ಅಂದು ಸೌಲನ ಮಗನಾದ ಯೋನಾತಾನನು ತನ್ನ ಆಯುಧಗಳನ್ನು ಹೊತ್ತುತರುವ ಯುವಕನೊಂದಿಗೆ ಮಾತನಾಡುತ್ತಾ, “ಕಣಿವೆಯ ಆಚೆಗಿರುವ ಫಿಲಿಷ್ಟಿಯರ ಪಾಳೆಯಕ್ಕೆ ಹೋಗೋಣ” ಎಂದು ಹೇಳಿದನು. ಆದರೆ ಯೋನಾತಾನನು ತನ್ನ ತಂದೆಗೆ ಇದನ್ನು ತಿಳಿಸಲಿಲ್ಲ.
ಆ ಮಾರ್ಗದ ಎರಡು ಕಡೆಗಳಲ್ಲೂ ದೊಡ್ಡದೊಡ್ಡ ಬಂಡೆಗಲ್ಲುಗಳಿದ್ದವು. ಯೋನಾತಾನನು ಫಿಲಿಷ್ಟಿಯರ ಪಾಳೆಯಕ್ಕೆ ಆ ಮಾರ್ಗದಲ್ಲಿ ಹೋಗಲು ಉಪಾಯ ಮಾಡಿದನು. ಆ ಮಾರ್ಗದ ಒಂದು ಕಡೆಗಿದ್ದ ಬಂಡೆಗಲ್ಲಿಗೆ ಬೋಚೇಚ್ ಎಂದು ಹೆಸರು; ಇನ್ನೊಂದು ಕಡೆಗಿದ್ದ ಬಂಡೆಗಲ್ಲಿಗೆ ಸೆನೆ ಎಂದು ಹೆಸರು.
ಯೋನಾತಾನನು ತನ್ನ ಆಯುಧಗಳನ್ನು ಹೊತ್ತುಕೊಂಡು ಬರುತ್ತಿದ್ದ ಯುವಸಹಾಯಕನಿಗೆ, “ಆ ಹೊರದೇಶಿಯರ ಪಾಳೆಯಕ್ಕೆ ಹೋಗೋಣ ಬಾ. ಈ ಜನರನ್ನು ಸೋಲಿಸಲು ಯೆಹೋವನು ಬಹುಶಃ ನಮ್ಮನ್ನು ಬಳಸಬಹುದು. ಯೆಹೋವನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ನಮ್ಮಲ್ಲಿ ಅನೇಕ ಸೈನಿಕರಿದ್ದರೂ ಇಲ್ಲವೆ ಕೆಲವೇ ಸೈನಿಕರಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ” ಎಂದು ಹೇಳಿದನು.
ಆದರೆ ಫಿಲಿಷ್ಟಿಯರು, ‘ನಮ್ಮ ಬಳಿಗೆ ಹತ್ತಿ ಬನ್ನಿ’ ಎಂದರೆ, ನಾವು ಅವರ ಬಳಿಗೆ ಹತ್ತಿ ಹೋಗೋಣ; ಯಾಕೆಂದರೆ ಅದು ದೇವರ ಗುರುತು. ದೇವರು ಅವರನ್ನು ಸೋಲಿಸಲು ನಮಗೆ ಅವಕಾಶ ಕಲ್ಪಿಸಿದ್ದಾನೆ ಎಂಬುದೇ ಅದರ ಅರ್ಥ” ಎಂದು ಹೇಳಿದನು.
ಹೀಗೆ ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರಿಗೆ ಕಾಣಿಸಿಕೊಂಡರು. ಫಿಲಿಷ್ಟಿಯರ ಕಾವಲುಗಾರರು, “ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಬರುತ್ತಿದ್ದಾರೆ” ಎಂದು ಹೇಳಿದರು.
