ಅವರ ಮೆಚ್ಚಿಕೆಯನ್ನು ಗಳಿಸಿಕೊಳ್ಳಬೇಕೆಂದು ಅವರು ಗಮನಿಸುತ್ತಿರುವಾಗ ಮಾತ್ರ ಸೇವೆ ಮಾಡದೆ ನೀವು ಕ್ರಿಸ್ತನಿಗೆ ವಿಧೇಯರಾಗಿರುವಂತೆ ಅವರಿಗೆ ವಿಧೇಯರಾಗಿರಬೇಕು. ದೇವರಿಗೆ ಇಷ್ಟವಾದದ್ದನ್ನು ನೀವು ಪೂರ್ಣಹೃದಯದಿಂದ ಮಾಡಬೇಕು.
ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬನಿಗೂ ದೇವರು ಪ್ರತಿಫಲವನ್ನು ಕೊಡುತ್ತಾನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಪ್ರತಿಯೊಬ್ಬ ವ್ಯಕ್ತಿಯು ಅವನು ಸೇವಕನಾಗಿರಲಿ ಅಥವಾ ಸ್ವತಂತ್ರನಾಗಿರಲಿ ತಾನು ಮಾಡುವ ಒಳ್ಳೆಯ ಕಾರ್ಯಗಳಿಗೆ ಪ್ರತಿಫಲವನ್ನು ಹೊಂದುವನು.
ಯಜಮಾನರೇ, ಅದೇರೀತಿಯಲ್ಲಿ ನಿಮ್ಮ ಸೇವಕರಿಗೆ ಒಳ್ಳೆಯವರಾಗಿರಿ. ಅವರಿಗೆ ಹೆದರಿಕೆಯಾಗುವಂಥ ಮಾತುಗಳನ್ನಾಡಬೇಡಿ. ನಿಮಗೂ ಅವರಿಗೂ ಒಡೆಯನಾಗಿರುವಾತನು ಪರಲೋಕದಲ್ಲಿದ್ದಾನೆ ಎಂಬುದು ನಿಮಗೆ ತಿಳಿದಿದೆ. ಆತನು ಪ್ರತಿಯೊಬ್ಬನಿಗೂ ಪಕ್ಷಪಾತವಿಲ್ಲದೆ ನ್ಯಾಯತೀರಿಸುವನು.
ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ.
ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.
ನಮ್ಮ ಪ್ರಿಯ ಸಹೋದರನಾದ ತುಖಿಕನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಅವನು ಪ್ರಭುವಿನ ಸೇವೆಯಲ್ಲಿ ನಂಬಿಗಸ್ತನಾದ ಸೇವಕನಾಗಿದ್ದಾನೆ. ಇಲ್ಲಿಯ ಸಂಗತಿಗಳನ್ನೆಲ್ಲಾ ಅವನು ನಿಮಗೆ ತಿಳಿಸುವನು. ನಾನು ಇಲ್ಲಿ ಹೇಗಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದು ಆಗ ನಿಮಗೆ ಗೊತ್ತಾಗುವುದು.