English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Judges Chapters

Judges 21 Verses

1 ಮಿಚ್ಛೆಯಲ್ಲಿ ಇಸ್ರೇಲಿನ ಜನರು ಒಂದು ಪ್ರತಿಜ್ಞೆಯನ್ನು ಮಾಡಿದ್ದರು. “ನಮ್ಮಲ್ಲಿ ಯಾರೂ ನಮ್ಮ ಹೆಣ್ಣುಮಕ್ಕಳನ್ನು ಬೆನ್ಯಾಮೀನ್ಯರಿಗೆ ಮದುವೆ ಮಾಡಿಕೊಡುವುದಿಲ್ಲ” ಎಂಬುದೇ ಆ ಪ್ರತಿಜ್ಞೆ.
2 ಇಸ್ರೇಲರು ಬೇತೇಲ್ ನಗರಕ್ಕೆ ಹೋದರು. ಅಲ್ಲಿ ಅವರು ಸಾಯಂಕಾಲದವರೆಗೆ ದೇವರ ಮುಂದೆ ಕುಳಿತುಕೊಂಡರು. ಅಲ್ಲಿ ಕುಳಿತುಕೊಂಡು ಅವರು ಗಟ್ಟಿಯಾಗಿ ಅತ್ತರು.
3 ಅವರು ದೇವರಿಗೆ, “ಯೆಹೋವನೇ, ನೀನು ಇಸ್ರೇಲರ ದೇವರು. ನಮಗೆ ಇಂಥ ಭಯಾನಕ ಪರಿಸ್ಥಿತಿ ಏಕೆ ಉಂಟಾಯಿತು? ಇಸ್ರೇಲಿನ ಒಂದು ಕುಲವು ನಾಶವಾಯಿತಲ್ಲಾ?” ಎಂದು ಮೊರೆಯಿಟ್ಟರು.
4 ಮರುದಿನ ಬೆಳಿಗ್ಗೆ ಅವರು ಒಂದು ಯಜ್ಞವೇದಿಕೆಯನ್ನು ಕಟ್ಟಿದರು. ಅವರು ಆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.
5 ಆಮೇಲೆ ಇಸ್ರೇಲರು, “ಯೆಹೋವನ ಮುಂದೆ ಸಭೆ ಸೇರಿದಾಗ ಅದಕ್ಕೆ ಬಾರದೆ ಇದ್ದಂಥ ಇಸ್ರೇಲರು ಯಾರಾದರೂ ಇದ್ದಾರೆಯೇ” ಎಂದು ವಿಚಾರಮಾಡಿದರು. ಮಿಚ್ಛೆ ನಗರದಲ್ಲಿ ಬೇರೆ ಕುಲಗಳ ಜೊತೆಗೆ ಯಾರು ಸೇರುವುದಿಲ್ಲವೋ ಅವರನ್ನು ಕೊಲೆ ಮಾಡುವುದಾಗಿ ಅವರು ಪ್ರತಿಜ್ಞೆ ಮಾಡಿದ್ದರು. ಅದಕ್ಕಾಗಿ ಅವರು ಅದರ ಬಗ್ಗೆ ವಿಚಾರಮಾಡಿದರು.
6 ಆಗ ಇಸ್ರೇಲರು ತಮ್ಮ ಬಂಧುಗಳಾದ ಬೆನ್ಯಾಮೀನ್ಯರ ಬಗ್ಗೆ ವ್ಯಥೆಪಟ್ಟರು. ಅವರು, “ಇಂದು ಇಸ್ರೇಲರಿಂದ ಒಂದು ಕುಲವು ಇಲ್ಲವಾಯಿತು.
7 ನಮ್ಮ ಹೆಣ್ಣುಮಕ್ಕಳು ಬೆನ್ಯಾಮೀನ್ಯರನ್ನು ಮದುವೆಯಾಗಲು ಬಿಡುವುದಿಲ್ಲವೆಂದು ನಾವು ಯೆಹೋವನ ಎದುರಿಗೆ ಪ್ರತಿಜ್ಞೆ ಮಾಡಿದ್ದೇವೆ. ಇನ್ನು ಮುಂದೆ ಬೆನ್ಯಾಮೀನ್ಯರಿಗೆ ಹೆಂಡಂದಿರನ್ನು ದೊರಕಿಸುವುದು ಹೇಗೆ?” ಎಂದು ಅವರು ಯೋಚಿಸಿದರು.
