English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Exodus Chapters

Exodus 34 Verses

1 ತರುವಾಯ ಯೆಹೋವನು ಮೋಶೆಗೆ, “ಒಡೆದುಹೋದ ಮೊದಲಿನ ಎರಡು ಕಲ್ಲಿನ ಹಲಿಗೆಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡು. ಮೊದಲಿನ ಕಲ್ಲುಗಳಲ್ಲಿ ಬರೆದಿದ್ದ ಮಾತುಗಳನ್ನೇ ನಾನು ಈ ಕಲ್ಲುಗಳ ಮೇಲೆ ಬರೆಯುವೆನು.
2 ನಾಳೆ ಮುಂಜಾನೆ ಸೀನಾಯಿ ಬೆಟ್ಟಕ್ಕೇರಿ ಬಾ. ಬೆಟ್ಟದ ಮೇಲೆ ನನ್ನೆದುರಿನಲ್ಲಿ ನಿಂತುಕೊ.
3 ನಿನ್ನೊಂದಿಗೆ ಯಾರೂ ಬರಕೂಡದು. ಬೆಟ್ಟದ ಯಾವ ಸ್ಥಳದಲ್ಲಿಯೂ ಯಾರೂ ಕಾಣಿಸಬಾರದು. ನಿಮ್ಮ ಪಶುಗಳಾಗಲಿ ಕುರಿಮಂದೆಗಳಾಗಲಿ ಬೆಟ್ಟದ ಬುಡದಲ್ಲಿ ಹುಲ್ಲು ಮೇಯಕೂಡದು” ಎಂದು ಹೇಳಿದನು.
4 ಆದ್ದರಿಂದ ಮೋಶೆ ಮೊದಲಿನ ಎರಡು ಕಲ್ಲುಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡಿದನು. ಬಳಿಕ ಮರುದಿನ ಮುಂಜಾನೆ ಬೇಗನೆ ಸೀನಾಯಿ ಬೆಟ್ಟವನ್ನೇರಿದನು. ಯೆಹೋವನು ಆಜ್ಞಾಪಿಸಿದಂತೆ ಮೋಶೆಯು ಪ್ರತಿಯೊಂದನ್ನು ಮಾಡಿದನು. ಮೋಶೆಯು ಎರಡು ಕಲ್ಲಿನ ಹಲಿಗೆಗಳನ್ನು ಹಿಡಿದುಕೊಂಡು ಹೋದನು.
5 ಮೋಶೆಯು ಬೆಟ್ಟವನ್ನೇರಿ ಹೋದನಂತರ ಯೆಹೋವನು ಮೇಘದಲ್ಲಿ ಅವನ ಬಳಿಗೆ ಇಳಿದು ಬಂದನು. ಯೆಹೋವನು ಮೋಶೆಯೊಡನೆ ಅಲ್ಲಿ ನಿಂತನು ಮತ್ತು ಮೋಶೆಯು ಯೆಹೋವನ ಹೆಸರನ್ನು ಕರೆದನು. [*ಯೆಹೋವನು … ಕರೆದನು ಮೋಶೆ ಯೆಹೋವನನ್ನು ಆರಾಧಿಸಿದನು ಎಂದಾಗಲಿ ಯೆಹೋವನು ತನ್ನ ಹೆಸರನ್ನು ಮೋಶೆಗೆ ಪ್ರಕಟಿಸಿಕೊಂಡನು ಎಂದಾಗಲಿ ಇದು ಅರ್ಥಕೊಡಬಲ್ಲದು.]
6 ಯೆಹೋವನು ಮೋಶೆಯ ಮುಂದೆ ಹಾದುಹೋಗುತ್ತಾ, “ದೇವರಾದ ಯೆಹೋವನು ದಯೆಯೂ ಕನಿಕರವೂ ಉಳ್ಳ ದೇವರಾಗಿದ್ದಾನೆ. ಯೆಹೋವನು ಕೋಪಗೊಳ್ಳುವುದರಲ್ಲಿ ನಿಧಾನವಾಗಿದ್ದಾನೆ. ಯೆಹೋವನು ಮಹಾ ಪ್ರೀತಿಸ್ವರೂಪನಾಗಿದ್ದಾನೆ. ಯೆಹೋವನು ಭರವಸೆಗೆ ಯೋಗ್ಯನಾಗಿದ್ದಾನೆ.
