ಸಹ ಸುಖೋತಿನ ಜನರಂತೆಯೇ ಉತ್ತರಿಸಿದರು.
ಜೆಬಹ ಮತ್ತು ಚಲ್ಮುನ್ನ ಮತ್ತು ಅವರ ಸೈನಿಕರು ಕರ್ಕೋರ ಎಂಬ ನಗರದಲ್ಲಿದ್ದರು. ಅವರ ಸೈನ್ಯದಲ್ಲಿ ಹದಿನೈದು ಸಾವಿರ ಸೈನಿಕರಿದ್ದರು. ಪೂರ್ವದೇಶದವರ ಸೈನ್ಯದಲ್ಲಿ ಉಳಿದವರು ಇಷ್ಟೇ ಜನ. ಆ ಸೈನ್ಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು ಈಗಾಗಲೇ ಯುದ್ಧದಲ್ಲಿ ಸತ್ತಿದ್ದರು.
ಗಿದ್ಯೋನ ಮತ್ತು ಅವನ ಸೈನಿಕರು ಕಾಡುಗೊಲ್ಲರ ಪ್ರದೇಶದ ಮಾರ್ಗವನ್ನು ಬಳಸಿದರು. ಆ ಮಾರ್ಗವು ನೋಬಹ, ಯೊಗ್ಬೆಹಾ ನಗರಗಳ ಪೂರ್ವಕ್ಕೆ ಇದೆ. ಗಿದ್ಯೋನನು ಕರ್ಕೋರ ನಗರಕ್ಕೆ ಬಂದು ಶತ್ರುಗಳ ಮೇಲೆ ಧಾಳಿ ಮಾಡಿದನು. ಶತ್ರುಸೈನ್ಯವು ಈ ಧಾಳಿಯನ್ನು ನಿರೀಕ್ಷಿಸಿರಲಿಲ್ಲ.
ಗಿದ್ಯೋನನು ಸುಖೋತ್ ನಗರದ ಒಬ್ಬ ತರುಣನನ್ನು ಹಿಡಿದುಕೊಂಡನು. ಗಿದ್ಯೋನನು ಆ ತರುಣನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು. ಆ ತರುಣನು ಗಿದ್ಯೋನನಿಗಾಗಿ ಕೆಲವು ಹೆಸರುಗಳನ್ನು ಬರೆದನು. ಆ ತರುಣನು ಸುಖೋತ್ ನಗರದ ನಾಯಕರ ಮತ್ತು ಹಿರಿಯರ ಹೆಸರುಗಳನ್ನು ಬರೆದನು. ಅವನು ಎಪ್ಪತ್ತೇಳು ಜನರ ಹೆಸರುಗಳನ್ನು ಕೊಟ್ಟನು.
ಗಿದ್ಯೋನನು ಸುಖೋತ್ ನಗರಕ್ಕೆ ಬಂದು ಆ ನಗರದ ಜನರಿಗೆ, “ನೋಡಿರಿ, ಜೆಬಹ ಮತ್ತು ಚಲ್ಮುನ್ನ ಇಲ್ಲಿದ್ದಾರೆ. ‘ಜೆಬಹ ಮತ್ತು ಚಲ್ಮುನ್ನರನ್ನು ನೀವು ಇನ್ನೂ ಸೆರೆಹಿಡಿದಿಲ್ಲ. ನಿಮ್ಮ ದಣಿದ ಸೈನಿಕರಿಗೆ ಆಹಾರವನ್ನು ನಾವೇಕೆ ಕೊಡಬೇಕು?’ ಎಂದು ನನ್ನನ್ನು ತಮಾಷೆ ಮಾಡಿದಿರಿ” ಎಂದನು.
