ಯೆಹೋವನು ಉತ್ತರಿಸುತ್ತಾ, “ಇತರ ದೇಶಗಳನ್ನು ನೋಡು, ಅವರನ್ನು ಗಮನಿಸು. ನೀನು ಆಶ್ಚರ್ಯಪಡುವೆ. ನೀನು ನಿನ್ನ ಜೀವಮಾನದಲ್ಲಿಯೇ ಅಚ್ಚರಿಪಡುವಂಥ ವಿಷಯವನ್ನು ನಾನು ನಡಿಸುತ್ತೇನೆ. ನೀನು ಅದನ್ನು ನೋಡಿ ನಂಬುವೆ. ನಿನಗೆ ಅದರ ವಿಷಯವಾಗಿ ತಿಳಿಸಲ್ಪಟ್ಟರೂ ನೀನು ನಂಬುವದಿಲ್ಲ.
ನಾನು ಬಾಬಿಲೋನಿನವರನ್ನು ಬಲಾಢ್ಯ ಜನಾಂಗವಾಗಿ ಮಾಡುವೆನು. ಅವರು ಬಲಶಾಲಿಗಳೂ ನಿರ್ದಯಿಗಳೂ ಆಗಿದ್ದಾರೆ. ಅವರು ಲೋಕದಲ್ಲೆಲ್ಲಾ ಸಂಚರಿಸುವರು. ತಮ್ಮದಲ್ಲದ ಮನೆಗಳನ್ನು ಮತ್ತು ನಗರಗಳನ್ನು ತಮ್ಮ ವಶಮಾಡಿಕೊಳ್ಳುವರು.
ಅವರ ಕುದುರೆಗಳು ಚಿರತೆಗಿಂತ ವೇಗವಾಗಿವೆ; ಸೂರ್ಯಸ್ತಮಾನ ಕಾಲದಲ್ಲಿ ತೋಳಗಳಿಗಿಂತ ಭಯಂಕರವಾಗಿವೆ. ಅವರ ರಾಹುತರು ಬಹುದೂರ ದೇಶದಿಂದ ಬಂದರು. ಹಸಿದ ಗಿಡುಗ ಹೇಗೆ ಆಕಾಶದಿಂದ ನೆಲದ ಮೇಲಿರುವ ಆಹಾರದ ಮೇಲೆ ಬೀಳುತ್ತದೋ ಅದೇ ರೀತಿಯಲ್ಲಿ ಅವರ ರಾಹುತರು ವೈರಿಗಳ ಮೇಲೆ ಬೀಳುವರು.
ಅವರು ಬಯಸುವುದು ಯುದ್ಧವೊಂದನ್ನೇ. ಅವರ ಸೈನ್ಯವು ಮರುಭೂಮಿಯ ಮೇಲೆ ಬೀಸುವ ಗಾಳಿಯ ತರಹ ವೇಗವಾಗಿ ಸಂಚರಿಸುವದು. ಮತ್ತು ಬಾಬಿಲೋನಿನ ಸೈನಿಕರು ಮರಳಿನಷ್ಟು ಅಸಂಖ್ಯಾತ ಜನರನ್ನು ಸೆರೆಹಿಡಿಯುತ್ತಾರೆ.
“ಇತರ ಜನಾಂಗದ ಅರಸರನ್ನು ಬಾಬಿಲೋನಿನ ಸೈನಿಕರು ಗೇಲಿ ಮಾಡುತ್ತಾರೆ. ಪರದೇಶದ ಅರಸರು ಅವರಿಗೆ ಹಾಸ್ಯಾಸ್ಪದವಾಗಿರುತ್ತಾರೆ. ಕೋಟೆಕೊತ್ತಲುಗಳಿರುವ ನಗರವನ್ನು ನೋಡಿ ಅವರು ನಗಾಡುವರು. ಆ ಸೈನಿಕರು ಕೋಟೆಯ ಗೋಡೆಯ ತನಕ ಮಣ್ಣಿನದಿಬ್ಬವನ್ನೇರಿಸಿ, ಸುಲಭವಾಗಿ ಪಟ್ಟಣಗಳನ್ನು ವಶಮಾಡಿಕೊಳ್ಳುವರು.
ಆಗ ಹಬಕ್ಕೂಕನು ಹೇಳಿದ್ದೇನೆಂದರೆ, “ಯೆಹೋವನೇ, ನೀನು ನಿತ್ಯಕಾಲಕ್ಕೂ ಜೀವಿಸುವ ದೇವರು. ನೀನು ಎಂದಿಗೂ ಸಾಯದ ನನ್ನ ಪರಿಶುದ್ಧ ದೇವರು. ನೀನು ಯೋಚಿಸುವದನ್ನು ನೆರವೇರಿಸಲು ಬಾಬಿಲೋನಿನವರನ್ನು ಸೃಷ್ಟಿಸಿರುವೆ. ನಮ್ಮ ಬಂಡೆಯಾದ ನೀನು ಯೆಹೂದದ ಜನರನ್ನು ಶಿಕ್ಷಿಸುವುದಕ್ಕಾಗಿಯೇ ಅವರನ್ನು ಸೃಷ್ಟಿಸಿರುವೆ.
ಕೆಡುಕನ್ನು ದೃಷ್ಟಿಸಲಾರದಷ್ಟು ನಿನ್ನ ಕಣ್ಣುಗಳು ಶುದ್ಧವಾಗಿವೆ. ಜನರು ಮಾಡುವ ದುಷ್ಕೃತ್ಯಗಳನ್ನು ನೀನು ನೋಡಲಾರೆ. ಹೀಗಿರಲು ಆ ಕೆಡುಕರು ಜಯಗಳಿಸುವದನ್ನು ನೀನು ಹೇಗೆ ವೀಕ್ಷಿಸಬಲ್ಲೆ? ದುಷ್ಟರು ಒಳ್ಳೆಯವರನ್ನು ಸೋಲಿಸಿದಾಗ ನೀನು ನಿನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಾರದೇಕೆ? ಒಳ್ಳೆಯ ಜನರನ್ನು ಕೆಟ್ಟ ಜನರು ಸೋಲಿಸುವುದನ್ನು ನೀನು ಹೇಗೆ ನೋಡುವೆ?
ಅವನ ಬಲೆಗಳು ಅವನು ಧನಿಕನಂತೆ ಜೀವಿಸಲು ಸಹಾಯ ಮಾಡುವವು. ಅವನು ಒಳ್ಳೆಯ ಆಹಾರವನ್ನು ಉಣ್ಣುವನು. ಅದಕ್ಕೆ ವೈರಿಯು ತನ್ನ ಬಲೆಯನ್ನು ಆರಾಧಿಸುವನು. ಅವನು ಯಜ್ಞವನ್ನರ್ಪಿಸಿ ಧೂಪ ಹಾಕುವನು. ಬಲೆಯನ್ನು ಗೌರವಿಸುವನು.