7 ಯೆಹೋವನು ಸಾವಿರಾರು ತಲೆಗಳವರೆಗೆ ತನ್ನ ದಯೆ ತೋರಿಸುತ್ತಾನೆ. ಜನರು ಮಾಡುವ ಪಾಪಗಳನ್ನು ಯೆಹೋವನು ಕ್ಷಮಿಸುತ್ತಾನೆ. ಆದರೆ ಅಪರಾಧಿಗಳನ್ನು ಶಿಕ್ಷಿಸುವುದಕ್ಕೆ ಆತನು ಮರೆಯುವುದಿಲ್ಲ. ಯೆಹೋವನು ಅಪರಾಧಿಗಳನ್ನು ಶಿಕ್ಷಿಸುವನು ಮತ್ತು ಅವರ ಅಪರಾಧದ ಫಲವು ಅವರ ಮಕ್ಕಳ ಮೇಲೂ ಮೊಮ್ಮಕ್ಕಳ ಮೇಲೂ ಮತ್ತು ಮರಿಮೊಮ್ಮಕ್ಕಳ ಮೇಲೂ ಬರುವಂತೆ ಮಾಡುವನು” ಎಂದು ಹೇಳಿದನು.
8 ಕೂಡಲೆ ಮೋಶೆಯು ನೆಲದ ಮೇಲೆ ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದನು.
9 ಮೋಶೆಯು, “ಯೆಹೋವನೇ, ನಿನ್ನ ದಯೆ ನನಗೆ ದೊರಕುವುದಾದರೆ, ದಯವಿಟ್ಟು ನಮ್ಮೊಂದಿಗೆ ಬಾ. ಇವರು ಅವಿಧೇಯರಾದ ಜನರೆಂದು ನಾನು ಬಲ್ಲೆನು. ಆದರೆ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ನಿನ್ನ ಜನರನ್ನಾಗಿ ಸ್ಪೀಕರಿಸು” ಎಂದು ಬೇಡಿಕೊಂಡನು.
10 ಆಗ ಯೆಹೋವನು, “ನಾನು ನಿಮ್ಮೊಂದಿಗೆ ಈ ಒಡಂಬಡಿಕೆಯನ್ನು ಮಾಡುತ್ತಿದ್ದೇನೆ. ಭೂಲೋಕದಲ್ಲಿ ಎಲ್ಲಿಯೇ ಆಗಲಿ ಯಾವ ಜನಾಂಗದಲ್ಲಿಯೇ ಆಗಲಿ ಹಿಂದೆಂದೂ ನಡೆಯದಂತ ಮಹತ್ಕಾರ್ಯಗಳನ್ನು ಮಾಡುವೆನು. ಎಲ್ಲಾ ಜನರು ಮತ್ತು ನಿನ್ನೊಂದಿಗಿರುವ ಜನರು ಇವುಗಳನ್ನು ನೋಡಿ ಯೆಹೋವನಾದ ನಾನೇ ಮಹಾ ಮಹಿಮಸ್ವರೂಪನೆಂದು ತಿಳಿದುಕೊಳ್ಳುವರು.
11 ನಾನು ಈ ದಿನ ಕೊಡುವ ಆಜ್ಞೆಗಳಿಗೆ ವಿಧೇಯರಾಗಿರಿ. ನಿಮ್ಮ ವೈರಿಗಳಾದ ಅಮೋರಿಯರನ್ನು, ಕಾನಾನ್ಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಹೊರಗಟ್ಟುವೆನು.
