ಸಮುವೇಲನು ವಿಶೇಷವಾದ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದ್ದಿಟ್ಟು, “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿಷೇಕಿಸಿದ್ದಾನೆ. ನೀನು ಯೆಹೋವನ ಜನರನ್ನು ಆಳುವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. ಇದು ನಿಜವೆಂಬುದಕ್ಕೆ ಸಾಕ್ಷಿಯೇನೆಂದರೆ:
ಈ ದಿನ ನನ್ನನ್ನು ಬಿಟ್ಟು ನೀನು ಮುಂದೆ ಸಾಗಿದಾಗ, ಬೆನ್ಯಾಮೀನನ ಮೇರೆಯಲ್ಲಿರುವ ಚೆಲ್ಚಹಿನಲ್ಲಿನ ರಾಹೇಲಳ ಸಮಾಧಿಯ ಬಳಿ ಇಬ್ಬರು ಮನುಷ್ಯರನ್ನು ಸಂಧಿಸುವೆ. ಅವರಿಬ್ಬರೂ ನಿನಗೆ, ‘ನೀನು ಹುಡುಕುತ್ತಿದ್ದ ಕತ್ತೆಗಳು ಒಬ್ಬನಿಗೆ ಸಿಕ್ಕಿವೆ. ನಿನ್ನ ತಂದೆಯು ಕತ್ತೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ನನ್ನ ಮಗನು ಎಲ್ಲಿಗೆ ಹೋದನೋ ಎಂದು ಹಂಬಲಿಸುತ್ತಿದ್ದಾನೆ’ ಎಂದು ಹೇಳುವರು” ಎಂದನು.
ಸಮುವೇಲನು, “ನೀನು ಅಲ್ಲಿಂದ ಮುಂದೆ ಹೋಗುತ್ತಾ ತಾಬೋರಿನ ಹತ್ತಿರವಿರುವ ಒಂದು ದೊಡ್ಡ ಓಕ್ ವೃಕ್ಷದ ಬಳಿಗೆ ಬರುವೆ. ಅಲ್ಲಿ ನಿನ್ನನ್ನು ಮೂರು ಜನರು ಭೇಟಿಯಾಗುತ್ತಾರೆ. ಆ ಮೂರು ಜನರು ದೇವರ ಆರಾಧನೆಗಾಗಿ ಬೇತೇಲಿಗೆ ಹೋಗುತ್ತಿರುತ್ತಾರೆ. ಮೊದಲನೆಯವನು ಮೂರು ಮರಿ ಹೋತಗಳನ್ನೂ ಎರಡನೆಯವನು ಮೂರು ರೊಟ್ಟಿಗಳನ್ನೂ ಮೂರನೆಯವನು ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋಗುತ್ತಿರುತ್ತಾರೆ.
ನಂತರ ನೀನು ಗಿಬಿಯತ್ ಎಲೋಹಿಮಿಗೆ ಹೋಗುವೆ. ಅಲ್ಲಿ ಒಂದು ಫಿಲಿಷ್ಟಿಯರ ಕೋಟೆಯಿದೆ. ನೀನು ಆ ಪಟ್ಟಣಕ್ಕೆ ಬಂದಾಗ, ಪ್ರವಾದಿಗಳ ಗುಂಪೊಂದು ಹೊರಬರುತ್ತದೆ. ಈ ಪ್ರವಾದಿಗಳು ಆರಾಧನಾ ಸ್ಥಳದಿಂದ ಇಳಿದು ಬರುತ್ತಾರೆ, ಅವರು ಪ್ರವಾದಿಸುತ್ತಿರುತ್ತಾರೆ. ಅವರು ಸ್ವರಮಂಡಲವನ್ನೂ ದಮ್ಮಡಿಯನ್ನೂ ಕೊಳಲನ್ನೂ ಕಿನ್ನರಿಯನ್ನೂ ನುಡಿಸುತ್ತಿರುತ್ತಾರೆ.
“ನನಗಿಂತ ಮೊದಲು ನೀನು ಗಿಲ್ಗಾಲಿಗೆ ಹೋಗು. ನಾನು ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ. ನಾನು ಅಲ್ಲಿ ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಅರ್ಪಿಸುತ್ತೇನೆ. ಆದರೆ ನೀನು ಏಳು ದಿನಗಳವರೆಗೆ ಕಾಯಲೇಬೇಕು. ಅನಂತರ ನಾನು ನಿನ್ನ ಬಳಿಗೆ ಬಂದು ನೀನು ಮಾಡಬೇಕಾದದ್ದನ್ನು ತಿಳಿಸುತ್ತೇನೆ” ಎಂದು ಹೇಳಿದನು.
