ಮೋಶೆಯು ಯೆಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯೆಹೋವನ ಆಜ್ಞೆಗಳಿಗೆಲ್ಲಾ ನಾವು ವಿಧೇಯರಾಗುವೆವು” ಎಂದು ಒಂದೇ ಸ್ವರದಿಂದ ಹೇಳಿದರು.
ಆದ್ದರಿಂದ ಮೋಶೆ ಯೆಹೋವನ ಆಜ್ಞೆಗಳನ್ನೆಲ್ಲಾ ಒಂದು ಸುರುಳಿಯಲ್ಲಿ ಬರೆದನು. ಮರುದಿನ ಮುಂಜಾನೆ, ಅವನು ಬೇಗನೆ ಎದ್ದು ಬೆಟ್ಟದ ಕೆಳಭಾಗದ ಹತ್ತಿರ, ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು.
ವಿಶೇಷ ಒಡಂಬಡಿಕೆಯಿಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶೆಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯೆಹೋವನ ಆಜ್ಞೆಗಳನ್ನೆಲ್ಲ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.
ಆಗ ಮೋಶೆ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚಿಮಿಕಿಸಿ, “ಈ ಸುರುಳಿಯಲ್ಲಿರುವ ವಾಕ್ಯಗಳಿಗನುಸಾರವಾಗಿ ಯೆಹೋವನು ನಿಮ್ಮೊಡನೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತವು ಸೂಚಿಸುತ್ತದೆ” ಎಂದು ಹೇಳಿದನು.
ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಬಳಿಯಲ್ಲಿರು. ನಾನು ನನ್ನ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದೇನೆ. ಈ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ನೀನು ಜನರಿಗೆ ಬೋಧಿಸಬೇಕು. ನಾನು ಈ ಕಲ್ಲಿನ ಹಲಗೆಗಳನ್ನು ನಿನಗೆ ಕೊಡುವೆನು” ಎಂದು ಹೇಳಿದನು.
ಮೋಶೆಯು ಹಿರಿಯರಿಗೆ, “ನಾವು ನಿಮ್ಮ ಬಳಿಗೆ ಹಿಂತಿರುಗಿ ಬರುವ ತನಕ ನೀವು ಇಲ್ಲಿ ಕಾದುಕೊಂಡಿರಿ. ಆರೋನನು ಮತ್ತು ಹೂರನು ನಿಮ್ಮ ಬಳಿಯಿದ್ದಾರೆ; ನಿಮ್ಮಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರ ಬಳಿಗೆ ಹೋಗಲಿ” ಎಂದು ಹೇಳಿದನು.