12 ಎಚ್ಚರಿಕೆಯಾಗಿರಿ! ನೀವು ಹೋಗುತ್ತಿರುವ ದೇಶದಲ್ಲಿರುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ನೀವು ಆ ಜನರೊಂದಿಗೆ ಒಪ್ಪಂದ ಮಾಡಿಕೊಂಡರೆ, ಅದು ನಿಮಗೆ ಕೇಡನ್ನು ಬರಮಾಡುವುದು.
13 ಅವರ ವೇದಿಕೆಗಳನ್ನು ನಾಶಮಾಡಿರಿ. ಅವರು ಪೂಜಿಸುವ ಕಲ್ಲುಗಳನ್ನು ಒಡೆದು ಹಾಕಿರಿ. ಅವರ ವಿಗ್ರಹಗಳನ್ನು ಕಡಿದು ಹಾಕಿರಿ.
14 ಬೇರೆ ಯಾವ ದೇವರನ್ನೂ ಪೂಜಿಸಬೇಡಿರಿ. ನಾನೇ ಯೆಹೋವನು. ‘ಸ್ವಗೌರವವನ್ನು ಕಾಪಾಡಿಕೊಳ್ಳುವವನು’ ಎಂಬುದೇ ನನ್ನ ಹೆಸರು.
15 “ಎಚ್ಚರಿಕೆಯಾಗಿರಿ, ಆ ದೇಶದಲ್ಲಿ ವಾಸಿಸುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ನೀವು ಅವರೊಂದಿಗೆ ಸೇರಿಕೊಳ್ಳುವಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸುವರು; ಅವರ ಯಜ್ಞಾರ್ಪಣೆಗಳನ್ನು ತಿನ್ನುವಿರಿ.
16 ನೀವು ಅವರ ಪುತ್ರಿಯರಲ್ಲಿ ಕೆಲವರನ್ನು ನಿಮ್ಮ ಪುತ್ರರಿಗೆ ಹೆಂಡತಿಯರಾಗುವುದಕ್ಕೆ ಆರಿಸಿಕೊಳ್ಳುವಿರಿ. ಅವರ ಪುತ್ರಿಯರು ಸುಳ್ಳುದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪುತ್ರರನ್ನೂ ಅವರು ಅದೇ ಸೇವೆಗೆ ನಡೆಸುತ್ತಾರೆ.
17 “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ.
18 “ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಿರಿ. ನಾನು ನಿಮಗೆ ಮೊದಲು ಆಜ್ಞಾಪಿಸಿದಂತೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಿರಿ. ನಾನು ಆರಿಸಿಕೊಂಡ ಅಬೀಬ್ ಮಾಸದಲ್ಲಿ ಇದನ್ನು ಮಾಡಿರಿ. ಯಾಕೆಂದರೆ ಆ ತಿಂಗಳಲ್ಲಿ ನೀವು ಈಜಿಪ್ಟಿನಿಂದ ಬಿಡುಗಡೆ ಹೊಂದಿದಿರಿ.
19 “ಸ್ತ್ರೀಯಲ್ಲಿ ಹುಟ್ಟಿದ ಮೊದಲಿನ ಮಗು ಯಾವಾಗಲೂ ನನಗೆ ಸೇರಿದ್ದು. ನಿಮ್ಮ ದನಕುರಿಗಳಲ್ಲಿ ಹುಟ್ಟಿದ ಮೊದಲ ಮರಿಗಳು ನನಗೆ ಸೇರಿದವುಗಳಾಗಿವೆ.
20 ಚೊಚ್ಚಲಾಗಿ ಹುಟ್ಟಿದ ಕತ್ತೆಯನ್ನು ನೀವು ಇಟ್ಟುಕೊಳ್ಳಲು ಬಯಸಿದರೆ, ಆಗ ನೀವು ಕುರಿಮರಿಯನ್ನು ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಆದರೆ ನೀವು ಅದನ್ನು ಕೊಂಡುಕೊಳ್ಳದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಂದುಬಿಡಬೇಕು. ನೀವು ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನನ್ನಿಂದ ಕೊಂಡುಕೊಳ್ಳಬೇಕು. ಯಾವ ವ್ಯಕ್ತಿಯೂ ಕಾಣಿಕೆಯಿಲ್ಲದೆ, ನನ್ನ ಸನ್ನಿಧಿಗೆ ಬರಕೂಡದು.