ಸೌಲನು ಮತ್ತು ಅವನ ಸೇವಕನು ಗಿಬಿಯತ್ ಎಲೋಹಿಮಿಗೆ ಹೋದರು. ಸೌಲನು ಆ ಸ್ಥಳದಲ್ಲಿ ಪ್ರವಾದಿಗಳ ಸಮೂಹವನ್ನು ಸಂಧಿಸಿದನು. ದೇವರ ಆತ್ಮವು ಮಹಾಶಕ್ತಿಯೊಡನೆ ಸೌಲನ ಮೈಮೇಲೆ ಬಂದಿತು. ಆಗ ಸೌಲನು ಪ್ರವಾದಿಗಳ ಜೊತೆಯಲ್ಲಿ ಪ್ರವಾದಿಸಿದನು.
ಸೌಲನನ್ನು ಮೊದಲು ನೋಡಿದ್ದ ಜನರು, ಪ್ರವಾದಿಗಳ ಜೊತೆಯಲ್ಲಿ ಸೌಲನು ಪ್ರವಾದಿಸುತ್ತಿರುವುದನ್ನು ಕಂಡರು. ಈ ಜನರು, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನೇ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
ಆಗ ಗಿಬಿಯತ್ ಎಲೋಹಿಮಿನಲ್ಲಿ ವಾಸಿಸುತ್ತಿದ್ದ ಮನುಷ್ಯನೊಬ್ಬನು, “ಹೌದು, ಅವನು ಅವರ ನಾಯಕನಂತೆ ಕಾಣುತ್ತಿದ್ದಾನೆ” ಎಂದು ಹೇಳಿದನು. ಆದ್ದರಿಂದಲೇ, “ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನು” ಎಂಬ ಗಾದೆಯು ಹುಟ್ಟಿಕೊಂಡಿತು.
ಸೌಲನ ಚಿಕ್ಕಪ್ಪನು ಸೌಲನನ್ನು ಮತ್ತು ಅವನ ಸೇವಕನನ್ನು, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು. ಸೌಲನು ಅವನಿಗೆ, “ನಾವು ಕತ್ತೆಗಳನ್ನು ಹುಡುಕುತ್ತಿದ್ದೆವು. ನಾವು ಅವುಗಳನ್ನು ಕಂಡುಕೊಳ್ಳಲಾರದೆ ಹೋದಾಗ ಸಮುವೇಲನನ್ನು ನೋಡಲು ಹೋದೆವು” ಎಂದು ಹೇಳಿದನು.
ಸೌಲನು ಅವನಿಗೆ, “ಕತ್ತೆಗಳು ಈಗಾಗಲೇ ಸಿಕ್ಕಿವೆ ಎಂದು ಸಮುವೇಲನು ಹೇಳಿದನು” ಅಂದನು. ಸೌಲನು ತನ್ನ ಚಿಕ್ಕಪ್ಪನಿಗೆ ಎಲ್ಲವನ್ನೂ ತಿಳಿಸಲಿಲ್ಲ. ರಾಜ್ಯದ ಬಗ್ಗೆ ಸಮುವೇಲನು ಹೇಳಿದ ಮಾತುಗಳನ್ನು ಸೌಲನು ತನ್ನ ಚಿಕ್ಕಪ್ಪನಿಗೆ ತಿಳಿಸಲಿಲ್ಲ.
ಸಮುವೇಲನು ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದೆನು. ನಾನು ಈಜಿಪ್ಟಿನವರ ಆಳ್ವಿಕೆಯಿಂದ ಮತ್ತು ನಿಮಗೆ ಹಾನಿಮಾಡಲು ಪ್ರಯತ್ನಿಸಿದ ಇತರ ರಾಜ್ಯಗಳಿಂದ ರಕ್ಷಿಸಿದೆನು’ ಎನ್ನುತ್ತಾನೆ.
ಆದರೆ ಇಂದು ನೀವು ನಿಮ್ಮ ದೇವರನ್ನು ತಿರಸ್ಕರಿಸಿರುವಿರಿ. ನಿಮ್ಮ ದೇವರು ನಿಮ್ಮನ್ನು ಕಷ್ಟಗಳಿಂದ ಮತ್ತು ಸಮಸ್ಯೆಗಳಿಂದ ರಕ್ಷಿಸುತ್ತಾನೆ. ಆದರೆ ನೀವು, ‘ಇಲ್ಲ, ನಮ್ಮನ್ನಾಳಲು ನಮಗೊಬ್ಬ ರಾಜನು ಬೇಕು’ ಎಂದು ಕೇಳಿದಿರಿ. ಈಗ ಬನ್ನಿ, ನೀವು, ನಿಮ್ಮ ಕುಲಗಳ ಮತ್ತು ಗೋತ್ರಗಳ ಸಮೇತವಾಗಿ ಯೆಹೋವನ ಸಮ್ಮುಖದಲ್ಲಿ ನಿಲ್ಲಿರಿ” ಎಂದು ಹೇಳಿದನು.
