ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ.
ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ.
ಆದಕಾರಣವೇ ನಾನು ಅವನನ್ನು ಕಳುಹಿಸುತ್ತಿದ್ದೇನೆ. ನಾವು ಹೇಗಿರುವೆವು ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮನ್ನು ಪ್ರೋತ್ಸಾಹಿಸಲು ನಾನು ಅವನನ್ನು ಒನೇಸಿಮನ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ.
ಅರಿಸ್ತಾರ್ಕನು ವಂದನೆ ತಿಳಿಸಿದ್ದಾನೆ. ಅವನೂ ನನ್ನೊಡನೆ ಸೆರೆಯಲ್ಲಿದ್ದಾನೆ. ಬಾರ್ನಬನಿಗೆ ಸೋದರ ಬಾಂಧ್ಯವ್ಯವುಳ್ಳ ಮಾರ್ಕನೂ ವಂದನೆಯನ್ನು ಹೇಳುತ್ತಾನೆ. (ಮಾರ್ಕನ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಅವನು ಬಂದರೆ ಅವನನ್ನು ಸ್ವಾಗತಿಸಿರಿ.)
ಯೇಸುವು (ಯುಸ್ತನೆಂದೂ ಅವನನ್ನು ಕರೆಯುತ್ತಾರೆ.) ಸಹ ವಂದನೆಯನ್ನು ಹೇಳುತ್ತಾನೆ. ಯೆಹೂದ್ಯರಲ್ಲಿ ವಿಶ್ವಾಸಿಗಳಾಗಿರುವ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರೇ ನನಗೆ ಆದರಣೆಯಾಗಿದ್ದಾರೆ.
ಎಪಫ್ರನು ಸಹ ವಂದನೆ ತಿಳಿಸಿದ್ದಾನೆ. ಅವನು ಯೇಸು ಕ್ರಿಸ್ತನ ಸೇವಕನು. ಅವನು ನಿಮ್ಮವರಲ್ಲಿ ಒಬ್ಬನಾಗಿದ್ದಾನೆ. ಅವನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಆತ್ಮಿಕತೆಯಲ್ಲಿ ಬೆಳೆಯುತ್ತಾ ಸಂಪೂರ್ಣತೆಯನ್ನು ಮುಟ್ಟಬೇಕೆಂತಲೂ ದೇವರ ಚಿತ್ತವನ್ನು ಪೂರ್ಣವಾಗಿ ತಿಳಿದುಕೊಂಡು ದೃಢವಾಗಿರಬೇಕೆಂತಲೂ ಪ್ರಾರ್ಥಿಸುತ್ತಾನೆ.