Bible Languages

Indian Language Bible Word Collections

Bible Versions

Books

1 Kings Chapters

1 Kings 21 Verses

Bible Versions

Books

1 Kings Chapters

1 Kings 21 Verses

1 ಸಮಾರ್ಯದ ರಾಜನಾದ ಅಹಾಬನಿಗೆ ಇಜ್ರೇಲಿನಲ್ಲಿ ಅರಮನೆಯಿತ್ತು. ಆ ಅರಮನೆಯ ಹಿತ್ತಲಿನಲ್ಲಿ ಒಂದು ದ್ರಾಕ್ಷಿತೋಟವಿತ್ತು. ಇಜ್ರೇಲಿನವನಾದ ನಾಬೋತನೆಂಬ ಹೆಸರಿನ ಮನುಷ್ಯನು ಆ ದ್ರಾಕ್ಷಿ ತೋಟದ ಒಡೆಯನಾಗಿದ್ದನು.
2 ಒಂದು ದಿನ ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿ ತೋಟವನ್ನು ನನಗೆ ಕೊಡು. ನಾನು ಅದನ್ನು ತರಕಾರಿಯ ತೋಟವನ್ನಾಗಿ ಮಾಡುವೆನು. ನಿನ್ನ ದ್ರಾಕ್ಷಿತೋಟವು ನನ್ನ ಅರಮನೆಯ ಹತ್ತಿರದಲ್ಲಿದೆ. ನಾನು ಅದಕ್ಕೆ ಬದಲಾಗಿ ಒಂದು ಉತ್ತಮ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ನೀನು ಬಯಸಿದರೆ, ನಾನು ಅದರ ಬೆಲೆಯನ್ನು ಹಣದ ರೂಪದಲ್ಲಿ ಕೊಡುತ್ತೇನೆ” ಎಂದು ಹೇಳಿದನು.
3 ನಾಬೋತನು, “ನಾನು ನನ್ನ ಭೂಮಿಯನ್ನು ಎಂದಿಗೂ ನಿನಗೆ ಕೊಡುವುದಿಲ್ಲ. ಅದು ನನ್ನ ವಂಶಕ್ಕೆ ಸೇರಿದ್ದು” ಎಂದು ಉತ್ತರಿಸಿದನು.
4 ಅಹಾಬನು ಮನೆಗೆ ಹೋದನು. ಅವನು ನಾಬೋತನ ಮೇಲೆ ಕೋಪಗೊಂಡನು ಮತ್ತು ಬೇಸರಗೊಂಡನು. ಇಜ್ರೇಲಿನವನಾದ ನಾಬೋತನು ಹೇಳಿದ ಸಂಗತಿಗಳನ್ನು ಅವನು ಇಷ್ಟಪಡಲಿಲ್ಲ. (“ನಾನು ನನ್ನ ವಂಶಕ್ಕೆ ಸೇರಿದ ದ್ರಾಕ್ಷಿ ತೋಟವನ್ನು ನಿನಗೆ ಕೊಡುವುದಿಲ್ಲ” ಎಂದು ನಾಬೋತನು ಹೇಳಿದ್ದನು.) ಅಹಾಬನು ತನ್ನ ಹಾಸಿಗೆಯಲ್ಲಿ ಮಲಗಿ, ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡನು. ಅವನು ಊಟ ಮಾಡಲಿಲ್ಲ.
5 ಅಹಾಬನ ಪತ್ನಿಯಾದ ಈಜೆಬೆಲಳು ಅವನ ಹತ್ತಿರ ಹೋದಳು. ಈಜೆಬೆಲಳು, “ನೀನೇಕೆ ತಳಮಳಗೊಂಡಿರುವೆ? ನೀನು ಏಕೆ ಊಟಮಾಡಲಿಲ್ಲ?” ಎಂದು ಅವನನ್ನು ಕೇಳಿದಳು.
