ಅಲ್ಲಿ ಅವನು ಮೂರು ತಿಂಗಳವರೆಗೆ ಇದ್ದನು. ಅವನು ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗಿದ್ದನು. ಆದರೆ ಕೆಲವು ಯೆಹೂದ್ಯರು ಅವನಿಗೆ ವಿರೋಧವಾಗಿ ಯೋಜನೆ ಮಾಡಿದರು. ಆದ್ದರಿಂದ ಪೌಲನು ಸಿರಿಯಕ್ಕೆ ಮಕೆದೋನಿಯದ ಮೂಲಕ ಹಿಂತಿರುಗಿ ಹೋಗಲು ನಿರ್ಧರಿಸಿದನು.
ಕೆಲವು ಜನರು ಅವನೊಂದಿಗಿದ್ದರು. ಅವರು ಯಾರೆಂದರೆ: ಬೆರೋಯ ಪಟ್ಟಣದ ಪುರ್ರನ ಮಗನಾದ ಸೋಪತ್ರನು, ಥೆಸಲೋನಿಕ ಪಟ್ಟಣದ ಆರಿಸ್ತಾರ್ಕ ಮತ್ತು ಸೆಕುಂದ, ದರ್ಬೆ ಪಟ್ಟಣದ ಗಾಯ ಮತ್ತು ತಿಮೊಥೆಯ, ಅಲ್ಲದೆ ಏಷ್ಯಾದ ತುಖಿಕ ಹಾಗು ತ್ರೊಫಿಮ.
ಯೆಹೂದ್ಯರ ಹುಳಿ ರಹಿತ ರೊಟ್ಟಿ ಹಬ್ಬದ ನಂತರ ನಾವು ಫಿಲಿಪ್ಪಿ ಪಟ್ಟಣದ ಹಡಗಿನಲ್ಲಿ ಹೋದೆವು. ಐದು ದಿನಗಳಾದ ನಂತರ ನಾವು ಇವರನ್ನು ತ್ರೋವದಲ್ಲಿ ಸಂಧಿಸಿದೆವು. ಅಲ್ಲಿ ನಾವು ಏಳು ದಿನ ತಂಗಿದೆವು.
ಭಾನುವಾರದಂದು, ನಾವೆಲ್ಲರು ಪ್ರಭುವಿನ ರಾತ್ರಿ ಭೋಜನಕ್ಕೆ ಒಟ್ಟಾಗಿ ಸೇರಿದೆವು. ಸಭೆ ಸೇರಿಬಂದಿದ್ದ ಜನರೊಂದಿಗೆ ಪೌಲನು ಮಾತಾಡಿದನು. ಅವನು ಮರುದಿನ ಅಲ್ಲಿಂದ ಹೊರಡಬೇಕೆಂದು ಅಲೋಚಿಸಿಕೊಂಡಿದ್ದನು. ಪೌಲನು ಮಧ್ಯರಾತ್ರಿಯವರೆಗೂ ಮಾತಾಡುತ್ತಲೇ ಇದ್ದನು.
ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ಮಾತಾಡುತ್ತಲೇ ಇದ್ದನು. ಇತ್ತ ಯುವಕನು ಗಾಢವಾಗಿ ನಿದ್ರಿಸುತ್ತಾ ಮೂರನೆ ಅಂತಸ್ತಿನಿಂದ ಕೆಳಗಡೆ ಬಿದ್ದುಬಿಟ್ಟನು. ಜನರು ಕೆಳಗಿಳಿದು ಹೋಗಿ ಅವನನ್ನು ಎತ್ತಿ ನೋಡಿದಾಗ ಅವನು ಸತ್ತಿದ್ದನು.
ನಾವು ಪೌಲನಿಗಿಂತ ಮುಂಚಿತವಾಗಿಯೇ ಅಸ್ಸೊಸಿ ಎಂಬ ಪಟ್ಟಣಕ್ಕೆ ನೌಕಾಯಾನ ಮಾಡಿದೆವು. ತಾನು ಭೂಮಾರ್ಗವಾಗಿ ಬರುವುದಾಗಿಯೂ ಅಸ್ಸೊಸಿನಲ್ಲಿ ನಮ್ಮನ್ನು ಸಂಧಿಸಿ ಅಲ್ಲಿಂದ ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡುವುದಾಗಿಯೂ ಪೌಲನು ನಮಗೆ ತಿಳಿಸಿದ್ದನು.
