ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಯುದ್ಧಕ್ಕಾಗಿ ಯೆಹೂದದೇಶದ ಸೋಕೋವಿನಲ್ಲಿ ಒಟ್ಟುಗೂಡಿಸಿದರು. ಅವರು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀಮ್ ಎಂಬ ಹೆಸರಿನ ಪಟ್ಟಣದಲ್ಲಿ ಪಾಳೆಯಮಾಡಿಕೊಂಡರು.
ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಗುಂಟೆಯ ಗಾತ್ರದಷ್ಟಿತ್ತು. ಆ ಬರ್ಜಿಯ ಅಲಗಿನ ಭಾರವು ಹದಿನೈದು ಪೌಂಡ್‌ಗಳಷ್ಟಿತ್ತು. ಗೊಲ್ಯಾತನ ಗುರಾಣಿಯನ್ನು ಹೊತ್ತಿದ್ದ ಅವನ ಸಹಾಯಕನು ಅವನ ಮುಂದೆ ಹೋಗುತ್ತಿದ್ದನು.
ಗೊಲ್ಯಾತನು ಪ್ರತಿದಿನ ಹೊರಕ್ಕೆ ಬಂದು ಇಸ್ರೇಲಿನ ಸೈನಿಕರನ್ನು ಕಂಡು ಆರ್ಭಟಿಸುತ್ತಿದ್ದನು. ಅವನು, “ನೀವೆಲ್ಲ ಸಾಲಾಗಿನಿಂತು ಯುದ್ಧಕ್ಕೆ ಸಿದ್ಧರಾಗಿರುವುದೇಕೆ? ನೀವು ಸೌಲನ ಸೇವಕರು. ನಾನು ಫಿಲಿಷ್ಟಿಯನು, ನೀವು ಒಬ್ಬನನ್ನು ಆರಿಸಿ ನನ್ನೊಡನೆ ಹೋರಾಡಲು ಕಳುಹಿಸಿ.
ಅವನು ನನ್ನನ್ನು ಕೊಂದುಬಿಟ್ಟರೆ, ನಾವು ಅಂದರೆ ಫಿಲಿಷ್ಟಿಯರೆಲ್ಲ ನಿಮ್ಮ ಗುಲಾಮರಾಗುತ್ತೇವೆ. ಆದರೆ ನಾನು ಅವನನ್ನು ಸೋಲಿಸಿ ಕೊಂದುಬಿಟ್ಟರೆ, ನೀವೆಲ್ಲ ನಮಗೆ ಗುಲಾಮರಾಗಿದ್ದು ನಮ್ಮ ಸೇವೆಯನ್ನು ಮಾಡಬೇಕು” ಎಂದು ಆರ್ಭಟಿಸಿದನು.
ನಿನ್ನ ಸಹೋದರರ ಸಹಸ್ರಾಧಿಪತಿಗೆ ಹತ್ತು ಉಂಡೆ ಗಿಣ್ಣನ್ನೂ ತೆಗೆದುಕೊಂಡು ಹೋಗು. ನಿನ್ನ ಸಹೋದರರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು, ಅವರು ಕ್ಷೇಮವಾಗಿದ್ದಾರೆಂಬುದಕ್ಕೆ ಒಂದು ಗುರುತನ್ನು ತೆಗೆದುಕೊಂಡು ಬಾ.
ಬಳಿಕ ತನ್ನ ಸಹೋದರರನ್ನು ಕಂಡುಕೊಂಡು ಅವರೊಂದಿಗೆ ಮಾತಾಡತೊಡಗಿದನು. ಆ ಸಮಯದಲ್ಲಿ ಗತ್ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಷ್ಟಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆರ್ಭಟಿಸಿದನು. ದಾವೀದನಿಗೆ ಅವನ ಆರ್ಭಟವು ಕೇಳಿಸಿತು.
ಇಸ್ರೇಲರಲ್ಲಿನ ಒಬ್ಬನು, “ನೀವು ಅವನನ್ನು ನೋಡಿದಿರಾ! ಅವನನ್ನು ನೋಡಿ! ಆ ಗೊಲ್ಯಾತನು ಪ್ರತಿನಿತ್ಯ ಹೊರಗೆ ಬಂದು ಇಸ್ರೇಲರನ್ನು ಮತ್ತೆಮತ್ತೆ ಹಾಸ್ಯಮಾಡುತ್ತಿದ್ದಾನೆ. ಅವನನ್ನು ಕೊಂದವನಿಗೆ ಸೌಲನು ಅಪಾರ ಐಶ್ವರ್ಯವನ್ನು ಕೊಡುವುದಲ್ಲದೆ ತನ್ನ ಮಗಳನ್ನೂ ಅವನಿಗೆ ಕೊಟ್ಟು ಮದುವೆ ಮಾಡುತ್ತಾನೆ; ಅಲ್ಲದೆ ಅವನ ವಂಶವನ್ನು ಇಸ್ರೇಲಿನಲ್ಲಿ ಸ್ವತಂತ್ರಗೊಳಿಸುತ್ತಾನೆ” ಎಂದು ಹೇಳಿದನು.
