1
|
ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗು. ನಾನು ಅದ್ಭುತಕಾರ್ಯಗಳನ್ನು ತೋರಿಸಲು ಅವಕಾಶವಾಗಲೆಂದು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. |
2
|
ನಾನು ಈಜಿಪ್ಟಿನಲ್ಲಿ ಮಾಡಿದ ಸೂಚಕಕಾರ್ಯಗಳನ್ನೂ ಇತರ ಅದ್ಭುತಕಾರ್ಯಗಳನ್ನೂ ನೀವು ನಿಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿವರಿಸಿ, ‘ಯೆಹೋವನು ಈಜಿಪ್ಟಿನವರನ್ನು ತನಗೆ ಇಷ್ಟ ಬಂದಂತೆ ಶಿಕ್ಷಿಸಿದನು’ ಎಂಬುದಾಗಿ ತಿಳಿಸಬೇಕೆಂದು ನಾನು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳ ಮೂಲಕ ನಾನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದು ಹೇಳಿದನು. |
3
|
ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋಗಿ, “ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಎಲ್ಲಿಯವರೆಗೆ ನನಗೆ ವಿಧೇಯನಾಗುವುದಿಲ್ಲ? ನನ್ನನ್ನು ಆರಾಧಿಸಲು ನನ್ನ ಜನರನ್ನು ಕಳುಹಿಸಿಕೊಡು! |
4
|
ನೀನು ನನ್ನ ಜನರನ್ನು ಕಳುಹಿಸಿಕೊಡದಿದ್ದರೆ, ನಾಳೆಯೇ ನಿನ್ನ ದೇಶದೊಳಗೆ ಮಿಡತೆಗಳನ್ನು ತರುವೆನು. |
5
|
ಮಿಡತೆಗಳು ಬಂದು ಭೂಮಿಯನ್ನು ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವುದು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವುದನ್ನು ಮಿಡತೆಗಳು ತಿಂದುಬಿಡುತ್ತವೆ; ಹೊಲದಲ್ಲಿರುವ ಎಲ್ಲಾ ಮರಗಳ ಎಲೆಗಳನ್ನು ತಿಂದುಬಿಡುತ್ತವೆ. |
6
|
ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿರುತ್ತವೆ. ನಿನ್ನ ತಂದೆತಾತಂದಿರೂ ನೋಡಿಲ್ಲದಷ್ಟು ಮಿಡತೆಗಳಿರುತ್ತವೆ”‘ ಎಂದು ಹೇಳಿದರು. ಬಳಿಕ ಅವರು ಫರೋಹನ ಬಳಿಯಿಂದ ಹೊರಟುಹೋದರು. |
7
|
ಅಧಿಕಾರಿಗಳು ಫರೋಹನಿಗೆ, “ಈ ಜನರಿಂದ ಇನ್ನೆಷ್ಟು ಕಾಲ ನಾವು ಬಳಲಬೇಕು? ಇವರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸಲಿ. ಈಜಿಪ್ಟ್ ನಾಶವಾಗುತ್ತಿದೆ ಎಂಬುದು ನಿನಗಿನ್ನೂ ಮನವರಿಕೆಯಾಗಿಲ್ಲವೇ?” ಅಂದರು. |
8
|
ಆದ್ದರಿಂದ ಫರೋಹನು ಮೋಶೆ ಆರೋನರನ್ನು ತನ್ನ ಬಳಿಗೆ ಕರೆಯಿಸಿ, “ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ. ಆದರೆ ಹೋಗುವವರು ಯಾರೆಂಬುದನ್ನು ನನಗೆ ತಿಳಿಸಿ” ಅಂದನು. |
9
|