6 ಅಹಾಬನು, “ನಾನು ಇಜ್ರೇಲಿನ ನಾಬೋತನಿಗೆ, ‘ನಿನ್ನ ತೋಟವನ್ನು ನನಗೆ ಕೊಡು. ಅದರ ಪೂರ್ಣ ಬೆಲೆಯನ್ನು ನಿನಗೆ ಕೊಡುತ್ತೇನೆ ಅಥವಾ ನೀನು ಬಯಸಿದರೆ, ನಿನಗೆ ಬೇರೊಂದು ತೋಟವನ್ನು ಕೊಡುತ್ತೇನೆ’ ಎಂದು ಹೇಳಿದೆನು. ಆದರೆ ನಾಬೋತನು ತನ್ನ ತೋಟವನ್ನು ನನಗೆ ಕೊಡಲಿಲ್ಲ” ಎಂದು ಉತ್ತರಿಸಿದನು.
7 ಈಜೆಬೆಲಳು, “ನೀನು ಇಸ್ರೇಲಿಗೆಲ್ಲ ರಾಜ! ನಿನ್ನ ಹಾಸಿಗೆಯಿಂದ ಎದ್ದು ಬಾ. ನೀನು ಸ್ವಲ್ಪ ಊಟಮಾಡಿ, ಸಂತೋಷದಿಂದಿರು. ನಾನು ನಿನಗೆ ನಾಬೋತನ ದ್ರಾಕ್ಷಿ ತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
8 ನಂತರ ಈಜೆಬೆಲಳು ಕೆಲವು ಪತ್ರಗಳನ್ನು ಬರೆದಳು. ಅವಳು ಆ ಪತ್ರಗಳಿಗೆ ಅಹಾಬನ ಹೆಸರಿನ ಸಹಿಯನ್ನು ಮಾಡಿದಳು. ಅಹಾಬನ ಸ್ವಂತ ಮೊಹರನ್ನು ಅವಳು ಆ ಪತ್ರಗಳಿಗೆ ಹಾಕಿದಳು. ನಾಬೋತನು ಇದ್ದ ಆ ಪಟ್ಟಣದಲ್ಲಿ ವಾಸವಾಗಿದ್ದ ಮುಖ್ಯ ಜನರಿಗೂ ಹಿರಿಯರಿಗೂ ಅವಳು ಆ ಪತ್ರಗಳನ್ನು ಕಳುಹಿಸಿದಳು.
9 ಆ ಪತ್ರದಲ್ಲಿ ಹೀಗೆ ಬರೆದಿತ್ತು: ಉಪವಾಸದ ಒಂದು ದಿನವನ್ನು ಗೊತ್ತುಮಾಡಿ, ಆ ದಿನವನ್ನು ಪ್ರಕಟಿಸಿ, ನಂತರ ಪಟ್ಟಣದ ಜನರನ್ನೆಲ್ಲ ಸಭೆ ಸೇರಿಸಿರಿ.
10 ನಾಬೋತನ ಬಗ್ಗೆ ಸುಳ್ಳುಹೇಳುವ ಕೆಲವು ಜನರನ್ನು ಪತ್ತೆಹಚ್ಚಿ, ನಾಬೋತನು ರಾಜನ ವಿರುದ್ಧವಾಗಿ ಮತ್ತು ದೇವರ ವಿರುದ್ಧವಾಗಿ ಮಾತನಾಡುವುದನ್ನು ನಾವು ಕೇಳಿಸಿಕೊಂಡೆವೆಂದು ಅವರು ಹೇಳಲೇಬೇಕು. ಆಗ ನಾಬೋತನನ್ನು ನಗರದಿಂದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದುಹಾಕಿರಿ.
11 ಇಜ್ರೇಲಿನ ಹಿರಿಯರು ಮತ್ತು ಪ್ರಮುಖರಾದ ಜನರು ಆ ಆಜ್ಞೆಗನುಸಾರವಾಗಿ ಮಾಡಿದರು.
12 ನಾಯಕರು ಒಂದು ದಿನವನ್ನು ಉಪವಾಸದ ದಿನವಾಗಿ ಪ್ರಕಟಿಸಿದರು. ಆ ದಿನ ಅವರು ಜನರನ್ನೆಲ್ಲ ಸಭೆಸೇರಿಸಿದರು. ನಾಬೋತನನ್ನು ಜನರೆದುರಿಗೆ ಪ್ರಮುಖವಾದ ಒಂದು ಸ್ಥಳದಲ್ಲಿ ಅವರು ಕುಳ್ಳಿರಿಸಿದರು.
13 ನಾಬೋತನು ದೇವರ ವಿರುದ್ಧವಾಗಿಯೂ ರಾಜನ ವಿರುದ್ಧವಾಗಿಯೂ ಮಾತನಾಡಿದ್ದನ್ನು ತಾವು ಕೇಳಿರುವುದಾಗಿ ಇಬ್ಬರು ಅಲ್ಲಿನ ಜನರಿಗೆ ಹೇಳಿದರು. ಜನರು ನಾಬೋತನನ್ನು ನಗರದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದರು.
