English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

1 Kings Chapters

1 Kings 8 Verses

1 ರಾಜನಾದ ಸೊಲೊಮೋನನು ಇಸ್ರೇಲಿನ ಹಿರಿಯರೆಲ್ಲರಿಗೆ, ಕುಲಗಳ ಮುಖ್ಯಸ್ಥರಿಗೆ ಮತ್ತು ಇಸ್ರೇಲಿನ ಕುಟುಂಬ ಪ್ರಧಾನರಿಗೆ ಜೆರುಸಲೇಮಿನಲ್ಲಿದ್ದ ತನ್ನ ಬಳಿಗೆ ಬರಬೇಕೆಂದು ತಿಳಿಸಿದನು. ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದ ನಗರದಿಂದ ಆಲಯಕ್ಕೆ ತರುವಾಗ ಅವರು ಸಹ ತನ್ನೊಂದಿಗಿರಬೇಕೆಂಬುದು ಸೊಲೊಮೋನನ ಅಪೇಕ್ಷೆಯಾಗಿತ್ತು.
2 ಆದ್ದರಿಂದ ಇಸ್ರೇಲಿನ ಜನರೆಲ್ಲರೂ ರಾಜನಾದ ಸೊಲೊಮೋನನ ಬಳಿಗೆ ಒಟ್ಟಾಗಿ ಬಂದರು. ಇದು ಏತನೀಮ್ ತಿಂಗಳಿನ (ಆಶ್ವೀಜ) ವಿಶೇಷ ದಿನದಂದು (ಪರ್ಣಶಾಲೆಗಳ ಹಬ್ಬ) ನಡೆಯಿತು. ಇದು ವರ್ಷದ ಏಳನೆಯ ತಿಂಗಳು.
3 ಇಸ್ರೇಲಿನ ಹಿರಿಯರೆಲ್ಲರು ಆ ಸ್ಥಳದಲ್ಲಿ ಒಟ್ಟುಗೂಡಿದರು. ನಂತರ ಯಾಜಕರು ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡರು.
4 ಅವರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು, ಅದರೊಂದಿಗೆ ದೇವದರ್ಶನ ಗುಡಾರವನ್ನು ಮತ್ತು ಗುಡಾರದಲ್ಲಿದ್ದ ಪವಿತ್ರ ವಸ್ತುಗಳನ್ನು ಹೊತ್ತುಕೊಂಡರು. ಈ ವಸ್ತುಗಳನ್ನು ಯಾಜಕರು ಹೊತ್ತುಕೊಳ್ಳಲು ಲೇವಿಯರು ಅವರಿಗೆ ಸಹಾಯ ಮಾಡಿದರು.
5 ರಾಜನಾದ ಸೊಲೊಮೋನನು ಮತ್ತು ಇಸ್ರೇಲಿನ ಜನರೆಲ್ಲರೂ ಒಡಂಬಡಿಕೆಯ ಪೆಟ್ಟಿಗೆಯ ಎದುರಿನಲ್ಲಿ ಒಟ್ಟಿಗೆ ಸೇರಿದರು. ಅವರು ಅಸಂಖ್ಯವಾದ ಕುರಿಗಳನ್ನು ಮತ್ತು ದನಗಳನ್ನು ಯಜ್ಞಗಳನ್ನಾಗಿ ಅರ್ಪಿಸಿದರು.
6 ಆಗ ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಅದರ ಸರಿಯಾದ ಸ್ಥಳದಲ್ಲಿ ಇಟ್ಟರು. ಇದು ಆಲಯದ ಮಹಾ ಪವಿತ್ರಸ್ಥಳವಾಗಿತ್ತು. ಒಡಂಬಡಿಕೆಯ ಪೆಟ್ಟಿಗೆಯನ್ನು ಕೆರೂಬಿಗಳ ರೆಕ್ಕೆಗಳ ಅಡಿಯಲ್ಲಿ ಇಟ್ಟರು.
7 ಕೆರೂಬಿಗಳ ರೆಕ್ಕೆಗಳು ಪವಿತ್ರ ಪೆಟ್ಟಿಗೆಯ ಮೇಲೆಲ್ಲಾ ಹರಡಿಕೊಂಡಿದ್ದವು. ಅವು ಪವಿತ್ರ ಪೆಟ್ಟಿಗೆಯನ್ನು ಮತ್ತು ಅದನ್ನು ಹೊರುವ ಕೋಲುಗಳನ್ನು ಮುಚ್ಚಿದವು.
8 ಈ ಹೊರುವ ಕೋಲುಗಳು ಬಹಳ ಉದ್ದವಾಗಿದ್ದವು. ಮಹಾ ಪವಿತ್ರಸ್ಥಳದ ಎದುರಿನ ಪವಿತ್ರಸ್ಥಳದಲ್ಲಿ ನಿಂತುಕೊಳ್ಳುವ ಯಾವ ವ್ಯಕ್ತಿಯೇ ಆಗಲಿ ಈ ಕೋಲುಗಳ ತುದಿಯನ್ನು ಕಾಣಬಹುದಾಗಿತ್ತು. ಆದರೆ ಹೊರಗಿರುವ ಯಾರೂ ಅವುಗಳನ್ನು ನೋಡುವುದಕ್ಕಾಗುವುದಿಲ್ಲ. ಈ ಕೋಲುಗಳು ಇಂದಿಗೂ ಅಲ್ಲಿವೆ.
9 ಪವಿತ್ರ ಪೆಟ್ಟಿಗೆಯಲ್ಲಿರುವ ಒಂದೇ ವಸ್ತುವೆಂದರೆ ಎರಡು ಕಲ್ಲಿನ ಹಲಿಗೆಗಳು. ಮೋಶೆಯು ಹೋರೇಬ್ ಎಂಬ ಸ್ಥಳದಲ್ಲಿ ಪವಿತ್ರ ಪೆಟ್ಟಿಗೆಯಲ್ಲಿಟ್ಟ ಎರಡು ಕಲ್ಲಿನ ಹಲಗೆಗಳೇ. ಇವು ಈಜಿಪ್ಟಿನಿಂದ ಹೊರಬಂದ ಇಸ್ರೇಲಿನ ಜನರೊಂದಿಗೆ ಯೆಹೋವನು ಒಪ್ಪಂದ ಮಾಡಿಕೊಂಡ ಸ್ಥಳವೇ ಹೋರೇಬ್.