ದಾವೀದನು ತನ್ನ ಹತ್ತಿರ ನಿಂತಿದ್ದವನಿಗೆ, “ಈ ಫಿಲಿಷ್ಟಿಯನನ್ನು ಕೊಂದು ಇಸ್ರೇಲರಿಗೆ ಉಂಟಾಗಿರುವ ಅಪನಿಂದೆಯನ್ನು ಹೋಗಲಾಡಿಸುವವನಿಗೆ ಸಿಗುವ ಬಹುಮಾನವೇನು? ಈ ಗೊಲ್ಯಾತನ್ಯಾರು? ಇವನು ಕೇವಲ ಒಬ್ಬ ಪರದೇಶಿ. ಗೊಲ್ಯಾತನು ಫಿಲಿಷ್ಟಿಯನೇ ಹೊರತು ಬೇರೆ ಯಾರೂ ಅಲ್ಲ. ಜೀವಸ್ವರೂಪನಾದ ದೇವರ ಸೈನ್ಯದ ವಿರೋಧವಾಗಿ ಮಾತಾಡಲು ಇವನು ತನ್ನನ್ನು ಯಾರೆಂದು ಯೋಚಿಸಿಕೊಂಡಿದ್ದಾನೆ?” ಎಂದನು.
ದಾವೀದನು ಸೈನಿಕರೊಡನೆ ಮಾತಾಡುತ್ತಿರುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿಸಿಕೊಂಡನು. ಎಲೀಯಾಬನು ದಾವೀದನ ಮೇಲೆ ಕೋಪಗೊಂಡು ಅವನಿಗೆ, “ನೀನು ಇಲ್ಲಿಗೆ ಬಂದದ್ದೇಕೆ? ಅಲ್ಲಿದ್ದ ಕೆಲವು ಕುರಿಗಳನ್ನು ಯಾರ ಬಳಿ ಬಿಟ್ಟಿರುವೆ? ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬುದು ನನಗೆ ಗೊತ್ತು. ನಿನಗೆ ಹೇಳಿದ್ದನ್ನು ನೀನು ಮಾಡುವುದಿಲ್ಲ. ನೀನು ಕೇವಲ ಯುದ್ಧವನ್ನು ನೋಡುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆ” ಎಂದು ಗದರಿಸಿದನು.
ಆದನ್ನು ನಾನು ಅಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಆ ಕ್ರೂರ ಮೃಗದ ಮೇಲೆ ಆಕ್ರಮಣ ಮಾಡಿ, ಅದರ ಬಾಯಿಂದ ಕುರಿಯನ್ನು ಬಿಡಿಸುತ್ತಿದ್ದೆನು. ಅದು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ಅದರ ಗಡ್ಡ ಹಿಡಿದು ಹೋರಾಡಿ ಅದನ್ನು ಕೊಲ್ಲುತ್ತಿದ್ದೆನು.
ನಾನು ಒಂದು ಸಿಂಹವನ್ನೂ ಒಂದು ಕರಡಿಯನ್ನೂ ಕೊಂದಿದ್ದೇನೆ. ಅದೇ ರೀತಿಯಲ್ಲಿ ನಾನು ಅನ್ಯದೇಶಿಯನಾದ ಗೊಲ್ಯಾತನನ್ನೂ ಕೊಂದು ಹಾಕುತ್ತೇನೆ. ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸಿದ್ದರಿಂದ ಗೊಲ್ಯಾತನು ಸಾಯಲೇಬೇಕು.
ಯೆಹೋವನು ನನ್ನನ್ನು ಸಿಂಹದಿಂದಲೂ ಕರಡಿಯಿಂದಲೂ ರಕ್ಷಿಸಿದನು. ಯೆಹೋವನು ಈ ಗೊಲ್ಯಾತನಿಂದಲೂ ನನ್ನನ್ನು ರಕ್ಷಿಸುತ್ತಾನೆ” ಎಂದು ಹೇಳಿದನು. ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನೊಂದಿಗಿರಲಿ” ಎಂದು ಹೇಳಿದನು.