ಮರುದಿನ ನಾವು ಅಲ್ಲಿಂದ ನೌಕಾಯಾನ ಮಾಡಿ ಖಿಯೋಸ್ ದ್ವೀಪದ ಸಮೀಪದಲ್ಲಿದ್ದ ಸ್ಥಳವೊಂದಕ್ಕೆ ಬಂದೆವು. ಮರುದಿನ ಸಾಮೋಸ್ ದ್ವೀಪಕ್ಕೆ ನೌಕಾಯಾನ ಮಾಡಿದೆವು. ಅದರ ಮೂರನೆಯ ದಿನ ನಾವು ಮಿಲೇತ ಪಟ್ಟಣಕ್ಕೆ ಬಂದೆವು.
ಎಫೆಸದಲ್ಲಿ ತಂಗಬಾರದೆಂದು ಪೌಲನು ಆಗಲೇ ನಿರ್ಧಾರ ಮಾಡಿದ್ದನು. ಏಷ್ಯಾದಲ್ಲಿ ದೀರ್ಘಕಾಲ ತಂಗಲು ಅವನಿಗೆ ಇಷ್ಟವಿರಲಿಲ್ಲ. ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂದು ಅವನು ತನ್ನ ಪ್ರಯಾಣವನ್ನು ತ್ವರಿತಗೊಳಿಸಿದನು.
ಆ ಹಿರಿಯರು ಬಂದಾಗ ಪೌಲನು ಅವರಿಗೆ, “ನಾನು ಏಷ್ಯಾ ಪ್ರಾಂತ್ಯಕ್ಕೆ ಬಂದ ಮೊದಲನೆಯ ದಿನದಿಂದಲೂ ನೀವು ನನ್ನ ಜೀವಿತದ ಬಗ್ಗೆ ತಿಳಿದಿದ್ದೀರಿ. ನಾನು ನಿಮ್ಮೊಂದಿಗೆ ಇದ್ದ ಕಾಲದಲ್ಲೆಲ್ಲಾ ನಾನು ಯಾವ ರೀತಿಯಲ್ಲಿ ಜೀವಿಸಿದೆನೆಂಬುದು ನಿಮಗೆ ಗೊತ್ತಿದೆ.
ಯೆಹೂದ್ಯರು ನನಗೆ ವಿರೋಧವಾಗಿ ಮಾಡಿದ ಒಳಸಂಚುಗಳಿಂದ ನಾನು ಬಹಳ ಕಷ್ಟಪಡಬೇಕಾಯಿತು. ಅನೇಕ ಸಲ ಕಣ್ಣೀರಿಡಬೇಕಾಯಿತು. ಆದರೆ ನಾನು ಯಾವಾಗಲೂ ಪ್ರಭುವಿನ ಸೇವೆ ಮಾಡಿದೆನೆಂಬುದು ನಿಮಗೆ ಗೊತ್ತಿದೆ. ನಾನು ನನ್ನ ಬಗ್ಗೆ ಚಿಂತಿಸದೆ,
ನಿಮಗೆ ಒಳ್ಳೆಯದನ್ನೇ ಯಾವಾಗಲೂ ಮಾಡಿದೆನು. ನಾನು ನಿಮಗೆ ಯೇಸುವಿನ ಕುರಿತಾದ ಸುವಾರ್ತೆಯನ್ನು ಬಹಿರಂಗವಾಗಿ ಜನರೆದುರಿನಲ್ಲಿ ತಿಳಿಸಿದೆನು ಮತ್ತು ನಿಮ್ಮ ಮನೆಗಳಲ್ಲಿಯೂ ಸಹ ಬೋಧಿಸಿದೆನು.
ನಿಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ನಾನು ಎಲ್ಲಾ ಜನಾಂಗಗಳವರಿಗೆ ಅಂದರೆ ಯೆಹೂದ್ಯರಿಗೂ ಮತ್ತು ಗ್ರೀಕರಿಗೂ ತಿಳಿಸಿದೆನು. ನಮ್ಮ ಪ್ರಭುವಾದ ಯೇಸುವಿನಲ್ಲಿ ನಂಬಿಕೆ ಇಡಬೇಕೆಂದು ನಾನು ಅವರೆಲ್ಲರಿಗೂ ತಿಳಿಸಿದೆನು.