10 ಯಾಜಕರು ಪವಿತ್ರ ಪೆಟ್ಟಿಗೆಯನ್ನು ಮಹಾ ಪವಿತ್ರಸ್ಥಳದಲ್ಲಿ ಇಟ್ಟರು. ಯಾಜಕರು ಪವಿತ್ರಸ್ಥಳದಿಂದ ಹೊರಬಂದಾಗ, ಯೆಹೋವನ ಆಲಯವು ಮೋಡದಿಂದ ತುಂಬಿಕೊಂಡಿತು.
11 ಯೆಹೋವನ ತೇಜಸ್ಸು ಆಲಯವನ್ನು ತುಂಬಿಕೊಂಡಿದ್ದರಿಂದ ಯಾಜಕರು ತಮ್ಮ ಕಾರ್ಯವನ್ನು ಮುಂದುವರಿಸಲಾಗಲಿಲ್ಲ.
12 ಆಗ ಸೊಲೊಮೋನನು, “ಆಕಾಶದಲ್ಲಿ ಸೂರ್ಯನು ಹೊಳೆಯುವಂತೆ ಯೆಹೋವನು ಮಾಡಿದನು. ತಾನಾದರೋ ಕಪ್ಪಾದ ಮೋಡದಲ್ಲಿ ವಾಸಿಸಲು ನಿರ್ಧರಿಸಿದನು. [*ಆಕಾಶದಲ್ಲಿ … ನಿರ್ಧರಿಸಿದನು ಇದು ಪುರಾತನ ಪ್ರತಿಯೊಂದರಲ್ಲಿ ಬರೆಯಲ್ಪಟ್ಟಿದೆ. ಆದರೆ ಹೀಬ್ರೂವಿನ ಪ್ರತಿಯೊಂದರಲ್ಲಿ, “ಯೆಹೋವನೇ, ಕಾರ್ಗತ್ತಲೆಯಲ್ಲಿ ವಾಸಿಸುತ್ತೇನೆ ಎಂದು ಹೇಳಿರುವೆ” ಎಂದಿದೆ.]
13 ನಿಜವಾಗಿಯೂ ಅತ್ಯದ್ಭುತವಾದ ಆಲಯವನ್ನು ನಿನಗಾಗಿ ನಿರ್ಮಿಸಿರುವೆನು. ಈ ಸ್ಥಳದಲ್ಲಿ ನೀನು ಶಾಶ್ವತವಾಗಿ ನೆಲೆಸಿರಬಹುದು” ಎಂದು ಪ್ರಾರ್ಥನೆ ಮಾಡಿದನು.
14 ಇಸ್ರೇಲಿನ ಜನರೆಲ್ಲರೂ ಅಲ್ಲಿ ನಿಂತಿದ್ದರು. ರಾಜನಾದ ಸೊಲೊಮೋನನು ಅವರ ಕಡೆಗೆ ತಿರುಗಿ, ಅವರನ್ನು ಆಶೀರ್ವದಿಸಲು ದೇವರನ್ನು ಬೇಡಿದನು.
15 ನಂತರ ರಾಜನಾದ ಸೊಲೊಮೋನನು ಯೆಹೋವನಿಗೆ ದೀರ್ಘ ಪ್ರಾರ್ಥನೆಯನ್ನು ಮಾಡಿದನು. ಅವನ ಪ್ರಾರ್ಥನೆ ಇಂತಿದೆ: “ಇಸ್ರೇಲಿನ ದೇವರಾದ ಯೆಹೋವನು ಮಹತ್ವ ಪೂರ್ಣನಾಗಿದ್ದಾನೆ. ಯೆಹೋವನು ನನ್ನ ತಂದೆಯಾದ ದಾವೀದನಿಗೆ ತಾನು ಮಾಡಿದ್ದ ವಾಗ್ದಾನಗಳನ್ನು ಸ್ವತಃ ತಾನೇ ನೆರವೇರಿಸಿದ್ದಾನೆ. ಯೆಹೋವನು ನನ್ನ ತಂದೆಗೆ,
16 ‘ನಾನು ನನ್ನ ಜನರಾದ ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದೆನು. ಆದರೆ ನನ್ನನ್ನು ಘನಪಡಿಸಿಕೊಳ್ಳುವುದಕ್ಕಾಗಿ ಆಲಯವೊಂದನ್ನು ಕಟ್ಟಲು ಇಸ್ರೇಲಿನ ಕುಲಗಳಿಂದ ನಾನಿನ್ನೂ ಯಾವ ನಗರವನ್ನು ಆರಿಸಿಕೊಂಡಿರಲಿಲ್ಲ. ಇಸ್ರೇಲಿನ ಜನರನ್ನಾಳುವ ನಾಯಕನನ್ನು ನಾನಿನ್ನೂ ಆರಿಸಿಕೊಂಡಿರಲಿಲ್ಲ, ಆದರೆ ನಾನೀಗ ಜೆರುಸಲೇಮನ್ನು ನನಗೆ ಸನ್ಮಾನವನ್ನು ತರುವಂಥ ಸ್ಥಳವನ್ನಾಗಿ ಆರಿಸಿಕೊಂಡಿರುವೆ. ಇಸ್ರೇಲಿನ ನನ್ನ ಜನರನ್ನು ಆಳಲು ದಾವೀದನನ್ನು ನಾನು ಆರಿಸಿಕೊಂಡಿರುವೆ’ ಎಂದು ಹೇಳಿದ್ದನು.