ಮೋಶೆಯು, “ಯೌವನಸ್ಥರು, ಮುದುಕರು, ಎಲ್ಲರೂ ಹೋಗುತ್ತೇವೆ. ನಮ್ಮ ಗಂಡು ಹೆಣ್ಣುಮಕ್ಕಳನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಯಾಕೆಂದರೆ ಇದು ಯೆಹೋವನ ಜಾತ್ರೆ” ಎಂದು ಉತ್ತರಕೊಟ್ಟನು. |
10
|
ಫರೋಹನು ಅವರಿಗೆ, “ಯೆಹೋವನಾಣೆ, ನೀವು ನಿಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಲು ನಾನು ಅನುಮತಿ ಕೊಡುವುದೇ ಇಲ್ಲ. |
11
|
ನೀವು ನನಗೆ ವಿರೋಧವಾಗಿ ಸಂಚುಮಾಡುತ್ತಿರುವುದು ಈಗ ಸ್ಪಷ್ಟವಾಯಿತು” ಎಂದು ಹೇಳಿದನು. ಬಳಿಕ ಫರೋಹನು ಮೋಶೆ ಆರೋನರನ್ನು ಕಳುಹಿಸಿಬಿಟ್ಟನು. |
12
|
ಯೆಹೋವನು ಮೋಶೆಗೆ, “ಈಜಿಪ್ಟ್ ದೇಶದ ಮೇಲೆ ನಿನ್ನ ಕೈಯನ್ನೆತ್ತು. ಆಗ ಮಿಡತೆಗಳು ಬರುವವು! ಮಿಡತೆಗಳು ಈಜಿಪ್ಟ್ ದೇಶದಲ್ಲೆಲ್ಲಾ ಹರಡಿಕೊಳ್ಳುವವು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದುಕೊಂಡ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡುವವು” ಎಂದು ಹೇಳಿದನು. |
13
|
ಅಂತೆಯೇ ಮೋಶೆ ಈಜಿಪ್ಟ್ ದೇಶದ ಮೇಲೆ ಕೈ ಚಾಚಿದನು. ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು. ಗಾಳಿಯು ಹಗಲಿರುಳು ಬೀಸಿತು. ಮುಂಜಾನೆಯಾದಾಗ ಆ ಗಾಳಿಯಿಂದ ಈಜಿಪ್ಟ್ ದೇಶಕ್ಕೆ ಮಿಡತೆಗಳು ಬಂದವು. |
14
|
ಮಿಡತೆಗಳು ಈಜಿಪ್ಟ್ ದೇಶದೊಳಗೆ ಹಾರಿಬಂದು ನೆಲದ ಮೇಲೆ ಇಳಿದವು. ಈಜಿಪ್ಟಿನಲ್ಲಿ ಹಿಂದೆಂದೂ ಇಷ್ಟು ಮಿಡತೆಗಳು ಇರಲಿಲ್ಲ; ಇನ್ನು ಮುಂದೆಯೂ ಇರುವುದಿಲ್ಲ. |
15
|
ಮಿಡತೆಗಳು ನೆಲವನ್ನು ಮುಚ್ಚಿಕೊಂಡವು; ಇದರಿಂದಾಗಿ ನೆಲವು ಕಾಣದಂತಾಯಿತು. ಆಲಿಕಲ್ಲಿನ ಮಳೆಗೆ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ ಮರಗಳಲ್ಲಿದ್ದ ಕಾಯಿಗಳನ್ನೂ ಅವು ತಿಂದುಬಿಟ್ಟವು. ಈಜಿಪ್ಟಿನಲ್ಲೆಲ್ಲಾ ಮರಗಳಲ್ಲಾಗಲಿ ಗಿಡಗಳಲ್ಲಾಗಲಿ ಹಸುರಾಗಿದ್ದ ಒಂದಾದರೂ ಉಳಿಯಲಿಲ್ಲ. |
16
|
ಫರೋಹನು ಕೂಡಲೇ ಮೋಶೆ ಆರೋನರನ್ನು ಕರೆಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ. |
17
|
ಇದೊಂದು ಸಲ ನನ್ನ ಪಾಪಗಳನ್ನು ಕ್ಷಮಿಸಿ ಈ ‘ವಿಪತ್ತನ್ನು’ ನನ್ನಿಂದ ತೊಲಗಿಸಬೇಕೆಂದು ಯೆಹೋವನಿಗೆ ಪ್ರಾರ್ಥಿಸಿರಿ” ಎಂದು ಹೇಳಿದನು. |
18
|
ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು. |
19
|
ಆದ್ದರಿಂದ ಯೆಹೋವನು ಗಾಳಿಯ ದಿಕ್ಕನ್ನು ಬದಲಾಯಿಸಿ, ಪಶ್ಚಿಮದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು; ಅದು ಮಿಡತೆಗಳನ್ನು ಕೆಂಪು ಸಮುದ್ರಕ್ಕೆ ಹಾರಿಸಿತು. ಈಜಿಪ್ಟಿನಲ್ಲಿ ಒಂದು ಮಿಡತೆಯೂ ಉಳಿಯಲಿಲ್ಲ. |
