ಈ ಆಜ್ಞೆಯು ಇಡೀ ಇಸ್ರೇಲರ ಸಮೂಹಕ್ಕೆ ಅನ್ವಯಿಸುತ್ತದೆ. ಈ ತಿಂಗಳ ಹತ್ತನೆಯ ದಿನದಲ್ಲಿ ಪ್ರತಿಯೊಬ್ಬನು ತನ್ನ ಮನೆಯಲ್ಲಿರುವ ಜನರಿಗಾಗಿ ಒಂದು ಕುರಿಮರಿಯನ್ನು ಅಥವಾ ಒಂದು ಆಡುಮರಿಯನ್ನು ಕೊಯ್ಯಬೇಕು.
ಅದನ್ನು ಸಂಪೂರ್ಣವಾಗಿ ತಿನ್ನಲು ಅವನ ಮನೆಯಲ್ಲಿ ಸಾಕಷ್ಟು ಜನರಿಲ್ಲದಿದ್ದರೆ ಅವನು ತನ್ನ ನೆರೆಯವರನ್ನು ಆಮಂತ್ರಿಸಿ ಅವರೊಂದಿಗೆ ಅದರ ಮಾಂಸವನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಬನಿಗೂ ತಿನ್ನಲು ಸಾಕಷ್ಟು ಮಾಂಸವಿರಬೇಕು.
ನೀವು ಆ ಪಶುವಿನ ಮಾಂಸವನ್ನು ಹಸಿಯಾಗಲಿ ನೀರಿನಲ್ಲಿ ಬೇಯಿಸಿಯಾಗಲಿ ತಿನ್ನಬಾರದು; ಅದರ ಮಾಂಸವನ್ನು ಬೆಂಕಿಯ ಮೇಲಿಟ್ಟು ಬೇಯಿಸಬೇಕು. ಅದರ ತಲೆ, ಕಾಲುಗಳನ್ನೂ ಒಳಗಿನ ಭಾಗಗಳನ್ನೂ ಬೆಂಕಿಯ ಮೇಲೆ ಬೇಯಿಸಬೇಕು.
“ನೀವು ಭೋಜನ ಮಾಡುವಾಗ ಪ್ರಯಾಣ ಮಾಡುತ್ತಿರುವಂತೆ ಬಟ್ಟೆ ಧರಿಸಿಕೊಂಡಿರಬೇಕು; ಕೆರಗಳನ್ನು ಹಾಕಿಕೊಂಡು ನಿಮ್ಮ ಊರುಗೋಲನ್ನು ಕೈಯಲ್ಲಿ ಹಿಡಿದಿರಬೇಕು. ನೀವು ಅವಸವಸರವಾಗಿ ತಿನ್ನಬೇಕು. ಯಾಕೆಂದರೆ ಇದು ಯೆಹೋವನ ಪಸ್ಕಹಬ್ಬ.
“ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲುವೆನು; ಈಜಿಪ್ಟಿನ ಎಲ್ಲಾ ದೇವರುಗಳಿಗೆ ತೀರ್ಪು ಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಡುವೆನು.
ಆದರೆ ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು. [*ದಾಟಿಹೋಗುವೆನು ಅಥವಾ “ಸಂರಕ್ಷಿಸುವೆನು.” ] ಈಜಿಪ್ಟಿನ ಜನರಿಗೆ ಕೇಡುಗಳಾಗುವಂತೆ ಮಾಡುವೆನು. ಆದರೆ ಆ ವ್ಯಾಧಿಗಳು ನಿಮಗೆ ಹಾನಿ ಮಾಡುವುದಿಲ್ಲ.
“ಆದ್ದರಿಂದ ನೀವು ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವಿರಿ. ಅದು ನಿಮಗೆ ವಿಶೇಷವಾದ ಹಬ್ಬವಾಗಿರುವುದು. ನಿಮ್ಮ ಸಂತತಿಯವರು ಈ ಹಬ್ಬದಿಂದ ಯೆಹೋವನನ್ನು ಎಂದೆಂದಿಗೂ ಸನ್ಮಾನಿಸುವರು.
ಈ ಹಬ್ಬದಲ್ಲಿ ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನುವಿರಿ. ಹಬ್ಬದ ಪ್ರಥಮ ದಿನದಲ್ಲಿ ನೀವು ನಿಮ್ಮ ಮನೆಯಿಂದ ಎಲ್ಲಾ ಹುಳಿಯನ್ನು ತೆಗೆದುಹಾಕುವಿರಿ. ಈ ಹಬ್ಬದ ಏಳು ದಿನಗಳಲ್ಲಿ ಯಾವುದೇ ಹುಳಿಯನ್ನು ತಿನ್ನಬಾರದು. ಯಾವನಾದರೂ ಹುಳಿಯನ್ನು ತಿಂದರೆ, ನೀವು ಅವನನ್ನು ಇಸ್ರೇಲಿನಿಂದ ಬಹಿಷ್ಕರಿಸಬೇಕು.