14 ನಾಯಕರು ಈಜೆಬೆಲಳಿಗೆ ಒಂದು ಸಂದೇಶವನ್ನು ಕಳುಹಿಸಿದರು. ಆ ಸಂದೇಶವು ಹೀಗಿತ್ತು: “ನಾಬೋತನನ್ನು ಕೊಂದು ಹಾಕಲಾಗಿದೆ.”
15 ಇದನ್ನು ಕೇಳಿದ ಈಜೆಬೆಲಳು ಅಹಾಬನಿಗೆ, “ನಾಬೋತನು ಸತ್ತುಹೋದನು. ಈಗ ನೀನು ಹೋಗಿ, ನಿನಗೆ ಇಷ್ಟವಾದ ಆ ದ್ರಾಕ್ಷಿ ತೋಟವನ್ನು ತೆಗೆದುಕೊ” ಎಂದು ಹೇಳಿದಳು.
16 ಅಹಾಬನು ದ್ರಾಕ್ಷಿತೋಟಕ್ಕೆ ಹೋಗಿ ಅದನ್ನು ತನ್ನದನ್ನಾಗಿಸಿಕೊಂಡನು.
17 ಈ ಸಮಯದಲ್ಲಿ ಯೆಹೋವನು ಪ್ರವಾದಿಯೂ ತಿಷ್ಬೇ ಊರಿನವನೂ ಆದ ಎಲೀಯನ ಜೊತೆಯಲ್ಲಿ ಮಾತನಾಡಿದನು. ಯೆಹೋವನು ಇಂತೆಂದನು:
18 “ಸಮಾರ್ಯದಲ್ಲಿ ಆಳುತ್ತಿರುವ ಇಸ್ರೇಲಿನ ರಾಜನಾದ ಅಹಾಬನ ಬಳಿಗೆ ಹೋಗು. ಅಹಾಬನು ಈಗ ನಾಬೋತನ ದ್ರಾಕ್ಷಿತೋಟದಲ್ಲಿದ್ದಾನೆ. ಆ ತೋಟವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅವನು ಅಲ್ಲಿಗೆ ಹೋಗಿದ್ದಾನೆ.
19 ಯೆಹೋವನಾದ ನಾನು ಅವನಿಗೆ ಹೀಗೆ ಹೇಳಿದೆನೆಂದು ತಿಳಿಸು: ‘ಅಹಾಬನೇ! ನೀನು ನಾಬೋತನನ್ನು ಕೊಂದುಹಾಕಿದೆ. ಈಗ ನೀನು ಅವನ ದ್ರಾಕ್ಷಿತೋಟವನ್ನು ತೆಗೆದುಕೊಳ್ಳುತ್ತಿರುವೆ. ಆದ್ದರಿಂದ ನಾನಿದನ್ನು ನಿನಗೆ ಹೇಳುತ್ತೇನೆ! ನಾಬೋತನು ಸತ್ತ ಸ್ಥಳದಲ್ಲಿಯೇ ನೀನು ಸಹ ಸಾಯುವೆ. ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನೂ ನೆಕ್ಕುತ್ತವೆ!”‘
20 ಎಲೀಯನು ಅಹಾಬನ ಹತ್ತಿರಕ್ಕೆ ಹೋದನು. ಅಹಾಬನು ಎಲೀಯನನ್ನು ಕಂಡು, “ನೀನು ನನ್ನನ್ನು ಮತ್ತೆ ಕಂಡುಹಿಡಿದೆ. ನೀನು ಯಾವಾಗಲೂ ನನಗೆ ವಿರೋಧವಾಗಿರುವೆ” ಎಂದನು. ಎಲೀಯನು, “ಹೌದು, ನಾನು ನಿನ್ನನ್ನು ಮತ್ತೆ ಕಂಡುಹಿಡಿದೆ. ಯೆಹೋವನ ವಿರುದ್ಧ ಪಾಪಮಾಡಲು ನೀನು ನಿನ್ನ ಜೀವನವನ್ನು ಯಾವಾಗಲೂ ಉಪಯೋಗಿಸುತ್ತಿರುವೆ.
21 ಆದ್ದರಿಂದ ಯೆಹೋವನು ನಿನಗೆ, ‘ನಾನು ನಿನ್ನನ್ನು ನಾಶಪಡಿಸುತ್ತೇನೆ. ನಿನ್ನನ್ನು ಮತ್ತು ನಿನ್ನ ಕುಟುಂಬದ ಪ್ರತಿಯೊಬ್ಬ ಗಂಡಸರನ್ನು ನಾನು ಕೊಂದುಹಾಕುತ್ತೇನೆ.
