1
|
ಜೋರ್ಡನ್ ನದಿಯ ಪಶ್ಚಿಮದ ಎಲ್ಲ ಅರಸರು ಈ ವಿಷಯಗಳ ಬಗ್ಗೆ ಕೇಳಿದರು. ಇವರು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ರಾಜರಾಗಿದ್ದರು. ಅವರು ಬೆಟ್ಟಪ್ರದೇಶಗಳಲ್ಲಿ ಮತ್ತು ಸಮತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಅವರು ಭೂಮಧ್ಯಸಾಗರದ ತೀರ ಪ್ರದೇಶದಲ್ಲಿ, ಲೆಬನೋನಿನವರೆಗೆ ಸಹ ವಾಸವಾಗಿದ್ದರು. |
2
|
ಈ ಎಲ್ಲ ಅರಸರು ಒಂದು ಕಡೆ ಸೇರಿದರು. ಅವರು ಯೆಹೋಶುವನ ಮತ್ತು ಇಸ್ರೇಲರ ವಿರುದ್ಧ ಯುದ್ಧ ಮಾಡುವ ಯೋಜನೆಗಳನ್ನು ಹಾಕಿಕೊಂಡರು. |
3
|
ಯೆಹೋಶುವನು “ಜೆರಿಕೊ” ಮತ್ತು “ಆಯಿ” ನಗರಗಳನ್ನು ಸ್ವಾಧೀನಪಡಿಸಿಕೊಂಡ ಬಗೆಯನ್ನು ಗಿಬ್ಯೋನ್ ನಗರದ ಜನರು ಕೇಳಿದ್ದರು. |
4
|
ಇಸ್ರೇಲರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಉಪಾಯಮಾಡಿದರು. ಅವರು ಹರುಕು-ಮುರುಕಾದ ಹಳೆಯ ದ್ರಾಕ್ಷಾರಸದ ಬುದ್ದಲಿಗಳನ್ನು ತಮ್ಮ ಕತ್ತೆಗಳ ಬೆನ್ನ ಮೇಲೆ ಹೇರಿಸಿದರು; ತಾವು ಬಹುದೂರ ಪ್ರಯಾಣ ಮಾಡಿ ಬಂದಿರುವುದಾಗಿ ತೋರಿಸಲು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿಚೀಲಗಳನ್ನು ಹಾಕಿದರು. |
5
|
ಅವರು ಹಳೆಯ ಪಾದರಕ್ಷೆಗಳನ್ನು ಮೆಟ್ಟಿಕೊಂಡರು; ಹಳೆಯ ಬಟ್ಟೆಗಳನ್ನು ಧರಿಸಿಕೊಂಡರು; ಒಣಗಿದ ಮತ್ತು ಕೆಟ್ಟುಹೋದ ರೊಟ್ಟಿಗಳನ್ನು ಕಟ್ಟಿಕೊಂಡರು. ಹೀಗೆ ಅವರು ಬಹುದೂರ ಪ್ರಯಾಣಮಾಡಿ ಬಂದವರಂತೆ ತೋರಿಸಿಕೊಂಡರು. |
6
|
ಅವರು ಇಸ್ರೇಲರ ಪಾಳೆಯಕ್ಕೆ ಹೋದರು. ಈ ಪಾಳೆಯವು ಗಿಲ್ಗಾಲಿನ ಹತ್ತಿರ ಇತ್ತು. ಅವರು ಯೆಹೋಶುವನ ಬಳಿಗೆ ಹೋಗಿ ಅವನಿಗೆ, “ನಾವು ಬಹುದೂರ ದೇಶದಿಂದ ಪ್ರಯಾಣ ಮಾಡಿ ಬಂದಿದ್ದೇವೆ. ನಾವು ನಿಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಇಚ್ಛಿಸುತ್ತೇವೆ” ಎಂದು ಹೇಳಿದರು. |
7
|