ನಾನು ನನ್ನ ಸ್ವಂತ ಪ್ರಾಣದ ಬಗ್ಗೆ ಚಿಂತಿಸುವುದಿಲ್ಲ. ಪ್ರಭುವಾದ ಯೇಸು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಅತ್ಯಂತ ಮುಖ್ಯವಾಗಿದೆ. ದೇವರ ಕೃಪೆಯ ವಿಷಯವಾದ ಸುವಾರ್ತೆಯ ಬಗ್ಗೆ ಸಾಕ್ಷಿ ನೀಡುವುದೇ ನನ್ನ ಕೆಲಸವಾಗಿದೆ. ಆ ಕೆಲಸವನ್ನು ಮಾಡಿ ಪೂರೈಸುವುದೇ ನನ್ನ ಅಪೇಕ್ಷೆಯಾಗಿದೆ.
“ಈಗ ನನಗೆ ಕಿವಿಗೊಡಿ. ನಿಮ್ಮಲ್ಲಿ ಒಬ್ಬರಾಗಲಿ ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲವೆಂದು ನನಗೆ ಗೊತ್ತಿದೆ. ನಿಮ್ಮೊಂದಿಗೆ ಇದ್ದ ಸಮಯದಲ್ಲೆಲ್ಲಾ ದೇವರ ರಾಜ್ಯದ ವಿಷಯವಾದ ಸುವಾರ್ತೆಯನ್ನು ನಾನು ನಿಮಗೆ ತಿಳಿಸಿದೆನು.
ಆದ್ದರಿಂದ ನಿಮ್ಮ ವಿಷಯದಲ್ಲಿಯೂ ಪವಿತ್ರಾತ್ಮನು ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಿ. ದೇವರು ತನ್ನ ಸ್ವಂತ ರಕ್ತದಿಂದ ಕೊಂಡುಕೊಂಡಿರುವ ಸಭೆಗೆ ನೀವು ಕುರುಬರಾಗಿದ್ದೀರಿ.
ಆದ್ದರಿಂದ ಎಚ್ಚರಿಕೆಯಿಂದಿರಿ! ನಾನು ಮೂರು ವರ್ಷಗಳ ಕಾಲ ನಿಮ್ಮೊಂದಿಗೆ ಇದ್ದೆನು. ಈ ಕಾಲಾವಧಿಯಲ್ಲಿ ನಾನು ನಿಮಗೆ ಹಗಲಿರುಳು ಉಪದೇಶಿಸುತ್ತಾ ನಿಮಗಾಗಿ ಕಣ್ಣೀರಿಡುತ್ತಾ ನಿಮ್ಮನ್ನು ಎಚ್ಚರಿಸಿದ್ದನ್ನು ಮರೆಯದಿರಿ.
“ಈಗ ನಾನು ನಿಮ್ಮನ್ನು ದೇವರಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತಿದ್ದೇನೆ. ಆತನ ಕೃಪಾವಾಕ್ಯವು ನಿಮ್ಮ ಭಕ್ತಿಯನ್ನು ವೃದ್ಧಿಪಡಿಸಿ ಪರಿಶುದ್ಧರ ಬಾಧ್ಯತೆಯಲ್ಲಿ ಪಾಲುಗಾರರನ್ನಾಗಿ ಮಾಡುವುದು.
ಕಷ್ಟಪಟ್ಟು ದುಡಿದು ದುರ್ಬಲರಿಗೆ ನೆರವಾಗಬೇಕೆಂದು ನಾನೇ ನಿಮಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದೇನೆ. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚು ಸಂತೋಷ’ ಎಂಬ ಯೇಸುವಿನ ಮಾತನ್ನು ನಾವು ಮರೆಯಕೂಡದೆಂದು ನಿಮಗೆ ಉಪದೇಶಿಸಿದೆನು” ಎಂದು ಹೇಳಿದನು.
(37-38) ಅವರೆಲ್ಲರೂ ಬಹಳವಾಗಿ ಅತ್ತರು. “ನೀವು ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲ”ವೆಂದು ಪೌಲನು ಹೇಳಿದ್ದರಿಂದ ಅವರು ಬಹಳ ದುಃಖಗೊಂಡಿದ್ದರು. ಅವರು ಪೌಲನನ್ನು ಅಪ್ಪಿಕೊಂಡು ಮುದ್ದಿಟ್ಟರು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.