8 ಆಗ ಇಸ್ರೇಲರು, “ಇಲ್ಲಿ ಮಿಚ್ಛೆಗೆ ಇಸ್ರೇಲರಲ್ಲಿ ಬರದಿರುವವರು ಯಾರಾದರೂ ಇರುವರೇ?” ಎಂದು ವಿಚಾರ ಮಾಡಿದರು. ಆಗ ಯಾಬೇಷ್ ಗಿಲ್ಯಾದ್ ನಗರದವರಲ್ಲಿ ಯಾರೂ ಬಂದಿಲ್ಲವೆಂದು ಗೊತ್ತಾಯಿತು.
9 ಇಸ್ರೇಲರಲ್ಲಿ ಯಾರು ಅಲ್ಲಿದ್ದಾರೆ, ಯಾರು ಅಲ್ಲಿಲ್ಲ ಎಂಬುದನ್ನು ಲೆಕ್ಕಹಾಕಿ ನೋಡಿದರು. ಯಾಬೇಷ್ ಗಿಲ್ಯಾದಿನವರಲ್ಲಿ ಯಾರೂ ಬಂದಿಲ್ಲ ಎಂಬುದು ಖಚಿತವಾಯಿತು.
10 ಇಸ್ರೇಲರು ಯಾಬೇಷ್ ಗಿಲ್ಯಾದಿಗೆ ಹನ್ನೆರಡು ಸಾವಿರ ಸೈನಿಕರನ್ನು ಕಳುಹಿಸಿದರು. ಅವರು ಆ ಸೈನಿಕರಿಗೆ, “ಯಾಬೇಷ್ ಗಿಲ್ಯಾದಿಗೆ ಹೋಗಿರಿ; ಹೆಂಗಸರು ಮತ್ತು ಮಕ್ಕಳ ಸಮೇತ ಪ್ರತಿಯೊಬ್ಬರನ್ನೂ ನಿಮ್ಮ ಕತ್ತಿಯಿಂದ ಕೊಂದುಹಾಕಿರಿ.
11 ನೀವು ಇದನ್ನು ಮಾಡಲೇಬೇಕು. ನೀವು ಯಾಬೇಷ್ ಗಿಲ್ಯಾದಿನಲ್ಲಿರುವ ಪ್ರತಿಯೊಬ್ಬ ಮನುಷ್ಯನನ್ನು ಕೊಲ್ಲಬೇಕು. ಗಂಡಸಿನೊಂದಿಗೆ ಲೈಂಗಿಕಸಂಪರ್ಕ ಹೊಂದಿದ ಪ್ರತಿಯೊಬ್ಬ ಹೆಂಗಸನ್ನೂ ನೀವು ಕೊಂದುಹಾಕಬೇಕು. ಆದರೆ ಕನ್ಯೆಯರನ್ನು ನೀವು ಕೊಲ್ಲಬಾರದು” ಎಂದು ಹೇಳಿದರು. ಆ ಸೈನಿಕರು ಹಾಗೆಯೇ ಮಾಡಿದರು.
12 ಆ ಹನ್ನೆರಡು ಸಾವಿರ ಸೈನಿಕರು ಯಾಬೇಷ್ ಗಿಲ್ಯಾದಿನಲ್ಲಿ ಗಂಡಸಿನೊಂದಿಗೆ ಎಂದೂ ಲೈಂಗಿಕ ಸಂಪರ್ಕ ಹೊಂದದ ನಾನೂರು ಜನ ಯುವತಿಯರನ್ನು ಗುರುತಿಸಿದರು. ಆ ಯುವತಿಯರನ್ನು ಸೈನಿಕರು ಶೀಲೋವಿನಲ್ಲಿದ್ದ ಪಾಳೆಯಕ್ಕೆ ಕರೆತಂದರು. ಶೀಲೋವ್ ಕಾನಾನ್ ಪ್ರದೇಶದಲ್ಲಿದೆ.
13 ಇಸ್ರೇಲರು ಬೆನ್ಯಾಮೀನ್ಯರಿಗೆ ಒಂದು ಸಂದೇಶವನ್ನು ಕಳುಹಿಸಿದರು. ಅವರು ಬೆನ್ಯಾಮೀನ್ಯರೊಂದಿಗೆ ಶಾಂತಿಯ ಪ್ರಸ್ತಾಪವನ್ನು ಮಾಡಿದರು. ಬೆನ್ಯಾಮೀನ್ಯರು ರಿಮ್ಮೋನ್‌ಗಿರಿ ಎಂಬ ಸ್ಥಳದಲ್ಲಿದ್ದರು.
