1
|
ಆಗ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗಿ ಯೆಹೋವನು ಹೀಗೆನ್ನುತ್ತಾನೆ ಎಂದು ಹೇಳು: ‘ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. |
2
|
ನನ್ನ ಜನರನ್ನು ನೀನು ಹೋಗಗೊಡಿಸದಿದ್ದರೆ ನಾನು ಈಜಿಪ್ಟನ್ನು ಕಪ್ಪೆಗಳಿಂದ ತುಂಬಿಸುವೆನು. |
3
|
ನೈಲ್ ನದಿಯು ಕಪ್ಪೆಗಳಿಂದ ತುಂಬಿ ಹೋಗುವುದು. ಕಪ್ಪೆಗಳು ನದಿಯಿಂದ ಬಂದು ನಿಮ್ಮ ಮನೆಗಳನ್ನು ಪ್ರವೇಶಿಸುವವು; ನಿಮ್ಮ ಮಲಗುವ ಕೋಣೆಯಲ್ಲಿಯೂ ನಿಮ್ಮ ಹಾಸಿಗೆಗಳಲ್ಲಿಯೂ ನಿಮ್ಮ ಅಧಿಕಾರಿಗಳ ಮನೆಗಳಲ್ಲಿಯೂ ನಿಮ್ಮ ಒಲೆಗಳಲ್ಲಿಯೂ ನೀರಿನ ಜಾಡಿಗಳಲ್ಲಿಯೂ ಹಿಟ್ಟುನಾದುವ ತಟ್ಟೆಗಳಲ್ಲಿಯೂ ಇರುವವು; |
4
|
ನಿನ್ನ ಮೇಲೆಯೂ ನಿನ್ನ ಪ್ರಜೆಗಳ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ಇರುವವು”‘ ಅಂದನು. |
5
|
ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆಗಳ, ಕಾಲುವೆಗಳ ಮತ್ತು ಕೆರೆಗಳ ಮೇಲೆ ಕೈಚಾಚು’ ಎಂದು ಹೇಳು. ಆಗ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳು ಹೊರಬರುವವು” ಎಂದು ಹೇಳಿದನು. |
6
|
ಅಂತೆಯೇ ಆರೋನನು ಈಜಿಪ್ಟಿನ ನೀರುಗಳ ಮೇಲೆ ತನ್ನ ಕೈಯನ್ನು ಚಾಚಿದಾಗ ಕಪ್ಪೆಗಳು ನೀರುಗಳಿಂದ ಹೊರಬಂದು ಈಜಿಪ್ಟ್ ದೇಶವನ್ನು ಆವರಿಸಿಕೊಳ್ಳತೊಡಗಿದವು. |
7
|
ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು. |
8
|
ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನನ್ನಿಂದ ಮತ್ತು ನನ್ನ ಜನರ ಮೇಲಿಂದ ಕಪ್ಪೆಗಳನ್ನು ತೊಲಗಿಸಬೇಕೆಂದು ಯೆಹೋವನನ್ನು ಕೇಳಿಕೊಳ್ಳಿರಿ. ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ನಾನು ಆತನ ಜನರನ್ನು ಹೋಗಗೊಡಿಸುವೆನು” ಎಂದು ಹೇಳಿದನು. |
9
|
ಮೋಶೆಯು ಫರೋಹನಿಗೆ, “ಕಪ್ಪೆಗಳು ಯಾವಾಗ ಬಿಟ್ಟುಹೋಗಬೇಕೆಂದು ತಿಳಿಸು. ನಾನು ನಿನಗೋಸ್ಕರ, ನಿನ್ನ ಜನರಿಗೋಸ್ಕರ ಮತ್ತು ನಿನ್ನ ಅಧಿಕಾರಿಗಳಿಗೋಸ್ಕರ ಪ್ರಾರ್ಥಿಸುವೆನು. ಆಗ ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿಯುತ್ತವೆ” ಎಂದು ಹೇಳಿದನು. |
10
|
ಅದಕ್ಕೆ ಫರೋಹನು, “ನಾಳೆ” ಅಂದನು. ಮೋಶೆ, “ನೀನು ಹೇಳಿದಂತೆಯೇ ಆಗುವುದು. ನಮ್ಮ ದೇವರಾದ ಯೆಹೋವನಿಗೆ ಸಮಾನನಾದ ದೇವರೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. |
11
|
ಕಪ್ಪೆಗಳು ನಿನ್ನನ್ನೂ ನಿನ್ನ ಮನೆಗಳನ್ನೂ ನಿನ್ನ ಅಧಿಕಾರಿಗಳನ್ನೂ ನಿನ್ನ ಜನರನ್ನೂ ಬಿಟ್ಟುಹೋಗಿ ನದಿಯಲ್ಲಿ ಮಾತ್ರ ಉಳಿದುಕೊಳ್ಳುವವು” ಎಂದು ಹೇಳಿದನು. |