ಹಿವ್ವಿಯರಾದ ಅವರಿಗೆ ಇಸ್ರೇಲಿನ ಜನರು, “ಒಂದುವೇಳೆ ನೀವು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರಬಹುದು. ಒಂದುವೇಳೆ ನೀವು ನಮ್ಮ ಹತ್ತಿರದಲ್ಲಿಯೇ ವಾಸಮಾಡುತ್ತಿರಬಹುದು; ನೀವು ಎಲ್ಲಿಯವರು ಎಂಬುದು ನಮಗೆ ಗೊತ್ತಾಗುವವರೆಗೆ ನಾವು ನಿಮ್ಮ ಸಂಗಡ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಉತ್ತರಕೊಟ್ಟರು. |
8
|
ಹಿವ್ವಿಯರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದು ಹೇಳಿದರು. ಆದರೆ ಯೆಹೋಶುವನು, “ನೀವು ಯಾರು? ಎಲ್ಲಿಂದ ಬಂದಿರುವಿರಿ?” ಎಂದು ಪ್ರಶ್ನಿಸಿದನು. |
9
|
[This verse may not be a part of this translation] |
10
|
ಆತನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಇಬ್ಬರು ಅರಸರನ್ನು ಸೋಲಿಸಿದ್ದನ್ನು ನಾವು ಕೇಳಿದೆವು. ಹೆಷ್ಬೋನಿನ ಅರಸನಾದ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಇವರೇ ಆ ಅರಸರು. |
11
|
ಆದುದರಿಂದ ನಮ್ಮ ಹಿರಿಯರು ಮತ್ತು ನಮ್ಮ ಜನರು ನಮಗೆ, ‘ನಿಮ್ಮ ಪ್ರಯಾಣಕ್ಕೆ ಸಾಕಷ್ಟು ಆಹಾರವನ್ನು ತೆಗೆದುಕೊಂಡು ಹೋಗಿ ಇಸ್ರೇಲರನ್ನು ಭೇಟಿಮಾಡಿ, ‘ನಾವು ನಿಮ್ಮ ಸೇವಕರು. ನಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಿರಿ’ ಎಂದು ಅವರಿಗೆ ತಿಳಿಸಿ’ ಎಂಬುದಾಗಿ ಹೇಳಿ ನಮ್ಮನ್ನು ಕಳುಹಿಸಿದ್ದಾರೆ. |
12
|
“ನಮ್ಮ ರೊಟ್ಟಿಯನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಬಿಸಿಯಾಗಿತ್ತು ಮತ್ತು ಮೃದುವಾಗಿತ್ತು. ಆದರೆ ಈಗ ಅವುಗಳನ್ನು ನೋಡಿರಿ, ಒಣಗಿಹೋಗಿವೆ. |
13
|
ನಮ್ಮ ದ್ರಾಕ್ಷಾರಸದ ಬುದ್ದಲಿಗಳನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಅವು ಹೊಸದಾಗಿದ್ದವು ಮತ್ತು ದ್ರಾಕ್ಷಾರಸದಿಂದ ತುಂಬಿದ್ದವು. ಆದರೆ ಈಗ ಹಳೆಯದಾಗಿ ಹರಿದುಹೋಗಿವೆ. ನಮ್ಮ ಬಟ್ಟೆಗಳನ್ನು ಮತ್ತು ಪಾದರಕ್ಷೆಗಳನ್ನು ನೋಡಿರಿ, ಈಗ ಅವು ದೂರ ಪ್ರಯಾಣದಿಂದ ಹಾಳಾಗಿಹೋಗಿವೆ” ಎಂದು ಹೇಳಿದರು. |
