ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ. “ಸೈನ್ಯಾಧಿಕಾರಿಗಳು ಸಾವಿರ ಮಂದಿಯೊಂದಿಗೆ ಪಟ್ಟಣದ ಹೊರಗೆ ಹೋದರೆ ನೂರು ಮಂದಿಯೊಂದಿಗೆ ಹಿಂದಿರುಗುವರು. ಸೈನ್ಯಾಧಿಕಾರಿಗಳು ನೂರು ಮಂದಿಯೊಂದಿಗೆ ಹೋದರೆ ಬರೀ ಹತ್ತು ಮಂದಿಯೊಂದಿಗೆ ಹಿಂದಿರುಗುವರು.
ಆದರೆ ಬೇತೇಲಿನಲ್ಲಿ ಹುಡುಕಬೇಡ, ಗಿಲ್ಗಾಲಿನಲ್ಲಿ ಕಾಲಿಡಬೇಡ. ಗಡಿಯನ್ನು ದಾಟಿ ಬೇರ್ಷೆಬಕ್ಕೆ ಹೋಗಬೇಡ. ಗಿಲ್ಗಾಲಿನ ಜನರು ಕೈದಿಗಳಂತೆ ತೆಗೆಯಲ್ಪಡುವರು. ಮತ್ತು ಬೇತೇಲ್ ನಾಶ ಮಾಡಲ್ಪಡುವದು.
ಯೆಹೋವನ ಬಳಿಗೆ ಹೋಗು. ಆಗ ಜೀವಿಸುವಿ. ಯೆಹೋವನ ಬಳಿಗೆ ನೀನು ಹೋಗದಿದ್ದಲ್ಲಿ ಯೋಸೇಫನ ಮನೆತನಕ್ಕೆ ಬೆಂಕಿಯು ಹಿಡಿಯುವುದು. ಆ ಬೆಂಕಿಯು ಯೋಸೇಫನ ಮನೆಯನ್ನು ದಹಿಸುವದು. ಬೇತೇಲಿನಲ್ಲಿ ಅದನ್ನು ಯಾರೂ ನಂದಿಸಲಾರರು.
ಪ್ರವಾದಿಗಳು ಸಾರ್ವಜನಿಕ ಸ್ಥಳಗಳಿಗೆ ಹೋಗಿ ಜನರು ಮಾಡುವ ದುಷ್ಟಕಾರ್ಯಗಳನ್ನು ಖಂಡಿಸುವರು. ಜನರು ಪ್ರವಾದಿಗಳನ್ನು ಹಗೆ ಮಾಡುವರು. ಪ್ರವಾದಿಗಳು ಒಳ್ಳೆಯದನ್ನು ಸರಳವಾದ ಸತ್ಯಗಳನ್ನು ಉಪದೇಶಿಸುವರು. ಆದರೆ ಜನರು ಅವರನ್ನು ದ್ವೇಷಿಸುವರು.
ನೀವು ಅನ್ಯಾಯವಾಗಿ ಜನರಿಂದ ಸುಂಕವಸೂಲಿ ಮಾಡುವಿರಿ. ಗೋದಿಯ ಮೂಟೆಗಳನ್ನು ಅವರಿಂದ ಸುಲುಕೊಳ್ಳುತ್ತೀರಿ. ಕಲ್ಲುಗಳನ್ನು ಕೊರೆದು ನಿಮಗಾಗಿ ಅಂದವಾದ ಮನೆಗಳನ್ನು ಕಟ್ಟಿಸಿಕೊಳ್ಳುವಿರಿ. ಆದರೆ ಆ ಮನೆಗಳಲ್ಲಿ ನೀವು ವಾಸಿಸುವುದಿಲ್ಲ. ಸುಂದರವಾದ ದ್ರಾಕ್ಷಿತೋಟಗಳನ್ನು ನೆಡುವಿರಿ. ಆದರೆ ಅದರ ದ್ರಾಕ್ಷಾರಸವನ್ನು ನೀವು ಕುಡಿಯುವುದಿಲ್ಲ.