ಆ ಕೋಟೆಯಲ್ಲಿದ್ದ ಫಿಲಿಷ್ಟಿಯರು ಯೋನಾತಾನ ಮತ್ತು ಅವನ ಸಹಾಯಕನಿಗೆ, “ನಮ್ಮ ಹತ್ತಿರಕ್ಕೆ ಬನ್ನಿ. ನಾವು ನಿಮಗೆ ಒಂದು ಪಾಠ ಕಲಿಸುತ್ತೇವೆ” ಎಂದು ಕೂಗಿ ಹೇಳಿದರು. ಯೋನಾತಾನನು ತನ್ನ ಸಹಾಯಕನಿಗೆ, “ಬೆಟ್ಟದ ಮೇಲಿನವರೆಗೆ ನನ್ನನ್ನು ಹಿಂಬಾಲಿಸು. ಯೆಹೋವನು ಇಸ್ರೇಲರ ವಶಕ್ಕೆ ಫಿಲಿಷ್ಟಿಯರನ್ನು ಒಪ್ಪಿಸಿದ್ದಾನೆ” ಎಂದು ಹೇಳಿದನು.
(13-14) ಯೋನಾತಾನನು ತನ್ನ ಕೈಕಾಲುಗಳಿಂದ ಬೆಟ್ಟವನ್ನು ಹತ್ತಿದನು. ಅವನನ್ನು ಹಿಂಬಾಲಿಸಿಕೊಂಡು ಅವನ ಸಹಾಯಕನೂ ಬೆಟ್ಟವನ್ನು ಹತ್ತಿದನು. ಯೋನಾತಾನ ಮತ್ತು ಅವನ ಸಹಾಯಕನು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡಿದರು ಅವರು ಮೊದಲ ಆಕ್ರಮಣದಲ್ಲಿ ಅರ್ಧಎಕರೆ ಸ್ಥಳದಲ್ಲಿದ್ದ ಇಪ್ಪತ್ತು ಮಂದಿ ಫಿಲಿಷ್ಟಿಯರನ್ನು ಕೊಂದರು. ಆಕ್ರಮಣಮಾಡಲು ಬಂದವರೊಡನೆ ಯೋನಾತಾನನು ಮುಖಾಮುಖಿಯಾಗಿ ಹೋರಾಡಿದನು. ಯೋನಾತಾನನ ಸಹಾಯಕನು ಅವನ ಹಿಂದೆ ಬರುತ್ತಾ ಗಾಯಾಳುಗಳನ್ನು ಕೊಂದನು.
ಹೊರವಲಯದ ಪಾಳೆಯದಲ್ಲಿದ್ದ ಮತ್ತು ಕೋಟೆಯಲ್ಲಿದ್ದ ಎಲ್ಲಾ ಫಿಲಿಷ್ಟಿಯ ಸೈನಿಕರು ಭಯದಿಂದ ನಡುಗಿದರು. ಹೊಲದಲ್ಲಿದ್ದ ಸೈನಿಕರು ಸಹ ಹೆದರಿಕೊಂಡಿದ್ದರು. ಅತ್ಯಂತ ಧೈರ್ಯವಂತರಾದ ಸೈನಿಕರು ಸಹ ಹೆದರಿಕೊಂಡಿದ್ದರು. ಭೂಮಿಯು ನಡುಗಿದ್ದರಿಂದ ಫಿಲಿಷ್ಟಿಯ ಸೈನಿಕರು ನಿಜವಾಗಿಯೂ ಹೆದರಿಕೊಂಡರು.
ಸೌಲನು ತನ್ನೊಡನೆ ಇದ್ದ ಸೈನಿಕರಿಗೆ, “ಪಾಳೆಯದಲ್ಲಿರುವ ಜನರನ್ನು ಲೆಕ್ಕಹಾಕಿ. ಯಾರು ಪಾಳೆಯದಿಂದ ಹೊರಗೆ ಹೋಗಿದ್ದಾರೆ ಎಂಬುದನ್ನು ನಾನು ತಿಳಿಯಬೇಕು” ಎಂದು ಹೇಳಿದನು. ಅವರು ಲೆಕ್ಕಹಾಕಿದಾಗ, ಯೋನಾತಾನನೂ ಅವನ ಸಹಾಯಕನೂ ಹೊರಗೆ ಹೋಗಿರುವುದು ತಿಳಿಯಿತು.
