Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

1 Samuel Chapters

1 Samuel 26 Verses

1 ಜೀಫಿನ ಜನರು ಸೌಲನನ್ನು ನೋಡುವುದಕ್ಕಾಗಿ ಗಿಬೆಯಕ್ಕೆ ಹೋದರು. ಅವರು ಸೌಲನಿಗೆ, “ದಾವೀದನು ಹಕೀಲಾ ಬೆಟ್ಟದ ಮೇಲೆ ಅಡಗಿಕೊಂಡಿದ್ದಾನೆ. ಈ ಬೆಟ್ಟವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿದೆ” ಎಂದು ಹೇಳಿದರು.
2 ಸೌಲನು ಜೀಫ್ ಅರಣ್ಯಕ್ಕೆ ಹೋದನು. ಇಸ್ರೇಲಿನಲ್ಲೆಲ್ಲಾ ತಾನೇ ಆರಿಸಿದ ಮೂರು ಸಾವಿರ ಜನ ಸೈನಿಕರನ್ನು ಸೌಲನು ತನ್ನೊಡನೆ ಕರೆದುಕೊಂಡು ಹೋದನು. ಸೌಲನು ಮತ್ತು ಅವನ ಜನರು ದಾವೀದನನ್ನು ಜೀಫ್ ಅರಣ್ಯದಲ್ಲಿ ಹುಡುಕಿದರು.
3 ಸೌಲನು ಹಕೀಲಾ ಬೆಟ್ಟದ ಮೇಲೆ ತನ್ನ ಪಾಳೆಯವನ್ನು ಮಾಡಿಕೊಂಡನು. ಈ ಪಾಳೆಯವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿರುವ ರಸ್ತೆಯ ಅಂಚಿನಲ್ಲಿತ್ತು. ದಾವೀದನು ಅರಣ್ಯದಲ್ಲಿ ನೆಲೆಸಿದ್ದನು. ಸೌಲನು ತನ್ನನ್ನು ಹಿಂಬಾಲಿಸಿಕೊಂಡು ಅಲ್ಲಿಗೆ ಬಂದಿರುವುದು ದಾವೀದನಿಗೆ ತಿಳಿಯಿತು.
4 ಆಗ ದಾವೀದನು ಗೂಢಚಾರರನ್ನು ಕಳುಹಿಸಿದನು. ಸೌಲನು ಹಕೀಲಾಕ್ಕೆ ಬಂದಿರುವುದು ದಾವೀದನಿಗೆ ತಿಳಿಯಿತು.
5 ಸೌಲನು ಪಾಳೆಯ ಮಾಡಿಕೊಂಡಿದ್ದ ಸ್ಥಳಕ್ಕೆ ದಾವೀದನು ಹೋಗಿ ಸೌಲನು ಮತ್ತು ಅಬ್ನೇರನು ಮಲಗಿರುವ ಸ್ಥಳವನ್ನು ನೋಡಿಕೊಂಡನು. (ನೇರನ ಮಗನಾದ ಅಬ್ನೇರನು ಸೌಲನ ಸೈನ್ಯದಲ್ಲಿ ಸೇನಾಪತಿಯಾಗಿದ್ದನು.) ಸೌಲನು ಪಾಳೆಯದ ಮಧ್ಯದಲ್ಲಿ ಮಲಗಿದ್ದನು. ಸೌಲನ ಸುತ್ತ ಸೈನ್ಯವೆಲ್ಲವೂ ಇದ್ದಿತು.
6 ದಾವೀದನು ಹಿತ್ತಿಯನಾದ ಅಹೀಮೆಲೆಕನ ಮತ್ತು ಚೆರೂಯಳ ಮಗನೂ ಯೋವಾಬನ ಸಹೋದರನೂ ಆದ ಅಬೀಷೈರೊಡನೆ ಮಾತನಾಡಿದನು. ಅವನು ಅವರಿಗೆ, “ನನ್ನೊಡನೆ ಸೌಲನ ಪಾಳೆಯಕ್ಕೆ ಯಾರು ಬರುತ್ತೀರಿ?” ಎಂದು ಕೇಳಿದನು. “ನಾನು ಬರುತ್ತೇನೆ” ಎಂದು ಅಬೀಷೈ ಉತ್ತರಿಸಿದನು.
