ನಾನು ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಬಳಿಕ ನಾನೇ ನಿನ್ನನ್ನು ಮತ್ತೆ ಈಜಿಪ್ಟಿನಿಂದ ಕರೆದುಕೊಂಡು ಬರುವೆನು. ನೀನು ಈಜಿಪ್ಟಿನಲ್ಲಿ ಮರಣ ಹೊಂದಿದರೂ ಯೋಸೇಫನು ನಿನ್ನ ಸಂಗಡವಿರುವನು. ನೀನು ಸತ್ತಾಗ ಅವನು ತನ್ನ ಕೈಗಳಿಂದ ನಿನ್ನ ಕಣ್ಣುಗಳನ್ನು ಮುಚ್ಚುವನು” ಎಂದು ಹೇಳಿದನು.
ಆಮೇಲೆ ಯಾಕೋಬನು ಬೇರ್ಷೆಬವನ್ನು ಬಿಟ್ಟು ಈಜಿಪ್ಟಿಗೆ ಪ್ರಯಾಣ ಮಾಡಿದನು. ಇಸ್ರೇಲನ ಗಂಡುಮಕ್ಕಳು ತಮ್ಮ ತಂದೆಯನ್ನೂ ತಮ್ಮ ಹೆಂಡತಿಯರನ್ನೂ ತಮ್ಮ ಎಲ್ಲಾ ಮಕ್ಕಳನ್ನೂ ಕರೆದುಕೊಂಡು ಹೋದರು. ಫರೋಹನು ಕಳುಹಿಸಿದ್ದ ರಥಗಳಲ್ಲಿ ಅವರು ಪ್ರಯಾಣ ಮಾಡಿದರು.
ಇದಲ್ಲದೆ ಅವರು ತಮ್ಮ ದನಕರುಗಳನ್ನೂ ಕಾನಾನ್ ದೇಶದಲ್ಲಿ ತಾವು ಹೊಂದಿದ್ದ ಪ್ರತಿಯೊಂದನ್ನೂ ತೆಗೆದುಕೊಂಡು ಹೋದರು. ಹೀಗೆ ಇಸ್ರೇಲನು ತನ್ನ ಎಲ್ಲಾ ಮಕ್ಕಳೊಂದಿಗೆ ಮತ್ತು ತನ್ನ ಕುಟುಂಬದೊಂದಿಗೆ ಈಜಿಪ್ಟಿಗೆ ಹೋದನು.
ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್. ಇವರು ಯಾಕೋಬನ ಹೆಂಡತಿಯಾದ ಲೇಯಳ ಮಕ್ಕಳು. ಲೇಯಳು ಆ ಮಕ್ಕಳಿಗೆ ಪದ್ದನ್‌ಅರಾಮಿನಲ್ಲಿ ಜನ್ಮಕೊಟ್ಟಳು. ಅಲ್ಲಿ ಅವಳ ಮಗಳಾದ ದೀನ ಸಹ ಜನಿಸಿದಳು. ಈ ಕುಟುಂಬದಲ್ಲಿ ಮೂವತ್ಮೂರು ಮಂದಿ ಇದ್ದರು.
ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಮನಸ್ಸೆ ಮತ್ತು ಎಫ್ರಾಯೀಮ್. (ಯೋಸೇಫನ ಹೆಂಡತಿ “ಆಸನತ್” ಈಕೆ ಓನ್ ಪಟ್ಟಣದ ಆಚಾರ್ಯನಾಗಿದ್ದ ಫೋಟೀಫರನ ಮಗಳು.)
ಇವರೆಲ್ಲರು ಬಿಲ್ಹಳ ಕುಟುಂಬದವರು. (ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟ ದಾಸಿಯೇ ಬಿಲ್ಹ. ರಾಹೇಲಳು ಈ ದಾಸಿಯನ್ನು ಯಾಕೋಬನಿಗೆ ಕೊಟ್ಟಿದ್ದಳು.) ಈ ಕುಟುಂಬದಲ್ಲಿ ಒಟ್ಟು ಏಳು ಮಂದಿಯಿದ್ದರು.
ತನ್ನ ತಂದೆಯು ಸಮೀಪಿಸುತ್ತಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ತಂದೆಯಾದ ಇಸ್ರೇಲನನ್ನು ಗೋಷೆನಿನಲ್ಲಿ ಭೇಟಿಯಾಗಲು ತನ್ನ ರಥವನ್ನು ಸಿದ್ಧಪಡಿಸಿಕೊಂಡು ಹೋದನು. ಯೋಸೇಫನು ತನ್ನ ತಂದೆಯನ್ನು ಕಂಡಾಗ ಅವನನ್ನು ಅಪ್ಪಿಕೊಂಡು ಬಹಳ ಹೊತ್ತಿನ ತನಕ ಅತ್ತನು.
ಯೋಸೇಫನು ತನ್ನ ಸಹೋದರರಿಗೂ ತನ್ನ ತಂದೆಯ ಕುಟುಂಬದವರಿಗೂ, “ನಾನು ಫರೋಹನ ಬಳಿಗೆ ಹೋಗಿ, ‘ನನ್ನ ಸಹೋದರರು ಮತ್ತು ನನ್ನ ತಂದೆಯ ಕುಟುಂಬದವರು ಕಾನಾನ್ ದೇಶವನ್ನು ಬಿಟ್ಟು ನನ್ನ ಬಳಿಗೆ ಬಂದಿದ್ದಾರೆ.
ಈ ಕುಟುಂಬವು ಕುರುಬರ ಕುಟುಂಬ. ಇವರು ಯಾವಾಗಲೂ ದನಕರುಗಳ ಮತ್ತು ಆಡುಕುರಿಗಳ ಮಂದೆಗಳನ್ನು ಸಾಕುವವರು. ಇವರು ತಮ್ಮ ಎಲ್ಲಾ ಪಶುಗಳನ್ನು ಮತ್ತು ತಾವು ಹೊಂದಿರುವ ಪ್ರತಿಯೊಂದನ್ನು ತಮ್ಮೊಂದಿಗೆ ತಂದಿದ್ದಾರೆ’ ಎಂದು ತಿಳಿಸುತ್ತೇನೆ.
ನೀವು ಅವನಿಗೆ, ‘ನಾವು ಕುರುಬರು. ನಮ್ಮ ಜೀವಮಾನವೆಲ್ಲಾ ನಾವು ಪಶುಗಳನ್ನು ಸಾಕುವುದರ ಮೂಲಕ ಜೀವನ ಮಾಡಿದೆವು. ನಮಗಿಂತ ಮೊದಲು ನಮ್ಮ ಪೂರ್ವಿಕರು ಸಹ ಇದೇ ರೀತಿ ಜೀವಿಸಿದರು’ ಎಂದು ಹೇಳಿರಿ. ಆಗ ಅವನು ಗೋಷೆನ್ ಪ್ರಾಂತ್ಯದಲ್ಲಿ ವಾಸಿಸಲು ನಿಮಗೆ ಅವಕಾಶ ಮಾಡಿಕೊಡುತ್ತಾನೆ. ಈಜಿಪ್ಟಿನ ಜನರು ಕುರುಬರನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನೀವು ಗೋಷೆನಿನಲ್ಲಿ ವಾಸಿಸುವುದು ಒಳ್ಳೆಯದು” ಎಂದು ಹೇಳಿದನು.