ಸೌಲನು ಸೈನಿಕರನ್ನೆಲ್ಲ ಒಟ್ಟುಗೂಡಿಸಿಕೊಂಡು ಯುದ್ಧಕ್ಕೆ ಹೋದನು. ಫಿಲಿಷ್ಟಿಯ ಸೈನಿಕರಲ್ಲಿ ನಿಜವಾಗಿಯೂ ಗಲಿಬಿಲಿಯುಂಟಾಗಿತ್ತು. ಅವರು ತಮ್ಮತಮ್ಮಲ್ಲಿಯೇ ಕತ್ತಿಗಳಿಂದ ಹೋರಾಡುತ್ತಿದ್ದರು.
ಫಿಲಿಷ್ಟಿಯ ಸೈನಿಕರು ಓಡಿಹೋಗುತ್ತಿರುವುದನ್ನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಅಡಗಿಕೊಂಡಿದ್ದ ಎಲ್ಲ ಇಸ್ರೇಲರೂ ಕೇಳಿದರು. ಆದ್ದರಿಂದ ಆ ಇಸ್ರೇಲರೂ ಯುದ್ಧದಲ್ಲಿ ಭಾಗಿಗಳಾಗಿ ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋದರು.
ಹೀಗೆ ಯೆಹೋವನು ಅಂದು ಇಸ್ರೇಲರನ್ನು ರಕ್ಷಿಸಿದನು. ಯುದ್ಧವು ಬೇತಾವೆನಿನ ಆಚೆಯ ತನಕ ನಡೆಯಿತು. ಸೌಲನ ಬಳಿ ಒಟ್ಟು ಹತ್ತು ಸಾವಿರ ಮಂದಿ ಸೈನಿಕರಿದ್ದರು. ಎಫ್ರಾಯೀಮ್ ಬೆಟ್ಟಪ್ರದೇಶದ ಎಲ್ಲಾ ನಗರಗಳಿಗೂ ಯುದ್ಧವು ಹಬ್ಬಿತು.
ಆದರೆ ಸೌಲನು ಆ ದಿನ ಮತ್ತೊಂದು ದೊಡ್ಡ ತಪ್ಪನ್ನು ಮಾಡಿದನು. ಇಸ್ರೇಲರು ಬಳಲಿದ್ದರು ಮತ್ತು ಹಸಿದಿದ್ದರು. ಸೌಲನು ಅವರಿಗೆ, “ನಾನು ಶತ್ರುಗಳನ್ನು ಸೋಲಿಸಬೇಕಾಗಿರುವುದರಿಂದ ನಿಮ್ಮಲ್ಲಿ ಸಾಯಂಕಾಲದೊಳಗೆ ಊಟಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟು ಹೇಳಿದ್ದರಿಂದ ಇಸ್ರೇಲಿನ ಯಾವ ಸೈನಿಕನೂ ಊಟಮಾಡಲಿಲ್ಲ.
(25-26) ಯುದ್ಧವು ನಡೆಯುತ್ತಲೇ ಇದ್ದುದರಿಂದ ಅವರೆಲ್ಲ ಕಾಡಿನೊಳಗೆ ಹೋದರು. ಅಲ್ಲಿ ನೆಲದ ಮೇಲೆಲ್ಲಾ ಇದ್ದ ಜೇನನ್ನು ನೋಡಿದರು. ಇಸ್ರೇಲರು ಜೇನು ಕಟ್ಟಿರುವ ಸ್ಥಳಕ್ಕೆ ಬಂದರು. ಅವರು ಹಸಿದಿದ್ದರೂ ಬಳಲಿದ್ದರೂ ಆ ಜೇನನ್ನು ತಿನ್ನಲಿಲ್ಲ. ತಾವು ಶಾಪಕ್ಕೆ ಗುರಿಯಾಗುತ್ತೇವೆ ಎಂಬ ಭಯ ಅವರಿಗಿತ್ತು.