7 ರಾತ್ರಿಯಾಯಿತು. ದಾವೀದ ಮತ್ತು ಅಬೀಷೈ ಸೌಲನ ಪಾಳೆಯಕ್ಕೆ ಹೋದರು. ಪಾಳೆಯದ ಮಧ್ಯದಲ್ಲಿ ಸೌಲನು ನಿದ್ರಿಸುತ್ತಿದ್ದನು. ಅವನ ಭರ್ಜಿಯು ಅವನ ತಲೆಯ ಹತ್ತಿರ ನೆಲದಲ್ಲಿ ನೆಡಲ್ಪಟ್ಟಿತ್ತು. ಸೌಲನ ಸುತ್ತಲೂ ಅಬ್ನೇರನು ಸೈನ್ಯದೊಡನೆ ನಿದ್ರಿಸುತ್ತಿದ್ದನು.
8 ಅಬೀಷೈಯು, “ಯೆಹೋವನು ಈ ದಿನ ನಿನ್ನ ಶತ್ರುವನ್ನು ಸೋಲಿಸಲು ನಿನಗೆ ಒಪ್ಪಿಸಿದ್ದಾನೆ. ಸೌಲನನ್ನು ಅವನ ಭರ್ಜಿಯಿಂದಲೇ ಅವನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯಲು ನನಗೆ ಅವಕಾಶಕೊಡು. ನಾನು ಒಂದೇ ಸಲಕ್ಕೆ ಆ ಕಾರ್ಯವನ್ನು ಮುಗಿಸಿಬಿಡುತ್ತೇನೆ!” ಎಂದು ದಾವೀದನನ್ನು ಕೇಳಿದನು.
9 ಆದರೆ ದಾವೀದನು ಅಬೀಷೈಗೆ, “ಸೌಲನನ್ನು ಕೊಲ್ಲಬೇಡ! ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಿಗೆ ಯಾರೇ ಕೇಡು ಮಾಡಿದರೂ ಅವರನ್ನು ದಂಡಿಸಲೇಬೇಕು!
10 ಯೆಹೋವನಾಣೆ, ಸೌಲನನ್ನು ಸ್ವತಃ ಯೆಹೋವನೇ ದಂಡಿಸುತ್ತಾನೆ. ಸೌಲನು ಸ್ವಾಭಾವಿಕನಾದ ಮರಣಹೊಂದಬಹುದು ಅಥವಾ ಯುದ್ಧದಲ್ಲಿ ಕೊಲ್ಲಲ್ಪಡಬಹುದು.
11 ಆದರೆ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನನ್ನು ನಾನು ಕೊಲ್ಲುವಂತಹ ಪರಿಸ್ಥಿತಿಯನ್ನು ಎಂದಿಗೂ ನನಗೆ ಕೊಡದಂತೆ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ! ಈಗ ಸೌಲನ ತಲೆಯ ಹತ್ತಿರವಿರುವ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೊಂಡ ನಂತರ ನಾವು ಹೋಗೋಣ” ಎಂದು ಹೇಳಿದನು.
12 ಅಂತೆಯೇ, ಸೌಲನ ತಲೆಯ ಹತ್ತಿರವಿದ್ದ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ದಾವೀದನು ತೆಗೆದುಕೊಂಡನು. ನಂತರ ದಾವೀದ ಮತ್ತು ಅಬೀಷೈ ಸೌಲನ ಪಾಳೆಯನ್ನು ಬಿಟ್ಟು ಹೋದರು. ಇದನ್ನು ಯಾರೂ ನೋಡಲಿಲ್ಲ. ಇದರ ಬಗ್ಗೆ ಯಾರಿಗೂ ತಿಳಿಯಲಿಲ್ಲ. ಒಬ್ಬನಾದರೂ ನಿದ್ರೆಯಿಂದ ಎಚ್ಚರಗೊಳ್ಳಲಿಲ್ಲ! ಸೌಲನು ಮತ್ತು ಅವನ ಸೈನಿಕರೆಲ್ಲರೂ ನಿದ್ರಿಸುತ್ತಿದ್ದರು. ಏಕೆಂದರೆ ಯೆಹೋವನು ಅವರಿಗೆ ಗಾಢನಿದ್ರೆಯನ್ನು ಬರಮಾಡಿದ್ದನು.
13 ದಾವೀದನು ಕಣಿವೆಯ ಮತ್ತೊಂದು ಕಡೆಗೆ ಹೋಗಿ ಬೆಟ್ಟದ ತುದಿಯಲ್ಲಿ ನಿಂತುಕೊಂಡನು. ದಾವೀದನ ಮತ್ತು ಸೌಲನ ಪಾಳೆಯಗಳಿಗೆ ತುಂಬಾ ಅಂತರವಿತ್ತು.