ಆಮೇಲೆ ಗಿದ್ಯೋನನು ಜೆಬಹ ಮತ್ತು ಚಲ್ಮುನ್ನರನ್ನು, “ನೀವು ತಾಬೋರ್ ಪರ್ವತದಲ್ಲಿ ಕೆಲವು ಜನರನ್ನು ಕೊಂದಿರುವಿರಿ. ಅವರು ಹೇಗಿದ್ದರು?” ಎಂದು ಕೇಳಿದನು. ಅವರು “ನಿನ್ನ ಹಾಗೆಯೇ ಇದ್ದರು. ಅವರಲ್ಲಿ ಪ್ರತಿಯೊಬ್ಬನೂ ಒಬ್ಬ ರಾಜಕುಮಾರನಂತೆ ಕಂಡನು” ಎಂದು ಉತ್ತರಕೊಟ್ಟರು.
ಗಿದ್ಯೋನನು, “ಆ ಜನರು ನನ್ನ ಸಹೋದರರಾಗಿದ್ದರು. ಅವರು ನನ್ನ ತಾಯಿಯ ಮಕ್ಕಳು! ಯೆಹೋವನ ಮೇಲೆ ಆಣೆಮಾಡಿ ಹೇಳುತ್ತೇನೆ, ನೀವು ಅವರನ್ನು ಕೊಲ್ಲದಿದ್ದರೆ ನಾನು ಈಗ ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿದನು.
ಗಿದ್ಯೋನನು ಎತೆರನ ಕಡೆಗೆ ತಿರುಗಿದನು. ಎತೆರನು ಗಿದ್ಯೋನನ ಹಿರಿಯ ಮಗ. ಗಿದ್ಯೋನನು ಅವನಿಗೆ, “ಈ ಅರಸರನ್ನು ಕೊಲ್ಲು” ಎಂದು ಹೇಳಿದನು. ಆದರೆ ಎತೆರನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟನು. ಅವನು ತನ್ನ ಕತ್ತಿಯನ್ನು ಹೊರ ತೆಗೆಯಲಿಲ್ಲ.
ಆಗ ಜೆಬಹ ಮತ್ತು ಚಲ್ಮುನ್ನರು ಗಿದ್ಯೋನನಿಗೆ, “ನೀನೇ ನಮ್ಮನ್ನು ಕೊಲ್ಲು. ನೀನು ಈ ಕೆಲಸವನ್ನು ಮಾಡುವುದಕ್ಕೆ ಯೋಗ್ಯವಯಸ್ಸಿನವನೂ ಗಟ್ಟಿಗನೂ ಆಗಿರುವೆ” ಎಂದರು. ಗಿದ್ಯೋನನು ಎದ್ದು ಜೆಬಹ ಮತ್ತು ಚಲ್ಮುನ್ನರನ್ನು ಕೊಂದುಹಾಕಿದನು. ಆಮೇಲೆ ಗಿದ್ಯೋನನು ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
ಇಸ್ರೇಲಿಯರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರಿಂದ ರಕ್ಷಿಸಿರುವೆ. ಅದಕ್ಕಾಗಿ ಈಗ ನಮ್ಮ ಮೇಲೆ ಆಳ್ವಿಕೆ ಮಾಡು. ನೀನೂ ನಿನ್ನ ಮಗನೂ ನಿನ್ನ ಮೊಮ್ಮಗನೂ ನಮ್ಮನ್ನು ಆಳಬೇಕೆಂಬುದು ನಮ್ಮ ಆಶೆ” ಎಂದು ಹೇಳಿದರು.
ಇಸ್ರೇಲರು ಸೋಲಿಸಿದ ಜನರಲ್ಲಿ ಕೆಲವರು ಇಷ್ಮಾಯೇಲ್ಯರಾಗಿದ್ದರು. ಇಷ್ಮಾಯೇಲ್ಯರು ಕಿವಿಗಳಲ್ಲಿ ಚಿನ್ನದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು. ಆದ್ದರಿಂದ ಗಿದ್ಯೋನನು ಇಸ್ರೇಲರಿಗೆ, “ನೀವು ನನಗಾಗಿ ಈ ಒಂದು ಕೆಲಸವನ್ನು ಮಾಡಬೇಕೆಂದು ನನ್ನ ಕೋರಿಕೆ. ನೀವು ಯುದ್ಧದಲ್ಲಿ ಕೊಳ್ಳೆಹೊಡೆದ ವಸ್ತುಗಳಿಂದ ಪ್ರತಿಯೊಬ್ಬನು ಒಂದು ಬಂಗಾರದ ಮುರುವನ್ನು ನನಗೆ ಕೊಡಬೇಕು” ಎಂದು ಕೇಳಿದನು.