12
|
ಮೋಶೆ ಆರೋನರು ಫರೋಹನ ಬಳಿಯಿಂದ ಹೋದರು. ಫರೋಹನ ವಿರುದ್ಧವಾಗಿ ಕಳುಹಿಸಿದ ಕಪ್ಪೆಗಳನ್ನು ತೊಲಗಿಸಬೇಕೆಂದು ಮೋಶೆಯು ಯೆಹೋವನಿಗೆ ಪ್ರಾರ್ಥಿಸಿದನು. |
13
|
ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಕಪ್ಪೆಗಳು ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೊಲಗಳಲ್ಲಿಯೂ ಸತ್ತುಹೋದವು. |
14
|
ಅವುಗಳನ್ನು ಕೂಡಿಸಿದಾಗ ರಾಶಿರಾಶಿಗಳಾದವು. ದೇಶವು ದುರ್ವಾಸನೆಯಿಂದ ತುಂಬಿಹೋಯಿತು. |
15
|
ಕಪ್ಪೆಗಳಿಂದ ಬಿಡುಗಡೆಯಾದದ್ದನ್ನು ಫರೋಹನು ಕಂಡು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು. ಮೋಶೆ ಆರೋನರ ಬೇಡಿಕೆಯನ್ನು ಅವನು ಈಡೇರಿಸಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು. |
16
|
ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆ’ ಎಂದು ಹೇಳು. ಆಗ ಧೂಳು ಈಜಿಪ್ಟಿನಲ್ಲೆಲ್ಲಾ ಹೇನುಗಳಾಗುವವು” ಎಂದು ಹೇಳಿದನು. |
17
|
ಅವರು ಹಾಗೆಯೇ ಮಾಡಿದರು. ಆರೋನನು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ನೆಲದ ಧೂಳನ್ನು ಹೊಡೆದನು. ಆಗ ಈಜಿಪ್ಟಿನ ಪ್ರತಿಯೊಂದು ಸ್ಥಳದ ಧೂಳು ಹೇನುಗಳಾಗಿ ಪ್ರಾಣಿಗಳ ಮೇಲೂ ಜನರ ಮೇಲೂ ಏರಿಕೊಂಡವು. |
18
|
ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇರೀತಿ ಮಾಡಲು ಪ್ರಯತ್ನಿಸಿದರೂ ಧೂಳಿನಿಂದ ಹೇನುಗಳನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಹೇನುಗಳು ಪ್ರಾಣಿಗಳ ಮೇಲೂ ಜನರ ಮೇಲೂ ಉಳಿದುಕೊಂಡವು. |
19
|
ಆದ್ದರಿಂದ ಮಾಂತ್ರಿಕರು ಫರೋಹನಿಗೆ, “ಇದು ದೇವರ ಕಾರ್ಯವೇ” ಎಂದು ಹೇಳಿದರು. ಆದರೆ ಫರೋಹನು ಅವರ ಮಾತಿಗೆ ಕಿವಿಗೊಡಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು. |
20
|
ಯೆಹೋವನು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಬಳಿಗೆ ಹೋಗು. ಫರೋಹನು ನದಿಗೆ ಹೋಗುವನು. ನೀನು ಅವನಿಗೆ, “ಯೆಹೋವನು ಇಂತೆನ್ನುತ್ತಾನೆ: ನನ್ನ ಜನರು ಹೋಗಿ ನನ್ನನ್ನು ಆರಾಧಿಸಲಿ! |
21
|
ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ಹುಳಗಳು ನಿನ್ನ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ನಿನ್ನ ಜನರ ಮೇಲೆಯೂ ನಿಮ್ಮ ಮನೆಗಳಲ್ಲಿಯೂ ತುಂಬಿಕೊಳ್ಳುವವು; ನೆಲದ ಮೇಲೆಲ್ಲಾ ಇರುವವು. |
22
|