ಆದರೆ ಯೋನಾತಾನನಿಗೆ ಈ ಶಾಪದ ಕುರಿತು ತಿಳಿದಿರಲಿಲ್ಲ; ತನ್ನ ತಂದೆಯು ಜನರಿಗೆ ಆಣೆಯಿಟ್ಟು ಹೇಳಿದ್ದೂ ಗೊತ್ತಿರಲಿಲ್ಲ. ಯೋನಾತಾನನ ಕೈಯಲ್ಲಿ ಒಂದು ಕೋಲಿತ್ತು. ಅವನು ಆ ಕೋಲನ್ನು ಜೇನುಗೂಡಿನಲ್ಲಿ ಚುಚ್ಚಿ ಸ್ವಲ್ಪ ಜೇನನ್ನು ತೆಗೆದುಕೊಂಡು ತಿಂದನು. ಆಗ ಅವನು ಸ್ವಲ್ಪ ಬಲಗೊಂಡನು.
ಸೈನಿಕನೊಬ್ಬ ಯೋನಾತಾನನಿಗೆ, “ ‘ಈ ದಿನ ಸಾಯಂಕಾಲದೊಳಗೆ ಊಟಮಾಡುವವನು ಶಾಪಗ್ರಸ್ತನಾಗಲಿ’ ಎಂದು ನಿಮ್ಮ ತಂದೆ ಆಣೆಯಿಟ್ಟು ಹೇಳಿದ್ದಾನೆ ಆದಕಾರಣವೇ ಸೈನಿಕರು ಬಲಹೀನರಾಗಿದ್ದಾರೆ” ಎಂದು ತಿಳಿಸಿದನು.
ಈ ದಿನ ಶತ್ರುಗಳಿಂದ ವಶಪಡಿಸಿಕೊಂಡ ಆಹಾರವನ್ನು ತಿನ್ನಲು ಜನರಿಗೆ ಅವಕಾಶ ಕೊಟ್ಟಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು; ನಾವು ಮತ್ತಷ್ಟು ಫಿಲಿಷ್ಟಿಯರನ್ನು ಕೊಲ್ಲಬಹುದಾಗಿತ್ತು” ಎಂದು ಹೇಳಿದನು.
ಅವರು ಫಿಲಿಷ್ಟಿಯರಿಂದ ಕುರಿಗಳನ್ನೂ ದನಕರುಗಳನ್ನೂ ಕೊಳ್ಳೆ ಹೊಡೆದಿದ್ದರು. ಆಗ ಇಸ್ರೇಲರು ಎಷ್ಟು ಹಸಿದಿದ್ದರೆಂದರೆ ಆ ಪಶುಗಳನ್ನು ನೆಲದ ಮೇಲೆಯೇ ಕೊಂದು ಅವುಗಳ ಮಾಂಸವನ್ನು ತಿಂದರು. ಆ ಮಾಂಸದಲ್ಲಿ ಇನ್ನೂ ರಕ್ತವಿತ್ತು.
ಒಬ್ಬನು ಸೌಲನಿಗೆ, “ಜನರೆಲ್ಲ ಯೆಹೋವನಿಗೆ ವಿರೋಧವಾಗಿ ಪಾಪ ಮಾಡುತ್ತಿದ್ದಾರೆ. ಅವರು ಮಾಂಸವನ್ನು ರಕ್ತಸಮೇತವಾಗಿ ತಿನ್ನುತ್ತಿದ್ದಾರೆ” ಎಂದು ಹೇಳಿದನು. ಅದಕ್ಕೆ ಸೌಲನು, “ಅದು ಪಾಪವೇ ಹೌದು! ಈಗ ನೀನು ಒಂದು ದೊಡ್ಡ ಕಲ್ಲನ್ನು ಇಲ್ಲಿಗೆ ಉರುಳಿಸಿದ ನಂತರ
ಜನರ ಹತ್ತಿರಕ್ಕೆ ಹೋಗಿ, ‘ನಿಮ್ಮ ದನಕುರಿಗಳನ್ನು ಇಲ್ಲಿಗೆ ತಂದು ಕೊಯ್ದು ತಿನ್ನಬೇಕೆಂದೂ ಮಾಂಸವನ್ನು ರಕ್ತ ಸಮೇತವಾಗಿ ತಿಂದು ಯೆಹೋವನಿಗೆ ವಿರೋಧವಾಗಿ ಪಾಪಮಾಡಬಾರದೆಂದೂ ತಿಳಿಸು’ ” ಎಂದು ಹೇಳಿ ಕಳುಹಿಸಿದನು. ಆ ರಾತ್ರಿ ಎಲ್ಲರೂ ಅವರವರ ಪಶುಗಳನ್ನು ಅಲ್ಲಿಗೆ ತಂದು ಕೊಂದರು.