14 ದಾವೀದನು ಸೌಲನ ಸೈನ್ಯವನ್ನೂ ನೇರನ ಮಗನಾದ ಅಬ್ನೇರನನ್ನೂ ಉದ್ದೇಶಿಸಿ, “ಅಬ್ನೇರನೇ, ನನಗೆ ಉತ್ತರಿಸು” ಎಂದು ಕೂಗಿಕೊಂಡನು. ಅಬ್ನೇರನು, “ನೀನು ಯಾರು? ರಾಜನನ್ನು ನೀನು ಕರೆಯುತ್ತಿರುವುದೇಕೆ?” ಎಂದು ಕೇಳಿದನು.
15 ದಾವೀದನು, “ನೀನು ಶೂರನಲ್ಲವೇ? ಇಸ್ರೇಲಿನಲ್ಲಿನ ಇತರ ಶೂರರಿಗಿಂತಲೂ ನೀನು ಉತ್ತಮನಲ್ಲವೇ? ಹೀಗಿರುವಾಗ ನೀನು ನಿನ್ನ ಒಡೆಯನಾದ ರಾಜನನ್ನು ಏಕೆ ರಕ್ಷಿಸಲಿಲ್ಲ? ಒಬ್ಬ ಸಾಮಾನ್ಯ ಮನುಷ್ಯನು ನಿಮ್ಮ ಪಾಳೆಯಕ್ಕೆ ಬಂದಿದ್ದರೂ ನಿಮ್ಮ ಒಡೆಯನಾದ ರಾಜನನ್ನು ಕೊಲ್ಲುತ್ತಿದ್ದನು.
16 ನೀನು ದೊಡ್ಡ ತಪ್ಪನ್ನು ಮಾಡಿದೆ! ಯೆಹೋವನಾಣೆ, ನೀನು ಮತ್ತು ನಿನ್ನ ಜನರು ಸಾಯಲೇಬೇಕಾಗಿತ್ತು. ಏಕೆನ್ನುವಿಯೊ? ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾದ ನಿನ್ನ ಒಡೆಯನನ್ನು ನೀನು ರಕ್ಷಿಸಲಾಗಲಿಲ್ಲ. ಸೌಲನ ತಲೆಯ ಹತ್ತಿರವಿದ್ದ ಭರ್ಜಿ ಮತ್ತು ನೀರಿನ ತಂಬಿಗೆಯನ್ನು ಹುಡುಕಿರಿ, ಅವು ಎಲ್ಲಿಗೆ ಹೋದವು?” ಎಂದು ಕೇಳಿದನು.
17 ದಾವೀದನ ಧ್ವನಿಯು ಸೌಲನಿಗೆ ತಿಳಿಯಿತು. ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು. ದಾವೀದನು, “ಹೌದು, ನನ್ನ ಒಡೆಯನಾದ ರಾಜನೇ, ಇದು ನನ್ನ ಧ್ವನಿ” ಎಂದನು.
18 ದಾವೀದನು, “ಒಡೆಯನೇ, ನನ್ನನ್ನೇಕೆ ಅಟ್ಟಿಸಿಕೊಂಡು ಬರುತ್ತಿರುವೆ? ನಾನು ಮಾಡಿರುವ ತಪ್ಪಾದರೂ ಏನು? ನಾನು ತಪ್ಪಿತಸ್ಥನೇ?
19 ನನ್ನ ಒಡೆಯನೇ, ನನ್ನ ರಾಜನೇ, ನನ್ನ ಮಾತುಗಳನ್ನು ಆಲಿಸು! ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿರುವುದಾದರೆ ಆತನಿಗೆ ನೈವೇದ್ಯವನ್ನು ಅರ್ಪಿಸೋಣ. ಆದರೆ ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಜನರು ಮಾಡಿದ್ದರೆ, ಅವರಿಗೆ ಯೆಹೋವನು ಕೇಡಾಗುವಂತೆ ಮಾಡಲಿ. ನನಗೆ ಯೆಹೋವನು ನೀಡಿದ ಭೂಮಿಯನ್ನು ನಾನು ಬಿಡುವಂತೆ ಜನರು ಬಲವಂತಪಡಿಸಿದರು. ‘ಹೋಗು, ಹೊರದೇಶೀಯರೊಂದಿಗೆ ನೆಲೆಸು. ಹೋಗು, ಇತರ ದೇವರುಗಳನ್ನು ಆರಾಧಿಸು’ ಎಂದು ಜನರು ನನಗೆ ಹೇಳಿದರು.