ಆದರೆ ನಾನು ಈಜಿಪ್ಟಿನವರೊಡನೆ ವರ್ತಿಸುವಂತೆ ಇಸ್ರೇಲರೊಡನೆ ವರ್ತಿಸುವುದಿಲ್ಲ. ನನ್ನ ಜನರು ವಾಸಿಸುವ ಗೋಷೆನ್ ಪ್ರದೇಶದಲ್ಲಿ ಯಾವ ಹುಳವೂ ಇರುವುದಿಲ್ಲ. ನಾನೇ ಭೂಲೋಕವನ್ನು ಆಳುವ ಯೆಹೋವನೆಂದು ಆಗ ನೀನು ತಿಳಿದುಕೊಳ್ಳುವೆ. |
23
|
ಆದ್ದರಿಂದ ನಾಳೆ ನನ್ನ ಜನಕ್ಕೂ ನಿನ್ನ ಜನಕ್ಕೂ ವ್ಯತ್ಯಾಸ ಮಾಡುವೆನು. ಅದೇ ನನ್ನ ಸಾಕ್ಷಿ’ ಎಂದು ಹೇಳಬೇಕು” ಎಂದು ಹೇಳಿದನು. |
24
|
ಯೆಹೋವನು ತಾನು ಹೇಳಿದಂತೆಯೇ ಮಾಡಿದನು. ಲೆಕ್ಕವಿಲ್ಲದಷ್ಟು ಹುಳಗಳು ಈಜಿಪ್ಟಿಗೆ ಬಂದು ಫರೋಹನ ಮನೆಯಲ್ಲಿಯೂ ಅವನ ಅಧಿಕಾರಿಗಳ ಮನೆಗಳಲ್ಲಿಯೂ ತುಂಬಿಕೊಂಡವು. ಇಡೀ ಈಜಿಪ್ಟನ್ನೇ ಅವು ತುಂಬಿಕೊಂಡದ್ದರಿಂದ ದೇಶವು ಹಾಳಾಯಿತು. |
25
|
ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ, “ನಿಮ್ಮ ದೇವರಿಗೆ ಈ ದೇಶದಲ್ಲಿಯೇ ಯಜ್ಞಗಳನ್ನು ಅರ್ಪಿಸಿರಿ” ಎಂದು ಹೇಳಿದನು. |
26
|
ಅದಕ್ಕೆ ಮೋಶೆ, “ಅದು ಸರಿಯಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಅರ್ಪಿಸುವ ಯಜ್ಞಗಳು ಈಜಿಪ್ಟಿನವರಿಗೆ ನಿಷಿದ್ಧವಾಗಿವೆ. ಹೀಗಿರಲು ಅವರ ಕಣ್ಣೆದುರಿಗೇ ಅಂಥ ಯಜ್ಞಗಳನ್ನು ಅರ್ಪಿಸಿದರೆ, ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವುದಿಲ್ಲವೇ? |
27
|
ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸುವಂತಾಗಲಿ. ಹೀಗೆ ಮಾಡಲು ಯೆಹೋವನೇ ನಮಗೆ ಹೇಳಿದ್ದಾನೆ” ಅಂದನು. |
28
|
ಅದಕ್ಕೆ ಫರೋಹನು, “ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲು ನಾನು ನಿಮಗೆ ಅಪ್ಪಣೆ ಕೊಡುವೆನು; ಆದರೆ ಬಹುದೂರ ಹೋಗಬೇಡಿ; ಈಗ ಹೋಗಿ ನನಗೋಸ್ಕರ ಪ್ರಾರ್ಥಿಸಿರಿ” ಅಂದನು. |
29
|
ಅದಕ್ಕೆ ಮೋಶೆ, “ನಾನು ಇಲ್ಲಿಂದ ಹೋದಾಗ, ನಿನಗೂ ನಿನ್ನ ಪ್ರಜೆಗಳಿಗೂ ನಿನ್ನ ಅಧಿಕಾರಿಗಳಿಗೂ ಹುಳಗಳ ಬಾಧೆ ನಾಳೆಯಿಂದ ಇರಬಾರದೆಂಬುದಾಗಿ ಯೆಹೋವನಿಗೆ ಪ್ರಾರ್ಥಿಸುವೆನು. ಆದರೆ ಮತ್ತೆ ನೀನು ವಂಚಿಸಿ ಜನರು ಯಜ್ಞಗಳನ್ನು ಸಮರ್ಪಿಸದಂತೆ ತಡೆಯಬಾರದು” ಎಂದು ಹೇಳಿದನು. |
30
|
ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು. |
31
|
ಯೆಹೋವನು ಮೋಶೆಯ ಬೇಡಿಕೆಯನ್ನು ಅನುಗ್ರಹಿಸಿದನು. ಯೆಹೋವನು ಫರೋಹನಿಂದಲೂ ಅವನ ಅಧಿಕಾರಿಗಳಿಂದಲೂ ಅವನ ಜನರಿಂದಲೂ ಹುಳಗಳನ್ನು ತೊಲಗಿಸಿದನು. ಯಾವ ಹುಳಗಳೂ ಉಳಿಯಲಿಲ್ಲ. |
32
|
ಆದರೆ ಫರೋಹನು ಮತ್ತೆ ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ಜನರನ್ನು ಹೋಗಗೊಡಿಸಲಿಲ್ಲ. |
Exodus 8:7 Kannada Language Bible Words basic statistical display
COMING SOON ...