English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

1 Samuel Chapters

1 Samuel 16 Verses

1 ಯೆಹೋವನು ಸಮುವೇಲನಿಗೆ, “ನೀನು ಸೌಲನಿಗಾಗಿ ಎಷ್ಟುಕಾಲ ಶೋಕಿಸುವೆ? ನಾನು ಸೌಲನನ್ನು ಇಸ್ರೇಲರ ರಾಜತ್ವದಿಂದ ತಿರಸ್ಕರಿಸಿರುತ್ತೇನೆ. ನೀನು ಕೊಂಬಿನಲ್ಲಿ ಎಣ್ಣೆಯನ್ನು ತುಂಬಿಕೊಂಡು ಬಾ. ನಾನು ನಿನ್ನನ್ನು ಇಷಯನೆಂಬ ಮನುಷ್ಯನ ಬಳಿಗೆ ಕಳುಹಿಸುತ್ತೇನೆ. ಇಷಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದನು. ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಹೊಸ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.
2 ಅದಕ್ಕೆ ಸಮುವೇಲನು, “ನಾನು ಹೊರಟರೆ ಸೌಲನಿಗೆ ಈ ಸುದ್ದಿಯು ತಿಳಿಯುತ್ತದೆ. ಆಗ ಅವನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ” ಎಂದನು. ಯೆಹೋವನು, “ಬೆತ್ಲೆಹೇಮಿಗೆ ಹೋಗು. ನಿನ್ನೊಡನೆ ಒಂದು ಎಳೆಕರುವನ್ನು ತೆಗೆದುಕೊಂಡು ಹೋಗು. ‘ನಾನು ಯೆಹೋವನಿಗೆ ಯಜ್ಞವನ್ನರ್ಪಿಸಲು ಬಂದಿದ್ದೇನೆ’ ಎಂದು ಹೇಳು.
3 ಯಜ್ಞಕಾರ್ಯಕ್ಕೆ ಇಷಯನನ್ನು ಆಹ್ವಾನಿಸು. ಆ ಮೇಲೆ ನೀನು ಮಾಡಬೇಕಾದುದನ್ನು ನಾನು ತೋರಿಸುತ್ತೇನೆ. ನಾನು ತೋರಿಸಿದ ಮನುಷ್ಯನಿಗೆ ನೀನು ಅಭಿಷೇಕವನ್ನು ಮಾಡಬೇಕು” ಎಂದು ಹೇಳಿದನು.
4 ಸಮುವೇಲನು ತನಗೆ ಯೆಹೋವನು ಹೇಳಿದಂತೆ ಮಾಡಿದನು. ಸಮುವೇಲನು ಬೆತ್ಲೆಹೇಮಿಗೆ ಹೋದನು. ಬೆತ್ಲೆಹೇಮಿನ ಹಿರಿಯರು ಭಯದಿಂದ ನಡುಗಿದರು. ಅವರು ಸಮುವೇಲನನ್ನು ಕಂಡು, “ನಿನ್ನ ಆಗಮನವು ಶುಭಕರವಾಗಿದೆಯೇ?” ಎಂದು ಕೇಳಿದರು.
5 ಸಮುವೇಲನು, “ಹೌದು, ಶುಭಕರವಾಗಿದೆ. ನಾನು ಯೆಹೋವನಿಗೆ ಯಜ್ಞವನ್ನು ಅರ್ಪಿಸಲು ಬಂದಿದ್ದೇನೆ. ನೀವೆಲ್ಲ ಸಿದ್ಧರಾಗಿ ಯಜ್ಞಕಾರ್ಯಕ್ಕಾಗಿ ನನ್ನೊಂದಿಗೆ ಬನ್ನಿ” ಎಂದು ಹೇಳಿದನು. ಸಮುವೇಲನು ಇಷಯನನ್ನೂ ಅವನ ಮಕ್ಕಳನ್ನೂ ಸಿದ್ಧಗೊಳಿಸಿದನು. ನಂತರ ಸಮುವೇಲನು ಅವರನ್ನು ಯಜ್ಞದಲ್ಲಿ ಭಾಗಿಗಳಾಗಲು ಆಹ್ವಾನಿಸಿದನು.
6 ಇಷಯನು ಮತ್ತು ಅವನ ಮಕ್ಕಳು ಬಂದಾಗ, ಸಮುವೇಲನು ಎಲೀಯಾಬನನ್ನು ನೋಡಿದನು. ಸಮುವೇಲನು ತನ್ನಲ್ಲೇ ಯೋಚಿಸುತ್ತಾ, “ಯೆಹೋವನು ಆಯ್ಕೆ ಮಾಡಿರುವವನು ನಿಜವಾಗಿಯೂ ಅವನೇ ಇರಬೇಕು” ಎಂದುಕೊಂಡನು.
