“ಎಫ್ರಾಯೀಮೇ, ನಿನ್ನನ್ನು ಬಿಟ್ಟುಬಿಡಲು ನನಗೆ ಇಷ್ಟವಿಲ್ಲ. ಇಸ್ರೇಲೇ, ನಿನ್ನನ್ನು ಸಂರಕ್ಷಿಸಲು ನನಗೆ ಇಷ್ಟ. ನಿನ್ನನ್ನು ಅದ್ಮದಂತೆ ಮಾಡಲು ನನಗೆ ಮನಸ್ಸಿಲ್ಲ. ನಿನ್ನನ್ನು ಜೆಬೊಯೀಮಿನಂತೆ ಮಾಡಲು ನನಗೆ ಮನಸ್ಸಿಲ್ಲ. ನಾನು ನನ್ನ ನಿರ್ಧಾರವನ್ನು ಬದಲಾಯಿಸುತ್ತಿದ್ದೇನೆ. ನಿನ್ನ ಮೇಲಿರುವ ನನ್ನ ಪ್ರೀತಿಯು ಆಳವಾಗಿದೆ.
ನನ್ನ ಭಯಂಕರವಾದ ಕೋಪವು ಮೇಲುಗೈ ಸಾಧಿಸುವದಿಲ್ಲ. ಎಫ್ರಾಯೀಮನನ್ನು ನಾನು ತಿರುಗಿ ನಾಶಮಾಡುವದಿಲ್ಲ. ನಾನು ದೇವರು, ನರಮನುಷ್ಯನಲ್ಲ. ನಾನು ಪವಿತ್ರನು, ನಿನ್ನೊಂದಿಗಿರುವೆನು. ನನ್ನ ಕೋಪವನ್ನು ಪ್ರದರ್ಶಿಸೆನು.
ಈಜಿಪ್ಟಿನಿಂದ ಅವರು ಪಕ್ಷಿಗಳಂತೆ ನಡುಗುತ್ತಾ ಬರುವರು. ಅಶ್ಶೂರದಿಂದ ನಡುಗುವ ಪಾರಿವಾಳಗಳ ರೀತಿಯಲ್ಲಿ ಬರುವರು. ಆಗ ನಾನು ಅವರನ್ನು ಮನೆಗೆ ಕರೆದುಕೊಂಡು ಹೋಗುವೆನು. ಇದು ಯೆಹೋವನ ನುಡಿ.
“ಎಫ್ರಾಯೀಮನು ಸುಳ್ಳುದೇವರುಗಳಿಂದ ನನ್ನನ್ನು ಸುತ್ತುವರಿದನು. ಇಸ್ರೇಲಿನ ಜನರು ನನಗೆ ವಿರುದ್ಧವಾಗಿ ಎದ್ದರು. ಆದರೆ ಅವರು ನಾಶವಾದರು. ಯೆಹೂದನು ಈಗಲೂ ದೇವರ ಜೊತೆಯಲ್ಲಿ ನಡೆಯುತ್ತಿದ್ದಾನೆ. ಯೆಹೂದನು ಪರಿಶುದ್ಧರಿಗೆ ನಿಷ್ಠೆಯಿಂದಿದ್ದಾನೆ.”