English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Judges Chapters

Judges 2 Verses

1 ಯೆಹೋವನ ದೂತನು ಗಿಲ್ಗಾಲ್ ನಗರದಿಂದ ಬೋಕೀಮ್ ನಗರದವರೆಗೆ ಹೋದನು. ಆ ದೂತನು ಇಸ್ರೇಲರಿಗೆ ಯೆಹೋವನ ಒಂದು ಸಂದೇಶವನ್ನು ತಿಳಿಸಿದನು. ಆ ಸಂದೇಶವು ಹೀಗೆದೆ: “ನಾನು ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ಹೊರಗೆತಂದೆ. ನಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರದೇಶಕ್ಕೆ ನಿಮ್ಮನ್ನು ಕರೆದುಕೊಂಡು ಬಂದೆನು. ‘ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದಿಗೂ ಮುರಿಯುವುದಿಲ್ಲ.
2 ಆದರೆ ಅದಕ್ಕೆ ಪ್ರತಿಯಾಗಿ ನೀವು ಈ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನಗಳೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬಾರದು. ಅವರ ಯಜ್ಞವೇದಿಕೆಗಳನ್ನು ನಾಶಮಾಡಬೇಕು’ ಎಂದು ನಾನು ನಿಮಗೆ ಹೇಳಿದ್ದೆ. ಆದರೆ ನೀವು ನನಗೆ ವಿಧೇಯರಾಗಲಿಲ್ಲ.
3 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ‘ಈ ಪ್ರದೇಶವನ್ನು ಬಿಟ್ಟುಹೋಗುವಂತೆ ನಾನು ಈ ಜನರನ್ನು ಬಲವಂತ ಮಾಡುವುದಿಲ್ಲ. ಈ ಜನರು ನಿಮಗೊಂದು ಸಮಸ್ಯೆಯಾಗುತ್ತಾರೆ. ಅವರು ನಿಮಗೊಂದು ಉರುಲಾಗುತ್ತಾರೆ. ಅವರ ಸುಳ್ಳುದೇವರುಗಳು ನಿಮಗೆ ಬಲೆಯಂತೆ ಉರುಲಾಗುತ್ತವೆ.’ ”
4 ದೂತನು ಜನರಿಗೆ ಯೆಹೋವನ ಈ ಸಂದೇಶವನ್ನು ಕೊಟ್ಟ ಮೇಲೆ ಜನರು ಗಟ್ಟಿಯಾಗಿ ಅತ್ತರು.
5 ಆದ್ದರಿಂದ ಇಸ್ರೇಲರು ತಾವು ಗೋಳಾಡಿದ ಸ್ಥಳಕ್ಕೆ ಬೋಕೀಮ್ ಎಂದು ಕರೆದರು. ಬೋಕೀಮಿನಲ್ಲಿ ಇಸ್ರೇಲರು ಯೆಹೋವನಿಗೋಸ್ಕರ ಯಜ್ಞ ಮಾಡಿದರು.
6 ಯೆಹೋಶುವನು ಜನರನ್ನು ತಮ್ಮ ಮನೆಗಳಿಗೆ ಹೋಗಲು ಹೇಳಿದನು. ಪ್ರತಿಯೊಂದು ಕುಲದವರು ವಾಸಮಾಡಲು ತಮ್ಮತಮ್ಮ ಪ್ರದೇಶಕ್ಕೆ ಹೋದರು.
7 ಯೆಹೋಶುವನು ಜೀವಂತವಿರುವವರೆಗೆ ಇಸ್ರೇಲರು ಯೆಹೋವನನ್ನು ಸೇವಿಸಿದರು. ಯೆಹೋಶುವನ ಮರಣಾನಂತರ ಬದುಕಿದ್ದ ಹಿರಿಯರ ಜೀವಮಾನದಲ್ಲಿಯೂ ಇಸ್ರೇಲರು ಯೆಹೋವನ ಸೇವೆಯನ್ನು ಮುಂದುವರಿಸಿಕೊಂಡು ಬಂದರು. ಈ ಹಿರಿಯರು ಇಸ್ರೇಲರಿಗಾಗಿ ಯೆಹೋವನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ನೋಡಿದ್ದರು.
8 ನೂನನ ಮಗನಾದ ಮತ್ತು ಯೆಹೋವನ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಬದುಕಿ ಮರಣ ಹೊಂದಿದನು.
9 ಇಸ್ರೇಲರು ಯೆಹೋಶುವನನ್ನು ಅವನ ಸ್ವಾಸ್ತ್ಯ ಭೂಮಿಯಲ್ಲಿ ಸಮಾಧಿ ಮಾಡಿದರು. ಅದು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿ ತಿಮ್ನತ್ ಹೆರೆಸಿನಲ್ಲಿತ್ತು.