20 ಯೆಹೋವನ ಸನ್ನಿಧಿಯಿಂದ ದೂರದಲ್ಲಿರುವ ಈ ಸ್ಥಳದಲ್ಲಿ ನನ್ನನ್ನು ಸಾಯಿಸಬೇಡಿ. ಇಸ್ರೇಲರ ರಾಜನು ಒಂದು ಸಣ್ಣ ಹುಳಕ್ಕಾಗಿ ಹುಡುಕುತ್ತಾ ಹೊರ ಬಂದಿದ್ದಾನೆ. ಕೌಜುಗ ಹಕ್ಕಿಯನ್ನು ಬೆಟ್ಟಗಳಲ್ಲಿ ಬೇಟೆಯಾಡುವ ಬೇಟೆಗಾರನಂತೆ ನೀನಿರುವೆಯಲ್ಲಾ!” ಎಂದು ಹೇಳಿದನು.
21 ನಂತರ ಸೌಲನು, “ನಾನು ಪಾಪಮಾಡಿದ್ದೇನೆ. ನನ್ನ ಮಗನಾದ ದಾವೀದನೇ, ಹಿಂದಿರುಗಿ ಬಾ. ನನ್ನ ಜೀವವು ನಿನಗೆ ಮುಖ್ಯವೆಂಬುದನ್ನು ನನಗೆ ನೀನು ಈ ದಿನ ತೋರಿಸಿರುವೆ. ಆದುದರಿಂದ ನಾನು ನಿನ್ನನ್ನು ಹಿಂಸಿಸಲು ಪ್ರಯತ್ನಿಸುವುದಿಲ್ಲ. ನಾನು ಮೂರ್ಖನಂತೆ ವರ್ತಿಸಿದೆ. ನಾನು ದೊಡ್ಡ ತಪ್ಪನ್ನು ಮಾಡಿದ್ದೇನೆ” ಎಂದನು.
22 ದಾವೀದನು, ‘ರಾಜನ ಭರ್ಜಿಯು ಇಲ್ಲಿದೆ. ನಿನ್ನಲ್ಲಿರುವ ಒಬ್ಬ ಯುವಕನು ಇಲ್ಲಿಗೆ ಬಂದು ಅದನ್ನು ತೆಗೆದುಕೊಂಡು ಹೋಗಲಿ.
23 ಪ್ರತಿಯೊಬ್ಬನಿಗೂ ಅವನ ಕಾರ್ಯಗಳಿಗೆ ಮತ್ತು ನಂಬಿಗಸ್ತಿಕೆಗೆ ತಕ್ಕಂತೆ ಯೆಹೋವನು ಪ್ರತಿಫಲ ಕೊಡುವನು. ಇಂದು ಯೆಹೋವನು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೂ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾಗಿರುವ ನಿನಗೆ ನಾನು ಕೇಡನ್ನು ಮಾಡುವುದಿಲ್ಲ!
24 ನಿನ್ನ ಜೀವವು ನನಗೆ ಮುಖ್ಯವೆಂಬುದನ್ನು ಈ ದಿನ ನಾನು ನಿನಗೆ ತೋರಿಸಿದೆ! ಇದೇ ರೀತಿ, ನನ್ನ ಜೀವವು ತನಗೆ ಮುಖ್ಯವೆಂಬುದನ್ನು ಯೆಹೋವನು ತೋರಿಸುತ್ತಾನೆ! ಯೆಹೋವನು ನನ್ನನ್ನು ಎಲ್ಲಾ ಕೇಡುಗಳಿಂದಲೂ ರಕ್ಷಿಸುತ್ತಾನೆ” ಎಂದು ಹೇಳಿದನು.
25 ನಂತರ ಸೌಲನು ದಾವೀದನಿಗೆ, “ದೇವರು ನಿನ್ನನ್ನು ಆಶೀರ್ವದಿಸಲಿ, ನನ್ನ ಮಗನಾದ ದಾವೀದನೇ, ನೀನು ದೊಡ್ಡ ಕಾರ್ಯಗಳನ್ನು ಮಾಡುವೆ; ನೀನು ಯಶಸ್ವಿಯಾಗುವೆ” ಎಂದನು. ದಾವೀದನು ತನ್ನ ಮಾರ್ಗದಲ್ಲಿ ಹೊರಟು ಹೋದನು. ಸೌಲನು ಮನೆಗೆ ಹಿಂದಿರುಗಿದನು.
×

Alert

×