21 “ನೀವು ವಾರದಲ್ಲಿ ಆರುದಿನ ಕೆಲಸ ಮಾಡುವಿರಿ. ಆದರೆ ಏಳನೆಯ ದಿನದಲ್ಲಿ ನೀವು ವಿಶ್ರಮಿಸಿಕೊಳ್ಳಬೇಕು. ನೀವು ಬಿತ್ತುವ ಮತ್ತು ಕೊಯ್ಯುವ ಸಮಯದಲ್ಲಿಯೂ ವಿಶ್ರಮಿಸಿಕೊಳ್ಳಬೇಕು.
22 “ವಾರಗಳ ಹಬ್ಬವನ್ನು ಆಚರಿಸಿರಿ. ಈ ಹಬ್ಬಕ್ಕಾಗಿ ಗೋಧಿಬೆಳೆಯ ಪ್ರಥಮ ಕಾಳನ್ನು ಉಪಯೋಗಿಸಿರಿ ಮತ್ತು ವರ್ಷಾಂತ್ಯದಲ್ಲಿ ಸುಗ್ಗಿಹಬ್ಬವನ್ನು ಆಚರಿಸಿರಿ.
23 “ವರ್ಷದಲ್ಲಿ ಮೂರುಸಲ ನಿಮ್ಮಲ್ಲಿರುವ ಗಂಡಸರೆಲ್ಲರೂ, ಇಸ್ರೇಲರ ದೇವರಾಗಿರುವ ಒಡೆಯನಾದ ಯೆಹೋವನ ಸನ್ನಿಧಿಯಲ್ಲಿ ಸೇರಬೇಕು.
24 “ನೀವು ದೇಶದೊಳಕ್ಕೆ ಹೋದಾಗ, ನಾನು ನಿಮ್ಮ ವೈರಿಗಳನ್ನು ಆ ದೇಶದಿಂದ ಹೊರಗಟ್ಟುವೆನು. ನಾನು ನಿಮ್ಮ ಮೇರೆಗಳನ್ನು ವಿಸ್ತರಿಸುವೆನು. ನಿಮಗೆ ಹೆಚ್ಚೆಚ್ಚಾಗಿ ಭೂಮಿ ದೊರೆಯುವುದು. ಪ್ರತಿ ವರ್ಷ ಮೂರುಸಲ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಿರಿ. ಆ ಸಮಯದಲ್ಲಿ ಯಾರೂ ನಿಮ್ಮಿಂದ ಭೂಮಿಯನ್ನು ಅಪಹರಿಸಲು ಪ್ರಯತ್ನಿಸುವುದಿಲ್ಲ.
25 “ನೀವು ಯಜ್ಞಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಬಾರದು; “ಪಸ್ಕ ಭೋಜನದ ಮಾಂಸದಲ್ಲಿ ಏನನ್ನೂ ಮರುದಿನದ ಮುಂಜಾನೆಯವರೆಗೆ ಉಳಿಸಬಾರದು.
26 “ನೀವು ಕೊಯ್ಯುವ ಪ್ರಥಮವಾದ ಬೆಳೆಗಳನ್ನು ಯೆಹೋವನಿಗೆ ಕೊಡಿರಿ. ಅವುಗಳನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ತನ್ನಿರಿ. “ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಎಂದಿಗೂ ಬೇಯಿಸಬಾರದು.”
27 ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಹೇಳಿದ ಸಂಗತಿಗಳನ್ನೆಲ್ಲಾ ಬರೆ. ಆ ಸಂಗತಿಗಳು ನಾನು ನಿನ್ನೊಂದಿಗೆ ಮತ್ತು ಇಸ್ರೇಲರೊಂದಿಗೆ ಮಾಡಿದ ಒಡಂಬಡಿಕೆಯಾಗಿದೆ” ಎಂದು ಹೇಳಿದನು.