22 ನೆಬಾಟನ ಮಗನಾದ, ರಾಜನಾದ ಯಾರೊಬ್ಬಾಮನ ಕುಟುಂಬಕ್ಕೆ ಆದ ಗತಿಯೇ ನಿನ್ನ ಕುಟುಂಬಕ್ಕೂ ಆಗುವುದು. ರಾಜನಾದ ಬಾಷನ ಕುಟುಂಬಕ್ಕೆ ಆದ ಗತಿಯೇ ನಿನ್ನ ಕುಟುಂಬಕ್ಕೂ ಆಗುವುದು. ಈ ಎರಡು ಕುಟುಂಬಗಳೂ ಸಂಪೂರ್ಣವಾಗಿ ನಾಶಗೊಂಡವು. ನೀನು ನನ್ನನ್ನು ಕೋಪಗೊಳಿಸಿದ್ದಕ್ಕಾಗಿ ನಾನು ನಿನಗೆ ಹೀಗೆ ಮಾಡುತ್ತೇನೆ. ಇಸ್ರೇಲಿನ ಜನರು ಪಾಪಮಾಡುವುದಕ್ಕೆ ನೀನು ಕಾರಣನಾದೆ” ಎನ್ನುತ್ತಾನೆ.
23 ಇದಲ್ಲದೆ ಯೆಹೋವನು, ‘ನಿನ್ನ ಪತ್ನಿಯಾದ ಈಜೆಬೆಲಳ ದೇಹವನ್ನು, ಇಜ್ರೇಲ್ ನಗರದಲ್ಲಿ ನಾಯಿಗಳು ತಿನ್ನುತ್ತವೆ,
24 ನಿನ್ನ ಕುಟುಂಬದಲ್ಲಿ ಯಾರಾದರೂ ನಗರದಲ್ಲಿ ಸತ್ತರೆ, ಅವರನ್ನು ನಾಯಿಗಳು ತಿನ್ನುತ್ತವೆ. ಯಾರಾದರೂ ತೋಟಗಳಲ್ಲಿ ಸತ್ತರೆ, ಅವರನ್ನು ಪಕ್ಷಿಗಳು ಕಿತ್ತುತಿನ್ನುತ್ತವೆ ಎನ್ನುತ್ತಾನೆ”‘ ಎಂದು ಹೇಳಿದನು.
25 ಅಹಾಬನು ಮಾಡಿದಷ್ಟು ಪಾಪಗಳನ್ನು, ಇಲ್ಲವೆ ಕೆಟ್ಟಕಾರ್ಯಗಳನ್ನು ಮಾಡಿದ ಮನುಷ್ಯರು ಬೇರೆ ಯಾರೂ ಇಲ್ಲ. ಅವನು ಆ ಕಾರ್ಯಗಳನ್ನು ಮಾಡುವುದಕ್ಕೆ ಅವನ ಪತ್ನಿಯಾದ ಈಜೆಬೆಲಳು ಅವನನ್ನು ಒತ್ತಾಯಪಡಿಸಿದಳು.
26 ಅಹಾಬನು ಬಹುಕೆಟ್ಟ ಪಾಪವನ್ನು ಮಾಡಿದನು ಮತ್ತು ವಿಗ್ರಹಗಳನ್ನು ಆರಾಧಿಸಿದನು. ಅಮೋರ್ಯರು ಇಂತಹ ಕಾರ್ಯವನ್ನೇ ಮಾಡಿದ್ದರು. ಯೆಹೋವನು ಅವರನ್ನು ಅವರ ನಾಡಿನಿಂದ ಓಡಿಸಿದನು ಮತ್ತು ಅದನ್ನು ಇಸ್ರೇಲಿನ ಜನರಿಗೆ ದಯಪಾಲಿಸಿದನು.
27 ಎಲೀಯನು ಮಾತನಾಡಿದ ನಂತರ ಅಹಾಬನು ಬಹಳ ಶೋಕತಪ್ತನಾದನು. ಅವನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡನು. ಅವನು ಊಟಮಾಡದೆ ಹಾಗೆಯೇ ಮಲಗಿಕೊಂಡನು; ದುಃಖದಿಂದ ತಳಮಳಗೊಂಡನು.
28 ಯೆಹೋವನು ಪ್ರವಾದಿಯಾದ ಎಲೀಯನಿಗೆ,
29 “ಅಹಾಬನು ನನ್ನ ಎದುರಿನಲ್ಲಿ ತನ್ನನ್ನು ತಗ್ಗಿಸಿಕೊಂಡಿರುವುದನ್ನು ನಾನು ನೋಡುತ್ತಿದ್ದೇನೆ. ಆದ್ದರಿಂದ ಅವನ ಜೀವಮಾನಕಾಲದಲ್ಲಿ ಅವನಿಗೆ ಕೇಡಾಗದಂತೆ ಮಾಡುವೆನು. ಅವನ ಮಗ ರಾಜನಾಗುವವರೆಗೆ ನಾನು ಕಾಯುತ್ತೇನೆ. ನಂತರ ಅಹಾಬನ ಕುಟುಂಬಕ್ಕೆ ಕೇಡನ್ನು ಬರಮಾಡುತ್ತೇನೆ” ಎಂದು ಹೇಳಿದನು.

1-Kings 21:1 Kannada Language Bible Words basic statistical display

COMING SOON ...

×

Alert

×