1
|
ತರುವಾಯ, ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಲು ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದರು. ಆಕೀಷನು, “ನೀನು ಮತ್ತು ನಿನ್ನ ಜನರು ಇಸ್ರೇಲರ ವಿರುದ್ಧ ಹೋರಾಡುವುದಕ್ಕಾಗಿ ನನ್ನ ಜೊತೆಗೂಡಬೇಕೆಂಬುದನ್ನು ನೀನು ಅರ್ಥ ಮಾಡಿಕೊಂಡಿರುವೆಯಾ?” ಎಂದು ದಾವೀದನನ್ನು ಕೇಳಿದನು. |
2
|
ದಾವೀದನು, “ಹೌದು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು. ಆಕೀಷನು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧಕಾಲದಲ್ಲೆಲ್ಲಾ ರಕ್ಷಿಸುವೆ” ಎಂದನು. |
3
|
ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು. ಸೌಲನು ಈ ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು. |
4
|
ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಆ ಸ್ಥಳದಲ್ಲಿಯೇ ಪಾಳೆಯಮಾಡಿಕೊಂಡರು. ಸೌಲನು ಇಸ್ರೇಲರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ಗಿಲ್ಬೋವದಲ್ಲಿ ಪಾಳೆಯ ಮಾಡಿಕೊಂಡನು. |
5
|
ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದುಕೊಳ್ಳತೊಡಗಿತು. |
6
|
ಸೌಲನು ಯೆಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯೆಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕನಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಊರೀಮಿನಿಂದಾಗಲೀ ಪ್ರವಾದಿಗಳಿಂದಾಗಲೀ ಉತ್ತರಕೊಡಲಿಲ್ಲ. |
7
|
ಕಡೆಯದಾಗಿ, ಸೌಲನು ತನ್ನ ಸೇನಾಧಿಪತಿಗಳಿಗೆ, “ಸತ್ತವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಈ ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋಗಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು. ಅವನ ಅಧಿಕಾರಿಗಳು, “ಏಂದೋರಿನಲ್ಲಿ ಒಬ್ಬ ಬೇತಾಳಿಕಳಿದ್ದಾಳೆ” ಎಂದು ಉತ್ತರಿಸಿದರು. |
8
|
ಯಾರಿಗೂ ತನ್ನ ಗುರುತು ಸಿಕ್ಕದಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿಬ್ಬರೊಡನೆ ಅದೇ ರಾತ್ರಿಯಲ್ಲೇ ಆ ಬೇತಾಳಿಕಳನ್ನು ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳದ ಮೂಲಕ ನನ್ನ ಭವಿಷ್ಯವನ್ನು ನನಗೆ ತೋರಿಸು, ನಾನು ಹೆಸರಿಸುವ ವ್ಯಕ್ತಿಯನ್ನು ಕರೆ” ಎಂದು ಕೇಳಿದನು. |
9
|
ಆದರೆ ಆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು. |
10
|
ಸೌಲನು ಯೆಹೋವನ ಹೆಸರಿನಲ್ಲಿ ಆ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಈ ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು. |
11
|
ಅವಳು, “ನಿನಗಾಗಿ ನಾನು ಯಾರನ್ನು ಬರಮಾಡಬೇಕು?” ಎಂದು ಕೇಳಿದಳು. ಸೌಲನು, “ಸಮುವೇಲನನ್ನು ಬರಮಾಡು’ ಎಂದು ಉತ್ತರಿಸಿದನು. |
12
|
ಅಂತೆಯೇ ಆಯಿತು. ಆ ಹೆಂಗಸು ಸಮುವೇಲನನ್ನು ಕಂಡ ಕೊಡಲೇ ಗಟ್ಟಿಯಾಗಿ ಅರಚಿದಳು. ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ! ನೀನೇ ಸೌಲನು” ಎಂದಳು. |
13
|
ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು. ಆ ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು. |
14
|