20
|
ಆದರೆ ಫರೋಹನು ಮತ್ತೆ ಹೃದಯವನ್ನು ಕಠಿಣಪಡಿಸಿಕೊಂಡು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ. |
21
|
ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು. ಆಗ ಕಾರ್ಗತ್ತಲೆಯು ಈಜಿಪ್ಟನ್ನು ಆವರಿಸುವುದು. ಆ ಕಾರ್ಗತ್ತಲೆಯಿಂದ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು. |
22
|
ಮೋಶೆ ತನ್ನ ಕೈಯನ್ನು ಆಕಾಶದ ಕಡೆಗೆ ಚಾಚಿದಾಗ ಕಾರ್ಗತ್ತಲು ಈಜಿಪ್ಟನ್ನು ಆವರಿಸಿತು. ಕಾರ್ಗತ್ತಲು ಈಜಿಪ್ಟಿನಲ್ಲಿ ಮೂರು ದಿನಗಳವರೆಗೆ ಇತ್ತು. |
23
|
ಈ ಮೂರು ದಿನಗಳಲ್ಲಿ ಯಾರೂ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾವ ಸ್ಥಳಕ್ಕೂ ಹೋಗಲಿಲ್ಲ. ಆದರೆ ಇಸ್ರೇಲರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬೆಳಕಿತ್ತು. |
24
|
ಫರೋಹನು ಮತ್ತೆ ಮೋಶೆಯನ್ನು ಕರೆಸಿ, “ಹೋಗಿ, ಯೆಹೋವನನ್ನು ಆರಾಧಿಸಿರಿ! ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆದರೆ ನೀವು ನಿಮ್ಮ ಕುರಿಗಳನ್ನು ದನಕರುಗಳನ್ನು ಇಲ್ಲಿಯೇ ಬಿಟ್ಟುಹೋಗಬೇಕು” ಎಂದು ಹೇಳಿದನು. |
25
|
ಮೋಶೆಯು, “ನಾವು ನಮ್ಮ ಕುರಿಗಳನ್ನೂ ದನಕರುಗಳನ್ನೂ ಕಾಣಿಕೆಗಳಿಗಾಗಿ ಮತ್ತು ಯಜ್ಞಗಳಿಗಾಗಿ ತೆಗೆದುಕೊಂಡು ಹೋಗಬೇಕು; ಮಾತ್ರವಲ್ಲದೆ |
26
|
ನಮ್ಮ ಪ್ರಾಣಿಗಳನ್ನೆಲ್ಲಾ ತೆಗೆದುಕೊಂಡು ಹೋಗುವೆವು. ಒಂದನ್ನಾದರೂ ಬಿಟ್ಟುಹೋಗುವುದಿಲ್ಲ; ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ಅಲ್ಲಿಗೆ ಹೋದಾಗಲೇ ನಮಗೆ ತಿಳಿಯುವುದು. ಆದ್ದರಿಂದ, ನಾವು ಇವುಗಳನ್ನೆಲ್ಲಾ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಹೇಳಿದನು. |
27
|
ಯೆಹೋವನು ಫರೋಹನ ಹೃದಯವನ್ನು ಮತ್ತೆ ಕಠಿಣಗೊಳಿಸಿದನು. ಆದ್ದರಿಂದ ಫರೋಹನು ಅವರನ್ನು ಕಳುಹಿಸಿಕೊಡಲಿಲ್ಲ. |
28
|
ಫರೋಹನು ಮೋಶೆಗೆ, “ಇಲ್ಲಿಂದ ತೊಲಗಿ ಹೋಗು! ನೀನು ನನ್ನ ಸನ್ನಿಧಿಗೆ ಇನ್ನು ಮೇಲೆ ಬರಕೂಡದು. ನೀನು ಮತ್ತೆ ಬಂದರೆ ನಿನಗೆ ಮರಣದಂಡನೆ ವಿಧಿಸುವೆನು” ಎಂದನು. |
29
|
ಅದಕ್ಕೆ ಮೋಶೆಯು ಫರೋಹನಿಗೆ, “ಸರಿ, ಇನ್ನು ಮೇಲೆ ನಾನು ನಿನ್ನ ಸನ್ನಿಧಿಗೆ ಬರುವುದೇ ಇಲ್ಲ” ಎಂದು ಹೇಳಿದನು. |
Exodus 10:27 Kannada Language Bible Words basic statistical display
COMING SOON ...