14 ಬೆನ್ಯಾಮೀನ್ಯರು ಇಸ್ರೇಲಿಗೆ ಹಿಂತಿರುಗಿ ಬಂದರು. ಇಸ್ರೇಲರು ಯಾಬೇಷ್ ಗಿಲ್ಯಾದಿನಿಂದ ಕೊಲ್ಲದೆ ತಂದಿದ್ದ ಸ್ತ್ರೀಯರನ್ನು ಅವರಿಗೆ ಕೊಟ್ಟರು. ಆದರೂ ಬೆನ್ಯಾಮೀನ್ಯರ ಎಲ್ಲಾ ಗಂಡಸರಿಗೆ ಸಾಕಾಗುವಷ್ಟು ಸ್ತ್ರೀಯರು ಇರಲಿಲ್ಲ.
15 ಇಸ್ರೇಲರು ಬೆನ್ಯಾಮೀನ್ಯರಿಗಾಗಿ ವ್ಯಥೆಪಟ್ಟರು. ಏಕೆಂದರೆ ಯೆಹೋವನು ಅವರನ್ನು ಇಸ್ರೇಲಿನ ಉಳಿದ ಕುಲದವರಿಂದ ಪ್ರತ್ಯೇಕಗೊಳಿಸಿದ್ದನು.
16 ಇಸ್ರೇಲರ ಹಿರಿಯರು, “ಬೆನ್ಯಾಮೀನ್ಯರ ಹೆಂಗಸರು ಕೊಲೆಗೀಡಾಗಿದ್ದಾರೆ. ಈಗ ಜೀವಂತವಿದ್ದ ಬೆನ್ಯಾಮೀನ್ ಗಂಡಸರಿಗೆ ಹೆಂಡಂದಿರನ್ನು ಎಲ್ಲಿಂದ ತರುವುದು?
17 ಜೀವಂತವಿರುವ ಬೆನ್ಯಾಮೀನ್ಯರು ತಮ್ಮ ವಂಶವನ್ನು ಮುಂದುವರಿಸುವುದಕ್ಕೆ ಮಕ್ಕಳನ್ನು ಪಡೆಯಬೇಕು. ಆಗ ಇಸ್ರೇಲರ ಒಂದು ಕುಲವು ಅಳಿಯದೆ ಉಳಿಯುವುದು.
18 ಆದರೆ ನಾವೂ ನಮ್ಮ ಹೆಣ್ಣುಮಕ್ಕಳೂ ಬೆನ್ಯಾಮೀನ್ಯರೊಂದಿಗೆ ಮದುವೆಯಾಗಲು ಒಪ್ಪುವಂತಿಲ್ಲ. ಏಕೆಂದರೆ ‘ಬೆನ್ಯಾಮೀನ್ಯರಿಗೆ ಯಾರಾದರೂ ಹೆಣ್ಣನ್ನು ಕೊಟ್ಟರೆ ಅವರು ಶಾಪಗ್ರಸ್ತರಾಗುತ್ತಾರೆ’ ಎಂದು ನಾವೇ ಆಣೆ ಇಟ್ಟಿದ್ದೇವೆ.
19 ನಮಗೊಂದು ವಿಚಾರಹೊಳೆದಿದೆ. ಇದು ಶೀಲೋವಿನಲ್ಲಿ ಯೆಹೋವನ ಉತ್ಸವ ನಡೆಯುವ ಕಾಲ. ಈ ಉತ್ಸವವನ್ನು ಅಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ.” (ಶೀಲೋವ್ ನಗರವು ಬೇತೇಲ್ ನಗರದ ಉತ್ತರಕ್ಕೂ ಬೇತೇಲಿನಿಂದ ಶೆಕೆಮಿಗೆ ಹೋಗುವ ದಾರಿಯ ಪೂರ್ವಕ್ಕೂ ಲೆಬೋನಿನ ದಕ್ಷಿಣಕ್ಕೂ ಇದೆ.)
20 ಹಿರಿಯರು ಬೆನ್ಯಾಮೀನ್ಯರಿಗೆ ತಮ್ಮ ವಿಚಾರದ ಬಗ್ಗೆ ಹೇಳಿದರು. ಅವರು, “ನೀವು ಹೋಗಿ ದ್ರಾಕ್ಷೆಯ ತೋಟಗಳಲ್ಲಿ ಅಡಗಿಕೊಳ್ಳಿರಿ.