17 “ನನ್ನ ತಂದೆಯಾದ ದಾವೀದನು ಇಸ್ರೇಲಿನ ದೇವರಾದ ಯೆಹೋವನ ಮಹಿಮೆಗಾಗಿ ಒಂದು ಆಲಯವನ್ನು ನಿರ್ಮಿಸಲು ಬಹಳ ಅಪೇಕ್ಷಿಸಿದ್ದನು.
18 ಆದರೆ ಯೆಹೋವನು ನನ್ನ ತಂದೆಗೆ, ‘ನೀನು ನನ್ನ ಮಹಿಮೆಗಾಗಿ ಆಲಯವೊಂದನ್ನು ನಿರ್ಮಿಸಲು ಬಹಳ ಅಪೇಕ್ಷೆಪಟ್ಟಿರುವುದು ನನಗೆ ತಿಳಿದಿದೆ. ನನಗೋಸ್ಕರ ಆಲಯವನ್ನು ಕಟ್ಟಲು ನೀನು ಅಪೇಕ್ಷಿಸಿರುವುದು ಒಳ್ಳೆಯದೇ ಆಗಿದೆ.
19 ಆದರೆ ನನ್ನ ಆಲಯವನ್ನು ನಿರ್ಮಿಸಲು ನಾನು ಆರಿಸಿಕೊಂಡಿರುವ ವ್ಯಕ್ತಿಯು ನೀನಲ್ಲ. ನಿನ್ನ ಮಗನೇ ನನ್ನ ಆಲಯವನ್ನು ನಿರ್ಮಿಸುತ್ತಾನೆ’ ಎಂದು ಹೇಳಿದನು.
20 “ಯೆಹೋವನು ತಾನು ಮಾಡಿದ್ದ ವಾಗ್ದಾನವನ್ನು ಈಡೇರಿಸಿದನು. ನನ್ನ ತಂದೆಯಾದ ದಾವೀದನ ಸ್ಥಾನದಲ್ಲಿ ನಾನೀಗ ರಾಜನಾಗಿದ್ದೇನೆ. ಯೆಹೋವನ ವಾಗ್ದಾನದಂತೆ ಈಗ ನಾನು ಇಸ್ರೇಲಿನ ಜನರನ್ನು ಆಳುತ್ತಿದ್ದೇನೆ. ಇಸ್ರೇಲಿನ ದೇವರಾದ ಯೆಹೋವನಿಗೆ ನಾನು ಆಲಯವನ್ನು ನಿರ್ಮಿಸಿದೆನು.
21 ಯೆಹೋವನ ಪೆಟ್ಟಿಗೆಗಾಗಿ ಆಲಯದಲ್ಲಿ ನಾನೊಂದು ಸ್ಥಳವನ್ನು ಮಾಡಿದ್ದೇನೆ. ಯೆಹೋವನು ನಮ್ಮ ಪೂರ್ವಿಕರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಈ ಪವಿತ್ರಪೆಟ್ಟಿಗೆಯಲ್ಲಿದೆ. ಯೆಹೋವನು ನಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದಾಗ ಈ ಒಡಂಬಡಿಕೆಯನ್ನು ಮಾಡಿಕೊಂಡನು” ಎಂದು ಹೇಳಿದನು.
22 ಬಳಿಕ ಸೊಲೊಮೋನನು ಯೆಹೋವನ ಯಜ್ಞವೇದಿಕೆಯ ಎದುರಿನಲ್ಲಿ ನಿಂತುಕೊಂಡನು. ಜನರೆಲ್ಲರೂ ಅವನ ಎದುರಿನಲ್ಲಿ ನಿಂತುಕೊಂಡಿದ್ದರು. ರಾಜನಾದ ಸೊಲೊಮೋನನು ತನ್ನ ಕೈಗಳನ್ನು ಚಾಚಿ, ಆಕಾಶದ ಕಡೆಗೆ ದೃಷ್ಟಿಸಿ,
23 “ಇಸ್ರೇಲಿನ ದೇವರಾದ ಯೆಹೋವನೇ, ಭೂಲೋಕದಲ್ಲಾಗಲಿ ಆಕಾಶಮಂಡಲದಲ್ಲಾಗಲಿ ನಿನ್ನಂತಹ ದೇವರು ಮತ್ತೊಬ್ಬರಿಲ್ಲ. ನೀನು ಜನರನ್ನು ಪ್ರೀತಿಸುವುದರಿಂದ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆ. ನೀನು ನಿನ್ನ ಒಡಂಬಡಿಕೆಗಳನ್ನು ನೆರವೇರಿಸುವೆ. ನಿನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸುವ ಜನರಿಗೆ ನೀನು ದಯಾಳುವಾಗಿರುವೆ ಮತ್ತು ನಂಬಿಗಸ್ತನಾಗಿರುವೆ.
24 ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನೊಂದು ವಾಗ್ದಾನ ಮಾಡಿದ್ದೆ. ನೀನು ಆ ವಾಗ್ದಾನವನ್ನು ನೆರವೇರಿಸಿದೆ. ನಿನ್ನ ಬಾಯಿಂದಲೇ ನೀನು ಆ ವಾಗ್ದಾನವನ್ನು ಮಾಡಿದೆ. ನೀನು ನಿನ್ನ ಮಹಾಶಕ್ತಿಯಿಂದ ಆ ವಾಗ್ದಾನವನ್ನು ಇಂದು ನೆರವೇರುವಂತೆ ಮಾಡಿದೆ.
25 ಈಗಲಾದರೋ ಇಸ್ರೇಲಿನ ದೇವರಾದ ಯೆಹೋವನೇ, ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಮಾಡಿದ ಇತರ ವಾಗ್ದಾನಗಳನ್ನು ಈಗ ನೆರವೇರಿಸು. ನೀನು ನನ್ನ ತಂದೆಗೆ, ‘ದಾವೀದನೇ, ನೀನು ನನ್ನನ್ನು ಅನುಸರಿಸಿದಂತೆ ನಿನ್ನ ಮಕ್ಕಳೂ ಎಚ್ಚರಿಕೆಯಿಂದ ನನ್ನನ್ನು ಅನುಸರಿಸಿದರೆ, ನಿನ್ನ ಕುಟುಂಬದಲ್ಲಿನ ಯಾವನಾದರೊಬ್ಬನು ಇಸ್ರೇಲಿನ ಜನರನ್ನು ಆಳುತ್ತಲೇ ಇರುವನು’ ಎಂದು ಹೇಳಿದೆ.