28 ಮೋಶೆಯು ಅಲ್ಲಿ ಯೆಹೋವನೊಂದಿಗೆ ಹಗಲಿರುಳು ನಲವತ್ತು ದಿನಗಳಿದ್ದನು. ಆ ದಿನಗಳಲ್ಲಿ ಅವನು ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸಲಿಲ್ಲ. ಮೋಶೆಯು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ದಶಾಜ್ಞೆಗಳನ್ನು ಎರಡು ಕಲ್ಲಿನ ಹಲಿಗೆಗಳ ಮೇಲೆ ಬರೆದನು.
29 ತರುವಾಯ ಮೋಶೆಯು ಸೀನಾಯಿ ಬೆಟ್ಟದಿಂದ ಇಳಿದು ಬಂದನು. ಒಡಂಬಡಿಕೆಯ ವಾಕ್ಯಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಅವನು ಹಿಡಿದುಕೊಂಡಿದ್ದನು. ಯೆಹೋವನು ಅವನೊಡನೆ ಮಾತಾಡಿದ್ದರಿಂದ ಅವನ ಮುಖವು ಹೊಳೆಯುತ್ತಿತ್ತು. ಆದರೆ ಮೋಶೆಗೆ ಇದು ತಿಳಿದಿರಲಿಲ್ಲ.
30 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿರುವುದನ್ನು ಆರೋನನೂ ಇಸ್ರೇಲರೆಲ್ಲರೂ ನೋಡಿದರು. ಆದ್ದರಿಂದ ಅವನ ಬಳಿಗೆ ಹೋಗಲು ಅವರು ಭಯಪಟ್ಟರು.
31 ಆದರೆ ಮೋಶೆ ಅವರನ್ನು ಕರೆದನು. ಆದ್ದರಿಂದ ಆರೋನನೂ ಜನನಾಯಕರೆಲ್ಲರೂ ಮೋಶೆಯ ಬಳಿಗೆ ಹೋದರು. ಮೋಶೆಯು ಅವರೊಡನೆ ಮಾತಾಡಿದನು.
32 ಅದಾದನಂತರ, ಇಸ್ರೇಲರೆಲ್ಲರೂ ಮೋಶೆಯ ಬಳಿಗೆ ಬಂದರು. ಯೆಹೋವನು ಸೀನಾಯಿ ಬೆಟ್ಟದಲ್ಲಿ ತನಗೆ ಕೊಟ್ಟ ಆಜ್ಞೆಗಳನ್ನು ಮೋಶೆಯು ಅವರಿಗೆ ಕೊಟ್ಟನು.
33 ಮೋಶೆಯು ಜನರೊಡನೆ ಮಾತಾಡಿ ಮುಗಿಸಿದಾಗ, ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಂಡನು.
34 ಮೋಶೆಯು ಯೆಹೋವನೊಡನೆ ಮಾತಾಡಲು ಆತನ ಸನ್ನಿಧಿಗೆ ಹೋದಾಗಲೆಲ್ಲಾ ಮೋಶೆಯು ಮುಸುಕನ್ನು ತೆಗೆದಿಡುತ್ತಿದ್ದನು. ಬಳಿಕ ಮೋಶೆ ಹೊರಗೆ ಬಂದು ಯೆಹೋವನು ಆಜ್ಞಾಪಿಸಿದ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸುತ್ತಿದ್ದನು.
35 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿದ್ದುದನ್ನು ಜನರು ನೋಡಿದರು. ಆದ್ದರಿಂದ ಮೋಶೆಯು ಮುಂದಿನ ಸಾರಿ ಯೆಹೋವನೊಡನೆ ಮಾತಾಡಲು ಹೋಗುವವರೆಗೆ ತನ್ನ ಮುಖಕ್ಕೆ ಮುಸುಕು ಹಾಕಿಕೊಂಡಿರುವನು.
×

Alert

×