ಈ ಹಬ್ಬದ ಪ್ರಥಮ ಮತ್ತು ಕೊನೆಯ ದಿನಗಳಲ್ಲಿ ಪವಿತ್ರ ಸಭೆಯಾಗಿ ಕೂಡಿಬರಬೇಕು. ಈ ಹಬ್ಬದ ದಿನಗಳಲ್ಲಿ ನೀವು ಯಾವ ಕೆಲಸವನ್ನೂ ಮಾಡಬಾರದು. ಆದರೆ ನಿಮ್ಮ ಭೋಜನಕ್ಕಾಗಿ ಆಹಾರ ಸಿದ್ಧಪಡಿಸಬಹುದು.
ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಲೇಬೇಕು. ಯಾಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಎಲ್ಲಾ ಜನರ ಗುಂಪುಗಳನ್ನು ಈಜಿಪ್ಟಿನಿಂದ ಬಿಡಿಸಿ ಕರೆದುಕೊಂಡು ಹೋದೆನು. ಆದ್ದರಿಂದ ನಿಮ್ಮ ಸಂತತಿಯವರೆಲ್ಲರೂ ಆ ದಿನವನ್ನು ಜ್ಞಾಪಕಮಾಡಿಕೊಳ್ಳಬೇಕು. ಇದು ಶಾಶ್ವತವಾದ ಕಟ್ಟಳೆಯಾಗಿದೆ.
ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಯಾವ ಹುಳಿಯೂ ಇರಬಾರದು. ಯಾವ ಇಸ್ರೇಲಿಯಾದರೂ ಯಾವ ವಿದೇಶಿಯನಾದರೂ ಈ ಹಬ್ಬದಲ್ಲಿ ಹುಳಿಯನ್ನು ತಿಂದರೆ, ಅವನನ್ನು ಇಸ್ರೇಲರ ಸಮುದಾಯದಿಂದ ಬಹಿಷ್ಕರಿಸಬೇಕು.
ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ರಕ್ತ ತುಂಬಿರುವ ಪಾತ್ರೆಯಲ್ಲಿ ಅದ್ದಿರಿ. ರಕ್ತವನ್ನು ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿರಿ. ಮುಂಜಾನೆಯಾಗುವವರೆಗೆ ಯಾರೂ ತಮ್ಮ ಮನೆಯನ್ನು ಬಿಟ್ಟು ಹೊರಗೆ ಹೋಗಬಾರದು.
ಆ ಸಮಯದಲ್ಲಿ ಚೊಚ್ಚಲಾದವುಗಳನ್ನು ಸಂಹರಿಸಲು ಯೆಹೋವನು ಈಜಿಪ್ಟಿನ ಮೂಲಕ ಹಾದುಹೋಗುವನು. ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿದ ರಕ್ತವನ್ನು ಯೆಹೋವನು ನೋಡಿ ಆ ಮನೆಯನ್ನು ಸಂರಕ್ಷಿಸುವನು. [†ಸಂರಕ್ಷಿಸುವನು ಅಥವಾ “ದಾಟಿಹೋಗುವನು.” ] ಸಂಹಾರಕನು ನಿಮ್ಮ ಮನೆಯೊಳಗೆ ಬಂದು ಸಂಹರಿಸಲು ಯೆಹೋವನು ಬಿಡುವುದಿಲ್ಲ.
‘ಇದು ಯೆಹೋವನನ್ನು ಸನ್ಮಾನಿಸಲು ಮಾಡುವ ಪಸ್ಕಹಬ್ಬವಾಗಿದೆ. ಯಾಕೆಂದರೆ ನಾವು ಈಜಿಪ್ಟಿನಲ್ಲಿದ್ದಾಗ ಯೆಹೋವನು ಇಸ್ರೇಲರ ಮನೆಗಳನ್ನು ಬಿಟ್ಟು ದಾಟಿಹೋದನು; ಈಜಿಪ್ಟಿನವರನ್ನು ಸಂಹರಿಸಿದನು; ಆದರೆ ಆತನು ನಮ್ಮ ಮನೆಗಳಲ್ಲಿದ್ದವರನ್ನು ರಕ್ಷಿಸಿದನು’ ಎಂದು ಹೇಳಬೇಕು. “ಆಗ ಮೋಶೆಯ ಮಾತನ್ನು ಕೇಳುತ್ತಿದ್ದ ಇಸ್ರೇಲರು ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದರು.”