26 ಇಸ್ರೇಲಿನ ದೇವರಾದ ಯೆಹೋವನೇ, ನನ್ನ ತಂದೆಗೆ ನೀಡಿದ ಆ ವಾಗ್ದಾನವನ್ನು ನೆರವೇರಿಸೆಂದು ನಾನು ನಿನ್ನಲ್ಲಿ ಮತ್ತೆ ಬೇಡಿಕೊಳ್ಳುತ್ತೇನೆ.
27 “ದೇವರೇ, ನೀನು ನಿಜವಾಗಿಯೂ ನಮ್ಮೊಡನೆ ಭೂಲೋಕದಲ್ಲಿ ವಾಸಿಸುವೆಯಾ? ಆಕಾಶವೆಲ್ಲವೂ ಹಾಗೂ ಉನ್ನತೋನ್ನತವಾದ ಪರಲೋಕವೆಲ್ಲವೂ ನಿನ್ನನ್ನು ಹಿಡಿಸಲಾರವು. ಹೀಗಿರಲು, ನಾನು ನಿನಗಾಗಿ ನಿರ್ಮಿಸಿರುವ ಈ ಆಲಯವು ನಿನ್ನ ವಾಸಕ್ಕೆ ಖಂಡಿತವಾಗಿಯೂ ಸಾಲುವುದಿಲ್ಲ.
28 ಆದರೆ ದಯವಿಟ್ಟು ನನ್ನ ಪ್ರಾರ್ಥನೆಯನ್ನು ಮತ್ತು ಮನವಿಯನ್ನು ಕೇಳು. ನಾನು ನಿನ್ನ ಸೇವಕ. ಯೆಹೋವನೇ, ನೀನೇ ನನ್ನ ದೇವರು. ಇಂದು ನಿನಗೆ ನಾನು ಮಾಡುತ್ತಿರುವ ಈ ಪ್ರಾರ್ಥನೆಯನ್ನು ಲಾಲಿಸು.
29 ‘ಅಲ್ಲಿ ನಾನು ಸನ್ಮಾನಿಸಲ್ಪಡುವೆನು’ ಎಂದು ನೀನು ಬಹುಕಾಲದ ಹಿಂದೆ ಹೇಳಿರುವೆ. ಆದ್ದರಿಂದ ಈ ಆಲಯವನ್ನು ಹಗಲಿರುಳೂ ದೃಷ್ಟಿಸು. ನಾನು ಈ ಆಲಯದಲ್ಲಿ ನಿನಗೆ ಮಾಡುವ ಪ್ರಾರ್ಥನೆಯನ್ನು ದಯವಿಟ್ಟು ಕೇಳು.
30 ಯೆಹೋವನೇ, ನಾನು ಮತ್ತು ಇಸ್ರೇಲಿನ ಜನರೆಲ್ಲರೂ ಈ ಸ್ಥಳದ ಕಡೆಗೆ ತಿರುಗಿ, ನಿನ್ನಲ್ಲಿ ಪ್ರಾರ್ಥಿಸುತ್ತೇವೆ. ದಯವಿಟ್ಟು ಆ ಪ್ರಾರ್ಥನೆಗಳನ್ನು ಲಾಲಿಸು. ನೀನು ಪರಲೋಕದಲ್ಲಿ ವಾಸಿಸುತ್ತಿರುವಿಯೆಂದು ನಮಗೆ ಗೊತ್ತಿದೆ. ನೀನು ನಮ್ಮ ಪ್ರಾರ್ಥನೆಗಳನ್ನು ಅಲ್ಲಿಯೇ ಕೇಳಿ, ನಮಗೆ ಕ್ಷಮೆಯನ್ನು ಅನುಗ್ರಹಿಸು.
31 “ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಏನಾದರೂ ಕೆಟ್ಟದ್ದನ್ನು ಮಾಡಿದರೆ, ಅವನನ್ನು ಈ ಯಜ್ಞವೇದಿಕೆಯ ಬಳಿಗೆ ಕರೆದು ತರುತ್ತಾರೆ. ಆ ವ್ಯಕ್ತಿಯು ತಪ್ಪಿತಸ್ಥನಲ್ಲದಿದ್ದರೆ, ಅವನು ಬಂದು ತಾನು ನಿರಪರಾಧಿಯೆಂದು ಪ್ರಮಾಣ ಮಾಡುತ್ತಾನೆ.
32 ಪರಲೋಕದಲ್ಲಿರುವ ನೀನು ಅದನ್ನು ಕೇಳಿ, ಆ ವ್ಯಕ್ತಿಗೆ ತೀರ್ಪುನೀಡು. ಆ ವ್ಯಕ್ತಿಯು ತಪ್ಪಿತಸ್ಥನಾಗಿದ್ದರೆ, ಅವನು ತಪ್ಪಿತಸ್ಥನೆಂಬುದನ್ನು ನಮಗೆ ತೋರಿಸು. ಅವನು ನಿರಪರಾಧಿಯಾಗಿದ್ದರೆ ಅವನು ತಪ್ಪಿತಸ್ಥನಲ್ಲವೆಂಬುದನ್ನೂ ದಯವಿಟ್ಟು ನಮಗೆ ತೋರಿಸು.
33 “ಇಸ್ರೇಲಿನ ನಿನ್ನ ಜನರೂ ಕೆಲವು ಸಂದರ್ಭಗಳಲ್ಲಿ ನಿನ್ನ ವಿರುದ್ಧವಾಗಿ ಪಾಪಮಾಡುತ್ತಾರೆ. ಅವರನ್ನು ಅವರ ಶತ್ರುಗಳು ಸೋಲಿಸುತ್ತಾರೆ. ಆಗ ಜನರು ನಿನ್ನ ಹತ್ತಿರಕ್ಕೆ ಹಿಂದಿರುಗಿ ನಿನ್ನನ್ನು ಸ್ತುತಿಸುತ್ತಾರೆ. ಈ ಆಲಯದಲ್ಲಿ ಜನರು ನಿನಗೆ ಪ್ರಾರ್ಥಿಸುತ್ತಾರೆ.