21 ಉತ್ಸವಕಾಲದಲ್ಲಿ ಶೀಲೋವಿನ ಯುವತಿಯರು ನಾಟ್ಯಕ್ಕೆ ಬರುವ ಸಮಯವನ್ನು ನಿರೀಕ್ಷಿಸುತ್ತಿರಿ. ಅವರು ಬಂದ ತಕ್ಷಣ ನೀವು ಅಡಗಿಕೊಂಡಿದ್ದ ಸ್ಥಳದಿಂದ ಹೊರಗೆ ಬನ್ನಿ; ನಿಮ್ಮಲ್ಲಿ ಪ್ರತಿಯೊಬ್ಬನು ಒಬ್ಬೊಬ್ಬ ಶೀಲೋವಿನ ಯುವತಿಯನ್ನು ತೆಗೆದುಕೊಳ್ಳಿರಿ. ಆ ಯುವತಿಯರನ್ನು ಬೆನ್ಯಾಮೀನ್ಯರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿರಿ.
22 ಆ ಯುವತಿಯರ ತಂದೆಗಳಾಗಲಿ ಸಹೋದರರಾಗಲಿ ನಮ್ಮಲ್ಲಿಗೆ ಬಂದು ದೂರು ಹೇಳುತ್ತಾರೆ. ಆಗ ನಾವು ಅವರಿಗೆ, ‘ಬೆನ್ಯಾಮೀನ್ಯರ ಗಂಡಸರಿಗೆ ದಯೆತೋರಿಸಿರಿ; ಅವರು ಆ ಸ್ತ್ರೀಯರನ್ನು ಮದುವೆಯಾಗಲಿ. ಅವರು ನಿಮ್ಮಿಂದ ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ಹೋಗಿರುವರೇ ಹೊರತು ಯುದ್ಧವೇನೂ ಮಾಡಿಲ್ಲ. ಅವರು ಕನ್ಯೆಯರನ್ನು ತೆಗೆದುಕೊಂಡು ಹೋದದ್ದರಿಂದ ನೀವು ದೇವರೆದುರಿಗೆ ಮಾಡಿದ ಪ್ರತಿಜ್ಞೆಯನ್ನು ಮುರಿದಂತಾಗುವುದಿಲ್ಲ. ನಿಮ್ಮ ಕನ್ಯೆಯರನ್ನು ಅವರಿಗೆ ಕೊಡುವುದಿಲ್ಲವೆಂದು ನೀವು ಪ್ರತಿಜ್ಞೆ ಮಾಡಿದ್ದೀರಿ. ನೀವು ಬೆನ್ಯಾಮೀನ್ಯರಿಗೆ ನಿಮ್ಮ ಕನ್ಯೆಯರನ್ನು ಕೊಟ್ಟಿಲ್ಲ. ಆದರೆ ಅವರು ನಿಮ್ಮ ಕನ್ಯೆಯರನ್ನು ತೆಗೆದುಕೊಂಡು ಹೋದರು. ಆದ್ದರಿಂದ ನೀವು ನಿಮ್ಮ ಪ್ರತಿಜ್ಞೆಯನ್ನು ಮುರಿಯಲಿಲ್ಲ’ ಎಂದು ಹೇಳುತ್ತೇವೆ” ಎಂದರು.
23 ಅದರಂತೆಯೇ ಬೆನ್ಯಾಮೀನ್ ಕುಲದ ಗಂಡಸರು, ನಾಟ್ಯವಾಡಲು ಬಂದಿದ್ದ ಯುವತಿಯರಲ್ಲಿ, ತಮ್ಮ ಸಂಖ್ಯೆಗೆ ಸರಿಯಾಗುವಷ್ಟು ಮಂದಿಯನ್ನು ತಮ್ಮ ಹೆಂಡತಿಯರನ್ನಾಗಿ ತೆಗೆದುಕೊಂಡು ತಮ್ಮ ಪ್ರದೇಶಕ್ಕೆ ಹಿಂತಿರುಗಿ ಹೋದರು. ಆ ಪ್ರದೇಶದಲ್ಲಿ ಬೆನ್ಯಾಮೀನ್ಯರು ಪುನಃ ನಗರಗಳನ್ನು ಕಟ್ಟಿ ವಾಸಮಾಡಿದರು.
24 ಅನಂತರ ಇಸ್ರೇಲರು ತಮ್ಮತಮ್ಮ ಕುಲಗೋತ್ರಗಳವರಿಗೆ ಸ್ವಾಸ್ತ್ಯವಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂತಿರುಗಿಹೋದರು.
25 ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಪ್ರತಿಯೊಬ್ಬನು ತನಗೆ ಸರಿತೋರಿದಂತೆ ಮಾಡುತ್ತಿದ್ದನು.
×

Alert

×