ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು.
(9-10) ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.
ಆ ಮನುಷ್ಯನು ಪೇತ್ರ ಮತ್ತು ಯೋಹಾನರನ್ನು ಹಿಡಿದುಕೊಂಡೇ ನಿಂತಿದ್ದನು. ಅವನಿಗೆ ಗುಣವಾದದ್ದರಿಂದ ಜನರೆಲ್ಲರೂ ಆಶ್ಚರ್ಯಗೊಂಡಿದ್ದರು. ಸೊಲೊಮೋನನ ಮಂಟಪದ ಬಳಿ ನಿಂತಿದ್ದ ಪೇತ್ರ ಮತ್ತು ಯೋಹಾನರ ಬಳಿ ಅವರು ಓಡಿಬಂದರು.
ಆಗ ಪೇತ್ರನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ಇದನ್ನು ಕಂಡು ನೀವು ಯಾಕೆ ಆಶ್ಚರ್ಯಗೊಂಡಿರುವಿರಿ? ಈ ಮನುಷ್ಯನನ್ನು ನಡೆಯುವಂತೆ ಮಾಡಿದ್ದು ನಮ್ಮ ಶಕ್ತಿಯೆಂದು ನೀವು ನಮ್ಮನ್ನು ನೋಡುತ್ತಿರುವಿರಾ? ನಾವು ಒಳ್ಳೆಯವರಾಗಿರುವುದರಿಂದ ಈ ಕಾರ್ಯವಾಯಿತೆಂದು ಭಾವಿಸಿಕೊಂಡಿದ್ದೀರಾ?
ಈ ಕಾರ್ಯವನ್ನು ಮಾಡಿದ್ದು ನಾವಲ್ಲ! ದೇವರು! ಆತನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ [*ಅಬ್ರಹಾಮ, ಇಸಾಕ, ಯಾಕೋಬ ಹಳೆ ಒಡಂಬಡಿಕೆಯ ಕಾಲದ ಅತ್ಯಂತ ಪ್ರಮುಖ ಯೆಹೂದ್ಯನಾಯಕರು.] ದೇವರು. ಆತನೇ ನಮ್ಮ ಪಿತೃಗಳೆಲ್ಲರ ದೇವರು. ಆತನು ತನ್ನ ವಿಶೇಷ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ಆದರೆ ನೀವು ಯೇಸುವನ್ನು ಕೊಲ್ಲಲು ಒಪ್ಪಿಸಿಕೊಟ್ಟಿರಿ. ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ನಿರ್ಧರಿಸಿದನು. ಆದರೆ ನೀವು ಪಿಲಾತನಿಗೆ, ನಮಗೆ ಯೇಸು ಬೇಕಿಲ್ಲವೆಂದು ಹೇಳಿದಿರಿ.
ಯೇಸು ಪರಿಶುದ್ಧನಾಗಿದ್ದನು ಮತ್ತು ಒಳ್ಳೆಯವನಾಗಿದ್ದನು. ಆದರೆ ನೀವು ಆತನನ್ನು ತಿರಸ್ಕರಿಸಿದಿರಿ. ಆತನ ಬದಲಾಗಿ ಕೊಲೆಗಾರನನ್ನು [†ಕೊಲೆಗಾರ ಬರಬ್ಬ ನೋಡಿರಿ: ಲೂಕ 23:18.] ಬಿಡುಗಡೆ ಮಾಡಬೇಕೆಂದು ಪಿಲಾತನನ್ನು ಬೇಡಿಕೊಂಡಿರಿ.
“ನಿಮ್ಮ ಕಣ್ಣೆದುರಿಗಿರುವ ಇವನ ಪರಿಚಯ ನಿಮ್ಮೆಲ್ಲರಿಗೂ ಇದೆ. ಇವನು ಗುಣವಾದದ್ದಕ್ಕೆ ಇವನು ಯೇಸುವಿನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ. ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನನ್ನು ನಿಮ್ಮೆಲ್ಲರ ಮುಂದೆ ಗುಣಪಡಿಸಿತು.
ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು.
ಆ ಪ್ರವಾದಿಗಳು ಹೇಳಿದ ಸಂಗತಿಗಳನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃವಾದ ಅಬ್ರಹಾಮನಿಗೆ, ‘ನಿನ್ನ ಸಂತತಿಯಿಂದ ಭೂಮಿಯ ಮೇಲಿರುವ ಜನರೆಲ್ಲರು ಆಶೀರ್ವಾದ ಹೊಂದುವರು’ [✡ಉಲ್ಲೇಖನ: ಆದಿಕಾಂಡ 22:18; 26:24.] ಎಂದು ಹೇಳಿದನು.
ದೇವರು ತನ್ನ ವಿಶೇಷ ಸೇವಕನನ್ನು (ಯೇಸುವನ್ನು) ಮೊಟ್ಟಮೊದಲು ನಿಮ್ಮ ಬಳಿಗೆ ಕಳುಹಿಸಿದನು. ನಿಮ್ಮನ್ನು ಆಶೀರ್ವದಿಸುವುದಕ್ಕಾಗಿ ದೇವರು ಯೇಸುವನ್ನು ಕಳುಹಿಸಿದನು. ಆತನು ನಿಮ್ಮನ್ನು ನಿಮ್ಮ ಕೆಟ್ಟಕಾರ್ಯಗಳಿಂದ ದೂರಮಾಡಿ ಆಶೀರ್ವದಿಸುತ್ತಾನೆ.”