1
|
ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದುದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ. |
2
|
ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ. |
3
|
ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ: “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.” ಕೀರ್ತನೆ 95:11 ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು. |
4
|
ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದುದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.” |
5
|
ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ” ವೆಂದೂ ಹೇಳಿದ್ದಾನೆ. |
6
|
ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ. |
7
|
ಆದುದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.” ಕೀರ್ತನೆ 95:7-8 |
8
|
ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ. |
9
|
ದೇವಜನರಿಗೋಸ್ಕರವಿರುವ ಸಬ್ಬತ್ತೆಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. |
10
|
ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದುದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು. |
11
|
ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ. |
12
|
ದೇವರ ವಾಕ್ಯವು ಸಜೀವವಾದದ್ದು, ಕಾರ್ಯ ಸಾಧಕವಾದದ್ದು. ಅದು ಅತ್ಯಂತ ಹರಿತವಾದ ಖಡ್ಗಕ್ಕಿಂತಲೂ ಹರಿತವಾಗಿದ್ದು ನಾಟಿಕೊಳ್ಳುತ್ತದೆ. ಆತ್ಮಪ್ರಾಣಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುತ್ತದೆ; ನಮ್ಮ ಹೃದಯದ ಉದ್ದೇಶಗಳನ್ನು ಮತ್ತು ಆಲೋಚನೆಗಳನ್ನು ವಿವೇಚಿಸುತ್ತದೆ. |
13
|
ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ. |
14
|
ಪರಲೋಕಕ್ಕೆ ಏರಿಹೋದ ಪ್ರಧಾನ ಯಾಜಕನೊಬ್ಬನು ನಮಗಿದ್ದಾನೆ. ಆತನೇ ದೇವರ ಮಗನಾದ ಯೇಸು. ಆದುದರಿಂದ ನಮಗಿರುವ ನಂಬಿಕೆಯಲ್ಲೇ ದೃಢವಾಗಿ ಸಾಗೋಣ. |
15
|
ನಮ್ಮ ಪ್ರಧಾನ ಯಾಜಕನಾಗಿರುವ ಯೇಸು ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗಿದ್ದಾನೆ. ಆತನು ಈ ಲೋಕದಲ್ಲಿ ಜೀವಿಸಿದ್ದಾಗ, ಸರ್ವವಿಷಯಗಳಲ್ಲಿ ನಮ್ಮಂತೆಯೇ ಶೋಧನೆಗೆ ಗುರಿಯಾದರೂ ಪಾಪಮಾಡಲಿಲ್ಲ. |
16
|
ಆದುದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು. |
Hebrews 4:12 Kannada Language Bible Words basic statistical display
COMING SOON ...