34 ಪರಲೋಕದಲ್ಲಿಯೇ ಅವರ ಪ್ರಾರ್ಥನೆಗಳನ್ನು ಆಲಿಸಿ ನಿನ್ನ ಜನರಾದ ಇಸ್ರೇಲರ ಪಾಪಗಳನ್ನು ಕ್ಷಮಿಸಿ ಅವರ ದೇಶದಲ್ಲಿ ಅವರು ಮತ್ತೆ ನೆಲೆಸಲು ಅವಕಾಶ ಮಾಡಿಕೊಡು. ಈ ದೇಶವನ್ನು ಅವರ ಪೂರ್ವಿಕರಿಗೆ ದಯಪಾಲಿಸಿದವನು ನೀನೇ.
35 “ಅವರು ಕೆಲವು ಸಂದರ್ಭಗಳಲ್ಲಿ ನಿನ್ನ ವಿರುದ್ಧವಾಗಿ ಪಾಪಮಾಡುತ್ತಾರೆ. ಆಗ ನೀನು ಅವರ ಭೂಮಿಯ ಮೇಲೆ ಬೀಳುವ ಮಳೆಯನ್ನು ನಿಲ್ಲಿಸುವೆ. ಆಗ ಅವರು ಈ ಸ್ಥಳದ ಕಡೆಗೆ ತಿರುಗಿ ಪ್ರಾರ್ಥಿಸುತ್ತಾ, ನಿನ್ನ ಹೆಸರನ್ನು ಕೊಂಡಾಡುವರು. ನೀನು ಅವರನ್ನು ಬಳಲಿಸುವೆ. ಅವರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಟ್ಟು ಅವುಗಳಿಗೆ ವಿಮುಖರಾಗುತ್ತಾರೆ.
36 ಆಗ ಪರಲೋಕದಿಂದಲೇ ಅವರ ಪ್ರಾರ್ಥನೆಗಳನ್ನು ಆಲಿಸು; ಅವರ ಪಾಪಗಳನ್ನು ಕ್ಷಮಿಸು; ನೀತಿಮಾರ್ಗವನ್ನು ಅವರಿಗೆ ಕಲಿಸು. ಬಳಿಕ ನೀನು ಅವರಿಗೆ ದಯಪಾಲಿಸಿದ ಭೂಮಿಯ ಮೇಲೆ ಮಳೆಯನ್ನು ಸುರಿಸು.
37 “ಭೂಮಿಯು ಬಹಳ ಬರಡಾಗಿ ಅದರ ಮೇಲೆ ಬೆಳಗಳೇ ಬೆಳೆಯದಂತಾಗಬಹುದು, ಬಹುಶಃ ಘೋರವಾದ ವ್ಯಾಧಿಗಳು ಜನರಲ್ಲಿ ಹರಡಬಹುದು. ಬೆಳೆಯುವ ಬೆಳೆಗಳೆಲ್ಲ ಬಹುಶಃ ಕ್ರಿಮಿಕೀಟಗಳಿಂದ ನಾಶವಾಗಬಹುದು. ಇಲ್ಲವೆ ನಿನ್ನ ಜನರ ಮೇಲೆ ಕೆಲವು ನಗರಗಳಲ್ಲಿ ಅವರ ಶತ್ರುಗಳು ಆಕ್ರಮಣ ಮಾಡಬಹುದು. ನಿನ್ನ ಜನರಲ್ಲಿ ಅನೇಕರು ವ್ಯಾಧಿಗೆ ಒಳಗಾಗಬಹುದು.
38 ಈ ಕಾರ್ಯಗಳಲ್ಲಿ ಯಾವುದಾದರೊಂದು ಸಂಭವಿಸಿದಾಗ, ಒಬ್ಬ ಮನುಷ್ಯನು ಮಾತ್ರ ತನ್ನ ಪಾಪಕ್ಕಾಗಿ ಕ್ಷಮೆಯನ್ನು ಯಾಚಿಸಿ ಈ ಆಲಯದ ಕಡೆಗೆ ಕೈಗಳನ್ನೆತ್ತಿ ಪ್ರಾರ್ಥಿಸಿದರೆ,
39 ದಯವಿಟ್ಟು ಅವನ ಪ್ರಾರ್ಥನೆಯನ್ನು ನಿನ್ನ ನಿವಾಸವಾದ ಪರಲೋಕದಿಂದ ಆಲಿಸಿ, ಜನರನ್ನು ಕ್ಷಮಿಸಿ, ಅವರಿಗೆ ಸಹಾಯ ಮಾಡು. ಜನರು ನಿಜವಾಗಿ ಆಲೋಚಿಸುವ ಸಂಗತಿಗಳು ನಿನಗೆ ಮಾತ್ರ ತಿಳಿದಿವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ತೀರ್ಪುನೀಡು ಮತ್ತು ಅವನಿಗೆ ನ್ಯಾಯವಾದದ್ದನ್ನು ಮಾಡು.
40 ನೀನು ಹೀಗೆ ಮಾಡಿದರೆ, ನೀನು ನಮ್ಮ ಪೂರ್ವಿಕರಿಗೆ ದಯಪಾಲಿಸಿರುವ ಈ ದೇಶದಲ್ಲಿ ಅವರು ವಾಸಿಸುವ ಎಲ್ಲಾ ಕಾಲದಲ್ಲೂ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿರುತ್ತಾರೆ.
41 (41-42) “ನಿನ್ನ ನಾಮಮಹತ್ತನ್ನು ಮತ್ತು ಶಕ್ತಿಯನ್ನು ಇತರ ಸ್ಥಳಗಳ ಜನರು ಕೇಳುತ್ತಾರೆ. ಈ ಆಲಯದಲ್ಲಿ ಪ್ರಾರ್ಥಿಸುವುದಕ್ಕಾಗಿ ಅವರು ದೂರದಿಂದ ಬರುತ್ತಾರೆ.