ದಾವೀದನು ಕತ್ತಿಯನ್ನು ಸಿಕ್ಕಿಸಿಕೊಂಡು, ಆ ಕಡೆ ಈ ಕಡೆ ಸುತ್ತಾಡಿದನು. ಸೌಲನ ಯುದ್ಧ ವಸ್ತ್ರಗಳನ್ನು ದಾವೀದನು ಧರಿಸಲು ಪ್ರಯತ್ನಿಸಿದನು. ಆದರೆ ದಾವೀದನಿಗೆ ಅಂತಹ ಭಾರದ ವಸ್ತ್ರಗಳನ್ನು ಧರಿಸಿ ಅಭ್ಯಾಸವಿರಲಿಲ್ಲ. ದಾವೀದನು ಸೌಲನಿಗೆ, “ನಾನು ಇವುಗಳನ್ನು ಧರಿಸಿಕೊಂಡು ಹೋರಾಡಲಾಗುವುದಿಲ್ಲ; ನನಗೆ ಇವುಗಳನ್ನು ಧರಿಸಿಕೊಂಡು ಅಭ್ಯಾಸವಿಲ್ಲ” ಎಂದು ಹೇಳಿ ಅವುಗಳನ್ನೆಲ್ಲ ತೆಗೆದು ಹಾಕಿದನು.
ದಾವೀದನು ತನ್ನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಕಣಿವೆಯಲ್ಲಿ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು ಅವುಗಳನ್ನು ಕುರಿಕಾಯಲು ಬಳಸುವ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ಕೈಯಲ್ಲಿ ಹಿಡಿದುಕೊಂಡನು. ನಂತರ ಗೊಲ್ಯಾತನನ್ನು ಎದುರಿಸಲು ಹೋದನು.
ಗೊಲ್ಯಾತನು ದಾವೀದನಿಗೆ, “ಈ ದೊಣ್ಣೆ ಏತಕ್ಕಾಗಿ? ನಾಯಿಯನ್ನು ಓಡಿಸುವಂತೆ ನನ್ನನ್ನು ಓಡಿಸುವುದಕ್ಕೆ ಬಂದೆಯಾ?” ಎಂದು ಕೇಳಿದನು. ಬಳಿಕ ಗೊಲ್ಯಾತನು ತನ್ನ ದೇವರುಗಳ ಹೆಸರುಗಳ ಮೇಲೆ ದಾವೀದನನ್ನು ಶಪಿಸಿದನು.
ದಾವೀದನು ಫಿಲಿಷ್ಟಿಯನಿಗೆ, “ನೀನಾದರೋ ಖಡ್ಗ, ಈಟಿ ಮತ್ತು ಭರ್ಜಿಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದಿರುವೆ. ನಾನಾದರೋ ಸರ್ವಶಕ್ತನೂ ಇಸ್ರೇಲರ ಸೈನ್ಯಗಳ ದೇವರೂ ಆಗಿರುವ ಯೆಹೋವನ ಹೆಸರಿನಲ್ಲಿ ನಿನ್ನ ಬಳಿಗೆ ಬಂದಿರುವೆ! ನೀನು ಹೀಯಾಳಿಸಿದ್ದು ಆತನನ್ನೇ.
ಇಂದು ನಾನು ನಿನ್ನನ್ನು ಸೋಲಿಸಲು ಯೆಹೋವನು ಸಹಾಯಮಾಡುತ್ತಾನೆ. ನಾನು ನಿನ್ನನ್ನು ಕೊಲ್ಲುತ್ತೇನೆ. ಇಂದು ನಾನು ನಿನ್ನ ತಲೆಯನ್ನು ಕತ್ತರಿಸಿ ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಮೃಗಗಳಿಗೂ ಆಹಾರವನ್ನಾಗಿ ಕೊಡುತ್ತೇನೆ. ಉಳಿದೆಲ್ಲ ಫಿಲಿಷ್ಟಿಯರಿಗೂ ಸಹ ನಾವು ಅದೇ ರೀತಿ ಮಾಡುತ್ತೇವೆ. ಆಗ ಇಸ್ರೇಲಿನಲ್ಲಿ ದೇವರಿದ್ದಾನೆಂಬುದು ಇಡೀ ಜಗತ್ತಿಗೆಲ್ಲ ಗೊತ್ತಾಗುವುದು!