ಆ ಮುರುವುಗಳನ್ನು ಒಟ್ಟುಗೂಡಿಸಿ ತೂಕ ಹಾಕಿದಾಗ ಅವುಗಳ ತೂಕ ನಲವತ್ತಮೂರು ಪೌಂಡಿನಷ್ಟಿತ್ತು. ಗಿದ್ಯೋನನಿಗೆ ಇಸ್ರೇಲರು ಕೊಟ್ಟ ಬೇರೆ ಕಾಣಿಕೆಗಳು ಇದರಲ್ಲಿ ಸೇರಿಲ್ಲ. ಅವರು ಅರ್ಧಚಂದ್ರಾಕಾರದ ಮತ್ತು ಕಣ್ಣೀರಿನಾಕಾರದ ಆಭರಣಗಳನ್ನು ಸಹ ಕೊಟ್ಟಿದ್ದರು. ಅವರು ಅವನಿಗೆ ನೇರಳೆ ಬಣ್ಣದ ನಿಲುವಂಗಿಗಳನ್ನು ಕೊಟ್ಟಿದ್ದರು. ಈ ವಸ್ತ್ರಗಳನ್ನು ಮಿದ್ಯಾನ್ಯರ ಅರಸರು ಧರಿಸುತ್ತಿದ್ದರು. ಅವರು ಮಿದ್ಯಾನ್ಯರ ಒಂಟೆಗಳ ಸರಗಳನ್ನು ಸಹ ಕೊಟ್ಟರು.
ಗಿದ್ಯೋನನು ಈ ಚಿನ್ನವನ್ನು ಒಂದು ಏಫೋದ್ ಮಾಡುವುದಕ್ಕೆ ಬಳಸಿದನು. ಆ ಏಫೋದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಇಸ್ರೇಲರು ಈ ಏಫೋದನ್ನು ಆರಾಧಿಸಿದರು. ಹೀಗಾಗಿ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಗಿದ್ಯೋನನನ್ನು ಮತ್ತು ಅವನ ಕುಟುಂಬದವರನ್ನು ಪಾಪ ಮಾರ್ಗಕ್ಕೆ ಎಳೆಯಲು ಏಫೋದ್ ಒಂದು ಉರುಲಾಗಿ ಪರಿಣಮಿಸಿತು.
ಮಿದ್ಯಾನ್ಯರು ಇಸ್ರೇಲರ ಅಧೀನದಲ್ಲಿರಬೇಕಾಯಿತು. ಮಿದ್ಯಾನ್ಯರು ಯಾವ ಹೆಚ್ಚಿನ ತೊಂದರೆಗಳನ್ನು ಕೊಡಲಿಲ್ಲ. ಗಿದ್ಯೋನನು ಬದುಕಿರುವವರೆಗೆ ನಲವತ್ತು ವರ್ಷ ಆ ದೇಶದಲ್ಲಿ ಶಾಂತಿ ನೆಲೆಸಿತ್ತು.
ಯೋವಾಷನ ಮಗನಾದ ಗಿದ್ಯೋನನು ದಿನ ತುಂಬಿದ ಮುದುಕನಾಗಿ ಮರಣಹೊಂದಿದನು. ಗಿದ್ಯೋನನ ಶವವನ್ನು ಅವನ ತಂದೆಯಾದ ಯೋವಾಷನಿಗೆ ಸೇರಿದ್ದ ಒಂದು ಸಮಾಧಿಯಲ್ಲಿ ಹೂಳಿಟ್ಟರು. ಆ ಸಮಾಧಿಯು ಅಬೀಯೆಜೆರ್ ಕುಟುಂಬದವರ ಒಫ್ರದಲ್ಲಿತ್ತು.