43 ನಿನ್ನ ನಿವಾಸವಾದ ಪರಲೋಕದಿಂದಲೇ ಅವರ ಪ್ರಾರ್ಥನೆಗಳನ್ನು ದಯವಿಟ್ಟು ಆಲಿಸು, ಅನ್ಯ ಸ್ಥಳದವರಾದ ಆ ಜನರು ನಿನ್ನಲ್ಲಿ ಬೇಡುವುದನ್ನೆಲ್ಲ ದಯವಿಟ್ಟು ಈಡೇರಿಸು. ಆಗ, ಇಸ್ರೇಲಿನ ಜನರಂತೆ ಭೂಲೋಕದವರೆಲ್ಲರಿಗೂ ನಿನ್ನ ಹೆಸರು ಗೊತ್ತಾಗುವುದು ಮತ್ತು ಅವರು ನಿನಗೆ ಭಯಪಡುವರು. ಈ ಆಲಯವನ್ನು ನಿನ್ನ ಗೌರವಕ್ಕಾಗಿ ನಾನು ಕಟ್ಟಿಸಿದೆನೆಂಬುದು ಆಗ ಎಲ್ಲಾ ಕಡೆಯ ಜನರಿಗೂ ತಿಳಿಯುವುದು.
44 “ಕೆಲವು ಸಂದರ್ಭಗಳಲ್ಲಿ ತಮ್ಮ ಶತ್ರುಗಳ ವಿರುದ್ಧ ಹೋರಾಡುವಂತೆ ನಿನ್ನ ಜನರಿಗೆ ನೀನು ಆಜ್ಞಾಪಿಸುವೆ. ಆಗ ನಿನ್ನ ಜನರು, ನಿನ್ನಿಂದ ಆರಿಸಲ್ಪಟ್ಟ ಈ ನಗರದ ಕಡೆಗೆ ಮತ್ತು ನಾನು ನಿನ್ನ ಗೌರವಕ್ಕಾಗಿ ನಿರ್ಮಿಸಿದ ಈ ದೇವಾಲಯದ ಕಡೆಗೆ ಮುಖ ಮಾಡಿ ನಿನ್ನಲ್ಲಿ ಪ್ರಾರ್ಥಿಸುತ್ತಾರೆ,
45 ಆಗ ಪರಲೋಕದಿಂದಲೇ ನೀನು ಅವರ ಪ್ರಾರ್ಥನೆಗಳನ್ನು ಆಲಿಸಿ ಅವರಿಗೆ ಸಹಾಯ ಮಾಡು.
46 “ನಿನ್ನ ಜನರು ನಿನ್ನ ವಿರುದ್ಧ ಪಾಪ ಮಾಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ಪಾಪಮಾಡುತ್ತಾನೆಂಬುದು ನನಗೆ ತಿಳಿದಿದೆ. ನಿನ್ನ ಜನರ ಬಗ್ಗೆ ನೀನು ಕೋಪದಿಂದಿರುವೆ. ಅವರ ಶತ್ರುಗಳು ಅವರನ್ನು ಸೋಲಿಸುವಂತೆ ಮಾಡುವೆ. ಅವರ ಶತ್ರುಗಳು ಅವರನ್ನು ಸೆರೆಯಾಳುಗಳನ್ನಾಗಿ ಕೆಲವು ದೂರದೇಶಗಳಿಗೆ ಸಾಗಿಸುವರು.
47 ಆ ದೂರದೇಶಗಳಲ್ಲಿ ನಿನ್ನ ಜನರು ತಮಗೆ ಸಂಭವಿಸಿದ್ದನ್ನು ಆಲೋಚಿಸುತ್ತಾರೆ. ಅವರು ತಮ್ಮ ಪಾಪಗಳಿಗಾಗಿ ಕ್ಷಮೆಯನ್ನು ಕೋರಿ, ನಿನ್ನಲ್ಲಿ ಪ್ರಾರ್ಥಿಸುತ್ತಾರೆ. ಅವರು, ‘ನಾವು ಪಾಪಮಾಡಿ ದ್ರೋಹಿಗಳಾಗಿದ್ದೇವೆ’ ಎಂದು ಹೇಳುತ್ತಾರೆ.
48 ಅವರು ಆ ದೂರದ ದೇಶದಲ್ಲಿರುತ್ತಾರೆ. ಆದರೆ ಅವರು ತಮ್ಮ ಪೂರ್ವಿಕರಿಗೆ ನೀನು ದಯಪಾಲಿಸಿದ ಈ ದೇಶದ ಕಡೆಗೂ ನಿನ್ನಿಂದ ಆರಿಸಲ್ಪಟ್ಟ ಈ ನಗರದ ಕಡೆಗೂ ನಿನ್ನ ಗೌರವಕ್ಕಾಗಿ ನಾನು ನಿರ್ಮಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ನಾವು ನಿನ್ನ ಆಜ್ಞೆಗಳನ್ನು ಮೀರಿ ಪಾಪಿಗಳಾದೆವು ಎಂದು ಒಪ್ಪಿ, ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ ನಿನ್ನಲ್ಲಿ ಪ್ರಾರ್ಥಿಸುವುದಾದರೆ,
49 ನಿನ್ನ ನಿವಾಸವಾದ ಪರಲೋಕದಿಂದಲೇ ದಯವಿಟ್ಟು ಅವರ ಮೊರೆಯನ್ನು ಆಲಿಸಿ ಅವರ ನ್ಯಾಯವನ್ನು ಸ್ಥಾಪಿಸು.
50 ನಿನ್ನ ಜನರ ಎಲ್ಲಾ ಪಾಪಗಳನ್ನು ಕ್ಷಮಿಸು. ಅವರು ನಿನಗೆ ವಿರುದ್ಧವಾದುದಕ್ಕೆ ಅವರನ್ನು ಕ್ಷಮಿಸು. ಅವರ ಶತ್ರುಗಳು ಅವರಿಗೆ ದಯೆತೋರಿಸುವಂತೆ ಮಾಡು.
