ಎಲೀಯನು ಗಿಲ್ಯಾದಿನ ತಿಷ್ಬೀ ಪಟ್ಟಣದ ಒಬ್ಬ ಪ್ರವಾದಿ. ಎಲೀಯನು ರಾಜನಾದ ಅಹಾಬನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಸೇವಕನಾಗಿದ್ದೇನೆ. ಮುಂದಿನ ಕೆಲವು ವರ್ಷಗಳವರೆಗೆ ಹಿಮವಾಗಲಿ ಮಳೆಯಾಗಲಿ ಬೀಳುವುದಿಲ್ಲವೆಂದು ನಾನು ಆತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಬೀಳುವಂತೆ ಮಳೆಗೆ ಆಜ್ಞಾಪಿಸಿದರೆ ಮಾತ್ರ ಅದು ಬೀಳುತ್ತದೆ” ಎಂದು ಹೇಳಿದನು.
ಎಲೀಯನು ಚಾರೆಪ್ತಗೆ ಹೋದನು. ಅವನು ಊರು ಬಾಗಿಲಿಗೆ ಹೋದಾಗ, ಅಲ್ಲಿ ಒಬ್ಬ ವಿಧವೆಯನ್ನು ನೋಡಿದನು. ಆ ಸ್ತ್ರೀಯು ಬೆಂಕಿಗಾಗಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದಳು. ಎಲೀಯನು ಅವಳಿಗೆ, “ನನಗೆ ಕುಡಿಯುವುದಕ್ಕೆ ಚಂಬಿನಲ್ಲಿ ಸ್ವಲ್ಪ ನೀರನ್ನು ನೀನು ತರುವೆಯಾ?” ಎಂದು ಕೇಳಿದನು.
ಆ ಸ್ತ್ರೀಯು, “ನನ್ನಲ್ಲಿ ರೊಟ್ಟಿಯಿಲ್ಲವೆಂದು ನಿನ್ನ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ. ನನ್ನ ಮಡಕೆಯಲ್ಲಿ ಸ್ವಲ್ಪ ಹಿಟ್ಟು ಮಾತ್ರ ಇದೆ; ಪಾತ್ರೆಯಲ್ಲಿ ಸ್ವಲ್ಪ ಆಲೀವ್ ಎಣ್ಣೆಯಿದೆ. ಬೆಂಕಿ ಹೊತ್ತಿಸಲು ಸೌದೆ ಚೂರುಗಳನ್ನು ಆಯ್ದುಕೊಳ್ಳವುದಕ್ಕಾಗಿ ನಾನು ಈ ಸ್ಥಳಕ್ಕೆ ಬಂದೆ. ಸೌಧೆಯನ್ನು ನಾನು ಮನೆಗೆ ತೆಗೆದುಕೊಂಡು ಹೋಗಿ, ನಮ್ಮ ಕೊನೆಯ ಊಟವನ್ನು ಸಿದ್ಧಪಡಿಸುತ್ತೇನೆ. ನನ್ನ ಮಗ ಮತ್ತು ನಾನು ಅದನ್ನು ತಿಂದು, ನಂತರ ಹಸಿವಿನಿಂದ ಸಾಯುತ್ತೇವೆ” ಎಂದು ಹೇಳಿದಳು.
ಎಲೀಯನು ಆ ಸ್ತ್ರೀಗೆ, “ಚಿಂತಿಸದಿರು, ಮನೆಗೆ ಹೋಗಿ ನೀನು ಹೇಳಿದಂತೆ ಆಹಾರವನ್ನು ಸಿದ್ಧಪಡಿಸು. ಆದರೆ ನಿನ್ನಲ್ಲಿರುವ ಹಿಟ್ಟಿನಿಂದ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡು. ಆ ರೊಟ್ಟಿಯನ್ನು ನನಗೆ ತಂದುಕೊಡು; ನಂತರ ನಿನಗೆ ಮತ್ತು ನಿನ್ನ ಮಗನಿಗೆ ಅಡಿಗೆ ಮಾಡಿಕೋ.
ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ಆ ಮಡಕೆಯಲ್ಲಿರುವ ಹಿಟ್ಟು ಎಂದೆಂದಿಗೂ ಖಾಲಿಯಾಗುವುದಿಲ್ಲ. ಆ ಪಾತ್ರೆಯಲ್ಲಿ ಯಾವಾಗಲೂ ಎಣ್ಣೆಯಿರುತ್ತದೆ. ಯೆಹೋವನು ಭೂಮಿಯ ಮೇಲೆ ಮಳೆಯನ್ನು ಸುರಿಸುವ ತನಕ ಇದು ಹೀಗೆಯೇ ಮುಂದುವರಿಯುತ್ತದೆ’ ” ಎಂದು ಹೇಳಿದನು.
ಆ ಸ್ತ್ರೀಯು ಎಲೀಯನಿಗೆ, “ನೀನು ದೇವಮನುಷ್ಯ. ನೀನು ನನಗೆ ಸಹಾಯಮಾಡಲು ಬಂದಿರುವೆಯಾ? ಅಥವಾ ನನ್ನ ಪಾಪಗಳನ್ನೆಲ್ಲ ನನ್ನ ನೆನಪಿಗೆ ತಂದುಕೊಳ್ಳುವಂತೆ ಮಾಡಲು, ನನ್ನ ಮಗನಿಗೆ ಸಾವನ್ನು ಉಂಟುಮಾಡುವುದಕ್ಕಾಗಿಯೇ ಬಂದಿರುವೆಯಾ?” ಎಂದು ಕೇಳಿದಳು.
ಎಲೀಯನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿದನು. ಎಲೀಯನು ಬಾಲಕನನ್ನು ಅವಳಿಂದ ತೆಗೆದುಕೊಂಡು, ಮೇಲಂತಸ್ತಿಗೆ ಹೋದನು. ಅವನು ನೆಲೆಸಿದ್ದ ಕೊಠಡಿಯ ಹಾಸಿಗೆಯ ಮೇಲೆ ಆ ಬಾಲಕನನ್ನು ಮಲಗಿಸಿದನು.
ನಂತರ ಎಲೀಯನು, “ನನ್ನ ದೇವರಾದ ಯೆಹೋವನೇ, ಈ ವಿಧವೆಯು ತನ್ನ ಮನೆಯಲ್ಲಿ ನನಗೆ ಸ್ಥಳವನ್ನು ಕೊಟ್ಟಿದ್ದಾಳೆ. ನೀನು ಅವಳಿಗೆ ಈ ಕೇಡನ್ನು ಮಾಡುವೆಯಾ? ನೀನು ಅವಳ ಮಗುವನ್ನು ಸಾಯಿಸುವೆಯಾ?” ಎಂದು ಪ್ರಾರ್ಥಿಸಿದನು.