7 ಆದರೆ ಯೆಹೋವನು ಸಮುವೇಲನಿಗೆ, “ಎಲೀಯಾಬನ ಎತ್ತರವನ್ನಾಗಲಿ ರೂಪವನ್ನಾಗಲಿ ಪರಿಗಣಿಸಬೇಡ. ಯಾಕೆಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೋ ಹೊರತೋರಿಕೆಯನ್ನು ಪರಿಗಣಿಸುತ್ತಾರೆ; ಯೆಹೋವನಾದರೋ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.
8 ನಂತರ ಇಷಯನು ಎರಡನೆಯ ಮಗನಾದ ಅಬೀನಾದ್ವಾನನ್ನು ಕರೆದನು. ಅಬೀನಾದ್ವಾನು ಸಮುವೇಲನ ಹತ್ತಿರಕ್ಕೆ ಬಂದನು. ಸಮುವೇಲನು, “ಯೆಹೋವನು ಆರಿಸಿಕೊಂಡಿರುವ ವ್ಯಕ್ತಿ ಇವನಲ್ಲ” ಎಂದು ಹೇಳಿದನು.
9 ಅನಂತರ ಇಷಯನು ಶಮ್ಮನನ್ನು ಸಮುವೇಲನ ಬಳಿಗೆ ಕಳುಹಿಸಿದನು. ಆದರೆ ಸಮುವೇಲನು, “ಯೆಹೋವನು ಇವನನ್ನೂ ಆರಿಸಲಿಲ್ಲ” ಎಂದನು.
10 ಇಷಯನು ತನ್ನ ಏಳು ಜನ ಮಕ್ಕಳನ್ನು ಸಮುವೇಲನಿಗೆ ತೋರಿಸಿದನು. ಆದರೆ ಸಮುವೇಲನು, “ಯೆಹೋವನು ಇವರಲ್ಲಿ ಯಾರೊಬ್ಬನನ್ನೂ ಆರಿಸಿಕೊಳ್ಳಲಿಲ್ಲ” ಎಂದನು.
11 ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು. ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.
12 ಇಷಯನು ಕಿರಿಯ ಮಗನನ್ನು ಕರೆತರಲು ಒಬ್ಬನನ್ನು ಕಳುಹಿಸಿದನು. ಇವನಾದರೋ ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ, “ಮೇಲೆದ್ದು ನಿಲ್ಲು, ಅವನನ್ನು ಅಭಿಷೇಕಿಸು. ಇವನನ್ನೇ ನಾನು ಆರಿಸಿದ್ದು” ಎಂದು ಆಜ್ಞಾಪಿಸಿದನು.
13 ಸಮುವೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದುಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇಷಯನ ಕಿರಿಮಗನ ಮೇಲೆ, ಅವನ ಸೋದರರ ಎದುರಿನಲ್ಲೇ ಸುರಿದನು. ಆ ದಿನದಿಂದ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ದಾವೀದನಲ್ಲಿ ನೆಲೆಸಿತು. ಅನಂತರ ಸಮುವೇಲನು ರಾಮಕ್ಕೆ ಹಿಂದಿರುಗಿದನು.
14 ಯೆಹೋವನ ಆತ್ಮವು ಸೌಲನನ್ನು ಬಿಟ್ಟುಹೋಯಿತು. ನಂತರ ಯೆಹೋವನು ದುರಾತ್ಮವೊಂದನ್ನು ಸೌಲನ ಬಳಿಗೆ ಕಳುಹಿಸಿದನು. ಅದು ಅವನಿಗೆ ಬಹಳ ತೊಂದರೆ ಮಾಡಿತು.