ಜನರನ್ನು ರಕ್ಷಿಸಲು ಯೆಹೋವನಿಗೆ ಕತ್ತಿ ಮತ್ತು ಈಟಿಗಳ ಅಗತ್ಯವಿಲ್ಲ ಎಂಬುದು ಇಲ್ಲಿ ಸೇರಿರುವ ಜನರಿಗೆಲ್ಲ ತಿಳಿಯುತ್ತದೆ. ಇದು ಯೆಹೋವನ ಯುದ್ಧ. ಫಿಲಿಷ್ಟಿಯರನ್ನೆಲ್ಲ ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ” ಎಂದು ಹೇಳಿದನು.
ದಾವೀದನು ತನ್ನ ಚೀಲದಿಂದ ಒಂದು ಕಲ್ಲನ್ನು ಹೊರತೆಗೆದನು. ಅದನ್ನು ಅವನು ಕವಣೆಯಲ್ಲಿ ಸಿಕ್ಕಿಸಿ ಬೀಸಿ ಹೊಡೆದನು. ಕವಣೆಯಿಂದ ಅವನು ಬೀಸಿದ ಕಲ್ಲು ಗೊಲ್ಯಾತನ ಹಣೆಗೆ ಬಡಿಯಿತು. ಆ ಕಲ್ಲು ಅವನ ಹಣೆಯಲ್ಲಿ ಆಳವಾದ ಗಾಯವನ್ನು ಮಾಡಿತು. ಕೂಡಲೇ ಗೊಲ್ಯಾತನು ಬೋರಲಾಗಿ ನೆಲದ ಮೇಲೆ ಬಿದ್ದನು.
ದಾವೀದನು ಓಡುತ್ತಾ ಹೋಗಿ ಫಿಲಿಷ್ಟಿಯನ ಪಕ್ಕದಲ್ಲಿ ನಿಂತುಕೊಂಡನು. ದಾವೀದನು ಗೊಲ್ಯಾತನ ಕತ್ತಿಯನ್ನು ಒರೆಯಿಂದ ತೆಗೆದು ಅದೇ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸಿ ಹಾಕಿದನು. ದಾವೀದನು ಈ ರೀತಿಯಲ್ಲಿ ಗೊಲ್ಯಾತನನ್ನು ಕೊಂದನು. ಫಿಲಿಷ್ಟಿಯರು ತಮ್ಮ ನಾಯಕನು ಸತ್ತದ್ದನ್ನು ನೋಡಿದಾಗ ಹಿಂದಿರುಗಿ ಓಡಿಹೋದರು.
ಇಸ್ರೇಲಿನ ಮತ್ತು ಯೆಹೂದದ ಸೈನಿಕರು ಆರ್ಭಟಮಾಡುತ್ತಾ ಫಿಲಿಷ್ಟಿಯರ ಬೆನ್ನಟ್ಟಿದರು. ಇಸ್ರೇಲರು ಫಿಲಿಷ್ಟಿಯರನ್ನು ಗತ್ ನಗರದ ಗಡಿಯವರೆಗೂ ಎಕ್ರೋನಿನ ಬಾಗಿಲುಗಳ ವರೆಗೂ ಅಟ್ಟಿಸಿಕೊಂಡು ಹೋದರು. ಅವರು ಅನೇಕ ಫಿಲಿಷ್ಟಿಯರನ್ನು ಕೊಂದರು. ಅವರ ಶವಗಳು ಶಾರಯಿಮಿನ ಮಾರ್ಗದುದ್ದಕ್ಕೂ ಗತ್ ಮತ್ತು ಎಕ್ರೋನ್‌ಗಳವರೆಗೆ ಬಿದ್ದಿದ್ದವು.
ದಾವೀದನು ಗೊಲ್ಯಾತನೊಂದಿಗೆ ಯುದ್ಧಕ್ಕೆ ಹೊರಟಿದ್ದನ್ನು ಸೌಲನು ಗಮನಿಸುತ್ತಿದ್ದನು. ಸೌಲನು ತನ್ನ ಸೇನಾಧಿಪತಿಯಾದ ಅಬ್ನೇರನನ್ನು, “ಆ ಯುವಕನ ತಂದೆ ಯಾರು?” ಎಂದು ಪ್ರಶ್ನಿಸಿದನು. ಅಬ್ನೇರನು, “ಅರಸನೇ, ನಿನ್ನ ಜೀವದಾಣೆ, ಅವನು ಯಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.