ಇಸ್ರೇಲರು ತಮಗಾಗಿ ಅರಸನನ್ನು ಆರಿಸಿಕೊಂಡರು. ಆದರೆ ಸಲಹೆಗಳಿಗಾಗಿ ನನ್ನ ಬಳಿಗೆ ಬರಲಿಲ್ಲ. ಇಸ್ರೇಲರು ತಮ್ಮ ನಾಯಕರನ್ನು ಆರಿಸಿಕೊಂಡರು. ಆದರೆ ನಾನು ತಿಳಿದಿರುವ ನಾಯಕರನ್ನು ಆರಿಸಿಕೊಳ್ಳಲಿಲ್ಲ. ಇಸ್ರೇಲರು ತಮಗೆ ವಿಗ್ರಹಗಳನ್ನು ತಯಾರಿಸಲು ತಮ್ಮ ಬೆಳ್ಳಿಬಂಗಾರವನ್ನು ಉಪಯೋಗಿಸಿದರು. ಆದ್ದರಿಂದ ಅವರು ನಾಶವಾಗುವರು.
(5-6) ಯೆಹೋವನು ನೀವು ಮಾಡಿಕೊಂಡ ಬಸವನನ್ನು ನಿರಾಕರಿಸಿದ್ದಾನೆ. ಸಮಾರ್ಯವೇ, ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರ ವಿರುದ್ಧವಾಗಿ ತುಂಬಾ ಕೋಪಗೊಂಡಿದ್ದೇನೆ.’ ಇಸ್ರೇಲಿನ ಜನರು ಅವರ ಪಾಪಗಳಿಗಾಗಿ ಶಿಕ್ಷಿಸಲ್ಪಡುವರು. ಶಿಲ್ಪಿಯು ಅವರ ವಿಗ್ರಹಗಳನ್ನು ಮಾಡಿದನು. ಅವು ದೇವರಲ್ಲ. ಸಮಾರ್ಯದ ಬಸವನ ವಿಗ್ರಹಗಳು ಚೂರುಚೂರಾಗಿ ಒಡೆಯಲ್ಪಡುವವು.
ಇಸ್ರೇಲರು ಅಜ್ಞಾನದ ಕಾರ್ಯ ಮಾಡಿದರು. ಅವರು ಗಾಳಿಯನ್ನು ನೆಡಲು ಪ್ರಯತ್ನಿಸಿದರು. ಆದರೆ ಅವರಿಗೆ ತೊಂದರೆಗಳೇ ಪ್ರಾಪ್ತವಾಗುವದು. ಅವರು ಸುಂಟರಗಾಳಿಯನ್ನು ಕೊಯ್ಯುವರು. ಹೊಲದಲ್ಲಿ ಧಾನ್ಯವು ಬೆಳೆಯುವದು. ಆದರೆ ಅವು ಆಹಾರವನ್ನು ಕೊಡುವದಿಲ್ಲ. ಒಂದುವೇಳೆ ಅದು ಕೊಟ್ಟರೂ ಅಪರಿಚಿತರು ಅದನ್ನು ತಿನ್ನುವರು.
ಇಸ್ರೇಲರು ಯಜ್ಞವನ್ನು ಪ್ರೀತಿಸುತ್ತಾರೆ. ಅವರು ಮಾಂಸವನ್ನು ಯಜ್ಞಮಾಡಿ ತಿನ್ನುತ್ತಾರೆ. ಯೆಹೋವನು ಅವರ ಯಜ್ಞವನ್ನು ಸ್ವೀಕರಿಸುವುದಿಲ್ಲ. ಅವರ ಪಾಪಗಳನ್ನು ತನ್ನ ನೆನಪಿಗೆ ತಂದು ಅವರನ್ನು ಶಿಕ್ಷಿಸುವನು. ಅವರು ಈಜಿಪ್ಟಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡುವರು.
ಇಸ್ರೇಲರು ರಾಜರ ಅರಮನೆಗಳನ್ನು ಕಟ್ಟಿದರು. ಆದರೆ ಅದರ ನಿರ್ಮಾಣಿಕನನ್ನು ಮರೆತರು. ಯೆಹೂದವು ಕೋಟೆಗಳನ್ನು ಕಟ್ಟುತ್ತಾನೆ; ಆದರೆ ಯೆಹೂದದ ಪಟ್ಟಣಗಳ ಮೇಲೆ ನಾನು ಬೆಂಕಿಯನ್ನು ಕಳುಹಿಸುವೆನು. ಆ ಬೆಂಕಿಯು ಅರಮನೆಗಳನ್ನು ನಾಶಮಾಡುವದು.”