15 ಸೌಲನ ಸೇವಕರು ಅವನಿಗೆ, “ದೇವರು ಕಳುಹಿಸಿರುವ ದುರಾತ್ಮವು ನಿನ್ನನ್ನು ಪೀಡಿಸುತ್ತಿದೆ.
16 ನಮಗೆ ಆಜ್ಞಾಪಿಸುವುದಾದರೆ, ಕಿನ್ನರಿ ಬಾರಿಸುವವನನ್ನು ಹುಡುಕಿ ಕರೆದುಕೊಂಡು ಬರುತ್ತೇವೆ. ಯೆಹೋವನಿಂದ ಬಂದ ದುರಾತ್ಮವು ನಿನ್ನ ಮೈಮೇಲೆ ಬಂದಾಗ ಅವನು ಕಿನ್ನರಿ ಬಾರಿಸಿದರೆ, ದುರಾತ್ಮವು ನಿನ್ನನ್ನು ಬಿಟ್ಟುಹೋಗಿ ನಿನಗೆ ಉಪಶಮನವಾಗುತ್ತದೆ” ಎಂದು ಹೇಳಿದರು.
17 ಸೌಲನು ಅವನ ಸೇವಕರಿಗೆ, “ಚೆನ್ನಾಗಿ ಕಿನ್ನರಿ ಬಾರಿಸುವವನನ್ನು ಹುಡುಕಿಕೊಂಡು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.
18 ಅವನ ಸೇವಕರಲ್ಲಿ ಒಬ್ಬನು, “ಇಷಯ ಎಂಬ ಹೆಸರಿನ ಒಬ್ಬ ಮನುಷ್ಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದಾನೆ. ನಾನು ಇಷಯನ ಮಗನನ್ನು ನೋಡಿದ್ದೇನೆ. ಅವನು ಕಿನ್ನರಿ ಬಾರಿಸುತ್ತಾನೆ. ಅವನು ಧೈರ್ಯಶಾಲಿ ಮತ್ತು ಒಳ್ಳೆಯ ಹೋರಾಟಗಾರ; ಅವನು ಬುದ್ಧಿವಂತನೂ ರಣಶೂರನೂ ರೂಪವಂತನೂ ಆಗಿದ್ದಾನೆ. ಅದಲ್ಲದೆ ಯೆಹೋವನು ಅವನೊಂದಿಗಿದ್ದಾನೆ” ಎಂದು ಹೇಳಿದನು.
19 ಸೌಲನು ಸಂದೇಶಕರ ಮೂಲಕ ಇಷಯನಿಗೆ, “ನಿನಗೆ ದಾವೀದನೆಂಬ ಮಗನಿದ್ದಾನೆ. ಅವನು ನಿನ್ನ ಕುರಿಗಳನ್ನು ಕಾಯುತ್ತಾನೆ. ಅವನನ್ನು ನನ್ನ ಬಳಿಗೆ ಕಳುಹಿಸು” ಎಂದು ತಿಳಿಸಿದನು.
20 ಇಷಯನು ಕೆಲವು ರೊಟ್ಟಿಗಳನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಒಂದು ಹೋತಮರಿಯನ್ನೂ ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕೊಡುಗೆಗಳಾಗಿ ಕಳುಹಿಸಿದನು.
21 ದಾವೀದನು ಸೌಲನ ಹತ್ತಿರಕ್ಕೆ ಹೋಗಿ, ಅವನ ಮುಂದೆ ನಿಂತನು. ಸೌಲನು ದಾವೀದನನ್ನು ಬಹಳ ಪ್ರೀತಿಸಿದನು. ದಾವೀದನು ಸೌಲನ ಆಯುಧಗಳನ್ನು ಹೊರುವ ಸಹಾಯಕನಾದನು.
22 ತರುವಾಯ ಸೌಲನು ಇಷಯನಿಗೆ, “ದಾವೀದನು ಇಲ್ಲಿಯೇ ನನ್ನ ಸೇವೆಯಲ್ಲಿ ಇರಲಿ. ನಾನು ಅವನನ್ನು ಬಹಳ ಪ್ರೀತಿಸುತ್ತೇನೆ” ಎಂಬ ಸುದ್ದಿಯನ್ನು ಹೇಳಿ ಕಳುಹಿಸಿದನು.
23 ದೇವರು ಕಳುಹಿಸಿದ ದುರಾತ್ಮವು ಸೌಲನ ಮೈಮೇಲೆ ಬಂದಾಗಲೆಲ್ಲಾ, ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ಆಗ ದುರಾತ್ಮವು ಸೌಲನನ್ನು ಬಿಟ್ಟುಹೋಗಿ ಅವನಿಗೆ ಉಪಶಮನವಾಗುತ್ತಿತ್ತು.
×

Alert

×