1
|
“ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು. ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು. ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.” |
2
|
ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. |
3
|
ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ. |
4
|
ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.” |
5
|
ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು. |
6
|
ಆದರೆ ಬೇಗನೇ ಅವರೆಲ್ಲಾ ಇವನನ್ನು ನೋಡಿ ನಗಾಡುವರು. ಅವನ ಸೋಲುವಿಕೆಯ ಕಥೆಗಳನ್ನು ವರ್ಣಿಸುವರು; ನಗಾಡುತ್ತಾ, ‘ಎಂಥಾ ದುಃಖಕರ ಸಂಗತಿ, ಅಷ್ಟೆಲ್ಲಾ ಸಂಪಾದಿಸಿದವನು ಅದನ್ನು ಇಟ್ಟುಕೊಳ್ಳಲಾಗಲಿಲ್ಲವಲ್ಲ. ಅವನು ಸಾಲಗಳನ್ನು ವಸೂಲಿ ಮಾಡಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಂಡನು.’ |
7
|
“ಬಲಶಾಲಿಯಾದ ಮನುಷ್ಯನೇ, ನೀನು ಜನರಿಂದ ಹಣವನ್ನು ಸುಲುಕೊಂಡಿದ್ದೀ. ಒಂದು ದಿವಸ ಆ ಜನರು ಎಚ್ಚರವಾಗಿ ತಮಗೆ ಏನಾಯಿತೆಂದು ಅರಿತುಕೊಳ್ಳುವರು. ನಿನಗೆ ವಿರುದ್ಧವಾಗಿ ಏಳುವರು. ನಿನ್ನ ಕೈಯಿಂದ ಆ ವಸ್ತುಗಳನ್ನು ಕಿತ್ತುಕೊಳ್ಳುವರು. ಆಗ ನೀನು ಭಯದಿಂದ ತುಂಬುವಿ. |
8
|
ಎಷ್ಟೋ ಜನಾಂಗಗಳಿಂದ ನೀನು ವಸ್ತುಗಳನ್ನು ಅಪಹರಿಸಿದ್ದೀ. ಅವರು ನಿನ್ನಿಂದ ಇನ್ನೂ ಹೆಚ್ಚಾಗಿ ಅಪಹರಿಸುವರು. ನೀನು ಎಷ್ಟೋ ಮಂದಿಯನ್ನು ಕೊಂದಿರುತ್ತೀ; ದೇಶಗಳನ್ನೂ ನಗರಗಳನ್ನೂ ನಾಶ ಮಾಡಿರುತ್ತೀ. ಅಲ್ಲಿಯ ಎಷ್ಟೋ ಜನರನ್ನು ಸಂಹರಿಸಿರುತ್ತೀ. |
9
|
ಹೌದು, ಕೆಟ್ಟದ್ದನ್ನು ಮಾಡಿ ಧನಿಕನಾದವನಿಗೆ ಬಹಳ ಕೇಡಾಗುವುದು. ಆ ಮನುಷ್ಯನು ಒಂದು ಸುರಕ್ಷಿತವಾದ ಸ್ಥಳದಲ್ಲಿ ವಾಸಿಸಲು ಇದನ್ನೆಲ್ಲಾ ಮಾಡುತ್ತಾನೆ. ಹಾಗೆ ಮಾಡುವದರಿಂದ ಬೇರೆ ಜನರು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ಅವನು ತಿಳಿಯುತ್ತಾನೆ. ಆದರೆ ಕೆಟ್ಟ ಸಂಗತಿಗಳು ಅವನಿಗೆ ಸಂಭವಿಸುವವು. |
10
|
“ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ತಯಾರಿಸಿರುತ್ತೀ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟ ಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳಕೊಳ್ಳುವಿ. |
11
|
ಗೋಡೆಯ ಕಲ್ಲುಗಳು ನಿನಗೆ ವಿರುದ್ಧವಾಗಿ ಕೂಗುವವು. ಯಾಕೆ, ನಿನ್ನ ಮನೆಯ ಮರದ ಜಂತೆಗಳು ಸಹ ನೀನು ದುಷ್ಟತನವನ್ನು ಮಾಡಿದ್ದೀ ಎಂದು ಸಾಕ್ಷಿ ಹೇಳುವವು. |
12
|
“ಒಬ್ಬ ನಾಯಕನು ದುಷ್ಟತ್ವವನ್ನು ಮಾಡಿ ಒಂದು ಪಟ್ಟಣ ಕಟ್ಟುವದಕ್ಕಾಗಿ ಜನರನ್ನು ಕೊಲ್ಲುವದಾದರೆ ಅವನಿಗೆ ಬಹಳ ಕೇಡಾಗುವದು. |
