ಯಾಜಕರು ಯೆಹೋವನ ಪವಿತ್ರಸ್ಥಳದಲ್ಲಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ವಿಶೇಷ ಬಟ್ಟೆಗಳನ್ನು ಮಾಡುವುದಕ್ಕೆ ಕೆಲಸಗಾರರು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿದರು.
(ಅವರು ಚಿನ್ನವನ್ನು ಸುತ್ತಿಗೆಯಿಂದ ಹೊಡೆದು ತೆಳುವಾದ ತಗಡುಗಳನ್ನು ಮಾಡಿದರು. ಬಳಿಕ ಅವರು ಅದನ್ನು ಕತ್ತರಿಸಿ ಉದ್ದವಾದ ದಾರಗಳನ್ನಾಗಿ ಮಾಡಿದರು. ಅವರು ಚಿನ್ನವನ್ನು ನೀಲಿ, ನೇರಳೆ, ಕೆಂಪುದಾರಗಳಿಗೂ ಮತ್ತು ಶ್ರೇಷ್ಠ ನಾರುಬಟ್ಟೆಗೂ ಹೆಣೆದರು. ಇದು ಬಹಳ ನಿಪುಣನಾದ ಕೆಲಸಗಾರನು ಮಾಡಿದ ಕೆಲಸವಾಗಿತ್ತು.)
ಅವರು ನಡುಕಟ್ಟನ್ನು ಹೆಣೆದು ಏಫೋದಿಗೆ ಬಿಗಿಯಾಗಿ ಕಟ್ಟಿದರು. ಏಫೋದನ್ನು ಮಾಡಿದಂತೆಯೇ ಇದನ್ನು ಮಾಡಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡುವುದಕ್ಕೆ ಚಿನ್ನದ ದಾರ, ಶ್ರೇಷ್ಠ ನಾರುಬಟ್ಟೆಯನ್ನು ಮತ್ತು ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು.
ಬಳಿಕ ಅವರು ಈ ರತ್ನಗಳನ್ನು ಏಫೋದಿನ ಭುಜದ ಪಟ್ಟಿಯಲ್ಲಿ ಇಟ್ಟರು. ಇಸ್ರೇಲರನ್ನು ದೇವರ ಜ್ಞಾಪಕಕ್ಕೆ ತರುವಂತೆ ಈ ರತ್ನಗಳು ಇಡಲ್ಪಟ್ಟವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಯಿತು.
ಬಳಿಕ ಅವರು ದೈವನಿರ್ಣಯ ಪದಕವನ್ನು ಮಾಡಿದರು. ಏಫೋದಿನಂತೆಯೇ ಇದು ಸಹ ಬುಟೇದಾರೀ ಕೆಲಸವಾಗಿತ್ತು. ಅದನ್ನು ಚಿನ್ನದ ದಾರಗಳಿಂದಲೂ ಶ್ರೇಷ್ಠವಾದ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಲಾಯಿತು.
ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿದ್ದವು. ಪ್ರತಿ ರತ್ನದಲ್ಲಿಯೂ ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬನ ಹೆಸರು ಬರೆಯಲ್ಪಟ್ಟಿತ್ತು. ಮುದ್ರಾರತ್ನವನ್ನು ಕೆತ್ತುವಂತೆ ಕಲ್ಲಿನಲ್ಲಿ ಹೆಸರುಗಳನ್ನು ಕೆತ್ತಿದರು.
ಬಳಿಕ ಅವರು ಇನ್ನೆರಡು ಚಿನ್ನದ ಉಂಗುರಗಳನ್ನು ಮಾಡಿ, ದೈವನಿರ್ಣಯ ಪದಕದ ಇನ್ನೆರಡು ಕೊನೆಗಳಿಗೆ ಸಿಕ್ಕಿಸಿದರು. ಅವರು ಉಂಗುರಗಳನ್ನು ಏಫೋದಿನ ಹತ್ತಿರವಿರುವ ದೈವನಿರ್ಣಯ ಪದಕದ ಒಳಗಿನ ಅಂಚಿನಲ್ಲಿ ಇರಿಸಿದರು.
ಬಳಿಕ ಅವರು ನೀಲಿದಾರದಿಂದ ದೈವನಿರ್ಣಯ ಪದಕದ ಉಂಗುರಗಳನ್ನು ಏಫೋದಿನ ಉಂಗುರಗಳಿಗೆ ಕಟ್ಟಿದರು. ಈ ರೀತಿಯಾಗಿ ದೈವನಿರ್ಣಯ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಅವರು ಎಲ್ಲವನ್ನೂ ಮಾಡಿದರು.