ಸೌಲನು, “ಅವನ ರೂಪ ಹೇಗಿದೆ?” ಎಂದು ಕೇಳಿದನು. ಆ ಹೆಂಗಸು, “ಅವನು ನಿಲುವಂಗಿಯನ್ನು ಧರಿಸಿಕೊಂಡಿರುವ ಒಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು. ಅವನೇ ಸಮುವೇಲನೆಂಬುದನ್ನು ಸೌಲನು ತಿಳಿದುಕೊಂಡು ಸಾಷ್ಟಾಂಗ ನಮಸ್ಕಾರ ಮಾಡಿದನು. |
15
|
ಸಮುವೇಲನು, “ನನಗೆ ತೊಂದರೆಯನ್ನೇಕೆ ಕೊಡುತ್ತಿರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೇಕೆ?” ಎಂದು ಸೌಲನನ್ನು ಕೇಳಿದನು. ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತ್ಯಜಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಆತನು ಪ್ರವಾದಿಗಳಿಂದಾಗಲೀ ಕನಸುಗಳಿಂದಾಗಲೀ ನನಗೆ ಉತ್ತರಿಸುತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು. |
16
|
ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ? |
17
|
ಯೆಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅವುಗಳ ಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಕೈಗಳಿಂದ ಕಿತ್ತುಕೊಂಡು ನಿನ್ನ ನೆರೆಯವರಲ್ಲಿ ಒಬ್ಬನಿಗೆ ಕೊಟ್ಟಿದ್ದಾನೆ. ದಾವೀದನೇ ಆ ನೆರೆಯವನು. |
18
|
ನೀನು ಯೆಹೋವನಿಗೆ ವಿಧೇಯನಾಗಲಿಲ್ಲ. ನೀನು ಅಮಾಲೇಕ್ಯರನ್ನು ನಾಶಗೊಳಿಸಲಿಲ್ಲ; ಯೆಹೋವನು ಅವರ ಬಗ್ಗೆ ಎಷ್ಟು ಕೋಪಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯಪಡಿಸಿಲ್ಲ. ಆದುದರಿಂದಲೇ ಯೆಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ. |
19
|
ಯೆಹೋವನು ನಿನ್ನನ್ನು ಮತ್ತು ಇಸ್ರೇಲರನ್ನು ಫಿಲಿಷ್ಟಿಯರ ವಶಕ್ಕೆ ಒಪ್ಪಿಸುತ್ತಾನೆ. ಫಿಲಿಷ್ಟಿಯರು ಇಸ್ರೇಲ್ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಡನೆ ಇಲ್ಲಿರುತ್ತೀರಿ!” ಎಂದು ಹೇಳಿದನು. |
20
|
ಆ ಕೂಡಲೇ ಸೌಲನು ನೆಲದ ಮೇಲೆ ಕುಸಿದು ಬಿದ್ದನು. ಸಮುವೇಲನು ಹೇಳಿದ ಮಾತುಗಳನ್ನು ಕೇಳಿ ಸೌಲನು ಭಯಗೊಂಡನು. ಸೌಲನು ಅಂದು ಹಗಲು ಮತ್ತು ರಾತ್ರಿ ಏನನ್ನೂ ತಿಂದಿರಲಿಲ್ಲ; ಆದ್ದರಿಂದ ಅವನು ಬಹಳ ಬಲಹೀನನಾಗಿದ್ದನು. |
21
|
ಆ ಹೆಂಗಸು ಸೌಲನ ಬಳಿಗೆ ಬಂದಳು. ಸೌಲನು ನಿಜವಾಗಿಯೂ ಭಯಗೊಂಡಿರುವುದನ್ನು ಅವಳು ನೋಡಿ, “ಇಲ್ಲಿ ನೋಡು, ನಾನು ನಿನ್ನ ಸೇವಕಿ. ನಾನು ನಿನಗೆ ವಿಧೇಯಳಾಗಿದ್ದೇನೆ. ನಾನು ನನ್ನ ಜೀವವನ್ನೇ ಕಡೆಗಣಿಸಿ ನೀನು ಹೇಳಿದ್ದನ್ನು ಮಾಡಿದೆ. |
22
|
ಈಗ ದಯವಿಟ್ಟು ನನ್ನ ಮಾತನ್ನು ಆಲಿಸು. ನಾನು ನಿನಗೆ ಸ್ವಲ್ಪ ಆಹಾರವನ್ನು ಕೊಡುತ್ತೇನೆ. ನೀನು ತಿನ್ನಲೇಬೇಕು. ಆಗ ನಿನ್ನ ಪ್ರಯಾಣವನ್ನು ಮುಂದುವರಿಸಲು ನಿನಗೆ ಸಾಕಷ್ಟು ಶಕ್ತಿಯಿರುವುದು” ಎಂದು ಹೇಳಿದಳು. |
23
|
ಆದರೆ ಸೌಲನು ನಿರಾಕರಿಸಿ, “ನಾನು ತಿನ್ನುವುದಿಲ್ಲ” ಅಂದನು. ಊಟಮಾಡುವಂತೆ ಸೌಲನ ಅಧಿಕಾರಿಗಳೂ ಬೇಡಿಕೊಂಡರು. ಕೊನೆಗೆ ಸೌಲನು ಅವರ ಮಾತಿಗೆ ಕಿವಿಗೊಟ್ಟನು. ಅವನು ನೆಲದಿಂದ ಮೇಲಕ್ಕೆದ್ದು ಮಂಚದ ಮೇಲೆ ಕುಳಿತನು. |
24
|
ಆ ಹೆಂಗಸಿನ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು. ಅವಳು ಬೇಗನೆ ಅದನ್ನು ಕೊಯ್ದಳು. ಅವಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ನಾದಿದಳು. ನಂತರ ಅವಳು ಕೆಲವು ರೊಟ್ಟಿಗಳನ್ನು ಸುಟ್ಟಳು. |
25
|
ಆ ಹೆಂಗಸು ಸೌಲನ ಮತ್ತು ಅವನ ಸೇನಾಧಿಕಾರಿಗಳ ಮುಂದೆ ಆಹಾರವನ್ನಿಟ್ಟಳು. ಸೌಲನು ಮತ್ತು ಅವನ ಅಧಿಕಾರಿಗಳು ಊಟಮಾಡಿದರು. ನಂತರ ಆ ರಾತ್ರಿಯೇ ಅವರು ಅಲ್ಲಿಂದ ಹೊರಟುಹೋದರು. |
1-Samuel 28:11 Kannada Language Bible Words basic statistical display
COMING SOON ...