ಇಸ್ರೇಲರು ರಮ್ಸೇಸ್‌ನಿಂದ ಸುಕ್ಕೋತಿಗೆ ಪ್ರಯಾಣ ಮಾಡಿದರು. ಅವರಲ್ಲಿ ಸುಮಾರು ಆರು ಲಕ್ಷಮಂದಿ [‡ಆರು ಲಕ್ಷ ಮಂದಿ ಅಥವಾ ಆರು ನೂರು ಕುಟುಂಬ ಗುಂಪುಗಳು. ಇಬ್ರಿಯ ಪದ ‘ಸಾವಿರ’ ಎಂಬುದು, ಕುಟುಂಬ ಗುಂಪುಗಳು ಎಂಬ ಅರ್ಥವನ್ನು ಕೊಡುವ ಇಬ್ರಿಯ ಪದಗಳಂತಿದೆ.] ಗಂಡಸರಿದ್ದರು. (ಈ ಸಂಖ್ಯೆಯಲ್ಲಿ ಮಕ್ಕಳು ಮತ್ತು ಹೆಂಗಸರು ಸೇರಿಲ್ಲ.)
ರೊಟ್ಟಿಗೆ ಹುಳಿಹಾಕುವಷ್ಟು ಸಮಯವೂ ಜನರಿಗೆ ಇರಲಿಲ್ಲ; ಅವರು ತಮ್ಮ ಪ್ರಯಾಣಕ್ಕಾಗಿ ವಿಶೇಷ ಆಹಾರವನ್ನು ತಯಾರಿಸುವುದಕ್ಕೂ ಆಗಲಿಲ್ಲ. ಆದ್ದರಿಂದ ಅವರು ಹುಳಿಯಿಲ್ಲದ ರೊಟ್ಟಿ ಮಾಡಿ ತಮ್ಮೊಡನೆ ತೆಗೆದುಕೊಂಡು ಹೋದರು.
ನಾನೂರಮೂವತ್ತು ವರ್ಷಗಳಾದ ನಂತರ, ಅದೇ ದಿನದಂದು ಯೆಹೋವನ ಸೈನ್ಯಗಳೆಲ್ಲಾ [§ಯೆಹೋವನ ಸೈನ್ಯಗಳು ಇಸ್ರೇಲ್ ಜನರು.] ಈಜಿಪ್ಟನ್ನು [**ಈಜಿಪ್ಟ್ ಪರಾತನ ಗ್ರೀಕ್ ಮತ್ತು ಸಮಾರ್ಯದ ಅನುವಾದಗಳಲ್ಲಿ “ಈಜಿಪ್ಟ್ ಮತ್ತು ಕಾನಾನ್” ಎಂದಿದೆ. ಅವರು ಅಬ್ರಹಾಮನ ಕಾಲದಿಂದ ವರ್ಷಗಳನ್ನು ಎಣಿಸಿದ್ದಾರೆಂದೂ ಅವರು ಯೋಸೇಫನ ಕಾಲದಿಂದ ಎಣಿಸಿಲ್ಲವೆಂದೂ ಇದು ಅರ್ಥ ಕೊಡುತ್ತಿದೆ. ಆದಿಕಾಂಡ 15:12-16 ಮತ್ತು ಗಲಾತ್ಯ. 3:17 ರಲ್ಲಿ ನೋಡಿ.] ಬಿಟ್ಟು ಹೊರಟವು.
ಆದ್ದರಿಂದ ಯೆಹೋವನು ಅವರನ್ನು ಸಂರಕ್ಷಿಸಿ ಈಜಿಪ್ಟಿನಿಂದ ಹೊರತಂದದ್ದನ್ನು ಜ್ಞಾಪಕಮಾಡುವ ಆ ರಾತ್ರಿ ಬಹು ವಿಶೇಷವಾದ ರಾತ್ರಿಯಾಗಿದೆ. ಇಸ್ರೇಲರೆಲ್ಲರೂ ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವರು.
ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಪರದೇಶದವನು ಯೆಹೋವನ ಪಸ್ಕ ಭೋಜನದಲ್ಲಿ ಪಾಲುಗಾರನಾಗಬೇಕೆಂದು ಬಯಸಿದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕು. ಆಗ ಅವನು ಇಸ್ರೇಲಿನವನಾಗುವುದರಿಂದ ಭೋಜನದಲ್ಲಿ ಪಾಲುಗಾರನಾಗಬಹುದು. ಆದರೆ ಸುನ್ನತಿಯಾಗಿಲ್ಲದವನು ಪಸ್ಕದ ಊಟ ಮಾಡಕೂಡದು.