ತರುವಾಯ ಅವರು ಬಟ್ಟೆಗೆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ಮಾಡಲು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಅವರು ಈ ದಾಳಿಂಬೆ ಹಣ್ಣಿನಂತಿರುವ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ತೂಗುಹಾಕಿದರು.
ಹೀಗೆ ನಿಲುವಂಗಿಯ ಕೆಳಅಂಚಿನ ಸುತ್ತಲೆಲ್ಲ ದಾಳಿಂಬೆ ಹಣ್ಣುಗಳೂ ಗೆಜ್ಜೆಗಳೂ ಇದ್ದವು. ಪ್ರತಿ ದಾಳಿಂಬೆ ಹಣ್ಣಿನ ನಡುವೆ ಒಂದೊಂದು ಗೆಜ್ಜೆ ಇತ್ತು. ಯಾಜಕರು ಯೆಹೋವನ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ನಿಲುವಂಗಿ ಇದಾಗಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಲಾಗಿತ್ತು.
ಬಳಿಕ ಅವರು ಶ್ರೇಷ್ಠವಾದ ನಾರುಬಟ್ಟೆಯಿಂದಲೂ ಮತ್ತು ನೀಲಿ, ನೇರಳೆ, ಕೆಂಪುದಾರಗಳಿಂದಲೂ ನಡುಕಟ್ಟನ್ನು ಮಾಡಿದರು. ಈ ಬಟ್ಟೆಗೆ ಕಸೂತಿ ಹಾಕಲಾಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಈ ವಸ್ತುಗಳನ್ನು ಮಾಡಲಾಯಿತು.
ಬಳಿಕ ಅವರು ಪವಿತ್ರಗುಡಾರವನ್ನು ಮೋಶೆಗೆ ತೋರಿಸಿದರು. ಅವರು ಗುಡಾರವನ್ನೂ ಅದರಲ್ಲಿರುವ ವಸ್ತುಗಳನ್ನೆಲ್ಲಾ ಅವನಿಗೆ ತೋರಿಸಿದರು. ಬಳೆಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳನ್ನೆಲ್ಲಾ ಅವನಿಗೆ ತೋರಿಸಿದರು.
ಅವರು ಕೆಂಪುಬಣ್ಣದ ಕುರಿತೊಗಲಿನಿಂದ ಮಾಡಿದ ಗುಡಾರದ ಮೇಲ್ಹೊದಿಕೆಯನ್ನು ಅವನಿಗೆ ತೋರಿಸಿದರು; ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನೂ ಅವನಿಗೆ ತೋರಿಸಿದರು. ಮಹಾಪವಿತ್ರಸ್ಥಳವನ್ನು ಮುಚ್ಚುವ ಪರದೆಯನ್ನೂ ಅವನಿಗೆ ತೋರಿಸಿದರು.
ಅವರು ಅವನಿಗೆ ತಾಮ್ರದ ವೇದಿಕೆಯನ್ನೂ ತಾಮ್ರದ ಜಾಳಿಗೆಯನ್ನೂ ವೇದಿಕೆಯನ್ನು ಹೊರುವುದಕ್ಕೆ ಉಪಯೋಗಿಸುವ ಕೋಲುಗಳನ್ನೂ ವೇದಿಕೆಯ ಎಲ್ಲಾ ಉಪರಕಣಗಳನ್ನೂ ಗಂಗಾಳವನ್ನೂ ಮತ್ತು ಅದರ ಕೆಳಗಿರುವ ಗದ್ದಿಗೇಕಲ್ಲನ್ನೂ ಮೋಶೆಗೆ ತೋರಿಸಿದರು.
ತರುವಾಯ ಮೋಶೆಗೆ ಪವಿತ್ರಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಯಾಜಕರಿಗಾಗಿ ಮಾಡಿದ ಬಟ್ಟೆಗಳನ್ನು ಅಂದರೆ ಯಾಜಕನಾದ ಆರೋನನಿಗೆ ಮತ್ತು ಅವನ ಮಕ್ಕಳಿಗಾಗಿ ಮಾಡಿದ ವಿಶೇಷ ಬಟ್ಟೆಗಳನ್ನು ಅವರು ತೋರಿಸಿದರು. ಅವರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಬಟ್ಟೆಗಳು ಇವುಗಳೇ.