51 ಅವರು ನಿನ್ನ ಜನರೆಂಬುದನ್ನು ಜ್ಞಾಪಿಸಿಕೊ. ನೀನು ಅವರನ್ನು ಈಜಿಪ್ಟಿನಿಂದ ಬರಮಾಡಿದೆಯೆಂಬುದನ್ನು ಜ್ಞಾಪಿಸಿಕೊ. ಸುಡುವ ಕುಲುಮೆಯಿಂದ ಹೊರಕ್ಕೆ ಎಳೆದು ತಂದಂತೆ ನೀನು ಅವರನ್ನು ರಕ್ಷಿಸಿದೆ.
52 “ದೇವರಾದ ಯೆಹೋವನೇ, ನನ್ನ ಪ್ರಾರ್ಥನೆಗಳನ್ನು ಮತ್ತು ಇಸ್ರೇಲಿನ ನಿನ್ನ ಜನರ ಪ್ರಾರ್ಥನೆಗಳನ್ನು ದಯವಿಟ್ಟು ಆಲಿಸು. ಅವರು ಸಹಾಯಕ್ಕಾಗಿ ಯಾವ ಬಳಿಗೆಯಲ್ಲಾದರೂ ನಿನಗೆ ಮೊರೆಯಿಟ್ಟರೆ ಅದನ್ನು ಆಲಿಸು,
53 ಭೂಲೋಕದ ಎಲ್ಲಾ ಜನರೊಳಗಿಂದ ಅವರನ್ನು ನೀನು ನಿನ್ನ ವಿಶೇಷವಾದ ಸ್ವಂತ ಜನರೆಂದು ಆರಿಸಿರುವೆ. ಯೆಹೋವನೇ, ನಮ್ಮ ಪೂರ್ವಿಕರನ್ನು ನೀನು ಈಜಿಪ್ಟಿನಿಂದ ಬರಮಾಡಿದಾಗ ನಿನ್ನ ಸೇವಕನಾದ ಮೋಶೆಯ ಮೂಲಕ ಅದನ್ನು ವಾಗ್ದಾನ ಮಾಡಿದೆ.”
54 ಸೊಲೊಮೋನನು ಯಜ್ಞವೇದಿಕೆಯ ಸನ್ನಿಧಿಯಲ್ಲಿ ತನ್ನ ಮೊಣಕಾಲುಗಳನ್ನೂರಿ, ದೇವರಿಗೆ ಪ್ರಾರ್ಥನೆಯನ್ನು ಮಾಡಿದನು. ಸೊಲೊಮೋನನು ತನ್ನ ಕೈಗಳನ್ನು ಪರಲೋಕದತ್ತ ಚಾಚಿ ಪ್ರಾರ್ಥಿಸಿದನು. ಬಳಿಕ ಸೊಲೊಮೋನನು ಪ್ರಾರ್ಥನೆಯನ್ನು ಮುಗಿಸಿ ಎದ್ದುನಿಂತನು.
55 ಬಳಿಕ ಇಸ್ರೇಲಿನ ಜನರೆಲ್ಲರನ್ನು ಆಶೀರ್ವದಿಸಬೇಕೆಂದು ಅವನು ಗಟ್ಟಿಯಾದ ಧ್ವನಿಯಲ್ಲಿ ದೇವರನ್ನು ಕೇಳಿಕೊಂಡನು. ಸೊಲೊಮೋನನು ಹೀಗೆ ಹೇಳಿದನು:
56 “ಯೆಹೋವನಿಗೆ ಸ್ತೋತ್ರ ಮಾಡಿರಿ! ಆತನು ಇಸ್ರೇಲಿನ ತನ್ನ ಜನರಿಗೆ ವಿಶ್ರಾಂತಿಯನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದಾನೆ. ಆತನು ನಮಗೆ ವಿಶ್ರಾಂತಿಯನ್ನು ದಯಪಾಲಿಸಿರುವನು! ಯೆಹೋವನು ತನ್ನ ಸೇವಕನಾದ ಮೋಶೆಯಿಂದ, ಇಸ್ರೇಲಿನ ಜನರಿಗೆ ಅನೇಕ ಒಳ್ಳೆಯ ವಾಗ್ದಾನಗಳನ್ನು ಮಾಡಿದ್ದಾನೆ. ಯೆಹೋವನು ತನ್ನ ವಾಗ್ದಾನಗಳನ್ನೆಲ್ಲ ಈಡೇರಿಸಿರುವನು.
57 ನಮ್ಮ ದೇವರಾದ ಯೆಹೋವನು ನಮ್ಮೊಂದಿಗಿರಲೆಂದು ನಾನು ಮೊರೆಯಿಡುತ್ತೇನೆ. ಆತನು ನಮ್ಮ ಪೂರ್ವಿಕರ ಜೊತೆಯಲ್ಲಿದ್ದಂತೆ ನಮ್ಮ ಜೊತೆಯಲ್ಲಿಯೂ ಇರಲೆಂದು ನಾನು ಮೊರೆಯಿಡುತ್ತೇನೆ. ಆತನು ನಮ್ಮನ್ನು ಎಂದಿಗೂ ಬಿಟ್ಟುಹೋಗಕೂಡದೆಂದು ನಾನು ಪ್ರಾರ್ಥಿಸುತ್ತೇನೆ.
58 ಈ ರೀತಿಯಲ್ಲಿ ನಾವು ಆತನ ಕಡೆಗೆ ತಿರುಗಿ, ಆತನನ್ನು ಅನುಸರಿಸುವಂತೆ ಆತನು ಮಾಡಲಿ. ಆತನು ನಮ್ಮ ಪೂರ್ವಿಕರಿಗೆ ನೀಡಿದ ಎಲ್ಲ ಕಟ್ಟಳೆಗಳಿಗೆ, ತೀರ್ಪುಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗಿರಲು ಆಗ ನಮಗೆ ಸಾಧ್ಯವಾಗುತ್ತದೆ.