14
|
ಅವರು ಹೇಳುತ್ತಿರುವುದು ನಿಜವೇ ಎಂದು ತಿಳಿದುಕೊಳ್ಳಲು ಇಸ್ರೇಲರು ಅವರ ರೊಟ್ಟಿಯನ್ನು ತಿಂದು ನೋಡಿದರು; ಆದರೆ ತಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಲಿಲ್ಲ. |
15
|
ಯೆಹೋಶುವನು ಅವರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಒಪ್ಪಿಕೊಂಡನು. ಅವರು ಜೀವಸಹಿತ ಇರಲು ಅವಕಾಶ ಮಾಡಿಕೊಟ್ಟನು. ಯೆಹೋಶುವನ ಈ ಒಪ್ಪಂದಕ್ಕೆ ಇಸ್ರೇಲಿನ ಜನನಾಯಕರು ಒಪ್ಪಿಕೊಂಡರು. |
16
|
ಮೂರು ದಿನಗಳ ತರುವಾಯ ಆ ಜನರು ತಮ್ಮ ಪಾಳೆಯದ ಸಮೀಪ ವಾಸಿಸುವವರು ಎಂಬುದು ಇಸ್ರೇಲರಿಗೆ ತಿಳಿದುಬಂತು. |
17
|
ಆದುದರಿಂದ ಇಸ್ರೇಲರು ಅವರಿದ್ದ ಸ್ಥಳಕ್ಕೆ ಹೋದರು. ಮೂರನೆಯ ದಿನ ಇಸ್ರೇಲರು ಗಿಬ್ಯೋನ್, ಕೆಫೀರಾ, ಬೇರೋತ್ ಮತ್ತು ಕಿರ್ಯತ್ಯಾರೀಮ್ ಪಟ್ಟಣಗಳಿಗೆ ಬಂದರು. |
18
|
ಆದರೆ ಇಸ್ರೇಲರ ಸೈನ್ಯವು ಆ ಪಟ್ಟಣದ ಜನರೊಂದಿಗೆ ಯುದ್ಧಮಾಡಲಿಲ್ಲ. ಅವರು ಆ ಜನರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಅವರು ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು. ಒಪ್ಪಂದವನ್ನು ಮಾಡಿಕೊಂಡ ಜನನಾಯಕರ ಬಗ್ಗೆ ಜನರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು. |
19
|
ಆದರೆ ಜನನಾಯಕರು, “ನಾವು ಮಾತುಕೊಟ್ಟಿದ್ದೇವೆ; ಇಸ್ರೇಲಿನ ದೇವರಾದ ಯೆಹೋವನ ಮುಂದೆ ಪ್ರಮಾಣ ಮಾಡಿದ್ದೇವೆ; ಈಗ ನಾವು ಅವರ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ. |
20
|
ನಾವು ಅವರನ್ನು ಜೀವಂತವಾಗಿ ಉಳಿಸಲೇಬೇಕು. ನಾವು ಅವರಿಗೆ ಕೊಟ್ಟ ಮಾತನ್ನು ಮೀರಿದರೆ ದೇವರ ಕೋಪಕ್ಕೆ ಗುರಿಯಾಗುತ್ತೇವೆ. |
21
|