ಸೌಲನು ತನ್ನ ಸೈನಿಕರಿಗೆ, “ಈ ರಾತ್ರಿಯೇ ಫಿಲಿಷ್ಟಿಯರ ಬೆನ್ನಟ್ಟೋಣ. ಅವರಲ್ಲಿರುವುದನ್ನೆಲ್ಲ ವಶಪಡಿಸಿಕೊಂಡು ಅವರನ್ನೆಲ್ಲ ಕೊಲ್ಲೋಣ” ಎಂದು ಹೇಳಿದನು. ಸೈನಿಕರು, “ನಿನಗೆ ಸರಿಕಂಡದ್ದನ್ನು ಮಾಡು” ಎಂದು ಉತ್ತರಕೊಟ್ಟರು. ಆದರೆ ಯಾಜಕನು, “ದೇವರನ್ನು ಕೇಳೋಣ” ಎಂದು ಹೇಳಿದನು.
ಆದ್ದರಿಂದ ಸೌಲನು ದೇವರನ್ನು, “ನಾವು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಬೇಕೇ? ನಾವು ಫಿಲಿಷ್ಟಿಯರನ್ನು ಸೋಲಿಸುವಂತೆ ನೀನು ಮಾಡುವಿಯೋ?” ಎಂದು ಕೇಳಿದನು. ಆದರೆ ದೇವರು ಆ ದಿನ ಸೌಲನಿಗೆ ಉತ್ತರಿಸಲಿಲ್ಲ.
ಇಸ್ರೇಲನ್ನು ರಕ್ಷಿಸುವ ಯೆಹೋವನಾಣೆಯಿಟ್ಟು ಹೇಳುತ್ತಿದ್ದೇನೆ, ನನ್ನ ಸ್ವಂತ ಮಗನಾದ ಯೋನಾತಾನನೇ ಈ ಪಾಪ ಮಾಡಿದ್ದರೂ ಅವನು ಸಾಯಲೇಬೇಕು” ಎಂದು ಹೇಳಿದನು. ಜನರಲ್ಲಿ ಯಾರೊಬ್ಬರೂ ಮಾತನಾಡಲಿಲ್ಲ.
ಆಗ ಸೌಲನು, “ನೀವು ಈ ಕಡೆ ನಿಲ್ಲಿ. ನಾನು ಮತ್ತು ನನ್ನ ಮಗನಾದ ಯೋನಾತಾನನು ಆ ಕಡೆ ನಿಲ್ಲುತ್ತೇವೆ” ಎಂದು ಇಸ್ರೇಲರಿಗೆಲ್ಲ ಹೇಳಿದನು. ಅವರೆಲ್ಲ “ನಿಮ್ಮ ಇಷ್ಟದಂತಾಗಲಿ, ಸ್ವಾಮಿ” ಎಂದರು.
ಆಗ ಸೌಲನು, “ಇಸ್ರೇಲಿನ ದೇವರಾದ ಯೆಹೋವನೇ, ನಾನು ನಿನ್ನ ಸೇವಕ. ಈ ದಿನ ನೀನು ನನಗೇಕೆ ಉತ್ತರಿಸಲಿಲ್ಲ? ನಾನಾಗಲಿ ನನ್ನ ಮಗನಾದ ಯೋನಾತಾನನಾಗಲಿ ಇಸ್ರೇಲರಾಗಲಿ ಪಾಪಮಾಡಿದ್ದರೆ ಅದನ್ನು ನಮಗೆ ತಿಳಿಸಿಕೊಡು” ಎಂದು ಪ್ರಾರ್ಥಿಸಿದನು. ಚೀಟುಹಾಕಿದಾಗ ಅದು ಸೌಲನಿಗೂ ಯೋನಾತಾನನಿಗೂ ಬಂದಿತು. ಜನರೆಲ್ಲಾ ಬಿಡುಗಡೆಗೊಂಡರು.