ಯಾಕೆ ಹೀಗೆ? ಯಾಕೆಂದರೆ ನಿಮ್ಮ ಅನೇಕ ಪಾಪಕೃತ್ಯಗಳನ್ನು ನಾನು ಬಲ್ಲೆನು. ನೀವು ಭಯಂಕರ ಪಾಪಗಳನ್ನು ಮಾಡಿದ್ದೀರಿ. ನ್ಯಾಯವಂತರನ್ನು ಗಾಯಗೊಳಿಸಿದ್ದೀರಿ. ಅನ್ಯಾಯ ಮಾಡಲು ಹಣವನ್ನು ತೆಗೆದುಕೊಂಡಿದ್ದೀರಿ. ಬಡಜನರಿಗೆ ನ್ಯಾಯವನ್ನು ದೊರಕಿಸುವುದಿಲ್ಲ.
ದೇವರು ನಿಮ್ಮೊಂದಿಗಿದ್ದಾನೆಂದು ನೀವು ಹೇಳುತ್ತೀರಿ. ಆದುದರಿಂದ ನೀವು ಕೆಟ್ಟಕಾರ್ಯವನ್ನು ಮಾಡದೆ ಒಳ್ಳೆಯ ಕೃತ್ಯಗಳನ್ನು ಮಾಡಬೇಕು. ಆಗ ನೀವು ಬದುಕುವಿರಿ. ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಯಲ್ಲಿ ಖಂಡಿತವಾಗಿಯೂ ಇರುವನು.
ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಸಾರ್ವಜನಿಕ ಸ್ಥಳಗಳಲ್ಲಿ ಜನರು ಗೋಳಾಡುವರು. ರಸ್ತೆ ಬದಿಗಳಲ್ಲಿ ಜನರು ಗೋಳಾಡುವರು. ಪಟ್ಟಣದ ನಿವಾಸಿಗಳು ತಮ್ಮೊಂದಿಗೆ ಗೋಳಾಡಲು ರೈತರನ್ನು ಆಹ್ವಾನಿಸುವರು. ಅಳುವವರನ್ನು ಬಾಡಿಗೆಗೆ ಕರೆದುಕೊಂಡು ಬರುವರು.
ನಿಮ್ಮಲ್ಲಿ ಕೆಲವರಿಗೆ ಯೆಹೋವನ ನ್ಯಾಯತೀರ್ಪಿನ ದಿನವನ್ನು ನೋಡುವ ಮನಸ್ಸಿದೆ. ಆ ದಿವಸವನ್ನು ಯಾಕೆ ನೀವು ನೋಡಬೇಕು? ಯೆಹೋವನ ನ್ಯಾಯಾತೀರ್ಪಿನ ದಿನವು ಬೆಳಕನ್ನಲ್ಲ, ಕತ್ತಲನ್ನು ತರುವುದು.
ಆಗ ನೀವು ಸಿಂಹದ ಬಾಯಿಂದ ತಪ್ಪಿಸಿಕೊಂಡು ಕರಡಿಯ ಬಾಯಿಗೆ ಬೀಳುವ ಮನುಷ್ಯನಂತಿರುವಿರಿ. ಆಗ ನೀವು ನಿಮ್ಮ ಮನೆಯ ಆಶ್ರಯಕ್ಕೆ ಓಡಿಹೋಗಿ ಗೋಡೆಗೆ ಒರಗಿ ನಿಂತಾಗ ಒಂದು ಹಾವಿನಿಂದ ಕಡಿಸಿಕೊಂಡವರಂತೆ ಇರುವಿರಿ.
ನೀವು ಸರ್ವಾಂಗಹೋಮವನ್ನಾಗಲಿ ಧಾನ್ಯದ ಹೋಮವನ್ನಾಗಲಿ ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುವುದಿಲ್ಲ. ಸಮಾಧಾನ ಯಜ್ಞದಲ್ಲಿ ಕೊಬ್ಬಿದ ಪ್ರಾಣಿಗಳನ್ನು ಬಲಿಯರ್ಪಿಸಿದರೂ ನಾನು ಅದನ್ನು ಕಣ್ಣೆತ್ತಿ ನೋಡುವದಿಲ್ಲ.