10 ಈ ಪೀಳಿಗೆಯವರೆಲ್ಲರು ಸತ್ತುಹೋದ ಮೇಲೆ ಮುಂದಿನ ಪೀಳಿಗೆಯು ಬೆಳೆಯಿತು. ಈ ಹೊಸ ಪೀಳಿಗೆಗೆ ಯೆಹೋವನ ಬಗ್ಗೆ ಮತ್ತು ಯೆಹೋವನು ಇಸ್ರೇಲಿನ ಜನರಿಗಾಗಿ ಮಾಡಿದ ಮಹತ್ಕಾರ್ಯಗಳ ಬಗ್ಗೆ ಏನೂ ಗೊತ್ತಿರಲಿಲ್ಲ.
11 ಇಸ್ರೇಲಿನ ಜನರು ದುಷ್ಕೃತ್ಯಗಳನ್ನು ಮಾಡಿದರು ಮತ್ತು ಸುಳ್ಳುದೇವರಾದ ಬಾಳನ ಸೇವೆ ಮಾಡಿದರು. ಯೆಹೋವನು ಇಸ್ರೇಲರ ಈ ದುಷ್ಕೃತ್ಯಗಳನ್ನು ನೋಡಿದನು.
12 ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಿದ್ದನು. ಅವರ ಪೂರ್ವಿಕರು ಯೆಹೋವನನ್ನು ಆರಾಧಿಸುತ್ತಿದ್ದರು. ಆದರೆ ಇಸ್ರೇಲರು ಯೆಹೋವನನ್ನು ಅನುಸರಿಸದೆ ತಮ್ಮ ಸುತ್ತಮುತ್ತಲಿನ ಜನರ ಸುಳ್ಳುದೇವರುಗಳನ್ನು ಪೂಜಿಸಲು ಆರಂಭಿಸಿದರು. ಆದ್ದರಿಂದ ಯೆಹೋವನಿಗೆ ಕೋಪ ಬಂತು.
13 ಇಸ್ರೇಲರು ಯೆಹೋವನನ್ನು ಅನುಸರಿಸದೆ ಬಾಳ್ ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ಪೂಜಿಸತೊಡಗಿದರು.
14 ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡನು. ಶತ್ರುಗಳು ಇಸ್ರೇಲರ ಮೇಲೆ ಧಾಳಿಮಾಡಿ ಅವರ ಸ್ವತ್ತನ್ನು ತೆಗೆದುಕೊಳ್ಳುವಂತೆ ಯೆಹೋವನು ಮಾಡಿದನು. ಸುತ್ತಮುತ್ತಲಿದ್ದ ಅವರ ಶತ್ರುಗಳು ಅವರನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರು ಶತ್ರುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಗಲಿಲ್ಲ.
15 ಇಸ್ರೇಲರು ಯುದ್ಧಕ್ಕೆ ಹೋದಾಗಲೆಲ್ಲಾ ಸೋಲನ್ನನುಭವಿಸಿದರು; ಏಕೆಂದರೆ ಯೆಹೋವನು ಅವರ ಸಂಗಡವಿರಲಿಲ್ಲ. ಸುತ್ತಮುತ್ತಲಿನ ಜನರ ದೇವತೆಗಳನ್ನು ಪೂಜಿಸಿದರೆ ಸೋಲಾಗುವುದೆಂದು ಈಗಾಗಲೇ ಯೆಹೋವನು ಇಸ್ರೇಲರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದನು. ಇಸ್ರೇಲರು ಹೆಚ್ಚಿನ ಕಷ್ಟನಷ್ಟಗಳನ್ನು ಅನುಭವಿಸಿದರು.
16 ಆಗ ಯೆಹೋವನು ನ್ಯಾಯಾಧೀಶರೆಂಬ ಕೆಲವು ನಾಯಕರನ್ನು ಆರಿಸಿದನು. ಈ ನಾಯಕರು ಇಸ್ರೇಲರನ್ನು ಅವರ ವೈರಿಗಳಿಂದ ಕಾಪಾಡಿದರು.
17 ಆದರೆ ಇಸ್ರೇಲರು ನ್ಯಾಯಾಧೀಶರ ಮಾತನ್ನು ಕೇಳಲಿಲ್ಲ. ಅವರು ಯೆಹೋವನಿಗೆ ನಂಬಿಗಸ್ತರಾಗಿರದೆ ಬೇರೆಬೇರೆ ದೇವರುಗಳನ್ನು ಅನುಸರಿಸಿದರು. ಹಿಂದೆ ಇಸ್ರೇಲರ ಪೂರ್ವಿಕರು ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಆದರೆ ಈಗ ಇಸ್ರೇಲರು ಬದಲಾಗಿ ಯೆಹೋವನ ಆಜ್ಞಾಪಾಲನೆಯನ್ನು ನಿಲ್ಲಿಸಿಬಿಟ್ಟರು.