ಬೆನ್ಯಾಮೀನ್ ಕುಲದಲ್ಲಿ ಒಂದು ಕುಟುಂಬವನ್ನು ಆರಿಸಿಕೊಳ್ಳುವುದಕ್ಕಾಗಿ ಮತ್ತೆ ಚೀಟು ಹಾಕಲಾಯಿತು. ಅದರಲ್ಲಿ ಮಟ್ರಿಯ ಕುಟುಂಬವು ಆರಿಸಲ್ಪಟ್ಟಿತು. ನಂತರ ಸಮುವೇಲನು ಮಟ್ರಿಯ ಕುಟುಂಬದ ಪ್ರತಿಯೊಬ್ಬನನ್ನು ಸಮೀಪಕ್ಕೆ ಕರೆದು ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳುವುದಕ್ಕಾಗಿ ಚೀಟು ಹಾಕಿದನು. ಅದರಲ್ಲಿ ಕೀಷನ ಮಗನಾದ ಸೌಲನು ಆರಿಸಲ್ಪಟ್ಟನು. ಆದರೆ ಜನರು ಸೌಲನನ್ನು ಹುಡುಕಿದಾಗ ಅವರಿಗೆ ಅವನು ಸಿಕ್ಕಲಿಲ್ಲ.
ಸಮುವೇಲನು ಜನರೆಲ್ಲರಿಗೆ, “ಯೆಹೋವನು ಆರಿಸಿಕೊಂಡಿರುವ ಮನುಷ್ಯನನ್ನು ನೋಡಿದಿರಾ! ಸರ್ವಜನರಲ್ಲಿಯೂ ಸೌಲನಂತಹ ಮನುಷ್ಯನು ಇನ್ನೊಬ್ಬನಿಲ್ಲ!” ಎಂದು ಹೇಳಿದನು. ಆಗ ಜನರೆಲ್ಲ, “ರಾಜನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು.
ಸಮುವೇಲನು ಜನರಿಗೆ ರಾಜನೀತಿಯ ನಿಯಮಗಳನ್ನು ವಿವರಿಸಿದನು. ಅವನು ಒಂದು ಪುಸ್ತಕದಲ್ಲಿ ಆ ನಿಯಮಗಳನ್ನು ಬರೆದನು. ಅವನು ಯೆಹೋವನ ಸನ್ನಿಧಿಯಲ್ಲಿ ಆ ಪುಸ್ತಕವನ್ನಿಟ್ಟನು. ಬಳಿಕ ಸಮುವೇಲನು ಜನರನ್ನು ಮನೆಗಳಿಗೆ ಹಿಂದಿರುಗಲು ಹೇಳಿದನು.
ಆದರೆ ಕೆಲವು ಕಿರುಕುಳಕಾರರು, “ಈ ಮನುಷ್ಯನು ಹೇಗೆ ತಾನೆ ನಮ್ಮನ್ನು ರಕ್ಷಿಸುವನು?” ಎಂದು ಹೇಳಿದರು. ಅವರು ಸೌಲನ ಬಗ್ಗೆ ಕೆಟ್ಟಮಾತುಗಳನ್ನು ಆಡಿದರು; ಅವನನ್ನು ತಿರಸ್ಕರಿಸಿ, ಕಾಣಿಕೆಗಳನ್ನು ತಂದುಕೊಡಲಿಲ್ಲ. ಆದರೆ ಸೌಲನು ಏನೂ ಮಾತನಾಡಲಿಲ್ಲ. ಅಮ್ಮೋನಿಯರ ರಾಜನಾದ ನಾಹಾಷನು, ಗಾದ್ ಮತ್ತು ರೂಬೆನ್ ಕುಲದವರಿಗೆ ಕಿರುಕುಳಕೊಡುತ್ತಿದ್ದನು. ನಾಹಾಷನು ಪ್ರತಿ ಮನುಷ್ಯನ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ನಾಹಾಷನು ಅವರಿಗೆ ಸಹಾಯಮಾಡಲು ಯಾರಿಗೂ ಅವಕಾಶಕೊಡುತ್ತಿರಲಿಲ್ಲ. ಅಮ್ಮೋನಿಯರ ರಾಜನಾದ ನಾಹಾಷನು ಜೋರ್ಡನ್ ನದಿಯ ಪೂರ್ವ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲ ಇಸ್ರೇಲರ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ಆದ್ದರಿಂದ ಅಮ್ಮೋನಿಯರಿಂದ ಏಳು ಸಾವಿರ ಮಂದಿ ಇಸ್ರೇಲರು ಯಾಬೇಷ್ ಗಿಲ್ಯಾದಿಗೆ ಓಡಿಹೋದರು.