ಆದ್ದರಿಂದ ಅವರು ಜೀವಂತವಾಗಿ ಉಳಿಯಲಿ. ಆದರೆ ಅವರು ನಮ್ಮ ಸೇವಕರಾಗಲಿ. ಅವರು ನಮಗಾಗಿ ಸೌಧೆಯನ್ನು ಕಡಿಯಲಿ ಮತ್ತು ನಮ್ಮೆಲ್ಲರಿಗಾಗಿ ನೀರು ತಂದುಹಾಕಲಿ” ಎಂದು ಉತ್ತರಿಸಿದರು. ಹೀಗೆ ಜನನಾಯಕರು ಆ ಜನರೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಮುರಿಯಲಿಲ್ಲ. |
22
|
ಯೆಹೋಶುವನು ಗಿಬ್ಯೋನಿನ ಜನರನ್ನು ಕರೆದು, “ನೀವು ನಮಗೆ ಸುಳ್ಳು ಹೇಳಿದ್ದೇಕೆ? ನಿಮ್ಮ ನಾಡು ನಮ್ಮ ಪಾಳೆಯದ ಹತ್ತಿರವೇ ಇತ್ತು. ಆದರೆ ನೀವು ನಿಮ್ಮನ್ನು ದೂರದೇಶದವರು ಎಂದು ಹೇಳಿಕೊಂಡಿರಿ. |
23
|
ಈಗ ನೀವು ಶಾಪಕ್ಕೆ ಗುರಿಯಾಗಿದ್ದೀರಿ. ದೇವರ ಮಂದಿರಕ್ಕಾಗಿ ಸೌಧೆಯನ್ನು ಕಡಿಯುವುದೂ ನೀರನ್ನು ಹೊರುವುದೂ ನಿಮಗೆಂದಿಗೂ ತಪ್ಪಿದ್ದಿಲ್ಲ” ಎಂದು ಹೇಳಿದನು. |
24
|
ಗಿಬ್ಯೋನ್ಯರು, “ನೀವು ನಮ್ಮನ್ನು ಕೊಲ್ಲಬಹುದೆಂಬ ಭಯದಿಂದ ನಾವು ನಿಮಗೆ ಸುಳ್ಳು ಹೇಳಿದೆವು; ದೇವರು ತನ್ನ ಸೇವಕನಾದ ಮೋಶೆಗೆ ಈ ಎಲ್ಲ ಭೂಪ್ರದೇಶವನ್ನು ನಿಮಗೆ ಕೊಡಬೇಕೆಂದು ಆಜ್ಞಾಪಿಸಿರುವುದನ್ನೂ ಈ ಪ್ರದೇಶದ ಎಲ್ಲ ಜನರನ್ನು ಕೊಂದುಬಿಡಬೇಕೆಂದು ನಿಮಗೆ ಹೇಳಿರುವನೆಂದೂ ನಾವು ಕೇಳಿದ್ದೆವು. ಆದ್ದರಿಂದ ನಾವು ನಿಮಗೆ ಸುಳ್ಳು ಹೇಳಿದೆವು. |
25
|
ನಾವು ಈಗ ನಿಮ್ಮ ಸೇವಕರು. ನಿಮಗೆ ಸರಿ ಎನಿಸಿದ್ದನ್ನು ನೀವು ಮಾಡಬಹುದು” ಎಂದು ಉತ್ತರಿಸಿದರು. |
26
|
ಹೀಗೆ ಗಿಬ್ಯೋನಿನ ಜನರು ಗುಲಾಮರಾದರು. ಆದರೆ ಯೆಹೋಶುವನು ಅವರನ್ನು ಜೀವಂತವಾಗಿ ಉಳಿಸಿದನು. ಇಸ್ರೇಲರು ಅವರನ್ನು ಕೊಲ್ಲದಂತೆ ನೋಡಿಕೊಂಡರು. |
27
|
ಯೆಹೋಶುವನು ಗಿಬ್ಯೋನಿನ ಜನರನ್ನು ಇಸ್ರೇಲರ ಸೇವಕರನ್ನಾಗಿ ಮಾಡಿಕೊಂಡನು. ತನ್ನ ನಿವಾಸಕ್ಕಾಗಿ ಯೆಹೋವನು ಆರಿಸಿಕೊಳ್ಳುವ ಸ್ಥಳಗಳಲ್ಲಿ ಅವರು ಇಸ್ರೇಲರಿಗಾಗಿಯೂ ಯೆಹೋವನ ಯಜ್ಞವೇದಿಕೆಗಾಗಿಯೂ ಮರವನ್ನು ಕಡಿಯುತ್ತಿದ್ದರು ಮತ್ತು ನೀರನ್ನು ಹೊರುತ್ತಿದ್ದರು. ಆ ಜನರು ಇಂದಿಗೂ ಗುಲಾಮರಾಗಿಯೇ ಇದ್ದಾರೆ. ಸೂರ್ಯನು ನಿಶ್ಚಲನಾಗಿ ನಿಂತ ದಿನ |
Joshua 9:8 Kannada Language Bible Words basic statistical display
COMING SOON ...