ಸೌಲನು ಯೋನಾತಾನನಿಗೆ, “ನೀನು ಏನು ಮಾಡಿದೆಯೆಂಬುದನ್ನು ನನಗೆ ತಿಳಿಸು” ಎಂದು ಕೇಳಿದನು. ಯೋನಾತಾನನು ಸೌಲನಿಗೆ, “ನಾನು ನನ್ನ ಕೋಲಿನ ತುದಿಯಿಂದ ಸ್ವಲ್ಪ ಜೇನನ್ನು ತೆಗೆದುಕೊಂಡು ತಿಂದೆನು. ನಾನು ಅದಕ್ಕಾಗಿ ಸಾಯಬೇಕೇ?” ಎಂದು ಕೇಳಿದನು.
ಆದರೆ ಸೈನಿಕರು ಸೌಲನಿಗೆ, “ಈ ದಿನ ಇಸ್ರೇಲರನ್ನು ಮುನ್ನಡೆಸಿ ಮಹಾವಿಜಯವನ್ನು ಉಂಟುಮಾಡಿದ ಯೋನಾತಾನನು ಸಾಯಬೇಕೋ? ಇಲ್ಲ! ಜೀವಸ್ವರೂಪನಾದ ಯೆಹೋವನಾಣೆ, ಯೋನಾತಾನನ ತಲೆಯ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳಲು ನಾವು ಬಿಡುವುದಿಲ್ಲ. ಇಂದು ಫಿಲಿಷ್ಟಿಯರ ವಿರುದ್ಧ ಹೋರಾಡಲು ದೇವರು ಯೋನಾತಾನನಿಗೆ ಸಹಾಯಮಾಡಿದ್ದಾನೆ” ಎಂದು ಹೇಳಿದರು. ಹೀಗೆ ಜನರು ಯೋನಾತಾನನನ್ನು ರಕ್ಷಿಸಿದರು. ಅವನನ್ನು ಸಾಯಿಸಲಿಲ್ಲ.
ಸೌಲನು ಇಸ್ರೇಲನ್ನು ಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಂಡು ತಾನು ರಾಜನೆಂಬುದನ್ನು ತೋರಿಸಿಕೊಟ್ಟನು. ಸೌಲನು ಇಸ್ರೇಲಿನ ಸುತ್ತಲೂ ವಾಸಿಸುತ್ತಿದ್ದ ಶತ್ರುಗಳೊಡನೆ ಅಂದರೆ ಮೋವಾಬ್ಯರೊಡನೆ, ಅಮ್ಮೋನಿಯರೊಡನೆ, ಎದೋಮ್ಯರೊಡನೆ, ಚೋಬದ ಅರಸರೊಡನೆ ಮತ್ತು ಫಿಲಿಷ್ಟಿಯರೊಡನೆ ಹೋರಾಡಿದನು. ಸೌಲನು ತಾನು ಹೋದಕಡೆಯಲ್ಲೆಲ್ಲ ಇಸ್ರೇಲರ ಶತ್ರುಗಳನ್ನು ಸೋಲಿಸಿದನು.
ಸೌಲನು ತನ್ನ ಜೀವಮಾನವೆಲ್ಲ ಶೌರ್ಯದಿಂದ ಫಿಲಿಷ್ಟಿಯರ ವಿರುದ್ಧ ತೀವ್ರವಾಗಿ ಹೋರಾಡಿದನು. ಸೌಲನು ವೀರನನ್ನಾಗಲಿ ಧೈರ್ಯಶಾಲಿಯನ್ನಾಗಲಿ ಯಾವಾಗಲಾದರೂ ನೋಡಿದರೆ, ಅಂತಹವರನ್ನು ಸೈನ್ಯಕ್ಕೆ ತೆಗೆದುಕೊಂಡು, ಅವರನ್ನು ರಾಜನ ಅಂಗರಕ್ಷಕ ಪಡೆಗೆ ಸೇರಿಸಿಕೊಳ್ಳುತ್ತಿದ್ದನು.