ಅವರ ತಂದೆಯನ್ನು ಅಭಿಷೇಕಿಸಿದಂತೆ ಪುತ್ರರನ್ನೂ ಅಭಿಷೇಕಿಸು. ಆಗ ಅವರು ಯಾಜಕರಾಗಿ ತಲೆತಲೆಮಾರುಗಳವರೆಗೆ ನನ್ನ ಸೇವೆ ಮಾಡಬಹುದು. ನೀನು ಅವರನ್ನು ಅಭಿಷೇಕಿಸಿದಾಗ, ಅವರು ಯಾಜಕರಾಗುವರು. ಇನ್ನು ಮುಂದೆ ಆ ಕುಟುಂಬವು ಯಾಜಕರಾಗಿ ಮುಂದುವರಿಯುವುದು” ಎಂದು ಹೇಳಿದನು.
ಯೆಹೋವನು ಹೇಳಿದಂತೆಯೇ ಮೋಶೆಯು ಪವಿತ್ರಗುಡಾರವನ್ನು ನಿಲ್ಲಿಸಿದನು. ಅವನು ಮೊದಲು ಗದ್ದಿಗೇಕಲ್ಲುಗಳನ್ನು ಕೆಳಗೆ ಇರಿಸಿದನು. ಬಳಿಕ ಅವನು ಗದ್ದಿಗೇಕಲ್ಲುಗಳ ಮೇಲೆ ಚೌಕಟ್ಟುಗಳನ್ನು ಇರಿಸಿದನು. ಬಳಿಕ ಅವನು ಅಗುಳಿಗಳನ್ನಿರಿಸಿ ಕಂಬಗಳನ್ನು ನಿಲ್ಲಿಸಿದನು.
ನಂತರ, ಮೋಶೆಯು ಪವಿತ್ರಗುಡಾರದ ಮೇಲೆ ಹೊರಗಣ ಡೇರೆಯನ್ನು ಹಾಕಿಸಿದನು. ಬಳಿಕ ಅವನು ಹೊರಗಿನ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಈ ಕಾರ್ಯಗಳನ್ನು ಮಾಡಿದನು.
ಮೋಶೆಯು ಒಡಂಬಡಿಕೆಯ ಆಜ್ಞಾಶಾಸನಗಳನ್ನು ತೆಗೆದುಕೊಂಡು ಪವಿತ್ರ ಪೆಟ್ಟಿಗೆಯಲ್ಲಿಟ್ಟನು. ಮೋಶೆಯು ಪೆಟ್ಟಿಗೆಯ ಎರಡು ಕಡೆಗಳಲ್ಲಿ ಕೋಲುಗಳನ್ನು ಇರಿಸಿದನು. ಬಳಿಕ ಅವನು ಪೆಟ್ಟಿಗೆಯ ಮೇಲೆ ಕೃಪಾಸನವನ್ನು ಇಟ್ಟನು.
ಬಳಿಕ ಮೋಶೆಯು ಪವಿತ್ರಪೆಟ್ಟಿಗೆಯನ್ನು ಪವಿತ್ರಗುಡಾರದೊಳಗೆ ತಂದನು. ಅದನ್ನು ಸಂರಕ್ಷಿಸುವುದಕ್ಕಾಗಿ ಸರಿಯಾದ ಸ್ಥಳದಲ್ಲಿ ಪರದೆಯನ್ನು ಹಾಕಿದನು. ಹೀಗೆ ಒಡಂಬಡಿಕೆ ಪೆಟ್ಟಿಗೆಯನ್ನು ಪರದೆಯ ಹಿಂಭಾಗದಲ್ಲಿರಿಸಿ ಸಂರಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇದನ್ನು ಮಾಡಿದನು.
ಪವಿತ್ರಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಯಜ್ಞವೇದಿಕೆಯನ್ನು ಇರಿಸಿದನು. ಅವನು ಯೆಹೋವನಿಗಾಗಿ ಆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.
ಅವರು ದೇವದರ್ಶನಗುಡಾರವನ್ನು ಪ್ರವೇಶಿಸುವಾಗಲೆಲ್ಲಾ ಮತ್ತು ಯಜ್ಞವೇದಿಕೆಯ ಸಮೀಪ ಹೋಗುವಾಗಲೆಲ್ಲಾ ತಮ್ಮನ್ನು ತೊಳೆದುಕೊಳ್ಳುತ್ತಿದ್ದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡಿದರು.
ತರುವಾಯ ಮೋಶೆಯು ಪವಿತ್ರಗುಡಾರದ ಅಂಗಳದ ಸುತ್ತಲೂ ಪರದೆಗಳನ್ನು ನಿಲ್ಲಿಸಿದನು. ಮೋಶೆಯು ವೇದಿಕೆಯನ್ನು ಅಂಗಳದಲ್ಲಿರಿಸಿದನು. ಬಳಿಕ ಅವನು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿಸಿದನು. ಹೀಗೆ ಮೋಶೆ ಯೆಹೋವನು ತನಗೆ ಕೊಟ್ಟ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದನು.
ಹೀಗೆ ಯೆಹೋವನ ಮೋಡವು ಹಗಲಿನಲ್ಲಿ ಪವಿತ್ರಗುಡಾರದ ಮೇಲೆ ನಿಂತಿತು. ರಾತ್ರಿಯಲ್ಲಿ ಮೋಡದಲ್ಲಿ ಅಗ್ನಿಯು ಪ್ರಕಾಶಿಸುತ್ತಿತ್ತು. ಆದ್ದರಿಂದ ಇಸ್ರೇಲ್ ಜನರೆಲ್ಲರೂ ತಾವು ಪ್ರಯಾಣ ಮಾಡುವಾಗ, ಮೋಡವನ್ನು ನೋಡಬಹುದಾಗಿತ್ತು.