18 ಅನೇಕ ಸಲ ಶತ್ರುಗಳು ಇಸ್ರೇಲರಿಗೆ ತುಂಬ ಕಷ್ಟಗಳನ್ನು ಉಂಟು ಮಾಡುತ್ತಿದ್ದರು. ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಿದ್ದರು; ಪ್ರತಿಸಲವೂ ಯೆಹೋವನು ಅವರ ಗೋಳಾಟವನ್ನು ಕೇಳಿ ಮರುಕಪಡುತ್ತಿದ್ದನು. ಪ್ರತಿಸಲವೂ ಅವರನ್ನು ಶತ್ರುಗಳಿಂದ ರಕ್ಷಿಸಲು ಒಬ್ಬ ನ್ಯಾಯಾಧೀಶನನ್ನು ಕಳುಹಿಸಿ ಕೊಡುತ್ತಿದ್ದನು. ಯೆಹೋವನು ಆ ನ್ಯಾಯಾಧೀಶರ ಜೊತೆಯಲ್ಲಿಯೇ ಇರುತ್ತಿದ್ದನು. ಹೀಗಾಗಿ ಪ್ರತಿಸಲವೂ ಇಸ್ರೇಲರನ್ನು ಅವರ ಶತ್ರುಗಳಿಂದ ರಕ್ಷಿಸಲಾಯಿತು.
19 ಆದರೆ ಪ್ರತಿಯೊಬ್ಬ ನ್ಯಾಯಾಧೀಶನು ಮರಣಹೊಂದಿದಾಗ ಇಸ್ರೇಲರು ಪುನಃ ಪಾಪ ಮಾಡುತ್ತಿದ್ದರು ಮತ್ತು ತಮ್ಮ ಪೂರ್ವಿಕರಿಗಿಂತಲೂ ಭ್ರಷ್ಠರಾಗಿ ಸುಳ್ಳುದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬೀಳಲಾರಂಭಿಸುತ್ತಿದ್ದರು. ಇಸ್ರೇಲರು ತುಂಬ ಮೊಂಡರಾಗಿದ್ದು ತಮ್ಮ ದುರ್ನಡತೆಗಳನ್ನು ಬಿಡಲು ಸಿದ್ಧರಾಗಿರಲಿಲ್ಲ.
20 ಹೀಗಾಗಿ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, “ಈ ಜನಾಂಗದವರು ಅವರ ಪೂರ್ವಿಕರ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದಿದ್ದಾರೆ. ಇವರು ನನ್ನ ಮಾತನ್ನು ಕೇಳಲಿಲ್ಲ.
21 ಆದ್ದರಿಂದ ಇನ್ನುಮುಂದೆ ನಾನು ಬೇರೆ ಜನಾಂಗಗಳನ್ನು ಸೋಲಿಸಿ ಇಸ್ರೇಲರ ಮಾರ್ಗವನ್ನು ಸರಾಗಮಾಡುವುದಿಲ್ಲ. ಯೆಹೋಶುವನು ಮರಣ ಹೊಂದಿದಾಗ ಆ ಜನಾಂಗದವರು ಇನ್ನೂ ಈ ಪ್ರದೇಶದಲ್ಲಿದ್ದರು. ಈ ಪ್ರದೇಶದಲ್ಲಿ ವಾಸಿಸಲು ಆ ಜನಾಂಗಗಳಿಗೆ ಇನ್ನು ಮೇಲೆಯೂ ಆಸ್ಪದಕೊಡುತ್ತೇನೆ.
22 ಇಸ್ರೇಲರು ತಮ್ಮ ಪೂರ್ವಿಕರಂತೆ ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಾರೆಯೇ ಎಂಬುದನ್ನು ನಾನು ಆ ಜನಾಂಗಗಳ ಮೂಲಕ ಪರೀಕ್ಷಿಸಿ ನೋಡುತ್ತೇನೆ” ಎಂದನು.
23 ಯೆಹೋವನು ಆ ಜನಾಂಗಗಳನ್ನು ಆ ಪ್ರದೇಶದಲ್ಲಿ ಇರುವುದಕ್ಕೆ ಬಿಟ್ಟನು. ಆ ಜನಾಂಗಗಳು ಈ ದೇಶವನ್ನು ಬಿಟ್ಟು ಹೋಗುವಂತೆ ಯೆಹೋವನು ಒತ್ತಾಯ ಪಡಿಸಲಿಲ್ಲ. ಅವರನ್ನು ಸೋಲಿಸಲು ಯೆಹೋಶುವನ ಸೈನ್ಯಕ್ಕೆ ಸಹಾಯ ಮಾಡಲಿಲ್ಲ.
×

Alert

×