13
|
ಸರ್ವಶಕ್ತನಾದ ಯೆಹೋವನು ಆ ಜನರು ಕಟ್ಟುವ ಪ್ರತಿಯೊಂದನ್ನೂ ಬೆಂಕಿಯಿಂದ ನಾಶಮಾಡುವ ತೀರ್ಮಾನವನ್ನು ಮಾಡಿರುತ್ತಾನೆ. ಅವರು ಮಾಡಿದ ಕೆಲಸವೆಲ್ಲವೂ ಶೂನ್ಯವಾಗುವದು. |
14
|
ಆಗ ಎಲ್ಲಾ ಕಡೆಗಳಲ್ಲಿರುವ ಜನರು ಯೆಹೋವನ ಮಹಿಮೆಯನ್ನು ತಿಳಿದುಕೊಳ್ಳುವರು. ಹೇಗೆ ನೀರು ಸಮುದ್ರಕ್ಕೆ ಹರಿಯುತ್ತದೋ ಹಾಗೆ ಈ ವರ್ತಮಾನವು ಎಲ್ಲಾ ಕಡೆಗೆ ಹಬ್ಬುವದು. |
15
|
ತಾನು ಸಿಟ್ಟುಗೊಂಡು ಇತರರು ಸಂಕಟಪಡುವಂತೆ ಮಾಡುವವನಿಗೆ ಬಹಳ ಕೇಡು ಉಂಟಾಗುವದು. ಸಿಟ್ಟಿನ ಭರದಲ್ಲಿ ಆ ಮನುಷ್ಯನು ಇತರ ಜನರನ್ನು ನೆಲಕ್ಕೆ ಅಪ್ಪಳಿಸಿ ಬಿಡುವನು. ಅವನು ಅವರನ್ನು ಅಮಲೇರಿದವರಂತೆಯೂ ಬೆತ್ತಲೆಯಾಗಿರುವವರಂತೆಯೂ ಪರಿಗಣಿಸುತ್ತಾನೆ. |
16
|
“ಆದರೆ ಅವನು ಯೆಹೋವನ ಕೋಪವನ್ನು ತಿಳಿದುಕೊಳ್ಳುವನು. ಆ ಕೋಪವು ಯೆಹೋವನ ಬಲಗೈಯಲ್ಲಿರುವ ವಿಷದ ಪಾತ್ರೆಯಂತಿರುವುದು. ಆ ವ್ಯಕ್ತಿಯು ಆ ಕೋಪವನ್ನು ರುಚಿ ನೋಡುವನು ಮತ್ತು ಅಮಲೇರಿದವನಂತೆ ನೆಲದ ಮೇಲೆ ಕುಸಿದು ಬೀಳುವನು. ದುಷ್ಟ ಅಧಿಪತಿಯೇ, ನೀನು ಆ ಪಾತ್ರೆಯಿಂದ ಕುಡಿಯುವಿ. ನಿನಗೆ ಅವಮಾನವೇ ಹೊರತು, ಮಾನ ಸಿಗುವುದಿಲ್ಲ. |
17
|
“ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿದ್ದೀ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುತ್ತೀ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತು ಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವಿ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.” |
18
|
ಆ ಮನುಷ್ಯನ ಸುಳ್ಳು ದೇವರು ಅವನಿಗೆ ಸಹಾಯ ಮಾಡಲಾರದು. ಯಾಕೆಂದರೆ ಅದು ಒಬ್ಬನು ಲೋಹದಿಂದ ಮಾಡಿದ ಕೇವಲ ವಿಗ್ರಹವಷ್ಟೆ. ಅದು ಕೇವಲ ಜಡ ಮೂರ್ತಿ. ಅದನ್ನು ಮಾಡಿದವನು, ಅದು ಅವನಿಗೆ ಸಹಾಯ ಮಾಡುವದೆಂದು ಯೋಚಿಸುವದು ಶುದ್ಧ ಮೂರ್ಖತನ. ಆ ಮೂರ್ತಿಯು ಮಾತಾಡುವೂದೂ ಇಲ್ಲ. |
19
|
ಆ ಮೂರ್ತಿಗೆ ‘ಎದ್ದೇಳು’ ಎಂದು ಹೇಳುವವನಿಗೆ ಕೇಡಾಗುವುದು! ಮಾತಾಡಲಾಗದ ಒಂದು ಕಲ್ಲಿಗೆ ‘ಎಚ್ಚರವಾಗು’ ಎಂದು ಹೇಳುವವನಿಗೆ ಕೇಡಾಗುವುದು! ಅವುಗಳು ಅವನಿಗೆ ಸಹಾಯ ಮಾಡುವದಿಲ್ಲ. ಮಾಡಲಿಕ್ಕಾಗುವದೂ ಇಲ್ಲ. ಆ ವಿಗ್ರಹಗಳನ್ನು ಬೆಳ್ಳಿಬಂಗಾರದಿಂದ ಹೊದಿಸಿದರೂ ಆ ವಿಗ್ರಹಗಳಲ್ಲಿ ಜೀವವಿಲ್ಲ. |
20
|
ಆದರೆ ಯೆಹೋವನಾದರೋ ಹಾಗಲ್ಲ. ಆತನು ತನ್ನ ಪವಿತ್ರ ಆಲಯದಲ್ಲಿದ್ದಾನೆ. ಆದುದರಿಂದ ಎಲ್ಲಾ ಭೂನಿವಾಸಿಗಳು ಆತನ ಮುಂದೆ ಮೌನದಿಂದಿದ್ದು ಆತನನ್ನು ಗೌರವಿಸತಕ್ಕದ್ದು. |
Habakkuk 2:1 Kannada Language Bible Words basic statistical display
COMING SOON ...