ಕಿರ್ಯತ್ಯಾರೀಮಿನ ಜನರು ಬಂದು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋದರು. ಯೆಹೋವನ ಪೆಟ್ಟಿಗೆಯನ್ನು ಬೆಟ್ಟದ ಮೇಲಿದ್ದ ಅಬೀನಾದ್ವಾನ ಮನೆಯಲ್ಲಿಟ್ಟರು. ಯೆಹೋವನ ಪೆಟ್ಟಿಗೆಯನ್ನು ಕಾಯುವುದಕ್ಕಾಗಿ ಅಬೀನಾದ್ವಾನ ಮಗನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು.
ಸಮುವೇಲನು ಇಸ್ರೇಲರಿಗೆ, “ನೀವು ಯೆಹೋವನ ಬಳಿಗೆ ಪೂರ್ಣಮನಸ್ಸಿನಿಂದ ಮತ್ತೆ ಬರುವುದಾದರೆ ನಿಮ್ಮ ಬಳಿಯಿರುವ ಅನ್ಯದೇವರುಗಳನ್ನು ಎಸೆಯಬೇಕು. ನೀವು ಅಷ್ಟೋರೆತ್ ದೇವತೆಯ ವಿಗ್ರಹಗಳನ್ನು ತ್ಯಜಿಸಬೇಕು. ನೀವು ನಿಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಆತನ ಸೇವೆಯನ್ನು ಮಾತ್ರ ಮಾಡಬೇಕು. ಆಗ ಆತನು ನಿಮ್ಮನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.
ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ಈ ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ ಅವರು ತಮ್ಮ ಪಾಪಗಳನ್ನು ಅರಿಕೆ ಮಾಡಿದರು. “ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುವೇಲನು ಇಸ್ರೇಲರ ನ್ಯಾಯಾಧೀಶನಾಗಿ ಮಿಚ್ಪೆಯಲ್ಲಿ ಸೇವೆ ಸಲ್ಲಿಸಿದನು.
ಸಮುವೇಲನು ಕುರಿಮರಿಯನ್ನು ಸಮರ್ಪಿಸುವಾಗ, ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಬಂದರು. ಆದರೆ ಯೆಹೋವನು ಫಿಲಿಷ್ಟಿಯರ ಹತ್ತಿರ ದೊಡ್ಡ ಗುಡುಗನ್ನು ಉಂಟುಮಾಡಿದನು. ಗುಡುಗಿನ ಶಬ್ದವು ಫಿಲಿಷ್ಟಿಯರಲ್ಲಿ ಕಳವಳವನ್ನೂ ಭಯವನ್ನೂ ಉಂಟುಮಾಡಿತು. ಅವರ ಸೇನಾಧಿಪತಿಗಳಿಗೆ ಅವರನ್ನು ಹತೋಟಿಯಲ್ಲಿಡಲಾಗಲಿಲ್ಲ. ಆದಕಾರಣ ಇಸ್ರೇಲರು ಫಿಲಿಷ್ಟಿಯರನ್ನು ಯುದ್ಧದಲ್ಲಿ ಸೋಲಿಸಿದರು.
ಅನಂತರ ಸಮುವೇಲನು ವಿಶೇಷವಾದ ಕಲ್ಲನ್ನು ನೆಡಿಸಿದನು. ಯೆಹೋವನು ಮಾಡಿದ ಕಾರ್ಯಗಳನ್ನು ಜನರು ಜ್ಞಾಪಿಸಿಕೊಳ್ಳುತ್ತಿರಲಿ ಎಂಬುದಕ್ಕಾಗಿ ಅವನು ಈ ರೀತಿ ಮಾಡಿದನು. ಸಮುವೇಲನು ಮಿಚ್ಪೆ ಮತ್ತು ಶೇನಿಗಳ ಮಧ್ಯೆ ಕಲ್ಲನ್ನು ನೆಟ್ಟು, “ಯೆಹೋವನು ಇಲ್ಲಿಯವರೆಗೂ ನಮಗೆ ಸಹಾಯ ಮಾಡಿದನು” ಎಂದು ಹೇಳಿ, ಅದಕ್ಕೆ “ಸಹಾಯದ ಕಲ್ಲು” [*ಸಹಾಯದ ಕಲ್ಲು ಇದರ ಅರ್ಥ: “ಎಬೆನೆಜೆರ್.”] ಎಂದು ಹೆಸರಿಟ್ಟನು.
ಫಿಲಿಷ್ಟಿಯರು ಎಕ್ರೋನ್‌ನಿಂದ ಗತ್‌ವರೆಗಿನ ಪ್ರದೇಶದ ಇಸ್ರೇಲ್ ಪಟ್ಟಣಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಇಸ್ರೇಲರು ಆ ಪಟ್ಟಣಗಳನ್ನು ಮರಳಿ ಗೆದ್ದುಕೊಂಡರು ಮತ್ತು ಆ ಪಟ್ಟಣದ ಸುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡರು. ಇಸ್ರೇಲರ ಮತ್ತು ಅಮೋರಿಯರ ಮಧ್ಯೆ ಶಾಂತಿ ನೆಲೆಸಿತ್ತು.
ಇಸ್ರೇಲಿನಲ್ಲಿ ನ್ಯಾಯಪರಿಪಾಲನೆಗಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್ ಮತ್ತು ಮಿಚ್ಪೆ ಎಂಬ ಪಟ್ಟಣಗಳಿಗೆ ಹೋದನು. ಹೀಗೆ ಅವನು ಈ ಸ್ಥಳಗಳಲ್ಲೆಲ್ಲಾ ಇಸ್ರೇಲರಿಗೆ ನ್ಯಾಯತೀರಿಸುತ್ತಾ ಅವರನ್ನು ಆಳಿದನು.