59 ನನ್ನ ಈ ಪ್ರಾರ್ಥನೆಯನ್ನು ಮತ್ತು ನಾನು ಕೇಳಿಕೊಂಡವುಗಳನ್ನು ನಮ್ಮ ದೇವರಾದ ಯೆಹೋವನು ಸದಾ ಜ್ಞಾಪಿಸಿಕೊಳ್ಳಲಿ. ಯೆಹೋವನು ತನ್ನ ಸೇವಕನಾದ ರಾಜನಿಗೋಸ್ಕರವಾಗಿಯೂ ತನ್ನ ಜನರಾದ ಇಸ್ರೇಲರಿಗೋಸ್ಕರವಾಗಿಯೂ ಇವುಗಳನ್ನು ಈ ಹೊತ್ತೇ ನೆರವೇರಿಸಲಿ.
60 ಆಗ ಯೆಹೋವನೇ ನಿಜವಾದ ದೇವರೆಂದು ಪ್ರಪಂಚದ ಜನರೆಲ್ಲರಿಗೂ ತಿಳಿಯುತ್ತದೆ.
61 ನಮ್ಮ ದೇವರಾದ ಯೆಹೋವನಿಗೆ ನೀವು ಪೂರ್ಣ ಭಯಭಕ್ತಿಯುಳ್ಳವರಾಗಿದ್ದು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಸದಾ ಅನುಸರಿಸಿರಿ; ಅವುಗಳಿಗೆ ವಿಧೇಯರಾಗಿರಿ. ಈಗ ನೀವು ವಿಧೇಯರಾಗಿರುವಂತೆಯೇ ಇನ್ನು ಮುಂದೆಯೂ ಆತನಿಗೆ ವಿಧೇಯರಾಗಿರಿ” ಎಂದನು.
62 ಬಳಿಕ ರಾಜನಾದ ಸೊಲೊಮೋನನೂ ಇಸ್ರೇಲಿನ ಜನರೆಲ್ಲರೂ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಿದರು.
63 ಸೊಲೊಮೋನನು ಇಪ್ಪತ್ತೆರಡು ಸಾವಿರ ಹೋರಿಗಳನ್ನು, ಒಂದು ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನು ಸಮಾಧಾನಯಜ್ಞವನ್ನಾಗಿ ಅರ್ಪಿಸಿದನು. ಹೀಗೆ ರಾಜನು ಮತ್ತು ಇಸ್ರೇಲರು ಆಲಯವನ್ನು ಯೆಹೋವನಿಗೆ ಪ್ರತಿಷ್ಠಿಸಿದರು.
64 ಅಂದು ರಾಜನಾದ ಸೊಲೊಮೋನನು ಆಲಯದ ಮುಂದಿನ ಅಂಗಳವನ್ನು ಪ್ರತಿಷ್ಠಿಸಿದನು. ಅವನು ಸರ್ವಾಂಗಹೋಮಗಳನ್ನು, ಧಾನ್ಯಸಮರ್ಪಣೆಗಳನ್ನು ಮತ್ತು ಸಮಾಧಾನಯಜ್ಞಕ್ಕಾಗಿ ವಧಿಸಿದ್ದ ಪಶುಗಳ ಕೊಬ್ಬನ್ನು ಅಂಗಳದಲ್ಲಿ ಅರ್ಪಿಸಿದನು. ಯಾಕೆಂದರೆ ಯೆಹೋವನ ಮುಂದೆ ಇದ್ದ ಹಿತ್ತಾಳೆಯ ಯಜ್ಞವೇದಿಕೆಯು ಈ ಎಲ್ಲವನ್ನು ಹಿಡಿಸಲಾರದಷ್ಟು ಚಿಕ್ಕದಾಗಿತ್ತು.
65 ರಾಜನಾದ ಸೊಲೊಮೋನನು ಮತ್ತು ಇಸ್ರೇಲಿನ ಜನರೆಲ್ಲರು ವಿಶ್ರಾಂತಿ ಹಬ್ಬವನ್ನು ಆಚರಿಸಿದರು. ಉತ್ತರದಲ್ಲಿದ್ದ ಹಮಾತ್ ದಾರಿಯಿಂದ ದಕ್ಷಿಣದ ಈಜಿಪ್ಟಿನ ಗಡಿಯವರೆಗಿನ ಎಲ್ಲ ಇಸ್ರೇಲರು ಅಲ್ಲಿದ್ದರು. ಅವರೆಲ್ಲರೂ ಒಟ್ಟಾಗಿ ಏಳು ದಿನಗಳ ಕಾಲ ಯೆಹೋವನ ಮುಂದೆ ತಿಂದು, ಕುಡಿದು ಆನಂದಿಸಿದರು. ಆಗ ಅವರು ಮತ್ತೆ ಏಳು ದಿನಗಳು ಅಲ್ಲಿಯೇ ಉಳಿದರು. ಅವರು ಒಟ್ಟಿಗೆ ಹದಿನಾಲ್ಕು ದಿನಗಳು ಹಬ್ಬವನ್ನು ಆಚರಿಸಿದರು!
66 ಮಾರನೆಯ ದಿನ ಸೊಲೊಮೋನನು ಜನರಿಗೆ ಮನೆಗೆ ಹೋಗುವಂತೆ ಹೇಳಿದನು. ಜನರೆಲ್ಲರು ರಾಜನನ್ನು ಅಭಿನಂದಿಸಿ ತಮ್ಮ ಮನೆಗಳಿಗೆ ಹೋದರು. ಯೆಹೋವನು ತನ್ನ ಸೇವಕನಾದ ದಾವೀದನಿಗೆ ಮತ್ತು ಇಸ್ರೇಲಿನ ಜನರಿಗೆ ಒಳ್ಳೆಯವುಗಳನ್ನು ಮಾಡಿದ್ದರಿಂದ ಅವರು ಸಂತೋಷವಾಗಿದ್ದರು.
×

Alert

×